ಯಕ್ಷ ಸತ್ಸಂಗ ಬರೆದ ರಂಗ ಸಮಗ್ರತೆಯ ಮುನ್ನುಡಿ

ಯಕ್ಷ ಸತ್ಸಂಗ ಬರೆದ ರಂಗ ಸಮಗ್ರತೆಯ ಮುನ್ನುಡಿ

ಯಕ್ಷಗಾನ ಪ್ರದರ್ಶನಕ್ಕೆ ಅದ್ದೂರಿಯ ಸ್ಪರ್ಶ ಸಿಕ್ಕಾಗ ಕುತೂಹಲ ಜಾಗೃತವಾಗುತ್ತದೆ. ಸಂಪರ್ಕ ತಾಣಗಳಲ್ಲೆಲ್ಲಾ ರೋಚಕತೆಗಳ ಪ್ರವಾಹ. ನೆಚ್ಚಿನ ಕಲಾವಿದರನ್ನು ಹೊನ್ನಶೂಲಕ್ಕೇರಿಸುವ ಹೊಗಳಿಕೆಗಳ ಮಾಲೆ. ಅಭಿಮಾನದ ಗೂಡಿನೊಳಗೆ ಪ್ರಶಂಸೆಗಳ ರಿಂಗಣ. ಪ್ರದರ್ಶನದಲ್ಲಿ ಯಕ್ಷಗಾನ ಕಾಣದಿದ್ದರೂ ಕಂಡೂ ಕಾಣದಂತಿರುವ ಸ್ಥಿತಪ್ರಜ್ಞತೆ. ಕಟೀಲಿನಲ್ಲಿ ಜರುಗಿದ ‘ಯಕ್ಷಮಿತ್ರ-ನಮ್ಮ ವೇದಿಕೆ’ ವಾಟ್ಸಪ್ ಬಳಗದ ಯಕ್ಷಗಾನಕ್ಕೆ ತೆರಳುತ್ತಿದ್ದಾಗ ಹಾದುಹೋದ ಚಿತ್ರಗಳಿವು.
ಅಲ್ಲಿನ ಚಿತ್ರಣವೇ ಬೇರೆ - ಸಾವಿರಾರು ಮಂದಿಯ ಉಪಸ್ಥಿತಿ. ಸಾಮಾಜಿಕ ತಾಣವೊಂದರ ತಾಕತ್ತಿನ ಸಾಕಾರ. ಅನುಭವಿ ಸಂಘಟಕರ ಆಶಯದಂತೆ ಪ್ರದರ್ಶನ. ‘ಜನರಿಗೆ ಬೋರ್ ಆಗುತ್ತದೆ’ ಎನ್ನುತ್ತಾ ಬದಿಗೆ ತಳ್ಳಲ್ಪಟ್ಟ ಪೂರ್ವರಂಗದ ಪ್ರಸ್ತುತಿ. ನಾಲ್ಕೂ ಪ್ರಸಂಗಗಳ ಸಂಪೂರ್ಣ ಸಂಪನ್ನತೆ. ‘ಅನಾದರಕ್ಕೊಳಪ್ಪಟ್ಟ’ ಸಭಾಕ್ಲಾಸ್, ತೆರೆಕ್ಲಾಸ್‍ಗಳ ಸೊಗಸು. ಬಣ್ಣದ ವೇಷಗಳ ಅಬ್ಬರ. ಪಾರಂಪರಿಕ ಹಾದಿಯಲ್ಲಿ ಹೆಜ್ಜೆಯೂರಿದ ಹಿಮ್ಮೇಳ. ಪ್ರದರ್ಶನವೊಂದರ ಆಯೋಜನೆಯ ಜತೆಯಲ್ಲಿ ಸಂಘಟಕರ ‘ನಿಖರ’ ರಂಗ ಯೋಚನೆಗಳು ಮಿಳಿತವಾಗಬೇಕೆನ್ನುವ ಸಂದೇಶವನ್ನು ಕಟೀಲು ಆಟ ನೀಡಿದೆ. ‘ಸಂಘಟನೆಯಲ್ಲೂ ಸ್ಪಷ್ಟ, ನಿರ್ದಾಕ್ಷಿಣ್ಯ ಹೂರಣಗಳು ಬೇಕು,’ - ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದಾಗ ನನ್ನ ತಲೆಯಲ್ಲಿ ತುಂಬಿದ ಯೋಚನೆಗಳು.
ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳ ಏರುತ್ಸಾಹದ ವೈಭವೀಕರಣದ ಕಾಲಘಟ್ಟವಿದು. ಉದ್ದೇಶ ಶುದ್ಧಿಯಾಗಿದ್ದರೆ ಇವುಗಳು ಸಾಮಾಜಿಕ ಸ್ವಾಸ್ಥ್ಯಕ್ಕೂ ಪೂರಕ. ‘ಯಕ್ಷಮಿತ್ರ - ನಮ್ಮ ವೇದಿಕೆ’ ತಾಣವು ಅನುಷ್ಠಾನದಿಂದ ತೋರಿದೆ. ಮುನ್ನೂರು ಮೀರಿದ ಸದಸ್ಯ ಬಲ. ಪ್ರಥಮ ಯಕ್ಷಸತ್ಸಂಗದ ಯಶಸ್ವೀ ಸಂಪನ್ನತೆ. ಲಕ್ಷ್ಮೀ, ಸೀತೆ, ಹಿಡಿಂಬೆ, ಪದ್ಮಾವತಿ ಕಲ್ಯಾಣಗಳ ಆಖ್ಯಾನ. ಬೆಳಿಗ್ಗೆ ಆರು ಗಂಟೆಗೆ ಮುಗಿಯಬೇಕೆನ್ನುವ ಧಾವಂತ ಸಂಘಟಕರಿಗೆ ಇರಲಿಲ್ಲ. ಪ್ರಸಂಗವನ್ನು ಹಿಂಡಿಹಿಪ್ಪೆ ಮಾಡುವ ಹಟ ಕಲಾವಿದರಲ್ಲೂ ಇರಲಿಲ್ಲ! ನಿನ್ನೆಯ-ನಾಳಿನ ಆಟ-ಕೂಟದ ಒತ್ತಡದ ಗೊಣಗಾಟವಿರಲಿಲ್ಲ.
ಸದಸ್ಯರೊಳಗೆ ಪಾಲುಗಾರಿಕೆ ದೃಷ್ಟಿಯಿಂದ ವಿವಿಧ ಸ್ಪರ್ಧೆಗಳು, ಛಾಯಾಚಿತ್ರ ಪ್ರದರ್ಶನ, ಸಿ.ಡಿ.ಬಿಡುಗಡೆ, ಕೈಪಿಡಿ ಅನಾವರಣ, ಕಲಾವಿದರ ಸಂಮಾನ.. ಹೀಗೆ ತುಂಬು ಕಲಾಪಗಳ ನಿಗದಿ. ವಾಟ್ಸಪ್‍ನಲ್ಲೇ ಮಾತಾಡಿಕೊಂಡಿದ್ದ ಸದಸ್ಯರಿಗೆ ಬಹುತೇಕರ ಹೆಸರು ಗೊತ್ತು. ಮುಖ ಪರಿಚಯ ಅಷ್ಟಕ್ಕಷ್ಟೇ. ಕಾರ್ಯಕ್ರಮದಂದು ಪರಸ್ಪರ ಪರಿಚಯ. ಸ್ವಯಂಸೇವಕರಾಗಿ ಸ್ವಯಂಸ್ಫೂರ್ತಿಯಿಂದ ಕೈಂಕರ್ಯ.
‘ಲಕ್ಷ್ಮೀ ಸ್ವಯಂವರ’ ಮೊದಲ ಪ್ರಸಂಗ. ದೇವೇಂದ್ರನ ಆಕರ್ಷಕ ಒಡ್ಡೋಲಗ. ಬಲಿ, ವಾಲಿ, ವಿಷ್ಣು ಪಾತ್ರಗಳ ಯಶಸ್ವೀ ನಿರ್ವಹಣೆ. ಹಿರಿಯ ಬಲಿಪ ನಾರಾಯಣ ಭಾಗವತರು, ಬಲಿಪ ಪ್ರಸಾದ ಭಾಗವತರ ಸಮರ್ಥ ನಿರ್ದೇಶನ. ಎರಡನೇ ಪ್ರಸಂಗ - ಸೀತಾಕಲ್ಯಾಣ. ವಿಶ್ವಾಮಿತ್ರ, ರಾಮ, ಲಕ್ಷ್ಮಣ, ತಾಟಕಿ, ರಾವಣ, ದೂತ ಪಾತ್ರಗಳು ಯಶದ ಹೊಣೆ ಹೊತ್ತವುಗಳು. ಪುತ್ತಿಗೆ ರಘುರಾಮ ಹೊಳ್ಳರ ಸಾರಥ್ಯ. ಹಿಡಿಂಬಾ ವಿವಾಹ ಮೂರನೇ ಆಖ್ಯಾನ. ಭೀಮ, ಹಿಡಿಂಬ, ಹಿಡಿಂಬೆ, ಮಾಹಾ ಹಿಡಿಂಬೆ.. ಪಾತ್ರಗಳನ್ನು ಕುರಿಯ ಗಣಪತಿ ಶಾಸ್ತ್ರಿಗಳು ತನ್ನ ನಿರ್ದೇಶನದ ಛಾಪಿನಿಂದ ಕುಣಿಸಿ ಎದ್ದಾಗ ಸೂರ್ಯೋದಯವಾಗಬೇಕೇ? ಕೊನೆಯ ಪ್ರಸಂಗ ಪದ್ಮಾವತಿ ಪರಿಣಯ. ಪಟ್ಲ ಸತೀಶ ಶೆಟ್ಟಿಯವರ ಭಾಗವತಿಕೆ. ಕಿರಾತ, ಪದ್ಮಾವತಿ, ಕೊರವಂಜಿ ಮೊದಲಾದ ಪಾತ್ರಗಳ ಅಭಿವ್ಯಕ್ತಿ ಚೆನ್ನಾಗಿತ್ತು. ಬೆಳಗು ಹರಿದರೂ ಸಭಾಭವನದಲ್ಲಿ ನೂರಾರು ಮಂದಿಯ ಉಪಸ್ಥಿತಿ. ಒಟ್ಟಿನಲ್ಲಿ ಸರ್ವಕಲಾವಿದರ ಕಲಾಭಿಜ್ಞತೆಗಳಿಗೆ ಯಕ್ಷ ಸತ್ಸಂಗ ಉತ್ತಮ ವೇದಿಕೆ ರೂಪಿಸಿತ್ತು.
ವಿವಿಧ ಆಸಕ್ತಿಯ ಮನಸ್ಸುಗಳನ್ನು ಏಕಪ್ರವಾಹದಲ್ಲಿ ಒಯ್ಯುವಲ್ಲಿ ವಾಟ್ಸಪ್ ತಂಡದ ಅಡ್ಮಿನ್‍ಗಳ ನಿರ್ದಾಕ್ಷಿಣ್ಯ ಕಾರ್ಯವಿಧಾನ ಮೆಚ್ಚತಕ್ಕದ್ದೇ. ಯಕ್ಷಗಾನದ ಹೊರತಾದ ಯಾವುದೇ ವಿಚಾರಗಳಿಗೆ ಆಸ್ಪದ ಕೊಡದೆ ವಿಚಾರಗಳನ್ನು ಹಳಿಯಲ್ಲೇ ಒಯ್ಯವಲ್ಲಿ ಸಮರ್ಥವಾಗಿದೆ. ಡಾ.ಪದ್ಮನಾಭ ಕಾಮತ್, ಹರಿನಾರಾಯಣ ಆಸ್ರಣ್ಣರೊಂದಿಗೆ ಹತ್ತಾರು ಶ್ರಮಿಕ ಮನಸ್ಸುಗಳ ಏಕಸೂತ್ರತೆಯಿಂದ ಕಟೀಲು ಯಕ್ಷಸತ್ಸಂಗ ನಿಜಾರ್ಥದಲ್ಲಿ ಸತ್ಸಂಗವಾಯಿತು. ಯಕ್ಷಗಾನದಲ್ಲಿ ಹೊಸ ಹಾದಿಯನ್ನು ತೋರಿತು. ಭಾಗವಹಿಸಿದ ಕಲಾವಿದರೇ ಸಂಘಟಕರ ಆಶಯವನ್ನು ಮುಕ್ತಕಂಠದಿಂದ ಹೊಗಳಿದುದನ್ನು ನೋಡಿದ್ದೇನೆ, ಕೇಳಿದ್ದೇನೆ. ಇದು ಗಂಟಲ ಮೇಲಿನ ಮಾತಲ್ಲ.
‘ಯಕ್ಷ ಮಿತ್ರ - ನಮ್ಮ ವೇದಿಕೆ’ ವಾಟ್ಸಪ್ ತಂಡದ ಸದಸ್ಯ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಖುಷಿ. ಆದರೆ ನಿಯಂತ್ರಣ ದೃಷ್ಟಿಯಿಂದ ಸೀಮಿತಗೊಳಿಸಬಹುದೇನೋ? ಯಾಕೆಂದರೆ ಯಕ್ಷಗಾನವನ್ನು ಸಮಗ್ರವಾಗಿ ನೋಡುವ, ಯೋಚಿಸುವ ತಂಡದ ಮುಖ್ಯಸ್ಥರ ಆಶಯವನ್ನು ಅನುಸರಿಸುವ ಮನಸ್ಸುಗಳು ಹೆಚ್ಚಿದ್ದಷ್ಟೂ ತಂಡ ಸದೃಢವಾಗುತ್ತದೆ. ಕಲಾವಿದರ ಮೇಲಿನ ‘ಭಯಂಕರ’ ಅಭಿಮಾನ, ಒಂದೊಂದು ಪಾತ್ರದ ಕುರಿತಾದ ‘ವಿಪರೀತ’ ಮೋಹ, ತನ್ನ ನೆಚ್ಚಿನ ಕಲಾವಿದ ರಂಗದಲ್ಲಿ ಹೇಗೆ ಅಭಿವ್ಯಕ್ತಿಸಿದರೂ ಬೆನ್ನು ತಟ್ಟುವ ‘ಆರಾಧನಾ’ ಜಾಯಮಾನಗಳು ಹಬ್ಬುವಿಕೆ. ಈ ಮಧ್ಯೆ ಯಕ್ಷಗಾನವನ್ನು ಯಕ್ಷಗಾನವಾಗಿ ನೋಡುವ, ಆಸ್ವಾದಿಸುವ ಮನಸ್ಸುಗಳ ರೂಪೀಕರಣ ಆಗಬೇಕಾಗಿದೆ. ಕಲೆಯೊಂದರ ಬೆಳವಣಿಗೆಗೆ ಕಲಾವಿದನೂ ಮುಖ್ಯ. ಪ್ರೇಕ್ಷಕರೂ ಮುಖ್ಯ. ಆದರೆ ಕಲಾವಿದನ, ಕಲೆಯ ಬೆಳವಣಿಗೆಯಲ್ಲಿ ಪೇಕ್ಷಕನ ಪ್ರಜ್ಞೆಗೆ ಹೆಚ್ಚು ಒತ್ತು.
ವಾಟ್ಸಪ್ ತಂಡವು ಮೊದಲ ಪ್ರದರ್ಶನ ಹೊಸ ಭರವಸೆಯನ್ನು ಹುಟ್ಟು ಹಾಕಿದೆ. ರಂಗ ಸಮಗ್ರತೆಗೆ ಹೊಸ ಮುನ್ನುಡಿ ಬರೆದಿದೆ. ಬಹುಶಃ ಮುಂದಿನ ಕಾರ್ಯಕ್ರಮದ ರೂಪುರೇಷೆ ಈಗಾಗಲೇ ಸಿದ್ಧವಾಗಿರಬೇಕು. ಅವೆಲ್ಲವೂ ಈ ಜಾಡಿನಲ್ಲಿ ಮುಂದುವರಿಯಲಿ.