' ಯಕ್ಷಗಾನ ಬಯಲಾಟ ಸಂಭ್ರಮ '
ಯಕ್ಷಗಾನ ಮೇಳಗಳನ್ನು ದಶಾವತಾರ ಮೇಳಗಳೆಂದು ಕರೆಯುವ ವಾಡಿಕೆಯಿದೆ. ಇದಕ್ಕೆ ಕಾರಣ ಯಕ್ಷಗಾನ ಕಥಾನಕಗಳು ಹೆಚ್ಚಾಗಿ ವಿಷ್ಣುವಿನ ಹತ್ತು ಅವತಾರಗಳ ಕಥೆಗೇ ಮಹತ್ವ ಕೊಟ್ಟಿದುದು. ಅದಕ್ಕೆಂದೇ ಅಲ್ಲವಾಗಿರಬಹುದಾದರು ಶೈವ ಮಠಗಳಲ್ಲಿ ಯಕ್ಷಗಾನ ಬಯಲಾಟಗಳಿಗೆ ಹೆಚ್ಚು ಪ್ರದರ್ಶನ, ಪ್ರೋತ್ಸಾಹಗಳನ್ನೂ ನೀಡಿದ್ದು ಕಾಣಿಸುತ್ತಿರಲಿಲ್ಲ. ಇಂತಹದೊಂದು ಅನುಮಾನಕ್ಕೆ ಪರಿಹಾರವೋ ಎಂಬಂತೆ ಕಳೆದ ಜನವರಿ ೮ , ಶನಿವಾರ ಹಾಗು ೯ ಭಾನುವಾರಗಳಂದು ಬೆಳಗಾವಿಯಲ್ಲಿ ಅಲ್ಲಿನ ನಾಗನೂರು ರುದ್ರಾಕ್ಷಿಮಠ ಹಾಗು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ನಡೆದ ' ಯಕ್ಷಗಾನ ಬಯಲಾಟ ಸಂಭ್ರಮ ' ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ.
೮/೦೧/೨೦೧೧ ನೆ ಶನಿವಾರ ಮುಂಜಾನೆ ೧೦ ಗಂಟೆಗೆ ನಾಗನೂರು ರುದ್ರಾಕ್ಷಿಮಠದ ತಾಂತ್ರಿಕ ಕಾಲೇಜಿನ ಆವರಣದಲ್ಲಿ ಶ್ರೀ ಶ್ರೀ ಶ್ರೀ ಮ.ನಿ.ಪ್ರ. ಸಿದ್ಧರಾಮ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ, ಯಕ್ಷಗಾನದ ಲಕ್ಷಣ ಶಾಸ್ತ್ರಜ್ಞ ಶ್ರೀ ಸೀಮಂತೂರು ನಾರಾಯಣ ಶೆಟ್ಟರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ವಿದ್ವಾಂಸ, ಕವಿ ಹೊಸ್ತೋಟ ಮಂಜುನಾಥ ಭಾಗವತರು, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ|| ಬಸವರಾಜ ಜಗಜಂಪಿ, ಬೆಳಗಾವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಯ.ರು.ಪಾಟೀಲ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು..
ನಂತರ ೧೧/೩೦ ರಿಂದ ವಿಚಾರ ಸಂಕಿರಣ. ಕನ್ನಡ ವಿಶ್ವವಿದ್ಯಾನಿಲಯ ಜಾನಪದ ಅಧ್ಯಯನ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಶಾಲಿನಿ ರಘುನಾಥರವರ ಅಧ್ಯಕ್ಷತೆಯಲ್ಲಿ ಮೊದಲು ಯಕ್ಷಗಾನ ಸಂಶೋಧಕರಾದ ಡಾ|| ಜಿ.ಎಸ. ಭಟ್ಟ ಸಾಗರ ಇವರು ಯಕ್ಷಗಾನ ಎಂದರೇನು ಎಂಬ ವಿಷಯದಲ್ಲಿ ತಮ್ಮ ಪ್ರಭಂಧವನ್ನು ಮಂಡಿಸಿದರು. ಹಿರಿಯ ವಿದ್ವಾಂಸರಾದ ಶ್ರೀಯುತರ ಪ್ರೌಢ ಪ್ರಬಂಧವನ್ನು ಮಂಡಿಸಿದರಾದರು ವಿಶಾಲ ವ್ಯಾಪ್ತಿಯುಳ್ಳ ವಿಷಯಕ್ಕೆ ಸಮಯಾವಕಾಶದ ಕೊರತೆಯಾದಂತೆನ್ನಿಸಿತು. ನಂತರ ಜಾನಪದ ವಿದ್ವಾಂಸರಾದ ಡಾ|| ಸಿ. ಕೆ. ನಾವಲಗಿಯವರು ಬಯಲಾಟ ಎಂದರೇನು ಎಂಬ ವಿಷಯದಲ್ಲಿ ತಮ್ಮ ಪ್ರಭಂಧವನ್ನು ಮಂಡಿಸಿದರು. ಉಡುಪಿಯ ಪ್ರೊ. ಎಂ.ಎಲ್. ಸಾಮಗರು ದಾಖಲೀಕರಿಸಿದರು.
ಮಧ್ಯಾಹ್ನ ಸೊಗಸಾದ ಭೋಜನ. ನಂತರ ಸಾಗರದ ಪ್ರಜ್ಞಾ ಭಾರತಿ ಕಲಾ ಬಳಗದವರಿದ ಯಕ್ಷಗಾನ ತಾಳಮದ್ದಲೆ. ಸತೀಶ ಹೆಗಡೆ ದಂಟಕಲ್ ಇವರ ಭಾಗವತಿಕೆಗೆ ಮದ್ದಲೆವಾದನದಲ್ಲಿ ಶಂಕರ ಭಾಗವತ ಯಲ್ಲಾಪುರ ಹಾಗು ಚಂಡೆವಾದನದಲ್ಲಿ ಸತೀಶ ಉಪಾಧ್ಯಾಯ ಸಾಥ್ ನೀಡಿದರೆ ಶರಸೇತು ಪ್ರಸಂಗದಲ್ಲಿ ಹನುಮನಾಗಿ ಸದಾನಂದ ಶರ್ಮ, ಅರ್ಜುನನಾಗಿ ಜಿ.ಕೆ. ಭಟ್ , ಬ್ರಾಹ್ಮಣನಾಗಿ ಅಶೋಕ್ ಭಟ್ ಸಿದ್ದಾಪುರು ಭಾಗವಹಿಸಿದ್ದರು. ಕಾಲಮಿತಿಯಲ್ಲಿ ಎಲ್ಲೂ ಅತಿಕ್ರಮಿಸದೆ ಸೊಗಸಾಗಿ ಮಾತಿನ ಮೋಡಿಯಿಂದ ಉತ್ತರ ಕರ್ನಾಟಕದ ಶ್ರೋತೃಗಳ ಮೆಚ್ಚುಗೆಗಳಿಸುವಂತಿತ್ತು ಕಾರ್ಯಕ್ರಮ.
ಬೆಂಗಳೂರಿನ ಯಕ್ಷಕಲಾ ಅಕಾಡೆಮಿಯ ಮಕ್ಕಳಿಂದ ವೀರ ವೃಷಸೇನ ಪ್ರಸಂಗ ಯಕ್ಷಗಾನ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಹಿಡಕಲ್ಲಿನ ಶ್ರೀ ರಾಘವೇಂದ್ರ ಶ್ರೀಕೃಷ್ಣ ಪಾರಿಜಾತ ಕಂಪನಿಯ ಮಾಲಾ ತಂಡದ ಮಹಿಳೆಯರಿಂದ ಶ್ರೀ ಕೃಷ್ಣ ಪಾರಿಜಾತ ಪ್ರದರ್ಶನ ನಡೆಯಿತು. ಅದಾದ ನಂತರ ಉಡುಪಿಯ ಪ್ರೊ. ಎಂ.ಎಲ್. ಸಾಮಗ ಮಂಗಳೂರಿನ ಶರತ್ ಕದ್ರಿ ಬಳಗದಿಂದ ಗುರುದಕ್ಷಿಣೆ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ಜನರ ಮೆಚ್ಚುಗೆ ಪಡೆಯಿತು. ಇದರೊಂದಿಗೆ ಮೊದಲ ದಿನದ ಕಾರ್ಯಕ್ರಮವು ಸೇರಿದ್ದ ನೂರಾರು ಹೊಸ ಪ್ರೇಕ್ಷಕರನ್ನು ಯಕ್ಷಗಾನವು ಸೆಳೆದು ಕೊಂಡಿತು.
೯/೦೧/೨೦೧೧ ನೇ ಭಾನುವಾರ ಮುಂಜಾನೆ ೧೦ ಗಂಟೆಗೆ ಎರಡನೇ ದಿನದ ವಿಚಾರ ಸಂಕಿರಣ. ಯಕ್ಷಗಾನದ ಹಿರಿಯ ಸಂಶೋದಕಿ ಡಾ|| ವಿಜಯ ನಳಿನಿ ರಮೇಶ್ ಇವರ ಅಧ್ಯಕ್ಷತೆಯಲ್ಲಿ ಡಾ|| ಪ್ರಜ್ಞಾ ಮತ್ತೀಹಳ್ಳಿ ಯಕ್ಷಗಾನದಲ್ಲಿ ಮಹಿಳೆ ಎಂಬ ವಿಷಯದ ಕುರಿತಾಗಿ ತಮ್ಮ ಪ್ರಭಂಧವನ್ನು ಮಂಡಿಸಿದರು. ನಂತರ ಟೀ.ವಿ. ಕಾರ್ಯಕ್ರಮ ನಿರ್ವಾಹಕಿ ಶ್ರೀಮತಿ ಕವಿತಾ ಸಾಗರ್ ದೃಶ್ಯ ಮಾಧ್ಯಮದಲ್ಲಿ ಬಯಲಾಟ ಹಾಗು ಇಂದಿನ ಸ್ಥಿತಿ ಎಂಬ ವಿಷಯದಲ್ಲಿ ತಮ್ಮ ಪ್ರಭಂಧವನ್ನು ಮಂಡಿಸಿದರು. ವಿಶೇಷ ಆಹ್ವಾನಿತರಾಗಿ ಡಾ|| ಬಸವರಾಜ ಮಲಶೆಟ್ಟಿ, ಡಾ|| ಎಲ್.ಎಸ್. ಶಾಸ್ತ್ರೀ, ಶ್ರೀ ವಿಠಲರಾವ್ ಹೆಗ್ಗಡೆ , ಶ್ರೀ ಆರ್.ಜಿ.ಭಟ್ ವರ್ಗಾಸರ ಶ್ರೀ ಕಾಶ್ಯಪ ಪರ್ಣಕುಟಿ ಯಕ್ಷರಂಗ ಪತ್ರಿಕೆಯ ಶ್ರೀ ಗೋಪಾಲಕೃಷ್ಣ ಭಾಗವತರು ಮೊದಲಾದ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಚೆಂದಗಾಣಿಸಿದರು.
ಮಧ್ಯಾಹ್ನ ಶ್ರೀಮತಿ ಸೌಮ್ಯ ಅರುಣ ಗೋಟಗಾರ್ ಮತ್ತು ಸಂಗಡಿಗರಿಂದ ಹೊಸ್ತೋಟ ಮಂಜುನಾಥ ಭಾಗವತರು ಕನ್ನಡದಲ್ಲಿ ರಚಿಸಿದ ಕಾಳಿದಾಸ ಮಹಾಕವಿಯ ಮೇಘದೂತ ಯಕ್ಷಗಾನ ರೂಪಕವು ಸೊಗಸಾಗಿತ್ತು.
ಅಪರಾಹ್ನ ೩/೩೦ರಿಂದ ಶ್ರೀ ಶ್ರೀ ಶ್ರೀ ಮ.ನಿ.ಪ್ರ. ಸಿದ್ಧರಾಮ ಮಹಾಸ್ವಾಮಿಗಳವರು ನಾಗನೂರು ರುದ್ರಾಕ್ಷಿಮಠ ಹಾಗು ಶ್ರೀ ಶ್ರೀ ಶ್ರೀ ಮ.ನಿ.ಪ್ರ. ಮಡಿವಾಳೇಶ್ವರ ಮಹಾಸ್ವಾಮಿಗಳವರು ರಾಜಗುರು ಕಿತ್ತೂರು ಸಂಸ್ಥಾನಮಠ ಇವರುಗಳ ದಿವ್ಯಸಾನಿಧ್ಯದಲ್ಲಿ, ಹಿರಿಯ ಜಾನಪದ ವಿದ್ವಾಂಸರಾದ ಡಾ|| ಬಸವರಾಜ ಮಲಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮವು ಜರುಗಿತು. ಉಭಯ ಮಠಾಧಿಪತಿಗಳು ಯಕ್ಷಗಾನವನ್ನು ಮುಕ್ತಕಂಠದಿಂದ ಹೊಗಳಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಜಾನಪದ ಪರಿಷತ್ತಿನ ಕಾರ್ಯದರ್ಶಿಗಳಾದ ಶ್ರೀ ಚಕ್ಕೆರೆ ಶಿವಶಂಕರ, ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಕೆ.ಎಚ್. ಚೆನ್ನೂರ ಹಾಗು ವಾರ್ತಾ ಇಲಾಖೆಯ ಉಪನಿರ್ದೇಶಕರಾದ ಶ್ರೀ ಬಸವರಾಜ ಕೆಂಪಿ, ಯಕ್ಷಗಾನ ಅಕಾಡೆಮಿಯ ಸದಸ್ಯ ವಿದ್ವಾನ್ ದತ್ತಮೂರ್ತಿ ಭಟ್ ಉಪಸ್ಥಿತರಿದ್ದು ಮಾತನಾಡಿದರು. ಹಿರಿಯ ಜಾನಪದ ವಿದ್ವಾಂಸರಾದ ಡಾ|| ಬಸವರಾಜ ಮಲಶೆಟ್ಟಿಯವರು ತಮ್ಮ ಅಧ್ಯಕ್ಷ ರ ಭಾಷಣದಲ್ಲಿ ಬಯಲಾಟದ ಎಲ್ಲಾ ಪ್ರಕಾರಗಳಲ್ಲಿ ಯಕ್ಷಗಾನವು ತನ್ನ ಪ್ರೌಢಿಮೆಯಿಂದಾಗಿ ಜಗದಗಲ ವ್ಯಾಪಿಸಿದೆಯೆಂಬ ಮಾತನ್ನು ಇಲ್ಲಿ ಸೇರಿದ ಎಲ್ಲಾ ಉತ್ತರ ಕರ್ನಾಟಕದ ಕಲಾವಿದರು ಮನಗಾಣಬೇಕೆಂದು ತಮ್ಮದೇ ಆದ ವಿಶಿಷ್ಠ ದಾಟಿಯಲ್ಲಿ ಹೇಳಿದಾಗ ಸಭೆಯಲ್ಲಿ ಚಪ್ಪಾಳೆಯ ಸುರಿಮಳೆ.
ನಂತರ ವಿವಿಧ ತಂಡಗಳಿಂದ ರಂಗ ಪ್ರದರ್ಶನಗಳು. ಮೊದಲಿಗೆ ರಾಮದುರ್ಗ ತಾಲೂಕಿನ ಲಕ್ಷ್ಮಿ ಬಾಯಿ ಸಾಲಹಳ್ಳಿ ತಂಡದವರಿಂದ ಸಂಗ್ಯಾಬಾಳ್ಯಾ ಬಯಲಾಟ, ನಂತರ ಗೋಕಾಕದ ಈಶ್ವರ ಚಂದ್ರ ಬೆಟಗೇರಿ ಮತ್ತು ತಂಡದವರಿಂದ ಸತ್ಯವಾನ ಸಾವಿತ್ರಿ ಸಣ್ಣಾಟ. ಶ್ರೀ ಅನಂತ ಯಕ್ಷ ಪ್ರತಿಷ್ಥಾನ (ರಿ.) ಸಿದ್ದಾಪುರ ಉ.ಕ. ತಂಡದವರಿಂದ ಸುದನ್ವ ಮೋಕ್ಷ ಯಕ್ಷಗಾನವು ಭಾಗವತರಾದ ಕೊಳಗಿ ಕೇಶವ ಹೆಗಡೆಯವರ ಸುಶ್ರಾವ್ಯ ಕಂಠದಲ್ಲಿ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.ದತ್ತಮೂರ್ತಿ ಭಟ್ ಸುಧನ್ವನಾಗಿ, ಡಾ|| ಪ್ರಜ್ಞಾ ಮತ್ತೀಹಳ್ಳಿ ಅರ್ಜುನನಾಗಿ, ಅಶೋಕ ಭಟ್ ಪ್ರಭಾವತಿಯಾಗಿ, ಹಣಜಿಬೈಲ್ ಪ್ರಭಾಕರ ಹೆಗಡೆ ಕೃಷ್ಣನಾಗಿ ಅಭಿನಯಿಸಿ ಯಶಸ್ವಿ ಗೊಳಿಸಿದರು. ಇದಾದ ನಂತರ ಶಿವಲಿಂಗಪ್ಪ ಕರವಿನ ಕೊಪ್ಪ ಮತ್ತು ಬಳಗದಿಂದ ರಾಧಾನಾಟ ಪ್ರದರ್ಶನವಾಯಿತು. ರಂಗ ಪ್ರದರ್ಶನ ಕಾರ್ಯಕ್ರಮವನ್ನು ಇಡುವಾಣಿ ಸದಾನಂದ ಶರ್ಮರು ನಿರೂಪಿಸಿದರು.
ಈಗಾಗಲೇ ಕಳೆದ ಕೆಲವು ವರ್ಷಗಳಿಂದ ಬಸವೇಶ್ವರ ಚರಿತ್ರೆ ಯಕ್ಷಗಾನವನ್ನು ಉತ್ತರ ಕರ್ನಾಟಕದ ವೀರಶೈವ ಮಠಗಳಲ್ಲಿ ಪ್ರದರ್ಶನವನ್ನು ನೀಡುವ ಮೂಲಕ ಮನೆಮಾತಾಗಿರುವ ಯಕ್ಷಗಾನ ಅಕಾಡೆಮಿಯ ಸದಸ್ಯ ವಿದ್ವಾನ್ ದತ್ತಮೂರ್ತಿ ಭಟ್ ಮತ್ತು ಯಕ್ಷಗಾನ ಅಕಾಡೆಮಿಯ ರಿಜಿಷ್ಟ್ರಾರ್ ಆಗಿರುವ ಶ್ರೀಮತಿ ಪದ್ಮಜಾಕುಮಾರಿಯವರ ಪರಿಶ್ರಮ ಸಾರ್ಥಕತೆಯನ್ನು ಪಡೆದುಕೊಂಡಿತು.
- ಸದಾನಂದ
Comments
ಉ: ' ಯಕ್ಷಗಾನ ಬಯಲಾಟ ಸಂಭ್ರಮ '
In reply to ಉ: ' ಯಕ್ಷಗಾನ ಬಯಲಾಟ ಸಂಭ್ರಮ ' by raghumuliya
ಉ: ' ಯಕ್ಷಗಾನ ಬಯಲಾಟ ಸಂಭ್ರಮ '
ಉ: ' ಯಕ್ಷಗಾನ ಬಯಲಾಟ ಸಂಭ್ರಮ '
In reply to ಉ: ' ಯಕ್ಷಗಾನ ಬಯಲಾಟ ಸಂಭ್ರಮ ' by ananthaveera
ಉ: ' ಯಕ್ಷಗಾನ ಬಯಲಾಟ ಸಂಭ್ರಮ '
ಉ: ' ಯಕ್ಷಗಾನ ಬಯಲಾಟ ಸಂಭ್ರಮ '
In reply to ಉ: ' ಯಕ್ಷಗಾನ ಬಯಲಾಟ ಸಂಭ್ರಮ ' by apsubrahmanyam
ಉ: ' ಯಕ್ಷಗಾನ ಬಯಲಾಟ ಸಂಭ್ರಮ '