ಯಜ್ಞಸೇನಿ

ಯಜ್ಞಸೇನಿ

ಮೊನ್ನೆ ರಾತ್ರಿ ೮ ಗಂಟೆಗೆ ಸುವರ್ಣಚಾನಲ್ ನಲ್ಲಿ ಮಹಾಭಾರತ ಧಾರವಾಹಿ ನೋಡುತ್ತಿದ್ದೆ. ಅಂದಿನ ಸಂಚಿಕೆಯಲ್ಲಿ ಪಾಂಡವರೆಲ್ಲ ದ್ಯೂತಕ್ರೀಡೆಯಲ್ಲಿ ಪರಾಜಿತಗೊಂಡು, ಕೊನೆಗೆ ಪಾಂಚಾಲಿಯನ್ನು ಪರಾಜಿತಗೊಂಡಾಗ, ಆಕೆಯ ಮೇಲೆ ನಡೆಯುವ ದೌರ್ಜನ್ಯವನ್ನು ನೋಡಿ ಮನಕಲಕಿತು.ಈ ಹಿಂದೆ ತ್ರೇತಾಯುಗದ ರಾಮಾಯಣ  ಕಾಲದಲ್ಲಿ ಸೀತೆಯನ್ನು ರಾವಣನು ಲಂಕೆಗೆ ಹೊತ್ತೊಯ್ಯಬೇಕಾದರೂ ಆಕೆ ನಿಂತ ಭೂಮಿಯ ಅಷ್ಟಗಲ ಭಾಗ ಮಾತ್ರ ಎತ್ತಿ ಹೊತ್ತ್ಯೊದ. ಆಕೆಯನ್ನು ಸ್ಪರ್ಶಿಸಲಿಲ್ಲ. ಪರ ಸ್ತ್ರೀಯನ್ನು ಕಣ್ಣೆತ್ತಿ ನೋಡಿದ್ದು ಮತ್ತು ಮೋಹಿಸಿದ್ದು ಆತನ ಜೀವಕ್ಕೆ ಕಂಟಕವಾಯಿತು.

ಆದರೆ ಮಹಾಭಾರತದಲ್ಲಿ ಅದೆಂತಹ ದೌರ್ಜನ್ಯ.ಆ ಕ್ಷಣದಲ್ಲಿ ನನ್ನ ಮನಸ್ಸು ಕೂಡ ಕ್ರೋಧಗೊಂಡಿತು.ಪಾಂಚಾಲದ ಸಾಮ್ರಾಟ ದ್ರುಪದನ ಸಾಕು ಮಗಳು ಶ್ರೀಖಂಡಿನಿ ಯುದ್ಧದಲ್ಲಿ ಪರಾಜಿತಳಾದಾಗ, ದ್ರುಪದನು ನೊಂದು ಹೆಣ್ಣು ಮಕ್ಕಳ ಬಗೆಗೆ ಕನಿಷ್ಟ ಭಾವನೆಯನ್ನು ಬೆಳೆಸಿಕೊಂಡನು. 
ಆದ್ದರಿಂದ ಯಜ್ಞದಲ್ಲಿ ಪಾಂಚಾಲಿಯನ್ನು ಪಡೆಯುವ ಮೊದಲೇ ದೇವತೆಗಳಲ್ಲಿ ಆತನು ಆಕೆಯ ಜೀವನದಲ್ಲಿ ಎಲ್ಲಾ ರೀತಿಯ ಸಂಕಷ್ಟಗಳು ಬರುವಂತೆ ವರದಾನ ಬೇಡಿ ಪಾಂಚಾಲಿಯನ್ನು ಪುತ್ರಿಯಾಗಿ ಪಡೆದುಕೊಂಡನು.

ಆದರೆ ದ್ರೌಪದಿಯ ಜೀವನದಲ್ಲಿ ಹಿಂದೆಂದೂ ನಡೆಯದಂತ ಇಂತಹ ಘೋರ ಘಟನೆ ನಡೆಯಬಹುದೆಂದು ಪರಮಾತ್ಮನಲ್ಲದೆ ಬೇರಾರೂ ಊಹಿಸಿರಲಾರರು. ಇಂದ್ರಪ್ರಸ್ಥದ ರಾಜಸಭೆಯಲ್ಲಿ ದುರ್ಯೋಧನ ತನ್ನ ಅಹಂಕಾರದಿಂದ ಶಸ್ತ್ರಗಳನ್ನು ತ್ಯಜಿಸಬೇಕಾಗಿರುವುದರ ಪರಿಣಾಮವಾಗಿ ಅದನ್ನು ಪಾಂಚಾಲಿ  ಬೇಕೆಂದೆ ಅವಮಾನ ಮಾಡಿರುವಳು ಎಂದು ತಿಳಿದು ಕ್ರೋಧಗೊಂಡು, ಮುಂದೆ ಹಸ್ತಿನಾಪುರದ ಧರ್ಮಸಭೆಯಲ್ಲಿ ಎಂತಹ ಅಧರ್ಮ ಮಾಡಿಬಿಟ್ಟನು. ಒಂದು ಹೆಣ್ಣನ್ನು ರಾಜಸಭೆಯಲ್ಲಿ ವಿವಸ್ತ್ರಗೊಳಿಸುವುದೆಂದರೆ ಎಂತಹ ದುಷ್ಕೃತ್ಯ. ಅಹಂಕಾರದ ಪರಮಾವಧಿ ಎಂದರೆ ಇದೇ ಇರಬೇಕು.

ನನಗನ್ನಿಸುತ್ತದೆ, ಇದರ ನಂತರವೇ ಈ ರಾಜಕೀಯ, ಹೆಣ್ಣಿನ ಮೇಲಿನ ಶೋಷಣೆಯೆಲ್ಲ ಹೆಚ್ಚಾಗಿ ಆರಂಭವಾಗಿರಬೇಕೆಂದು. ರಾಜನೀತಿಯ ಪ್ರಕಾರ ಅಪರಾಧಿಗೆ ಶಿಕ್ಷೆ ವಿಧಿಸಲಾಗುತ್ತದೆಯೇ ಹೊರತು, ಹೆಣ್ಣಿಗೆ ಅವಮಾನ ಮಾಡುವಂತಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಹೆಣ್ಣಿನ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಲೇ ಇವೆ.
ದ್ರೌಪದಿಯು ಐವರು ಪಾಂಡವರೊಂದಿಗೆ ವಿವಾಹವಾದಾಗ, ಕೃಷ್ಣನೇ ಹೇಳಿದ್ದ ಇದು ಅಧರ್ಮವೆಂದು. ಆದರೆ ದ್ರೌಪದಿಯು ಪಾಂಡವರ ಪತ್ನಿ ಮಾತ್ರವಲ್ಲ,ಅವರ ಐವರ ಶಕ್ತಿಯ ಪ್ರತೀಕ. ಆದ್ದರಿಂದ ಅದು ಅಧರ್ಮವಲ್ಲ ಅನ್ನೋದು ಸಾಬೀತಾಯಿತು.

ಒಬ್ಬ ಸಾಮ್ರಾಜ್ಞೆಗೆ ಈ ರೀತಿಯ ಅನ್ಯಾಯವಾದರೆ ಸಾಮಾನ್ಯ ಹೆಣ್ಣಿನ ಕಥೆಯೇನು? ಹೆಣ್ಣು ಶಕ್ತಿಯ ಪ್ರತೀಕ, ಕರುಣಾಮಯಿ. ದೀಪವು ತಾನು ಉರಿದು ಜಗಕ್ಕೆಲ್ಲಾ ಬೆಳಕು ಕೊಡುವಂತೆ, ಹೆಣ್ಣು ದೀಪವಿದ್ದಂತೆ. ದೂರದಿಂದಲೇ ನೋಡಿ ಗೌರವಿಸಬೇಕೇ ಹೊರತು ಮುಟ್ಟಲು ಹೋದರೆ ಬೆಂಕಿಯಾಗಿ ಸುಟ್ಟು ಬಿಡುತ್ತಾಳೆ. 
ಆಕೆಯ ಕ್ರೋಧದ ಬೆಂಕಿಯಲ್ಲಿ ಬೆಂದು ಭಸ್ಮವಾಗುವುದಂತೂ ಖಂಡಿತ. ಆದ್ದರಿಂದಲೇ ಕೌರವರೆಲ್ಲರೂ ಹೇಳಹೆಸರಿಲ್ಲದೆ ಕುರುಕ್ಷೇತ್ರ ಯುದ್ಧದಲ್ಲಿ ಘೋರ ಮರಣವನ್ನು ಹೊಂದಿದರು. ಪಾಂಡವರು ದ್ರೌಪದಿಗೆ ನೀಡಿದ ಪ್ರತಿಜ್ಞೆಯನ್ನು  ಜೊತೆಗೆ ಧೃತರಾಷ್ಟ್ರ ನೀಡಿದ ಆದೇಶವನ್ನು ಪಾಲಿಸಿ ಆತನಿಗೆ ಹೇಳಿದ್ದು, "ನಾವು ವನವಾಸ ಮತ್ತು ಅಜ್ಞಾತವಾಸವನ್ನು ಪೂರ್ಣಗೊಳಿಸಿ ಮತ್ತೆ ಬರುತ್ತೇವೆ.ಆದರೆ ನಿಮ್ಮ ಆದೇಶವನ್ನು ಕೇಳಲು ಅಲ್ಲ ಬದಲಾಗಿ ನಮ್ಮ ಅಧಿಕಾರವನ್ನು ಪಡೆಯಲು ಎಂದು." ಈ ಎರಡು ಪ್ರತಿಜ್ಞೆಯನ್ನು ಪೂರೈಸಿದರು.

ಇನ್ನಾದರೂ ಧರ್ಮ-ಅಧರ್ಮದ ತಿಳುವಳಿಕೆ ಪ್ರತಿಯೊಬ್ಬರೂ ಅರಿಯುವಂತಾಗಲಿ. ಲೋಕದಲ್ಲಿ ಸ್ತ್ರೀಯ  ಮೇಲೆ ನಡೆಯುವ ಅನ್ಯಾಯ ಕೊನೆಗೊಂಡು, ಅಧರ್ಮ ಅಳಿದು ಧರ್ಮ ಉಳಿಯುವಂತಾಗಲಿ. ಎಲ್ಲರ ಜೀವನ ಸುಭಿಕ್ಷವಾಗಿರಲಿ ಎಂದು ಆಶಿಸೋಣ.

ಚಿತ್ರಕೃಪೆ: ಅಂತರ್ಜಾಲ.