ಯಮದ ಫಲ ಅನುಷ್ಟಾನ
ಇಂದು ಯಮದ ಅನುಷ್ಠಾನದಿಂದ ಆಗುವ ಫಲಗಳ ಬಗ್ಗೆ ತಿಳಿದುಕೊಳ್ಳುತ್ತಾ ಇದ್ದೇವೆ. ಅದರಲ್ಲಿ ಇಂದು ಬ್ರಹ್ಮಚರ್ಯೆ ಮತ್ತು ಅಪರಿಗ್ರಹ ಅನುಷ್ಠಾನದಿಂದ ಆಗುವ ಫಲಗಳ ಬಗ್ಗೆ ತಿಳಿದುಕೊಳ್ಳೋಣ.
ಬ್ರಹ್ಮಚರ್ಯೆ : ಬ್ರಹ್ಮಚರ್ಯೆ ಅಂದರೆ ಮೀಸಲಾಗಿರುವುದು. ಶಕ್ತಿ ಸಾಮರ್ಥ್ಯವನ್ನು ಮೀಸಲಾಗಿ ಇಡುವುದು. ಜ್ಞಾನಕ್ಕೆ ಮೀಸಲಾಗಿದ್ದರೆ ನಮ್ಮ ಕಣ್ಣು, ಕಿವಿ, ಮನಸ್ಸು, ಶಕ್ತಿ , ಸಾಮರ್ಥ್ಯ, ಕೈ, ಕಾಲು ಮತ್ತು ಬುದ್ಧಿ ಇವುಗಳನ್ನು ಜ್ಞಾನಕ್ಕಾಗಿ ಮೀಸಲಾಗಿರಿಸುವುದು. ಶಕ್ತಿಗೆ ಮೀಸಲಿಟ್ಟರೆ, ಎಲ್ಲಾ ಶಕ್ತಿ , ಸಾಮರ್ಥ್ಯ, ದೇಹ, ಮನಸ್ಸು ಎಲ್ಲವನ್ನು ಶಕ್ತಿ ಗಳಿಕೆಗಾಗಿ ಮೀಸಲಿರಿಸುವುದು. ಶಾಂತಿಗಾಗಿ ಮೀಸಲಾಗಿದ್ದರೆ ಎಲ್ಲಾ ಶಕ್ತಿ ಸಾಮರ್ಥ್ಯಗಳನ್ನು ಶಾಂತಿ ಗಳಿಸುವುದಕ್ಕಾಗಿ ಬಳಸುತ್ತೇವೆ. ಇದು ಮೀಸಲು. ಇದರಿಂದ ಶಕ್ತಿ ಸಂಚಯವಾಗುತ್ತದೆ. ಶಕ್ತಿಯನ್ನು ಹತ್ತು ಕಡೆ ಬಳಸಿದರೆ ಆ ಶಕ್ತಿ ಹಂಚಿ ಹೋಗುತ್ತದೆ. ಕಾರ್ಯ ಯಶಸ್ವಿಯಾಗುವುದಿಲ್ಲ. ಇದರಿಂದ ಆತ ಆಶಕ್ತನಾಗುತ್ತಾನೆ. ಒಂದೇ ಕಡೆ ಹರಿಸಿದರೆ ಸಾಮರ್ಥ್ಯ ಬೆಳೆಯುತ್ತದೆ. ಓದೋದು, ಚಿಂತನೆ ಮಾಡೋದು, ಬರೆಯೋದು, ಕೇಳುವುದು, ಇದನ್ನು ಮಾಡುತ್ತಲೇ ಇದ್ದರೆ ಜ್ಞಾನ ಸಂಚಯವಾಗುತ್ತದೆ. ಗ್ರಹಣ ಶಕ್ತಿ ಅದ್ಭುತವಾಗಿ ಬೆಳೆಯುತ್ತದೆ. ಇದರ ಫಲ ಏನೆಂದರೆ ಕಣ್ಣಿನ ಶಕ್ತಿ ಹೆಚ್ಚಿಸಬೇಕಾದರೆ ಕಣ್ಣು ಮೀಸಲಾಗಿರಬೇಕು. ಉದಾಹರಣೆಗೆ ಸೌಂದರ್ಯ ನೋಡುವುದು. ಒಬ್ಬ ಶಿಲ್ಪಿಯು ನೋಡುತ್ತಾನೆ, ನಾವು ನೋಡುತ್ತೇವೆ. ಶಿಲ್ಪಿ ಏನು ಸೌಂದರ್ಯ ನೋಡುತ್ತಾನೆ ಅದು ಆತನ ಮನಸ್ಸು ತುಂಬುತ್ತದೆ. ಅದನ್ನೇ ಅನುಭವಿಸುತ್ತಾನೆ. ಅದನ್ನು ಕೈಯಿಂದ ಶಿಲ್ಪದಲ್ಲಿ ಅರಳಿಸುವವರೆಗೆ ಅದೇ ತುಂಬಿರುತ್ತದೆ. ನಮಗೇನು ಗೊತ್ತಾಗುತ್ತೋ ಅದಕ್ಕಿಂತ ಹೆಚ್ಚು ಗೊತ್ತಾಗುತ್ತದೆ ಆತನಿಗೆ. ಒಬ್ಬ ಕವಿ ಆ ಹೂವಿನಲ್ಲಿ ಮನಸ್ಸನ್ನು ಹರಿಸುತ್ತಾನೆ. ನಮಗೇನು ಕಾಣುವುದಿಲ್ಲವೋ ಅದು ಆತನಿಗೆ ಕಾಣಿಸುತ್ತದೆ. ಕೈ ಬಳಸಿದವರಿಗೆ ಕೈ ಸಾಮರ್ಥ್ಯ ಹೆಚ್ಚುತ್ತದೆ. ಕಣ್ಣು ಬಳಸಿದರೆ, ಕಣ್ಣಿನ ಸಾಮರ್ಥ್ಯ ಬೆಳೆಯುತ್ತದೆ. ಕಾಲು ಬಳಸಿದರೆ, ಕಾಲಿನ ಸಾಮರ್ಥ್ಯ, ಮನಸ್ಸು ಬಳಸಿದರೆ ಮನಸ್ಸಿನ ಸಾಮರ್ಥ್ಯ, ಬುದ್ದಿ ಬಳಸಿದರೆ ಬುದ್ಧಿ ಸಾಮರ್ಥ್ಯ ಹೆಚ್ಚುತ್ತದೆ.
ಬ್ರಹ್ಮಚರ್ಯಯಿಂದ ಶಕ್ತಿ ಅಭಿವ್ಯಕ್ತವಾಗುತ್ತದೆ. ನೀರು ಅಗಲವಾಗಿ ಹರಿಯುತ್ತಿದ್ದರೆ ಏನು ಆಗುವುದಿಲ್ಲ. ಅದನ್ನು ಒಂದು ಕಡೆ ತಂದು ಒಂದೇ ಕಡೆ ಹರಿಯುವಂತೆ ಮಾಡಿದರೆ ಭೂಮಿಯನ್ನು ಕೊರೆಯುತ್ತದೆ. ಒಂದು ಗೀತೆಯ ಮಾತಿದೆ, ಆತನಿಗೆ ಎಲ್ಲಾ ಗೊತ್ತು, ಆದರೆ ಒಂದು ಸರಿಯಾಗಿ ತಿಳಿದಿಲ್ಲ, ಹಾಗೆ ಆಗಬಾರದು. ಅದಕ್ಕೆ ನಮಗೆ ಯಾವುದು ಒಲವಿದೆ, ಆ ಒಲವಿರುವ ಒಂದು ಅಥವಾ ಎರಡರ ಸಾಮರ್ಥ್ಯ ಮಾಡಿಕೊಳ್ಳುತ್ತಾ ಹೋದರೆ ಅದರ ಸಾಮರ್ಥ್ಯ ಹೆಚ್ಚಾಗುತ್ತಾ ಹೆಚ್ಚಾಗುತ್ತಾ ಹೋಗುತ್ತದೆ. ಇದು ಮನಸ್ಸಿನ ಸ್ವಭಾವ. ಇದನ್ನು ಪತಂಜಲಿ ಹೇಳಿದ ಇದನ್ನು ಬಳಸಿಕೋ ನೀನು ವೀರ್ಯವಂತ, ಶೌರ್ಯವಂತ, ಶಕ್ತಿವಂತ, ಜ್ಞಾನವಂತ, ನಿರ್ಭಯವಂತನಾಗುತ್ತಿ ಎಂದನು. ಸಶಕ್ತನಾಗುತ್ತಿಯೇ ಯಾವಾಗ ಮನಸ್ಸಿನಲ್ಲಿ ಶಕ್ತಿ ತುಂಬುತ್ತದೊ ಆಗ ನಿರ್ಭಯನಾಗುತ್ತಾನೆ. ಇದರಿಂದ ಜ್ಞಾನಿಯಾಗಲಿ , ಜ್ಞಾನ ಶಕ್ತಿಯಾಗಲಿ, ಕ್ರಿಯಾಶಕ್ತಿ ಆಗಲಿ, ಭಾವಶಕ್ತಿಯಾಗಲಿ, ಬುದ್ಧಿ ಶಕ್ತಿಯಾಗಲಿ, ದೈಹಿಕ ಶಕ್ತಿಯಾಗಲಿ ಹೆಚ್ಚಾಗುತ್ತದೆ. ಇದರ ಅರ್ಥ ಮನುಷ್ಯ ಒಂದಕ್ಕೆ ಮೀಸಲಿಡಬೇಕು. ಎಲ್ಲಾ ಕಡೆ ಚೆಲ್ಲಡಬಾರದು. ಹಣ ಇದೆ ಎಂದು ಚೆಲ್ಲುತ್ತಾ ಹೋದರೆ ಹಣ ಉಪಯೋಗಕ್ಕೆ ಬರುವುದಿಲ್ಲ. ಅದನ್ನು ಒಂದು ಕಡೆ ಹರಿಸಿದರೆ ಒಂದು ಅಂಗಡಿ, ಕಾರ್ಖಾನೆ ತಯಾರಾಗುತ್ತದೆ. ಅದಕ್ಕಾಗಿ ನಾವು ನಮ್ಮ ಮನಸ್ಸಿನಲ್ಲಿರುವ ಒಲುವುಗಳಲ್ಲಿ ಯಾವುದು ನನಗೆ ಸಮಾಜಕ್ಕೆ ಹಿತವಾಗುತ್ತದೆಯೋ ಅದನ್ನ ಆಯ್ಕೆ ಮಾಡಿಕೊಂಡು, ಅದಕ್ಕೆ ಮೀಸಲಾಗಿದ್ದರೆ ಸಾಮರ್ಥ್ಯ ಹೆಚ್ಚಾಗುತ್ತದೆ. ಒಂದನ್ನು ಸಾಧಿಸಬೇಕು. ಜಗತ್ತಿನಲ್ಲಿ ಯಾರಾದರೂ ಏನಾದರೂ ಒಂದು ಸಾಧನೆ ಮಾಡಿದರೆ ಅದು ಮೀಸಲಿನ ಪ್ರಭಾವ. ಮೀಸಲಿನಿಂದ ಜೀವನದಲ್ಲಿ ಸಾಧನೆಯಾಗುತ್ತದೆ.
ಅಪರಿಗ್ರಹ : ಅಪರಿಗ್ರಹ ಎಂದರೆ ಎಷ್ಟು ಬೇಕೋ ಅಷ್ಟೇ ಸಾಮಾನು. ಅನುಭವಿಸಬೇಕಾದರೆ ಸ್ವಲ್ಪ ಸ್ವಲ್ಪ ಇರಬೇಕಾಗುತ್ತದೆ. ಜೀವನದಲ್ಲಿ ನಮಗೆ ಎಷ್ಟು ಸಾಮಾನು ಅವಶ್ಯಕತೆ ಇದೆಯೋ ಅಷ್ಟೇ ಕೂಡಿಸುವುದು. ನಮ್ಮ ಸಾಮರ್ಥ್ಯ ಎಷ್ಟಿದೆಯೋ ಅಷ್ಟು. ಮನಸ್ಸು ವಿಚಲನೆ ಆಗಬಾರದು. ಎಷ್ಟು ಗಳಿಸುತ್ತೇವೆ ಅಷ್ಟರಲ್ಲಿ ತೃಪ್ತಿ ಪಡುವುದು. ಕೈಗೆ ವಸ್ತು ಎಟಗುವಷ್ಟು ಮಾತ್ರ. ಇದಕ್ಕೆ ಅಪರಿಗ್ರಹ. ಒಂದು ಸುಂದರ ಮನೆ ಕಟ್ಟಲು ಅಗತ್ಯ ಇರುವಷ್ಟು ವಸ್ತು ಇಟ್ಟುಕೊಳ್ಳುವುದು. ಬದುಕು ಮಹತ್ವದ್ದು ವಿನಃ ವಸ್ತು ಮಹತ್ವದಲ್ಲ. ಅಪರಿಗ್ರಹ ಪಾಲಿಸಿದರೆ ಜೀವನದ ವೈಭವ ಅನುಭವಕ್ಕೆ ಬರುತ್ತದೆ. ವಸ್ತು ಕಡಿಮೆ ಇದ್ದರೆ ಲಕ್ಷ್ಯ ಜೀವನದ ಕಡೆ ಹೋಗುತ್ತದೆ. ವಸ್ತು ಹೆಚ್ಚಿದ್ದರೆ ಲಕ್ಷ್ಯ ವಸ್ತುಗಳ ಕಡೆ ಹೋಗುತ್ತದೆ. ಉದಾಹರಣೆಗೆ ಒಬ್ಬ ಶ್ರೀಮಂತನಿಗೆ ಒಂದು ಮಗುವಾಗಿರುತ್ತದೆ. ಆ ಮಗು ನೋಡಲು ಬಂಧು ಬಾಂಧವರೆಲ್ಲ ಬಂದಿರುತ್ತಾರೆ. ಮಗುವನ್ನು ಬೆಲೆಬಾಳುವ ತೊಟ್ಟಿಲಲ್ಲಿ ಮಲಗಿಸಿ, ತೊಟ್ಟಿಲಿಗೆ ವಿದೇಶಿ ಬೆಲೆ ಬಾಳುವ ವಸ್ತುಗಳಿಂದ ಅಲಂಕಾರ ಮಾಡಿದ್ದರು. ಬಂದವರೆಲ್ಲ ತೊಟ್ಟಿಲು, ತೊಟ್ಟಿಲಿಗೆ ಮಾಡಿರುವ ಅಲಂಕಾರ ಕಡೆ ಗಮನ ಹರಿಸಿದರೆ ವಿನಃ ಮಗುವಿನ ಕಡೆ ಇಲ್ಲ. ಬಂದದ್ದು ಮಗು ನೋಡಲು. ನೋಡಿದ್ದು ತೊಟ್ಟಿಲು ಮತ್ತು ಅದರ ಅಲಂಕಾರ. ಬಂದವರೆಲ್ಲ ಇದೆಲ್ಲಿಂದ ವಸ್ತು ತಂದಿದ್ರಿ ಅಂತ ಕೇಳುತ್ತಿದ್ದರು. ಮಾಲಿಕ ಆ ವಸ್ತು ವಿವರಿಸಿದ್ದು ಬಿಟ್ಟರೆ ಮಗುವಿನ ಕಡೆ ಲಕ್ಷ್ಯವಿಲ್ಲ. ನಮ್ಮ ಜೀವನ ಹೀಗಿರಬೇಕೆಂದರೆ ವಸ್ತು ಕಂಡಿರಬಾರದು ಬದುಕು ಕಂಡಿರಬೇಕು. ಕೂಡಿಸುವುದು ಮಹತ್ವದಲ್ಲ ಬದುಕನ್ನು ಅನುಭವಿಸುವುದು ಮಹತ್ವ. ಅಪರಿಗ್ರಹ ಮಾಡಿದರೆ ಜೀವನದ ವೈಭವ ಗೊತ್ತಾಗುತ್ತದೆ. ಅಲ್ಲವೇ?
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ