ಯಂಕ ಮಂಕ – ಕೋಳಿ ಅಂಕ

ಯಂಕ ಮಂಕ – ಕೋಳಿ ಅಂಕ

ಊರ ಸಾರಾಯಿ ಅಂಗಡಿಯ ಬಳಿ, ಸೂರ್ಯ ಪಶ್ಚಿಮದ ಯಾನ ಆರಂಭಿಸುತ್ತಿದ್ದಂತೆ ಕೋಳಿ ಅಂಕದ ರಂಗಕ್ಕೆ ರಂಗೇರುತ್ತದೆ. ಶರಾಬು ಅಂಗಡಿಗೆ ಹೊಕ್ಕು ಹೊರಬಿದ್ದವರೆಲ್ಲ ಒಬ್ಬೊಬ್ಬರಾಗಿ ಇಲ್ಲಿ ಬಂದು ಸೇರುತ್ತಾರೆ. ಯಂಕಾ , ಮಂಕಾ, ವೆಂಕ, ದ್ಯಾವಾ, ಡೊಂಬ ಮುಂತಾಗಿ . ಪ್ರತಿಯೊಬ್ಬರ ಬಗಲಲ್ಲೂ ಕೋಳಿಗಳು. ಅವೇ ಇವತ್ತಿನ ಅಂಕದ ಪಾತ್ರಧಾರಿಗಳು .
ಒಬ್ಬನ ಬಗಲಲ್ಲಿರುವ ಕೋಳಿ ಧ್ಯಾನಮುದ್ರೆಯಲ್ಲಿದ್ದರೆ, ಇನ್ನೊಬ್ಬನದೋ ರಾಜಗಾಂಭೀರ್ಯದಲ್ಲಿ ಕುಳಿತಿದೆ. ಯಂಕನ ಕೋಳಿ ಮೈ ಸೆಟೆದು , ಕಣ್ಮುಚ್ಚಿ ಕುಳಿತಿದ್ದರೆ ಮಂಕಣ್ಣನ ಕೋಳಿಯದು ವಿಶಾಲ ನೋಟ- ಸಮಷ್ಟಿ ದೃಷ್ಟಿ. ಇಷ್ಟಗಲ ಎದೆ , ಅದಕ್ಕೆ ಗರಿಗಳ ಕವಚ. ಹಿಂಗಡೆಯ ಪುಚ್ಛ ಉದ್ದ, ಬಿಚ್ಚಿದರೆ ನವಿಲಿನ ಹಾಗೆ.

ಈ ಕೋಳಿಗಳಿಗೆ - ಕನ್ನಡದಲ್ಲಿ ಹೆಸರಿಲ್ಲದ ಅನೇಕ ಬಣ್ಣಗಳು. ಅವುಗಳ ವರ್ಣಗಳ ಮೇಲೆ ಜಾತಿಗಳ ವರ್ಗೀಕರಣ. ಕೆಂಪಿನ ಉರಿಯ, ಹಳದಿಯ ಕಬ್ಬಾರ, ಬಿಳಿ ಕಬ್ಬಾರ, ಕರಿ ನೀಲ, ಕೆಂಪಿನ ಮೈರ, ಕಂಜಾಳಿ ಬೂಬ... ಹೀಗೆ ನಾನಾ ವಿಧದ ಕೋಳಿಗಳು - ಜನರ ಹೆಗಲೇರಿ ಮೆರವಣಿಗೆ ಮಾಡಿಕೊಂಡು ಅಂಕದ ಅಂಗಳಕ್ಕೆ ಬಂದಿಳಿದಿವೆ.

ಕೋಳಿಗಳನ್ನು ತಂದವರು ಎದುರು ಬದುರಾಗಿ ಕುಳಿತಿದ್ದಾರೆ. ಉಳಿದವರು ಸುತ್ತ ನಿಂತಿದ್ದಾರೆ. ಈಗ ಜೋಡಿಯ ಆಯ್ಕೆ ನಡೆಯುತ್ತದೆ. ಕೋಳಿಯ ಎತ್ತರ, ಭಾರ, ಉಮೇದು, ಮುಖ್ಯವಾಗಿ ಬಣ್ಣನೋಡಿ ತಾವು ತಂದ ಕೋಳಿಗೆ ಯಾವುದು ಸಾಟಿಯೆಂದು ನಿರ್ಧರಿಸುತ್ತಾರೆ. ಇಲ್ಲಿ ಒತ್ತಾಯವೇನಿಲ್ಲ. ಎರಡೆರಡು ಕೋಳಿಗಳ ಮಾಲೀಕರು "ತಮ್ಮ ಪರವಾಗಿ ಕೋಳಿಗಳು ಹೊಡೆದಾಡಲಿ " ಎಂದು ಮಾಡಿಕೊಂಡ ಒಪ್ಪಂದ. ಇದಕ್ಕೆ "ಪತಿ" ಮಾಡುವುದು ಎಂಬುದು ಜನಪ್ರಿಯ ಹೆಸರು.

ಕಾಲಿಗೆ 'ಬಾಳು'

ಜೋಡಿ ಮಾಡಿ ಆಯ್ತು. ಇನ್ನು ಕೋಳಿ ಅಂಕಕ್ಕೆ ಸಿದ್ಧತೆ ಶುರು. ಅದರ ಮೊದಲ ಹೆಜ್ಜೆಯಾಗಿ ಒಂದೊಂದಾಗಿ 'ಬಾಳು' ಹೊರಗೆ ಬರುತ್ತದೆ. ‘ಬಾಳು' ಎಂದರೆ ತುಳುವಿನಲ್ಲಿ ನಾನಾ ವಿಧ. ಕೆರ್ಚಿ, ಕೊಕ್ಕೆ, ಬಾಳು, ನಾಗರ ಕೆರ್ಚಿ, ಎಟ್ಟಿ, ಮುಳ್ಳು ಮುಂತಾಗಿ. ಕೆರ್ಚಿ ಎಂದರೆ ಅಂಕು ಡೊಂಕಾದ ಬಾಳು. ಕೊಕ್ಕೆ ಬಾಳು ಎಂದರೆ ಕೊಕ್ಕೆಯಾಕಾರದ್ದು. ನಾಗರ ಕೆರ್ಚಿ ನಾಗಾಸ್ತ್ರದ ರೀತಿ. ಎಟ್ಟಿ ಮುಳ್ಳು - ಪಕ್ಕಾ ಮುಳ್ಳಿ ನ ಹಾಗೆ ಚುಚ್ಚಿಕೊಳ್ಳುವಂಥದ್ದು. ಹಾರಿ ಹೊಡೆಯುವ ಕೋಳಿಗೆ ಒಂದು ಬಾಳು, ತೂರಿಬೀಳುವ ಕೋಳಿಗೇ ಒಂದು ಬಾಳು. ಅಂತೂ ಆಯಾ ಕೋಳಿಯ ಕಾಳಗದ ವೈಖರಿ - ಯುದ್ಧದ ಪಟ್ಟು ಯಾವ ರೀತಿಯದು ಎಂಬುದರ ಮೇಲೆ ಬಾಳು ನಿರ್ಧಾರವಾಗಿರುತ್ತದೆ.

ಕೋಳಿಯ ಕಾಲಿಗೆ 'ಬಾಳು' ಕಟ್ಟುವುಬೇ ಒಂದು ಕಲೆ. ಆ ಕೊಕ್ಕೆ ಕಾಲಿನ ಮಧ್ಯೆ ನಡಿಗೆಗೆ ತೊಂದರೆಯಾಗದ ರೀತಿಯಲ್ಲಿ ಬಾಳು ಕಟ್ಟಬೇಕು. ಎದುರಾಳಿಯನ್ನು ಸರಿಜಾಗದಲ್ಲಿ ಚುಚ್ಚುವಂತಿರಬೇಕು. ಜಾರಿ ಬೀಳಬಾರದು. ಹೀಗಾಗಿ ಕೋಳಿ ಅಂಕ ಆಡುವವರಲ್ಲೂ ಬಾಳು ಕಟ್ಟುವ ಕಲೆ ಕೆಲವೇ ಜನರಿಗೆ ಸಿದ್ಧಿಸಿರುವಂಥದ್ದು.

ಬಾಳು ಕಟ್ಟಿಯಾಯ್ತು. ಈಗ ಕೋಳಿಗೆ ಹುರುಪು ಕೊಡಬೇಕು. ಎದುರಾಳಿಯ ಬಗ್ಗೆ ಹಗೆತನ ಹುಟ್ಟಿಸಬೇಕು. ಅದಕ್ಕೊಂದು ಉಪಾಯವಿದೆ. ಪರಸ್ಪರ ಎದುರು ಕೂರಿಸಿ ಕೊಂಡು ಬೆನ್ನು ಬಾಲ ತಿಕ್ಕುತ್ತಾ ಬರುತ್ತಾರೆ. ಆಗ ಕೋಳಿಗೆ ರೋಷ ಬರುತ್ತದೆ. ರೋಷ ಬಂದರೆ ಕೋಳಿ ಮಹಾ ಕಟುಕ ಪ್ರಾಣಿ. ಎದುರಾಳಿಯನ್ನು ಬಲಿ ಹಾಕಿದ ಹೊರತೂ ತೀರದ ದ್ವೇಷ.ಕೋಳಿಗಳಿಗೆ ರೋಷ ಬಂದಂತೆ ಇಡೀ ಅಂಕದ ಅಂಗಣ ನಿಶ್ಮಬ್ದ. ಕಂಠಮಟ್ಟ ಕುಡಿದವರೂ ಪುಸು ಪುಸು ಬೀಡಿ ಎಳೆವವರೂ ಮೈಮರೆತು ನಿಲ್ಲುತ್ತಾರೆ. ಕೋಳಿಗಳು ಕಾಳಗಕ್ಕೆ ಇಳಿಯುತ್ತವೆ. ಅವುಗಳ ಬಾಲ ಹಿಡಿದುಕೊಂಡವರು ಸಮಯ ನೋಡಿ ಸಮರಾಂಗಣಕ್ಕೆ ಕೋಳಿಗಳನ್ನು ನೂಕುತ್ತಾರೆ. ಅವು ಕಾರಣವೇ ಇಲ್ಲದೇ ಕಾದಾಟ ನಡೆಸುತ್ತವೆ - ಸಾಯುವವರೆಗೆ !

ಹರಿತವಾದ ಚೂರಿ ಎರಡೂ ಕೋಳಿಗಳನ್ನು ಇರಿಯುತ್ತವೆ. ರಕ್ತ ಹರಿಯುತ್ತದೆ. ಅಷ್ಟರಲ್ಲಿ ಯಜಮಾನ ಕೋಳಿಗಳನ್ನು ಹಿಂತೆಗೆದು ಕೊಳ್ಳುತ್ತಾನೆ. ಆಗ ಸ್ವಲ್ಪ ಎಚ್ಚರ ತಪ್ಪಿದರೂ ಕೋಳಿಯ 'ಬಾಳು' ಯಜಮಾನನ ಕೈಗೇ ಇರಿಯುತ್ತದೆ !

ಕೋಳಿಗೆ ಆಪರೇಶನ್

ಈಗ ಕೋಳಿಗೆ ಆಪರೇಶನ್ನು - ನಿಂತ ಮೆಟ್ಟಲ್ಲಿ ಯಾವ ವೈದ್ಯರ ಸಹಾಯವೂ ಇಲ್ಲದೆ ಜರುಗುತ್ತದೆ. ರಕ್ತ ಹರಿಯುತ್ತಿರುವ ಭಾಗದಲ್ಲಿ ಚರ್ಮವನ್ನು ಸೇರಿಸಿ ಹೊಲಿಯುತ್ತಾರೆ. ಆಗ ರಕ್ತ ನಿಲ್ಲುತ್ತದೆ. ಜೊತೆಗೆ, ಈ ಹೊತ್ತಿಗೆ ಕೋಳಿಯನ್ನು ಸಮಾಧಾನ ಮಾಡಿ ಮತ್ತೆ ಹುರುಪು ಕೊಡುವ ಕ್ರಮಗಳು ನಡೆಯುತ್ತಿರುತ್ತವೆ . ಕೋಳಿಗೆ ಸಾಂತ್ವನ ನೀಡುವ ರೀತಿ ಬಹಳ ಮಜ. ತಣ್ಣೀರು ಹಾಕಿ ತಲೆಗೆ - ಮೈಗೆ ತಟ್ಟುತ್ತಾರೆ. ಟೆವಲಿನಿಂದ ಗಾಳಿ ಹಾಕುತ್ತಾರೆ. ಅದರ ಗುಂಡಿಗೆ ಹಿಡಿದ ನೀರು ಇಡೀ ಮೈಯನ್ನು ತಣ್ಣಗಾಗಿಸುತ್ತದೆಯಂತೆ !
ಕೋಳಯನ್ನು ಶಾಂತಗೊಳಿಸಲು, ನೋವು ಕಡಿಮೆ ಮಾಡಲು ಕೆಲವೊಮ್ಮೆ ಸಾರಾಯಿ ಕುಡಿಸುವುದೂ ಉಂಟು. ಆಗ ಕೋಳಿ ಅಮಲಿನಿಂದ ಇನ್ನೂ ಜೋರಾಗಿ ಹೋರಾಡಬಹುದು ಎಂಬ ಭ್ರಮೆ. ಆದರೆ ಸುರಪಾನ ಮಾಡಿದ ಕೋಳಿಗಳು ಅಂಕೆ ತಪ್ಪಿ ಧರೆಗೊರಗಿದ್ದೂ ಇದೆ.

ಕೋಳಿಗಳ ಆಯಾಸ ಪರಿಹಾರವಾದ ಮೇಲೆ ಎರಡನೆಯ ಸುತ್ತಿನ ಪಂದ್ಯ ಶುರು. ನೆರೆದವರಿಗೆಲ್ಲ ಇದು ಅಂತಿಮ ಯುದ್ಧ ಎಂಬುದೇ ನಿರ್ಧಾರ. ಕೆಲವರಿಗೆ ಕಟ್ಟಿದ ದುಡ್ಡುಹೋಯ್ತೆಂಬ ಭಯ. ಕೆಲವರಿಗೆ ಸ್ವರ್ಗ ಸಿಕ್ಕೇಬಿಟ್ಟಿತೆಂಬ ಉತ್ಸಾಹ.. ಯಂಕಣ್ಣನ ಕೋಳಿ ಗೆಲ್ಲುವಂತೆ ಕಂಡರೆ ಆಗಲೇ ಅವನಿಗೆ ಸಂಜೆ ಮನೆಯಲ್ಲಿ ಮಾಡಬಹುದಾದ ಕೋಳಿ ಸಾರಿನ ಪರಿಮಳ. ತನ್ನ ಕೋಳಿ ಸೋಲುವಂತಿದ್ದ ಮಂಕಣ್ಣನಿಗಾದರೋ - ಆಕಾಶವೇ ತಲೆಯ ಮೇಲೆ ಬಿದ್ದ ಹಾಗೆ !

ನೆರೆದವರ ಬೊಬ್ಬೆಯ ಮಧ್ಯೆ ಎರಡೂ ಕೋಳಿಗಳು ತಾಕಿಕೊಂಡವು - ನೋವನುಂಡವು. ರಕ್ತ ಚೆಲ್ಲಾಡಿದವು. ಕೊನೆಗೆ ಒಂದು ಕೋಳಿಗೆ ಇನ್ನು ಸಾಧ್ಯವೇ ಇಲ್ಲ ಎನಿಸಿ , ಹೊಡೆತ ತಪ್ಪಿಸಿಕೊಂಡು ಓಡಲಾರಂಭಿಸಿತು. ದೂರಕ್ಕೆ ದೂರಕ್ಕೆ , ಜನರ ಕೋಟೆ ದಾಟಿ ಹಾರಿತು. ಅಥವಾ ಅಷ್ಟರೊಳಗೆ ಎದುರಾಳಿಯ ಬಾಳು ತಾಗಿ ಜೀವ ಹಾರಿಹೋಯಿತು !

ಇದಾದ ಒಂದು ಕ್ಷಣ. ಕೋಳಿಯ ಮೇಲೆ ಹಣ ಕಟ್ಟಿದ ಜನರೆಲ್ಲ ಕೊಡುವ – ತೆಗೆದುಕೊಳ್ಳುವ ವ್ಯವಹಾರ ನಡೆಸುತ್ತಾರೆ. ಮತ್ತೆ ಒಂದು ಕ್ಷಣದಲ್ಲಿ ಯಂಕಣ್ಣ , ಮಂಕಣ್ಣ , ವೆಂಕಣ್ಣ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಹೋಗುತ್ತಾರೆ. ಅಂಕ ಗೆದ್ದವನು ಬೀಗುತ್ತ ಒಂದು ಕೈಯಲ್ಲಿ ಕೋಳಿ ಅಂದದ ಹೀರೋವನ್ನು ಇನ್ನೊಂದು ಕೈಯಲ್ಲಿ ಸೋತು - ಸತ್ತ ಕೋಳಿಯನ್ನೂ ಹಿಡಿದುಕೊಂಡು ಬೀಗುತ್ತ ನಡೆಯುತ್ತಾನೆ. ಇನ್ನು ಇವರೆಲ್ಲ ಮತ್ತೆ ಭೇಟಿಯಾಗುವುದು ಮುಂದಿನ ವಾರ - ಇದೇ ದಿನ - ಇದೇ ಸಮಯಕ್ಕೆ . ನಾಳೆ ಆಸುಪಾಸಲ್ಲಿ ಎಲ್ಲಿಯಾದರೂ ಕೋಳಿ ಅಂಕವಾದರೆ ಈ ಜನ ಮತ್ತೆ ಸಿಕ್ಕರೂ ಸಿಗಬಹುದು !
 
(ಚಿತ್ರ ಕೃಪೆ : ಗೂಗಲ್)