ಯಶಸ್ಸಿಗೆ ಅಡ್ಡದಾರಿಗಳಿಲ್ಲ…!
ಪ್ರಾಮಾಣಿಕತೆ, ದಕ್ಷತೆ ಮತ್ತು ವಿಶಾಲ ಮನೋಭಾವವೊಂದೇ ನೇರ ಮಾರ್ಗ. 5 ಕೋಟಿ ಹಣ ದೊಡ್ಡ ವಂಚನೆಯೇ ಅಲ್ಲ ಅದಕ್ಕಿಂತ ಬಹುದೊಡ್ಡ ವಂಚನೆ ಟಿವಿ ಮಾಧ್ಯಮಗಳು ಪ್ರತಿನಿತ್ಯ ಮಾಡುತ್ತಿವೆ. ಕರ್ನಾಟಕದ ಚುನಾವಣಾ ರಾಜಕೀಯದಲ್ಲಿ 5 ಕೋಟಿ ದೊಡ್ಡ ಹಣವೇ ಅಲ್ಲ. ಏಕೆಂದರೆ ಕರ್ನಾಟಕದ ಶಾಸಕರ ಸರಾಸರಿ ಆದಾಯ ಸುಮಾರು 65 ಕೋಟಿ ಮತ್ತು ಭಾರತದಲ್ಲೇ ಅತಿಹೆಚ್ಚು. ಅಷ್ಟು ಶ್ರೀಮಂತ ರಾಜ್ಯ ಕರ್ನಾಟಕ.
ಚೈತ್ರ ಕುಂದಾಪುರ ಎಂಬ ಹೆಣ್ಣು ಮಗಳ ವಯಸ್ಸು ಸುಮಾರು 30 ರ ಆಸುಪಾಸಿನಲ್ಲಿ ಇರಬಹುದು. ಆಕೆ ತನಗಿರುವ ಜನಪ್ರಿಯತೆಯನ್ನು ತನ್ನ ಬದುಕಿಗಾಗಿ ಶ್ರೀಮಂತ ಉದ್ಯಮಿ ಮತ್ತು ರಾಜಕೀಯ ಆಕಾಂಕ್ಷಿಯನ್ನು ವಂಚಿಸಿ 5 ಕೋಟಿ ಲಪಾಟಾಯಿಸುವ ನಾಟಕ ಅಪರಾಧ ಎಂಬುದು ನಿಜ. ಅದಕ್ಕೆ ಶಿಕ್ಷೆ ಆಗಬೇಕು. ಆದರೆ ತುಂಬಾ ಆಶ್ಚರ್ಯ ಪಡುವಂತಹುದು ಏನೂ ಇಲ್ಲ. ಆ ರೀತಿಯ ವಂಚನೆಗಳು ಭಾರತದ ಬಹುತೇಕ ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಿಗಳು, ಧಾರ್ಮಿಕ ಮುಖಂಡರು, ದೊಡ್ಡ ದಲ್ಲಾಳಿಗಳು ನಿರಂತರವಾಗಿ ಮಾಡುತ್ತಲೇ ಇದ್ದಾರೆ. ಇಲ್ಲಿ ಅದಕ್ಕಿಂತ ಕೆಲವು ಮುಖ್ಯ ವಿಷಯಗಳಿವೆ.
ಚೈತ್ರ ಕುಂದಾಪುರ ಎಂಬ ಒಬ್ಬ ಸಾಮಾನ್ಯ ಹೆಣ್ಣು ಮಗಳನ್ನು ಹಿಂದುತ್ವದ ರಾಯಭಾರಿ ಮಾಡಿದ್ದು ಯಾರು, ಟಿವಿ ಮಾಧ್ಯಮಗಳ ಚರ್ಚೆಗಳಲ್ಲಿ ಕರೆದು ಮಾತನಾಡಿಸಿದ್ದು ಯಾರು, ಬೃಹತ್ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಬಾಯಿಗೆ ಬಂದಂತೆ ಮಾತನಾಡಲು ವೇದಿಕೆ ಕಲ್ಪಿಸಿದ್ದು ಯಾರು, ಮಾಹಾನ್ ಚಿಂತಕಿಯಂತೆ ಬಿಲ್ಡಪ್ ಕೊಟ್ಟಿದ್ದು ಯಾರು ಎಂಬುದನ್ನು ಮೊದಲು ಆಲೋಚಿಸಿ.
ಚೈತ್ರಾ ಅವರಿಗೆ ಇದ್ದ ಜ್ಞಾನದ ಹಿನ್ನೆಲೆ ಏನು, ಭಾರತದ ನೆಲದ ಸಂಸ್ಕೃತಿಯ ಬಗ್ಗೆ ಆಕೆಯ ಅಧ್ಯಯನವೇನು, ಧರ್ಮಗಳ ಯಾವ ವಿಷಯದಲ್ಲಿ ಆಕೆ ಪರಿಣತಿ ಹೊಂದಿದ್ದಳು, ಯಾವ ಸಂಘಟನೆಯ ಮೂಲಕ ಆಕೆ ಸಮಾಜ ಸೇವೆ ಮಾಡಿದ್ದಳು, ಯಾವ ಆಧಾರದ ಮೇಲೆ ಆಕೆಯನ್ನು ಇಡೀ ಕರ್ನಾಟಕ ನೋಡುವ ವಾಹಿನಿಗಳಲ್ಲಿ ಆಕೆಯ ಮುಖ್ಯ ವಿಷಯ ತಜ್ಞೆಯಾಗಿ ಕರೆಸಿ ಮಾತನಾಡಿಸುತ್ತಿದ್ದಿರಿ.
ಇದರ ಜವಾಬ್ದಾರಿಯನ್ನು ಮಾಧ್ಯಮಗಳು ಹೊರಬೇಕಾಗುತ್ತದೆ. ಪತ್ರಕರ್ತರೆಂಬ ಸೂಕ್ಷ್ಮ ಜೀವಿಗಳು ವಿವೇಚನೆಯಿಲ್ಲದೇ ಯಾರಿಗೋ ದೊಡ್ಡ ಮಟ್ಟದ ಪ್ರಚಾರ ನೀಡುವುದು, ಅವರುಗಳನ್ನು ಮಾಧ್ಯಮಗಳ ಹಿರೋ ಮಾಡುವುದು, ಕೊನೆಗೆ ಬದುಕಿಗಾಗಿ ಅಡ್ಡದಾರಿ ಹಿಡಿದು ಈ ರೀತಿ ಜೈಲು ಪಾಲಾಗುವುದು. ಮತ್ತೆ ಇವರನ್ನೇ ಮಹಾನ್ ಅಪರಾಧಿಗಳೆಂದು ದಿನಗಟ್ಟಲೆ ವಿಕೃತವಾಗಿ ಚಿತ್ರಿಸುವುದು. ನೈತಿಕ ಪ್ರಜ್ಞೆ ಇಲ್ಲದ ಪತ್ರಿಕೋದ್ಯಮದ ಬೇಜವಾಬ್ದಾರಿ, ಈ ರೀತಿ ಮಾಡುತ್ತಿರುವುದು ಆಕಸ್ಮಿಕವಾಗಿ ಕೇವಲ ಒಂದು ಎರಡು ಘಟನೆಗಳಲ್ಲ. ಈಗಲೂ ನಿರಂತರವಾಗಿ ಎಷ್ಟೋ ಅನರ್ಹ ವ್ಯಕ್ತಿಗಳಿಗೆ, ವಿಷಕಾರಿ ಮನಸ್ಸುಗಳಿಗೆ, ಸಮಾಜವನ್ನು ಉದ್ರೇಕಿಸುವ - ವಿಭಜಿಸುವ ದುಷ್ಟ ಶಕ್ತಿಗಳಿಗೆ ಈ ಮಾಧ್ಯಮಗಳು ವೇದಿಕೆ ಕಲ್ಪಿಸುತ್ತಿವೆ.
ಎಂತಹ ಅತ್ಯುತ್ತಮ ಪ್ರಜ಼್ಞಾವಂತ ಸಂಪನ್ಮೂಲ ವ್ಯಕ್ತಿಗಳು ಈ ಸಮಾಜದಲ್ಲಿ ಇದ್ದಾರೆ. ಅವರನ್ನು ಇವರು ಗುರುತಿಸುವುದೇ ಇಲ್ಲ. ವೈರಸ್ ಬಗ್ಗೆ, ಗ್ರಹಣದ ಬಗ್ಗೆ ಯಾರೋ ಫಲ ಜ್ಯೋತಿಷಿಗಳ ಬಳಿ ಮಾತನಾಡಿಸುವ ಈ ಮೂರ್ಖ ಮಾಧ್ಯಮಗಳು ಜನರ ನಂಬಿಕೆ ಎನ್ನುವ ಭಾವನೆಗಳ ಅಲೆಯ ಮೇಲೆ ಪಲಾಯನ ವಾದ ಮಾಡುತ್ತಾರೆ. ಹಿಂದುತ್ವ, ಇಸ್ಲಾಂ, ಏಕ ರೂಪ ನಾಗರಿಕ ಸಂಹಿತೆ ಮುಂತಾದ ಅನೇಕ ಮಹತ್ವದ ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ದೇಶದ ಸಮಗ್ರ ಚಿಂತನೆಯನ್ನು ಅಧ್ಯಯನ ಮಾಡಿರುವ ವ್ಯಕ್ತಿಗಳಿಗೆ ಬದಲಾಗಿ ಯಾರೋ ಜೋರಾಗಿ ಒಂದು ಧರ್ಮ, ಜಾತಿ, ಪಕ್ಷದ ಪರವಾಗಿ ಕೂಗಾಡುವವರಿಗೆ ವೇದಿಕೆ ಕಲ್ಪಸಿ ಇಡೀ ಸಮಾಜದ ಮಾನಸಿಕ ಅಸ್ವಸ್ಥತೆಗೆ ಈ ಎಲೆಕ್ಟ್ರಾನಿಕ್ ಮಾಧ್ಯಮಗಳು ಕಾರಣವಾಗಿವೆ ಎಂದು ನೇರವಾಗಿ ಹೇಳಬಹುದು.
ಮಾಧ್ಯಮಗಳಿಂದ ಆಗುವ ಅನೇಕ ಒಳ್ಳೆಯ ಕೆಲಸಗಳ ನಡುವೆ ಇತ್ತೀಚೆಗೆ ಅತ್ಯಂತ ಅಪಾಯಕಾರಿ ವಿಷಬೀಜಗಳು ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಚೈತ್ರಾ ಬಿತ್ತಿದ ಕೋಮು ವಿಷಬೀಜಗಳೆಷ್ಟು, ಈಗ ಹಣ ಲಪಟಾಯಿಸಲು ಒಬ್ಬ ಪಕ್ಕಾ ಕ್ರಿಮಿನಲ್ ನಂತೆ ಮಾಡಿದ ನಾಟಕಗಳೆಷ್ಟು, ಕೊನೆಗೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆ ಪ್ರಯತ್ನ ಎಲ್ಲವೂ ಆಕೆಯ ಬಗ್ಗೆ ಕನಿಕರಕ್ಕೆ ಕಾರಣವಾಗಬಹುದಾಗಿವೆ. ಏಕೆಂದರೆ ಆಕೆ ಕೂಡ ನಮ್ಮ ನಿಮ್ಮಂತೆ ಮಧ್ಯಮ ವರ್ಗದ ಸಾಮಾನ್ಯ ಹೆಣ್ಣು ಮಗಳು. ಈ ಸಮಾಜದಲ್ಲಿ ಯಾರು ಯಾವ ಕಾರಣದಿಂದ ನಾಶವಾದರು ನಮಗೆ ಬೇಸರವಾಗುತ್ತದೆ. ನಮ್ಮ ನಡುವಿನ ಜನರು ಯಶಸ್ವಿಯಾಗಲಿ ಎಂದು ಮನಸ್ಸು ಸದಾ ಬಯಸುತ್ತದೆ. ಕಾನೂನಾತ್ಮಕ ಅಪರಾಧಿಗಳಿಗೆ ಕಾನೂನು ಶಿಕ್ಷೆ ಕೊಡುತ್ತದೆ ಮತ್ತು ಕೊಡಲೇ ಬೇಕು. ಅದು ವ್ಯವಸ್ಥೆಯ ಮುಂದುವರಿಕೆಗೆ ಅವಶ್ಯ. ಆದರೆ ಆ ರೀತಿಯ ಜೀವನ ಕ್ರಮಕ್ಕೆ ಪರೋಕ್ಷವಾಗಿ ಪ್ರೋತ್ಸಾಹಿಸಿ ಅವರ ಬದುಕು ನಾಶವಾಗಲು ನಾವು ಕಾರಣವಾಗುತ್ತೇವೆ ಎಂಬ ಮಾನವೀಯ ಮುಖದ ಬಗ್ಗೆಯೂ ಯೋಚಿಸಬೇಕಲ್ಲವೇ?
ಕೆಟ್ಟ ಭ್ರಷ್ಟ ಹಣದ ಅತಿಯಾದ ಚಲಾವಣೆಯಿಂದ ಈ ರೀತಿಯ ಘಟನೆಗಳು ಹೆಚ್ಚು ಹೆಚ್ಚು ನಡೆಯುತ್ತಿವೆ. ಇದು ಸಾಮೂಹಿಕ ರೂಪ ಪಡೆದಿದೆ. ಎಷ್ಟೋ ಪ್ರಕರಣಗಳು ಹಾಗೆಯೇ ಮುಚ್ಚಿ ಹೋಗುತ್ತದೆ. ಅನೇಕ ಬೇರೆ ಬೇರೆ ರೀತಿಯ ಹೋರಾಟಗಾರರು, ಸಮಾಜ ಮುಖಿ ಚಿಂತಕರು ಮುಂತಾದ ಕೆಲವರು ಹಣದ ವಿಷಯದಲ್ಲಿ ಈ ರೀತಿ ಎಲ್ಲೋ ದಾರಿ ತಪ್ಪುತ್ತಿರುವ ಸುದ್ದಿಗಳು ಆಗಾಗ ಹೊರ ಬರುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಸ್ವಾಮಿ ವಿವೇಕಾನಂದರು ಹೇಳುವಂತೆ ಸಾರ್ವಜನಿಕ ಜೀವನದಲ್ಲಿ ಶಿಸ್ತು ಮತ್ತು ಶೀಲ ಬಹಳ ಮುಖ್ಯ. ಮಾಧ್ಯಮಗಳು ಅದನ್ನು ದೊಡ್ಡದಾಗಿ ಸದ್ದು ಮಾಡುತ್ತವೆ. ಮಾಧ್ಯಮಗಳೇನು ಇದರಿಂದ ಹೊರತಲ್ಲ. ಒಳಗೆ ಎಷ್ಟೋ ಬ್ಲಾಕ್ ಮೇಲ್ ನಡೆಯುತ್ತದೆ. ಆದರೆ ಅವು ಬಹಿರಂಗವಾಗುವುದಿಲ್ಲ. ಅವರು ಬುದ್ದಿವಂತ ವಂಚಕರು.
ಏನೇ ಇರಲಿ ಈ ಸಮಾಜದಲ್ಲಿ ಯುವ ಶಕ್ತಿ ಈ ರೀತಿ ವಂಚನೆಯ ಅಡ್ಡದಾರಿಗೆ ಇಳಿದು ನಾಶವಾಗದಿರಲಿ. ಪ್ರಾಮಾಣಿಕ ಹಾದಿಯಲ್ಲಿ ನಡೆದು ಬದುಕು ಕಟ್ಟಿಕೊಳ್ಳಲಿ. ಯಾರೋ ಯಾವುದೋ ಧರ್ಮದ ಕೆಲವು ಯುವಕ ಯುವತಿಯರು ಧರ್ಮದ ಅಮಲಿಗೆ ಸಿಲುಕಿ ಹುಚ್ಚರಂತಾಗುವುದನ್ನು ಇನ್ಯಾರೋ ಅನುಕರಿಸಿ ಹಾಳಾಗುವುದು ಬೇಡ. ಕೇವಲ ಮಾತಿನಿಂದ ನಾಯಕತ್ವ ದೊರೆತರೆ ಅದು ನೀರ ಮೇಲಿನ ಗುಳ್ಳೆ. ನಮ್ಮ ವ್ಯಕ್ತಿತ್ವ, ಶ್ರಮ, ಬದುಕು ಉತ್ತಮ ಗುಣಮಟ್ಟದಲ್ಲಿ ಇದ್ದರೆ ಮಾತ್ರ ನಾಯಕರಾಗಲು ಸಾಧ್ಯ. ಅದಕ್ಕೆ ಕ್ರಾಸ್ ರೂಟ್ ಇಲ್ಲ ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತಾ… ಮಾಧ್ಯಮಗಳು ಹೇಳಿದ್ದೆಲ್ಲಾ ನಿಜವಲ್ಲ ಅಥವಾ ಸುಳ್ಳು ಅಲ್ಲ. ವಿಷಯ ಯಾವುದೇ ಇರಲಿ ಅದನ್ನು ನಾವು ನೀವು ಸಹ ಮತ್ತೊಮ್ಮೆ ಪರಾಂಭರಿಸಿ ಒಂದು ಅಭಿಪ್ರಾಯ ರೂಪಿಸಿಕೊಳ್ಳೋಣ.
-ವಿವೇಕಾನಂದ ಎಚ್ ಕೆ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ