ಯಕ್ಷಪ್ರಶ್ನೆ - ನನ್ನ ಕ್ವಿಜ಼್ ತಾಣ

ಯಕ್ಷಪ್ರಶ್ನೆ - ನನ್ನ ಕ್ವಿಜ಼್ ತಾಣ

ಬರಹ

ಆತ್ಮೀಯರೆ!

ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಾ ೧೨೦೦ ಕಂತುಗಳನ್ನು ಮುಗಿಸಿ, ಯುಗಾದಿಯ ಮುನ್ನಾದಿನ ೧೨೦೧ ಕಂತನ್ನು ಹಾಗೂ ಯುಗಾದಿಯ ಈ ದಿನದಂದು ೧೨೦೨ನೆಯ ಕಂತನ್ನು ಪ್ರಸಾರ ಮಾಡುತ್ತಿದ್ದೇನೆ.

ಚಂದನದ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸುವವರು ಮೂರು ಜನ. ಆದರೆ ಪರೋಕ್ಶವಾಗಿ ಭಾಗವಹಿಸುವವರು ಲಕ್ಷಾಂತರ ಜನ. ಆದರೆ ಅದು ಅದೃಶ್ಯ ಭಾಗವಹಿಸುವಿಕೆ. ಎಲ್ಲರಿಗೂ ನೇರವಾಗಿ ಭಾಗವಹಿಸುವ ಅವಕಾಶ ಮಾಡಿಕೊಡಬೇಕು ಎನ್ನುವುದು ನನ್ನ ಬಹು ದಿನಗಳ ಆಸೆ. ಅಂತರ್ಜಾಲದಲ್ಲಿ ಕ್ವಿಜ಼್ ಗಾಗಿಯೇ ಒಂದು ತಾಣವನ್ನು ನಿರ್ಮಿಸಬೇಕು, ಎಲ್ಲ ಕನ್ನಡಿಗರು ಅಲ್ಲಿಗೆ ಬಂದು ಭಾಗವಹಿಸಬೇಕು ಎನ್ನುವ ನನ್ನ ಬಹುದಿನಗಳ ಕನಸು ಇಂದು ನನಸಾಗಿದೆ. 

ವಿರೋಧಿ ನಾಮ ಸಂವತ್ಸರದ ಈ ಶುಭ ದಿನದಂದು ಯಕ್ಷಪ್ರಶ್ನೆಗಳನ್ನು ಆರಂಭಿಸುತ್ತಿದ್ದೇನೆ.  

ನಿಮಗೆ ನೆನಪಿರಬಹುದು. ಜಾಗತಿಕ ಸಾಹಿತ್ಯದಲ್ಲಿ ನಿಜವಾದ ಅರ್ಥದಲ್ಲಿ ಮೊದಲ ಕ್ವಿಜ಼್ ನಡೆದದ್ದು ಯಕ್ಷರೂಪಿ ಯಮಧರ್ಮ ಹಾಗೂ ಧರ್ಮಜನ ನಡುವೆ. ಇದು ನನ್ನ ಅನಿಸಿಕೆ. ವ್ಯಾಸರಿಗೆ ಧರ್ಮಜನ ಧರ್ಮಜ್ಞಾನವನ್ನು ನಮಗೆ ಪರಿಚಯಿಸುವ ಉದ್ದೇಶ ಬಹುಶಃ ಇರಲಿಕ್ಕಿಲ್ಲ. ಅಲ್ಲಿನ ಪ್ರಶ್ನೆಗಳನ್ನು ನೋಡಿದರೆ, ಮಾನವ ಜನಾಂಗವನ್ನು ಅನಾದಿ ಕಾಲದಿಂದಲೂ ಕಾಡಿಕೊಂಡು ಬಂದಿರುವ ಚಿರ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಒಂದು ಪ್ರಯತ್ನ ನಡೆದಿರುವುದನ್ನು ನಾವು ಕಾಣಬಹುದು. ಯಕ್ಷಪ್ರಶ್ನೆ-ನಮ್ಮ ಅರಿವಿಗೆ ಸವಾಲು ಒಡ್ಡುವ ಪ್ರಶ್ನೆಗಳು. 

ನಾನೇನು ಯಮಧರ್ಮನೂ ಅಲ್ಲ. ವ್ಯಾಸನೂ ಅಲ್ಲ. ನಿಮ್ಮ ಹಾಗೆ ಸಾಮಾನ್ಯ ಮನುಷ್ಯ. ಆದರೆ ವ್ಯಾಸರ ಹಾಗೆ ಅರಿವನ್ನು ಹಂಚುವ ಹಂಬಲ ನನ್ನದು. ಹಾಗಾಗಿ ವ್ಯಾಸರನ್ನು ಮನದಲ್ಲಿ ಸ್ಮರಿಸಿ, ಯಕ್ಷಪ್ರಶ್ನೆಯೆನ್ನುವ ಕ್ವಿಜ಼್ ತಾಣವನ್ನು ಆರಂಭಿಸುತ್ತಿದ್ದೇನೆ.

ಯಕ್ಷಪ್ರಶ್ನೆಗಳಿಗೆ ಉತ್ತರಿಸಲು ನೀವು ಬಂದರೆ ನಿಮಗೆ ಗ್ರಂಥ ವಿಹಂಗಮದಲ್ಲಿ ಕನ್ನಡದ ಒಂದು ಉತ್ತಮ ಪುಸ್ತಕವನ್ನು ಪರಿಚಯಿಸುತ್ತೇನೆ ಹಾಗೆಯೇ ಸರ್ವಜ್ಞಪೀಠದಲ್ಲಿ ಒಂದು ಕುತೂಹಲಕರ ಮಾಹಿತಿಯನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ.

ಆತ್ಮೀಯರೆ!

ನಿಮಗೆ ಸುಸ್ವಾಗತ!

ಈ ತಾಣಕ್ಕೆ ಬನ್ನಿ. ನೊಂದಾಯಿಸಿಕೊಳ್ಳಿ. ವಾರಕ್ಕೊಮ್ಮೆ ನಿಮ್ಮ ಇನ್ ಬಾಕ್ಸಿನಲ್ಲಿ ಯಕ್ಷಪ್ರಶ್ನೆಗೆ ಆಹ್ವಾನ ಬರುತ್ತದೆ.

ನನ್ನ ಈ ಸಾಹಸದಲ್ಲಿ ತಾಂತ್ರಿಕ ನೆರವನ್ನು ಕೊಡುತ್ತಿರುವ ಗೆಳೆಯ ಬಿ.ಜಿ.ಶ್ರೀನಿವಾಸ್ ಅವರನ್ನು ಈ ಹೊತ್ತು ಕೃತಜ್ಞತೆಯಿಂದ ಸ್ಮರಿಸುತ್ತೇನೆ.

ವಂದನೆಗಳು

ನಾಸೋ

ಈ ಕೆಳಗಿನ ಸಂಪರ್ಕವನ್ನು ಅನುಸರಿಸಿ. 

http://chiyabgs.typepad.com/yakshaprashne/