ಯಕ್ಷಲೋಕದ ಧ್ವನಿ
ಉತ್ತರ ಕನ್ನಡ ಜಿಲ್ಲೆಯ ಹಳದಿಪುರವೆಂಬ ಊರಿನಿಂದ ‘ಯಕ್ಷರಂಗ’ ಎಂಬ ಮಾಸಪತ್ರಿಕೆ ಕಳೆದೊಂದು ವರ್ಷದಿಂದಲೂ ಪ್ರಕಟವಾಗುತ್ತಿದೆ. ಯಾಕ್ಷಗಾನಕ್ಕೆ ಮೀಸಲಾದ ಪತ್ರಿಕೆಯೊಂದರ ಹೊಣೆಯನ್ನು ಒಬ್ಬನೇ ಹೊರುವುದೆಂದರೆ ತ್ರಿವಿಕ್ರಮನ ಹೆಜ್ಜೆಗೆ ತಲೆಯೊಡ್ಡಿದಂತೆ ಎಂದು ಗೊತ್ತಿದ್ದೂ ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದು ಗೋಪಾಲಕ್ರಷ್ಣ ಭಾಗವತ ಎಂಬ ಪ್ರತಿಭೆ.
ಅಪರೂಪಕ್ಕೆಂಬಂತೆ, ಸಾಂಸ್ಕ್ರತಿಕ ಕಾಳಜಿಯುಳ್ಳ, ಸೀಮಿತ ಮಾರುಕಟ್ಟೆಯುಳ್ಳ, ಯಕ್ಷಗಾನದ ಕುರಿತು ಬರೆಯುವುದಕ್ಕೆ ಎಷ್ಟು ಸರಕು ಇದೆ ಎಂದು ಮನವರಿಕೆ ಮಾಡಿಸಿಕೊಡುತ್ತಿರುವ ಈ ಪತ್ರಿಕೆ ದಿನ ಕಳೆದಂತೆ ಬಲಗೊಳ್ಳುತ್ತಿರುವುದು ಖುಶಿಯ ಸುದ್ದಿ. ಯಕ್ಷಗಾನವನ್ನು ಹಾಗೆ ಹೀಗೆ ಎಂದೆಲ್ಲ ಸವಕಲು ಪದಗಳಿಂದ ಬಣ್ಣಿಸುವ ಅಥವಾ ಅದರ ದುರ್ದೆಶೆಯ ಕುರಿತು ಗೋಳಿಡುವ ಪೂರ್ವಾಗ್ರಹ-ಪೀಡಿತ ಪ್ರವ್ರತ್ತಿಗಿಂತ ಭಿನ್ನವಾದ ನಿಲುವು ‘ಯಕ್ಷರಂಗ’ದ್ದು. ರಂಗಕಲೆಯೊಂದರ ಭೂತ-ವರ್ತಮಾನ-ಭವಿಷ್ಯತ್ತನ್ನು ಚಿಕಿತ್ಸಕ ದ್ರಷ್ಟಿಯಿಂದ ನೋಡುವ, ಸಾಕಷ್ಟು ಹಿನ್ನೆಲೆ ಜ್ನಾನವುಳ್ಳ, ಯಕ್ಷಗಾನದ ಕುರಿತಾದ ನಿರ್ಲಕ್ಷ್ಯವನ್ನು ಎತ್ತರದ ಧ್ವನಿಯಲ್ಲಿ ಖಂಡಿಸುವ ಗೋಪಾಲರ ಈ ಸಂಚಿಕೆಯ ಸಂಪಾದಕೀಯವನ್ನು ನೋಡಿ.
ಶೀರ್ಷಿಕೆ: ಯಕ್ಷಗಾನ ಸಾಹಿತ್ಯಕ್ಕೆ ಸಮ್ಮೇಳನದಲ್ಲಿ ಸ್ಥಾನ ಸಿಗಲಿ.
...............................................
ಯಾವುದೇ ಭಾಷೆ ತನ್ನಷ್ಟಕ್ಕೆ ತಾನು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಾರದು. ಪ್ರತೀ ಭಾಷೆಗೂ ಅದನ್ನು ಬೆಳೆಸಿದ ಮತ್ತು ಆ ಭಾಷೆ ಬೆಳೆಸಿದ ಮೂಲ ಸಂಸ್ಕ್ರತಿಯೊಂದಿರುತ್ತದೆ. ಸಂಸ್ಕ್ರತಿ ಮತ್ತು ಭಾಷೆ ಇವೆರಡು ಪರಸ್ಪರ ಪ್ರಭಾವಿತವಾಗುವ ಅಂಶಗಳು ಎಂಬುದು ವೈಜ್ಣಾನಿಕ ಸತ್ಯ. ಕನ್ನಡ ಭಾಷೆ ಉಳಿದು ಬೆಳೆದು ಬಂದಿರುವುದು ಕನ್ನಡ ಸಂಸ್ಕ್ರತಿಯ ಬಹುಮುಖೀ ಅಭಿವ್ಯಕ್ತಿಯ ಮಾಧ್ಯಮವಾಗಿ. ಭಾಷೆಯೆನ್ನುವುದು ಕೇವಲ ವ್ಯವಹಾರ ಮಾಧ್ಯಮದ ಮಟ್ಟಕ್ಕೆ ಇಳಿದದ್ದು ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾತ್ರ.
ಕನ್ನಡ ಸಾಹಿತ್ಯದ ಅನೇಕ ಪ್ರಕಾರಗಳು ಹುಟ್ಟಿಕೊಂಡದ್ದು ನಮ್ಮ ನಾಡಿನ ಸಂಸ್ಕ್ರತಿಯ ಬೇರೆ ಬೇರೆ ಅಯಾಮದ ಮುಖವಾಣಿಯಾಗಿ. ಪಂಪ ರನ್ನಾದಿಗಳ ಕಾವ್ಯಗಳು ಪ್ರಾಚೀನ ಸಾಮ್ರಾಜ್ಯದ ಪ್ರತಿನಿಧಿಯೆನಿಸಿದರೆ, ವಚನ ಚಳುವಳಿ ಸಮಾಜಮುಖಿಯಾದ ವಚನ ಸಾಹಿತ್ಯವನ್ನು ಹುಟ್ಟಿಹಾಕಿತು. ಭಕ್ತಿ ಪಂಥದ ಮಂತ್ರಗಳು ಕಾವ್ಯವದದ್ದು ದಾಸ ಸಾಹಿತ್ಯದಲ್ಲಿ. ಹಾಗೆಯೇ ಅಧುನಿಕ ಜೀವನದ ಜಂಜಡಗಳಿಗೆ ಮಾಧ್ಯಮವಾದದ್ದು ಕಥೆ ಕಾದಂಬರಿಗಳಾದರೆ, ದೀನ ದಲಿತರ ಧ್ವನಿ ದಲಿತ-ಬಂಡಯ ಸಾಹಿತ್ಯ. ಹೀಗೆ ಯಾವುದೇ ಸಾಹಿತ್ಯ ಪ್ರಕಾರವೂ ಸಮಾನಾಂತರವಾದ ಸಾಮಾಜಿಕ ಏರಿಳಿತಗಳ ಹಿನ್ನೆಲೆಯಿಲ್ಲದೆ ಸಾಹಿತ್ಯ ಪ್ರಕಾರವೆನಿಸಲಿಲ್ಲ. ಪ್ರಚಲಿತದಲ್ಲಿ ಇಂತಹ ಹಿನ್ನೆಲೆಯಿಲ್ಲದೆ ನಲ್ಕು ಗೋಡೆಗಳ ಮಧ್ಯದಲ್ಲಿ ಸಾಹಿತ್ಯ ಸ್ರಷ್ತಿಯಾಗುತ್ತಿರುವುದರಿಂದಲೊ ಏನೋ ಇಂದಿನ ಸಾಹಿತ್ಯ ಜನರಿಂದ ದೂರ ಸರಿಯುತ್ತಿದೆಯೆಂದು ಅನಿಸುವುದು.
ಈಗ ಕನ್ನಡದಲ್ಲಿ ಬೆಳೆದುಬಂದ ಸಮ್ರದ್ಧ ಯಕ್ಷಗಾನ ಸಾಹಿತ್ಯ ಅಥವಾ ಯಕ್ಷಗಾನ ಪ್ರಸಂಗ ಸಾಹಿತ್ಯದ ಕಡೆಗೆ ಬರೋಣ. ಸುಮಾರು ೧೫ನೇ ಶತಮಾನದಿಂದಲೇ ಪ್ರಾರಂಭವಾಗುವ ಯಕ್ಷಗಾನ ಸಾಹಿತ್ಯ ಪರಂಪರೆ ಕನ್ನಡದ ಉಳಿದ ಸಾಹಿತ್ಯ ಪ್ರಕಾರಗಳಿಗಿಂತ ಕಡಿಮೆಯೆಂದು ಯಾವ ಸಾಹಿತ್ಯ ಚರಿತ್ರೆಕಾರನೂ ವಾದಿಸಿಲ್ಲ. ಅಂದಿನಿಂದ ಇಂದಿನವರೆಗೂ ಸಾವಿರಾರು ಉತ್ಕ್ರಷ್ಟ ಪ್ರಸಂಗಗಳ ರಚನೆಯಾಗುತ್ತಿದ್ದರೂ, ಕನ್ನಡ ಸಹಿತ್ಯ ಚರಿತ್ರೆಕಾರರು ಇನ್ನೂ ಯಕ್ಷಸಾಹಿತ್ಯವನ್ನು ಸಾಹಿತ್ಯವೆಂದು ಪರಿಗಣಿಸುತ್ತಿಲ್ಲ. ಪಂಪ, ರನ್ನ, ಕುಮಾರವ್ಯಾಸರು ವಿಶ್ವವಿದ್ಯಾಲಯದ ಸಂಶೋಧನ ಕೇಂದ್ರದ ಕಾರಗ್ರಹವನ್ನು ಸೇರಿ ಬಹಳ ಕಾಲವೇ ಆಯಿತು. ಆದರೆ ಪ್ರಸಂಗ ಸಾಹಿತ್ಯ ಮಾತ್ರ ಇನ್ನೂ, ಈ ಆಧುನಿಕ ಕಾಲದಲ್ಲಿಯೂ ಜೀವಂತ ರಂಗಭೂಮಿಯಲ್ಲಿ ನಲಿದಾಡುತ್ತಿದೆ. ಕನ್ನಡದ ವಿಶಿಷ್ಠ ಛಂದಸ್ಸುಗಳು ಉಳಿದಂತೆ ನಶಿಸಿಹೋಗಿದ್ದರೂ ಯಕ್ಷಗಾನ ಸಾಹಿತ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿವೆ ಎಂಬ ಅಂಶವು ಡಾ. ಎನ್ ನಾರಾಯಣ ಶೆಟ್ಟಿಯವರಂತಹವರ ಸಂಶೋಧನೆಯಿಂದ ದ್ರಢಪಡುತ್ತದೆ. ಇಷ್ಟಾದರು ಇದಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ಮನ್ನಣೆಯಿಲ್ಲ. ಬಹುಷಹ ಅಧಿಕಾರಸ್ಥ ರಾಜಕಾರಣಿಗಳನ್ನು ಪಳಗಿಸುದಕ್ಕೆ ಬೇಕಾದಷ್ಟು ಪ್ರಬಲವಾದ ಕೋಮಿನವರು ಯಕ್ಷಗಾನ ಸಾಹಿತ್ಯದೊಟ್ಟಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳಬಹುದಾದ ಸ್ಥಿತಿ ಇದ್ದಿದ್ದರೆ ಇಷ್ಟು ಹೊತ್ತಿಗೆ ಕೆಲವು ಜನ ಯಕ್ಷಗಾನ ಕವಿಗಳಿಗಾದರೂ ‘ಪಂಪ ಪ್ರಶಸ್ತಿ’ ನೀಡಿ ವರ್ಷವೇ ಸಂದು ಹೋಗುತ್ತಿತ್ತು. ಈಗ ಪರಿಸ್ಥಿತಿ ಹೇಗಿದೆಯೆಂದರೆ, ಪಂಪ ಪ್ರಶಸ್ತಿ ಹೋಗಲಿ ಸಾಹಿತ್ಯ ಸಮ್ಮೇಳನಕ್ಕೆ ನಾಲ್ಕಾಣೆಯ ಸ್ಟಾಂಪು ಹಚ್ಚಿ ಆಮಂತ್ರಣ ಪತ್ರಿಕೆಯನ್ನು ನಮ್ಮ ಪ್ರಸಂಗ ಸಾಹಿತಿಗಳಿಗೆ ಕಳುಹಿಸುವ ಗೋಜಿಗೂ ಸಾಹಿತ್ಯ ಪರಿಷತ್ತು ಹೋಗುವುದಿಲ್ಲ.
ಇಂತಹ ತಾರತಮ್ಯಗಳಿಗೆ ಮಂಗಳ ಹಾಡಲು ಇದೀಗ ಕಾಲ ಕೂಡಿ ಬಂದಿದೆ. ಯಕ್ಷಗಾನದ ಗಂಡುಮೆಟ್ಟಿನ ಸ್ಥಳವಾದ ಉಡುಪಿಯಲ್ಲಿ ಈ ವರ್ಷದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಎಲ್ ಎಸ್ ಶೇಷಗಿರಿರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ-ಇದೇ ಅಕ್ಟೋಬರ್ ಕೊನೆಯ ವಾರದಲ್ಲಿ. ಉಡುಪಿಯಲ್ಲಿ ಸಾಹಿತ್ಯ ಸಮ್ಮೇಳನ ಎಂದಾಕ್ಷಣ ಯಾರು ಬೇಕಾದರೂ ಲೆಕ್ಕ ಹಾಕಬಹುದು-ಸಮ್ಮೇಳನದ ಮೆರವಣಿಗೆ-ವೇದಿಕೆಯ ಪ್ರಮುಖ ಆಕರ್ಷಣೆಯೆಂದರೆ ಯಕ್ಷಗಾನದ ವೈವಿಧ್ಯಮಯ ವೇಷಗಳು ಎಂದು. ನಾವು ಯಕ್ಷಗಾನದವರು ಅಷ್ಟು ಮಾಡಿ ಸುಮ್ಮನೆ ಕುಳಿತರೆ ಸಾಲದು. ಈ ಸಮ್ಮೇಳನದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಕಲಾವಿದರು, ಬರಹಗಾರರು, ಯಕ್ಷಗಾನ ಚಿಂತಕರುಗಳೆಲ್ಲ ಸೇರಿ ಸಮ್ಮೇಳನದಲ್ಲಿ ಯಕ್ಷಗಾನಕ್ಕೆ ಸಾಹಿತ್ಯ ಕ್ಷೆತ್ರದಲ್ಲಿ ಸಿಗಬೇಕಾದ ಮನ್ನಣೆ ಸಿಗುವಂತೆ ಒತ್ತಾಯಿಸಬೇಕು. ಸಾಲದ್ದಕ್ಕೆ ಯಕ್ಷಗಾನದವರೇ ಆದ ವಿದ್ಯಸಾಗರ ತೀರ್ಥ ಶ್ರೀಪಾದಂಗಳು, ಡಿ ವೀರೇಂದ್ರ ಹೆಗ್ಗಡೆಯವರು, ಡಾ ವಿ ಎಸ್ ಆಚಾರ್ಯ ಮೊದಲಾದ ಗಣ್ಯರು ಸಮ್ಮೇಳನ ಪಂಚಾಂಗ ಪ್ರಮುಖರಾಗಿದ್ದಾರೆ. ಕೆಲವೇ ತಿಂಗಳ ಹಿಂದೆ ಇಲ್ಲಿಯೇ ನಡೆದ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದವರೆಲ್ಲ ಈ ಕಾರ್ಯದಲ್ಲಿಯೂ ಉತ್ಸಾಹ ತೋರಲಿ.
ವೇದಿಕೆಯಲ್ಲಿ ಅವಕಾಶ ಸಿಕ್ಕಾಗಲೆಲ್ಲ ಯಕ್ಷಗಾನದ ದುಸ್ಥಿತಿಯ ಬಗ್ಗೆ ಕಣ್ಣೀರು ಸುರಿಸುವ ಯಕ್ಷಗಾನದ ಬುದ್ಧಿಜೀವವಿಗಳೆಲ್ಲ ಸೇರಿ ಈ ಹೋರಾಟಕ್ಕೆ ಒಂದು ಮೂರ್ತ ರೂಪ ಕೊಡಲಿ.