ಯಕ್ಷಗಾನ ಪುರಾಣ ಜ್ಞಾನ ದರ್ಶನ

ಯಕ್ಷಗಾನ ಪುರಾಣ ಜ್ಞಾನ ದರ್ಶನ

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಕೃಷ್ಣ ಶೆಟ್ಟಿ (ಕುಡು ಮಲ್ಲಿಗೆ)
ಪ್ರಕಾಶಕರು
ಪರಿಣಿತ ಪ್ರಕಾಶನ, ಶಾಂತಿನಗರ, ಕಾವೂರು ಅಂಚೆ, ಮಂಗಳೂರು-೫೭೫೦೧೫
ಪುಸ್ತಕದ ಬೆಲೆ
೨೫೦.೦೦ ಮೊದಲ ಮುದ್ರಣ: ೨೦೧೧

‘ಕುಡು ಮಲ್ಲಿಗೆ’ ನಾಮಾಂಕಿತದಿಂದ ಖ್ಯಾತಿ ಪಡೆದ ಕೆ.ಕೃಷ್ಣ ಶೆಟ್ಟಿಯವರದ್ದು ಬಹುಮುಖ ಪ್ರತಿಭೆ. ಹುಟ್ಟಿದ್ದು ಮಲೆನಾಡಿನ ಕುಡುಮಲ್ಲಿಗೆಯಲ್ಲಿ. ಇವರು ಕಲಿತದ್ದು ಕಮ್ಮಿಯಾದರೂ ಅನುಭವ ಇವರನ್ನು ಪಕ್ವರನ್ನಾಗಿಸಿದೆ. ವೃತ್ತಿ ಸಂಬಂಧ ಮುಂಬೈ, ಉಡುಪಿಗಳಲ್ಲಿ ತಿರುಗಾಡಿದರೂ ನೆಲೆ ನಿಂತದ್ದು ಮಂಗಳೂರಿನಲ್ಲಿ. ಪತ್ರಿಕೆಯ ವರದಿಗಾರನಾಗಿ, ಅಂಕಣಗಾರನಾಗಿ, ಉಪಸಂಪಾದಕನಾಗಿ, ಯಕ್ಷಗಾನ ಕಲೆಯ ಉಪಾಸಕರಾಗಿ, ಕಲಾವಿಮರ್ಶಕರಾಗಿ ಇವರು ದುಡಿದಿದ್ದಾರೆ. ‘ಯಕ್ಷಗಾನ ಪುರಾಣ ಜ್ಞಾನ ದರ್ಶನ' ಎಂಬ ಕೃಉತಿ ಯಕ್ಷಗಾನ ಅಭ್ಯಾಸ ಮಾಡುವವರ ನಿಘಂಟು ಎಂದರೆ ಅತಿಶಯವಲ್ಲ ಎಂದು ಬೆನ್ನುಡಿಯಲ್ಲಿ ಯಕ್ಷಗಾನ ಕಲಾವಿದರೂ ಆಗಿರುವ ಕದ್ರಿ ನವನೀತ ಶೆಟ್ಟಿಯವರ ಅಭಿಮತ.

ಮುನ್ನುಡಿಯಲ್ಲಿ ಉಪನ್ಯಾಸಕರೂ, ಯಕ್ಷಗಾನ ಕಲಾವಿದರೂ ಆಗಿರುವ ಭಾಸ್ಕರ್ ರೈ ಯವರು ಬರೆಯುತ್ತಾರೆ. 'ಯಕ್ಷಗಾನ ಬಯಲಾಟದ ಪಾತ್ರ ನಿರ್ವಹಣೆಗೆ ಕೆಲವು ಅಗಾಧ-ಆಳ ಓದು ಸಾಕಾಗಬಹುದೇನೋ. ಆದರೆ ತಾಳ ಮದ್ದಳೆ, ಪುರಾಣ ಪ್ರವಚನ, ವಿಚಾರ ಮಂಥನ, ತರ್ಕ ಜಿಜ್ಞಾಶೆಗಳಿಗೆ ಅಧಿಕ ಅಧ್ಯಯನ ಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ವಿವಿಧ ಪುರಾಣಗಳ ಪ್ರಧಾನ ಅಂಶಗಳ ಕ್ರೋಢೀಕೃತ ಆಕರ ಗ್ರಂಥಗಳನ್ನು ಅರಸಬೇಕಾದುದು ಅನಿವಾರ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೆ.ಕೃಷ್ಣ ಶೆಟ್ಟಿಯವರ ಈ ಪುಸ್ತಕವು ಅತ್ಯಂತ ಮಹತ್ವದ್ದಾಗಿ ಕಂಡು ಬರುತ್ತದೆ. ಈ ಸಂಗ್ರಹ ಸಾಧನೆಯನ್ನು ಅಭಿನಂದಿಸಲೇ ಬೇಕಾಗುತ್ತದೆ.’

ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನದ ಬಗ್ಗೆ ಅಧಿಕ ಮಾಹಿತಿಯನ್ನು ಈ ಪುಸ್ತಕವನ್ನು ಓದುವುದರ ಮೂಲಕ ಗಳಿಸಬಹುದು. ಸುಮಾರು ೧೨೫ ಪುಟಗಳಿರುವ ಪುಸ್ತಕದಲ್ಲಿ ಯಕ್ಷಗಾನದ ಬಗ್ಗೆ ಉತ್ತಮ ಮಾಹಿತಿಗಳಿವೆ.