ಯಮ - ಬ್ರಹ್ಮಚರ್ಯ

ಯಮ - ಬ್ರಹ್ಮಚರ್ಯ

ಇಂದು ಯಮದ ಉಪಾಂಗ ಬ್ರಹ್ಮಚರ್ಯದ ಬಗ್ಗೆ ತಿಳಿದುಕೊಳ್ಳೋಣ... ಪಾತಂಜಲ ಮಹರ್ಷಿ ಹೇಳುತ್ತಾರೆ... ಬ್ರಹ್ಮಚರ್ಯ ಎಂದರೆ ಮೀಸಲಾಗಿರುವುದು. ನಾವು ತಿಳಿದುಕೊಂಡಂತೆ ಅಲ್ಲ. ಮದುವೆಯಾಗುವದಿರುವುದು ಅಂತ ಅಲ್ಲ. ಯಾವುದನ್ನು ಸಾಧಿಸಬೇಕೆಂದು ಭಾವಿಸಿದ್ದೇವೆಯೋ ಅದಕ್ಕೆ ಮೀಸಲಾಗಿರಿಸುವುದು ಬ್ರಹ್ಮಚರ್ಯ. ಜ್ಞಾನ ಮುಖ್ಯ, ಉಳಿದಿದ್ದು ಅಮುಖ್ಯ ಎಂದು. ಅದಕ್ಕೆ ಮೀಸಲಾಗಿದ್ದರೆ ಅದು ಬ್ರಹ್ಮಚರ್ಯ. ವಸ್ತು ಮಹತ್ವದ್ದು, ಉಳಿದದ್ದು ಅಲ್ಲ, ಆ ವಸ್ತುವಿಗೆ ಮೀಸಲಾಗಿದ್ದರೆ ಅದು ಬ್ರಹ್ಮಚರ್ಯ. ಶಾಂತಿ ಮಹತ್ವದ್ದು, ಉಳಿದದ್ದು ಅಲ್ಲ, ಶಾಂತಿಗಾಗಿ ಮೀಸಲಾಗಿದ್ದರೆ ಅದು ಬ್ರಹ್ಮಚರ್ಯ. ದೇವರದಾಸಿಮಯ್ಯ, ಜ್ಞಾನಿ ಮನುಷ್ಯ. ಕೆಲಸ, ಬಟ್ಟೆ ನೇಯುವುದು. ಆತ ಹೇಳುತ್ತಾನೆ. 

ಕೈಯ ಮೀಸಲು ಶಿವನ,

ಕಣ್ಣು ಮೀಸಲು ಶಿವನ,

ಕಾಲು ಮೀಸಲು ಶಿವನ,

ಕಿವಿ ಮೀಸಲು ಶಿವನ,

ನಾಲಿಗೆ ಮೀಸಲು ಶಿವನ,

ನಾಸಿಕ ಮೀಸಲು ಶಿವನ,

ತನು ಮೀಸಲು ಶಿವನ,

ಮನ ಮೀಸಲು ಶಿವನ,

ಈ ಮೀಸಲ ಬೀಸರ ಹೋಗದಂತಿದ್ದರೆ ಅವನೇ ದೇವ ಕಾಣ ರಾಮನಾಥ.

ದೇವರಿಗಾಗಿ ಕೈ, ಕಣ್ಣು, ಕಾಲು, ಕಿವಿ, ನಾಲಿಗೆ, ನಾಸಿಕ, ತನು ಮತ್ತು ಮನ ಎಲ್ಲಾ ಮೀಸಲು. ಈ ಮೀಸಲು ಬೀಸರ ಹೋಗದಂತಿದ್ದರೆ ಅಂದರೆ ಕೆಡದಂತೆ ಇದ್ದರೆ ಆತನೇ ದೇವ ಇದಕ್ಕೆ ಬ್ರಹ್ಮಚರ್ಯ ಎನ್ನುವರು. ನಾವು ಶಾಲೆಗೆ ಮೀಸಲಾಗಿದ್ದಾಗ, ಮನಸ್ಸು ಆ ಕಡೆ ಈ ಕಡೆ ಲಕ್ಷ್ಯ ಹರಿಯಬಾರದು. ಹರಿದರೆ ಶಾಲೆಯಲ್ಲಿ ಕಲಿಕೆ ಸಾಧ್ಯವಿಲ್ಲ. ಅದು ವಿದ್ಯಾಭ್ಯಾಸ ಮುಗಿಯುವವರೆಗೂ ಲಕ್ಷ್ಯ ಆ ಕಡೆ, ಈ ಕಡೆ ಹರಿಯಬಾರದು. ಹಾಗೆ ಮೀಸಲಾಗಿದ್ದರೆ ಅದಕ್ಕೆ ಬ್ರಹ್ಮಚರ್ಯ ಎನ್ನುವರು. ನಮ್ಮೂರಲ್ಲಿ ದೊಡ್ಡಮ್ಮನ ಹಬ್ಬ ಮಾಡುತ್ತೇವೆ. ಆಗ ಹೊಸ ಗಡಿಗೆ (ಮಣ್ಣಿನ ಮಡಕೆ) ತಂದು ಅದರಲ್ಲಿ ಅನ್ನ ಮಾಡುತ್ತಾರೆ. ಅದು ದೊಡ್ಡಮ್ಮ ದೇವರಿಗೆ ಮೀಸಲು ಎಂದು ಹೇಳಿ, ಮಾಡುವಾಗ ಶ್ರದ್ದೆ, ಭಕ್ತಿ, ಸ್ನಾನ, ಮಡಿಯೊಂದಿಗೆ ಅಡುಗೆ ಮನೆ ಶುಚಿ ಮಾಡಿ, ಅನ್ನ ಮಾಡುತ್ತಾರೆ. ಅದರ ರುಚಿ ನೋಡುವುದಿಲ್ಲ. ದೇವರಿಗೆ ಅರ್ಪಿಸಿದ ನಂತರ ಅದು ಪ್ರಸಾದ ಎಂದು ಎಲ್ಲರೂ ಊಟ ಮಾಡುತ್ತಾರೆ. ಅದನ್ನು ಚೆಲ್ಲುವುದಿಲ್ಲ. ಮೀಸಲು ಅಂದರೆ ಆ ದೇವರಿಗೆ ಮಾತ್ರ ಎಂದು. ಅವರಿಗೆ ಸಲ್ಲಬೇಕು ಬೇರೆಯವರಿಗೆ ಸಲ್ಲುವುದಿಲ್ಲ. ಹಾಗೆ ಮೀಸಲು ಮಾಡುವುದು. ನೋಡಬೇಕು ಅದೇ, ಕೇಳಬೇಕು ಅದೇ, ಮುಟ್ಟಬೇಕು ಅದೇ, ನಡೆಯಬೇಕು ಅಲ್ಲಿಗೆ, ಹಿಡಿಯಬೇಕು ಅದೇ, ರುಚಿಸಬೇಕು ಅದೇ, ಅಂದರೆ ಅದಕ್ಕಾಗಿ ಮಾಡುವುದು. ಸಾಧಿಸುವವನು ಕೈಗೆ ಸಿಕ್ಕಿದ್ದನ್ನು ಹಿಡಿದರೆ, ಸಿಕ್ಕಿದ್ದನ್ನು ನೋಡಿದರೆ, ಸಿಕ್ಕಿದ್ದನ್ನು ಮಾಡಿದರೆ, ಸಿಕ್ಕಿದ್ದನ್ನು ರುಚಿಸಿದರೆ ಗುರಿ ತಲುಪಲು ಸಾಧ್ಯವಿಲ್ಲ.

ಒಬ್ಬ ಜಿಪುಣ ಹಣಕ್ಕಾಗಿ ಮೀಸಲಾಗಿದ್ದ. ಅಂದರೆ ಏನೇ ಮಾಡಿದರು ಉಳಿತಾಯದ ಕಡೆ ಗಮನ ಹರಿಸುತ್ತಾನೆ. ಉಳಿತಾಯ ಮಾಡುವುದು ಹೇಗೆ ಅಂತ ವಿಚಾರ ಮಾಡುತ್ತಾನೆ. ಅವನು ತಪಸ್ವಿ ಇದ್ದಂತೆ. ಅವನ ಜೀವನದ ಗುರಿ ಸಂಗ್ರಹಿಸುವುದು. ತಾನೂ ತಿನ್ನುವುದಿಲ್ಲ, ಇನ್ನೊಬ್ಬರಿಗೂ ತಿನ್ನಿಸುವುದಿಲ್ಲ. ಇನ್ನೊಬ್ಬರೊಂದಿಗೆ ಜಗಳಕ್ಕೂ ಹೋಗುವುದಿಲ್ಲ. ಬೈದರೆ ಬೈಸಿಕೊಂಡು ಕಾಣದಂತೆ ಇರುತ್ತಾನೆ. ಜಗಳದಿಂದ ಎಲ್ಲಿ ಹಣ ಖರ್ಚಾಗುತ್ತೋ ಎಂದು. ಹಣಕ್ಕಾಗಿ ಜೀವನ ಮೀಸಲಾಗಿರಿಸುತ್ತಾನೆ. ಕಣ್ಣೊಳಗೂ ಅದೇ, ಕೈಯೊಳಗೂ ಅದೇ, ಮನಸ್ಸಿನಲ್ಲೂ ಅದೇ, ಬುದ್ಧಿಯಲ್ಲೂ ಅದೇ ವಿಚಾರ ಮಾಡುವುದು ಅದನ್ನೇ. ಹೇಳೋದಿದ್ರೂ ಅದನ್ನೇ, ನಡೆಯೋದು ಅಲ್ಲಿಗೆ, ಮಾಡಿದ ಅಂದ್ರು ಅದನ್ನೇ, ಅದಕ್ಕಾಗಿ ಮೀಸಲಾಗಿರುತ್ತಾನೆ. ಅದಕ್ಕೆ ಅವನು ಬ್ರಹ್ಮಚರ್ಯನೆ ಅಂದರೆ ಕೆಟ್ಟದ್ದಕ್ಕೆ ಹೋಗದೆ ಇರುವುದೇ ಮೀಸಲು. ಪಾತಂಜಲ ಮಹರ್ಷಿ ಹೇಳುತ್ತಾನೆ "ನಿನ್ನ ಬದುಕು ಚೆನ್ನಾಗಿರಬೇಕಾದರೆ ಬದುಕು ಅದಕ್ಕಾಗಿ ಮೀಸಲಿರಬೇಕು. ನೀನು ಏನನ್ನು ಸಾಧಿಸಬೇಕೆಂದು ಇದಿಯೋ ಅದಕ್ಕೆ ಬಾಧಕ ಆಗದಂತೆ ನೋಡಬೇಕು. ಈಗಲೂ ಕೆಲವು ಕಡೆ ಸೋಮವಾರ ಅಥವಾ ಗುರುವಾರ ಅಥವಾ ಶುಕ್ರವಾರ ದೇವರಿಗೆ ಮೀಸಲು ಎಂದು ವೃತ ಮಾಡುತ್ತಾರೆ. ಹೀಗೆ ಜೀವನ ಮೀಸಲಾದರೆ ಮುಂದಿನ ಕ್ಷಣ ಪ್ರಸಾದ ವಿದ್ದಂತೆ. ಜೀವನವೇ ಪ್ರಸಾದವಾಗುತ್ತದೆ. ಮೀಸಲಿನಲ್ಲಿ ಹೊಲಸಾಗುವುದಿಲ್ಲ. ಹೊಲಸಾದರೆ ಮೀಸಲಲ್ಲ. ಕಣ್ಣು, ಕಿವಿ, ಮೂಗು, ನಾಲಿಗೆ, ಕೈ, ಕಾಲು ಕೆಟ್ಟರೆ ಮೀಸಲಲ್ಲ. ಹೋಗಬಾರದಲ್ಲಿ ಹೋದರೆ, ನೋಡಬಾರದಲ್ಲಿ ನೋಡಿದರೆ, ಕೇಳಿದರೆ, ತಿಂದರೆ, ಮಾಡಿದರೆ, ಅದು ಮೀಸಲು ಕೆಟ್ಟಿದೆ ಎಂದರ್ಥ. ನಾವು ಮೀಸಲು ಮಾಡೋದು ಬದುಕನ್ನು ಸುಂದರ, ಶ್ರೀಮಂತ ಮಾಡಲು. 

ತುಕಾರಾಮನಿಗೆ ವಿಠಲ ಮೀಸಲು, ಶಂಕರಚಾರ್ಯರು ಜ್ಞಾನಕ್ಕೆ ಮೀಸಲು, ಬಸವಣ್ಣ ಭಕ್ತಿಗೆ ಮೀಸಲು, ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನ ದೇವರಿಗೆ ಮೀಸಲು. ಹೀಗೆ ಕೆಲವರು ಸತ್ಯಕ್ಕೆ, ಕೆಲವರು ಅಹಿಂಸೆ ಗೆ, ಕೆಲವರು ಸಂಶೋಧನೆಗೆ, ಜ್ಞಾನಕ್ಕೆ ಮೀಸಲಾದವರು ಕೆಲವರು, ತತ್ವ ಜ್ಞಾನಕ್ಕೆ ಮೀಸಲಾದವರು ಕೆಲವರು. 

ಜರ್ಮನ್ ದೇಶದ ಇಮಾನ್ಯುವೆಲ್ ಕ್ಯಾಂಟ್ ತತ್ವಜ್ಞಾನಕ್ಕೆ ಮೀಸಲಾಗಿದ್ದನು. 80 ವರ್ಷ ತತ್ವ ಜ್ಞಾನದ ಸಂಶೋಧನೆಯಲ್ಲಿ ತೊಡಗಿದ್ದನು. ಒಮ್ಮೆ ಆತನ ಗೆಳೆಯ ಇಮಾನ್ಯುವೆಲ್ ಕ್ಯಾಂಟ್ ನನ್ನು ಕೇಳುತ್ತಾನೆ. ಇಮಾನ್ಯುವೆಲ್ ಕ್ಯಾಂಟ್ ನೀನು ವಿವಾಹ ಏಕೆ ಆಗಲಿಲ್ಲ?. ಇಮಾನ್ಯುವೆಲ್ ಕ್ಯಾಂಟ್ ಹೇಳುತ್ತಾನೆ ವೇಳೆ ಸಿಗಲಿಲ್ಲ ಎಂದನು. ಹೆಣ್ಣು ಸಿಗಲಿಲ್ಲ ಅಂತ ಅಲ್ಲ ಅಥವಾ ಹೆಣ್ಣು ಕೊಡಲಿಲ್ಲ ಅಂತ ಅಲ್ಲ. ವೇಳೆ ಸಿಗಲಿಲ್ಲ. ಅಷ್ಟು ವರ್ಷ ತತ್ವಶಾಸ್ತ್ರ ಸಂಶೋಧನೆಗೆ ಮೀಸಲಾಗಿದ್ಧನು. ಥಾಮಸ್ ಅಲ್ವಾ ಎಡಿಸನ್ ಸಂಶೋಧನೆ ಮೀಸಲಾಗಿದ್ದನು. ಸಾವಿರ ಸಂಶೋಧನೆಗಳನ್ನು ಮಾಡಿದ. ಕಾಳಿದಾಸ ಸೌಂದರ್ಯಕ್ಕೆ ಮೀಸಲಾಗಿದ್ದನು. ಕಾವ್ಯ ರಚನೆಯಲ್ಲಿ ತನ್ಮಯನಾಗಿದ್ದನು. ಕಾಳಿದಾಸ ಚಿಕ್ಕವನು ಇದ್ದಾಗ ಬಲುದಡ್ಡ. ಮುಂದೆ ಒಂದು ದಿನ ಮಹಾನುಭಾವನ ಹತ್ತಿರ ಹೋಗಿ ನಮಸ್ಕರಿಸಿ ಹೇಳುತ್ತಾನೆ. ಎಲ್ಲರೂ ನನ್ನನ್ನು ದಡ್ಡ ದಡ್ಡ, ಗೊತ್ತಿಲ್ಲ ಅನ್ನುತ್ತಾರೆ. ನಾನು ಕವಿಯಾಗಬೇಕು ಅಂತ ಇಚ್ಛೆ ಇದೆ. ನಾನೇನು ಮಾಡಲಿ ಎಂದು. ಆಗ ಮಹಾನುಭಾವ ಹೇಳಿದ. ನೀನು ಸೌಂದರ್ಯಕ್ಕೆ ಮೀಸಲಾಗು, ನೋಡಿದರೆ ಸೌಂದರ್ಯ, ಕೇಳಿದರೆ ಸೌಂದರ್ಯ, ಮುಟ್ಟಿದರೆ ಸೌಂದರ್ಯ, ಕುಂತರೆ ಸೌಂದರ್ಯ ತುಂಬಿಕೊ, ನೀನು ಕವಿಯಾಗುತ್ತೀಯ ಎಂದನು. ಆ ಬಳಿಕ ಹೊರಟ. ಬೆಟ್ಟನೋಡಿದ ಸೌಂದರ್ಯ, ಮಳೆ ನೋಡಿದ ಸೌಂದರ್ಯ, ಸಾಗರ ನೋಡಿದ ಸೌಂದರ್ಯ, ಮೇಘ ನೋಡಿದ ಸೌಂದರ್ಯ, ಮೇಘದೂತ ಎಂಬ ಕವನವನ್ನೇ ರಚಿಸಿದನು. ಎಲ್ಲಿ ಕಣ್ಣು ಹಾಯಿಸಿದಲ್ಲಿ ಅಲ್ಲೆಲ್ಲ ಸೌಂದರ್ಯ ಕಂಡ. ಶಬ್ದಗಳಲ್ಲಿ ಸೌಂದರ್ಯ ಇಟ್ಟನು ಮಹಾಕವಿಯಾದ. ಮಕ್ಕಳೇ, ನಾವು ಹೀಗೆ ಮೀಸಲಾಗಿರಬೇಕು. ನಮ್ಮ ಬದುಕಿನ ಸೌಂದರ್ಯಕ್ಕಾಗಿ, ಶಾಂತಿಗಾಗಿ, ಬದುಕಿನ ವೈಭವಕ್ಕಾಗಿ, ಜ್ಞಾನಕ್ಕಾಗಿ ಮೀಸಲು ಮಾಡೋದು ಬ್ರಹ್ಮಚರ್ಯ. ಅಲ್ಲವೇ?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ