ಯಕ್ಷ ಗಾನ ಲೀಲಾವಳಿ

ಯಕ್ಷ ಗಾನ ಲೀಲಾವಳಿ

ಪುಸ್ತಕದ ಲೇಖಕ/ಕವಿಯ ಹೆಸರು
ಲೀಲಾವತಿ ಬೈಪಾಡಿತ್ತಾಯ, ನಿರೂಪಣೆ: ವಿದ್ಯಾರಶ್ಮಿ ಪೆಲತ್ತಡ್ಕ
ಪ್ರಕಾಶಕರು
ಅಭಿನವ ಪ್ರಕಾಶನ, ವಿಜಯನಗರ, ಬೆಂಗಳೂರು -೫೬೦೦೪೦
ಪುಸ್ತಕದ ಬೆಲೆ
ರೂ.೧೫೦.೦೦, ಮುದ್ರಣ: ೨೦೨೧

ಯಕ್ಷಗಾನದಲ್ಲಿ ಭಾಗವತಿಕೆ ಪುರುಷರಿಗೆ ಮಾತ್ರ ಸೈ ಅನ್ನುವ ಸಮಯದಲ್ಲಿ ಲೀಲಾವತಿ ಬೈಪಾಡಿತ್ತಾಯ ಅವರು ಭಾಗವತಿಕೆಯನ್ನು ಮಾಡಲು ಪ್ರಾರಂಭಿಸಿದರು. ಪ್ರಾರಂಭದ ವಿರೋಧದ ನಡುವೆಯೇ ಧೃತಿಗೆಡದೇ ತಮ್ಮ ಕಾಯಕವನ್ನು ಮುಂದುವರೆಸಿಕೊಂಡು ಬಂದರು. ಇವರು ಯಕ್ಷಗಾನ ರಂಗದ ಪ್ರಥಮ ಮಹಿಳಾ ಭಾಗವತರು ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇವರ ಆತ್ಮಕಥೆಯನ್ನು ಪತ್ರಕರ್ತೆ ವಿದ್ಯಾರಶ್ಮಿ ಪೆಲತಡ್ಕ ಅವರು ಸೊಗಸಾಗಿ ನಿರೂಪಿಸಿ ಅದನ್ನು ‘ಯಕ್ಷ ಗಾನ ಲೀಲಾವಳಿ' ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. 

ಈ ಕೃತಿಗೆ ಮುನ್ನುಡಿ ಬರೆದ ಹಿರಿಯ ಲೇಖಕ ಲಕ್ಷ್ಮೀಶ ತೋಳ್ಪಾಡಿ ಇವರ ಪ್ರಕಾರ “ಯಕ್ಷಮೇಳದ ತಿರುಗಾಟದಲ್ಲಿ ಭಾಗವಹಿಸಿದ ಮೊದಲ ಮಹಿಳಾ ಭಾಗವತರೆಂಬ ಇತಿಹಾಸವನ್ನು ಲೀಲಮ್ಮ ಸೃಷ್ಟಿಸಿದರು. ಹೀಗೊಂದು ಇತಿಹಾಸ ಸೃಷ್ಟಿಸುತ್ತಿದ್ದೇನೆ ಎಂಬ ಅರಿವಿಲ್ಲದೆ !  ಹೊಸ ಮಾರ್ಗವೊಂದು ಉದ್ಘಾಟನೆಗೊಂಡಿತು ಎಂದು ಅರಿವಿಗೆ ಬಂದಾಗಲೂ ಲೀಲಮ್ಮನಿಗೆ ಉಂಟಾದದ್ದು ಕೂಡಾ ವಿನೀತ ಭಾವವೇ. ಲೋಕವನ್ನೇ ಕರಗಿಸುವ ಈ ವಿನಯ ಲೀಲಮ್ಮನವರದೇ ಸೊತ್ತು ಅನಿಸುತ್ತದೆ ನನಗೆ. ಕಲೆಯ ಮೂಲ ಸಮಸ್ಯೆಗಳಲ್ಲಿ ಇದೂ ಒಂದು. ಅದೆಂದರೆ ತನ್ನ ಭಾವ ತಾದಾತ್ಮ್ಯ ಮತ್ತು ಎಚ್ಚರದ ಸಮತೋಲ ಲೀಲಮ್ಮನಿಗೆ ಇದು ಸಹಜವಾಗಿ ಬಂದಂತಿದೆ. ಒಂದೆಡೆ ಸಂಸಾರ. ಇನ್ನೊಂದೆಡೆ ಯಕ್ಷವೇದಿಕೆ. ಒಂದೆಡೆ ಲೋಕಧರ್ಮಿ. ಇನ್ನೊಂದೆಡೆ ನಾಟ್ಯ ಧರ್ಮಿ. ಇವೆರಡನ್ನೂ ಕಲಾತ್ಮಕ ಹದದಿಂದ ಮುನ್ನಡೆಸಿದವರು ಅವರು. ಈ ಕಲಾ ಕಾಯಕದಲ್ಲಿ ಲೀಲಮ್ಮನವರ ಪತಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯರ ಹಿಮ್ಮೇಳ, ಹಿನ್ನಲೆ, ಮಾರ್ಗದರ್ಶನ, ಪ್ರೋತ್ಸಾಹಗಳು- ತಾನು ಹಿನ್ನಲೆಯಲ್ಲಿ ನಿಂತು ಮಡದಿಯನ್ನು ಮುನ್ನೆಲೆಗೆ ತರುವಲ್ಲಿನ ಸಹೃದಯತೆ -ಸರ್ವಥಾ ಅಭಿನಂದನೀಯವಾಗಿದೆ" ಎಂದು ಬರೆದಿದ್ದಾರೆ.

ಲೀಲಾವತಿ ಬೈಪಾಡಿತ್ತಾಯರ ಆತ್ಮಕಥೆಯನ್ನು ಸೊಗಸಾಗಿ ನಿರೂಪಣೆ ಮಾಡಿದ ವಿದ್ಯಾರಶ್ಮಿ ಪೆಲತಡ್ಕ ಇವರ ಅಭಿಪ್ರಾಯದಲ್ಲಿ “ತುಳು ಪ್ರಸಂಗಗಳ, ಡೇರೆ ಮೇಳಗಳ ಆಧಿಕ್ಯದ ಸಮಯದಲ್ಲೇ ತಮ್ಮ ಕಲಾರಂಗದಲ್ಲಿ ಅರಳಿದ ಲೀಲಮ್ಮ ಆ ಕಾಲದಲ್ಲಿ ಕರಾವಳಿಯ ಮನೆಮನೆಯಲ್ಲೂ ‘ಹೆಣ್ಣುಮಗಳು ಭಾಗವತಿಕೆ ಮಾಡ್ತಾರಂತೆ' ಎಂಬ ಸೆನ್ಸೇಷನ್ ಹುಟ್ಟುಹಾಕಿದ್ದರು. ವಿಶೇಷ ಆಕರ್ಷಣೆಯಾಗಿ ಅವರು ಯಕ್ಷಗಾನಾಭಿಮಾನಿಗಳನ್ನು ಎಷ್ಟರ ಮಟ್ಟಿಗೆ ಸೆಳೆಯಲು ಶಕ್ತರಾಗಿದ್ದರೆಂದರೆ ಹಲವಾರು ಬಾರಿ ಸೇರಿದ್ದ ಜನಸ್ತೋಮಕ್ಕೆ ಕೂರಲು ಜಾಗವಿಲ್ಲದೆ ಟೆಂಟ್ ಬಿಚ್ಚಿಸಿ ಜಾಗ ಮಾಡಿಕೊಡಬೇಕಾಗಿ ಬಂದುದೂ ಇತ್ತು ! ಇಂದಿನ ಸೋಶಿಯಲ್ ಮೀಡಿಯಾ ಮೆರೆದಾಟದ ಈ ಕಾಲದಲ್ಲಿ ಇವರು ರಂಗವೇರುತ್ತಿದ್ದರೆ ಇನ್ನು ಅದೆಂತಹ ಜನಪ್ರಿಯತೆ ಪಡೆಯುತ್ತಿದ್ದರೋ, ಇವರ ಮಧುರ ಧ್ವನಿ ಅದೆಷ್ಟು ವೈರಲ್ ಆಗುತ್ತಿತ್ತೋ ಎಂದು ಕಲ್ಪಿಸಿಯೇ ಬೆರಗಾಗುತ್ತೇನೆ.” ಎಂದಿದ್ದಾರೆ.

೧೫೬ ಪುಟಗಳ ಈ ಪುಸ್ತಕವನ್ನು ಓದಿದರೆ ಹೆಣ್ಣುಮಗಳು ಸಾಧಿಸಿದರೆ ಎಷ್ಟು ಎತ್ತರಕ್ಕೇರಬಹುದು ಎನ್ನುವುದು ತಿಳಿದುಬರುತ್ತದೆ.