ಯಶೋಧೆಯ ಅಸೂಯೆಯ ಜಗ..
ಈ ಜಗವೇನೆಂದುಕೊಳ್ಳುವುದೆಂಬ ಚಿಂತೆ ನನಗಿಲ್ಲ.. ನಾನು ಸ್ವಾರ್ಥಿ, ಪಕ್ಷಪಾತಿ ಎಂದೆಲ್ಲ ಬೈದಾಡಿಕೊಂಡರು ಅಡ್ಡಿಯಿಲ್ಲ. ನನಗವನೆ ಸರ್ವಸ್ವ, ಅವನ ಒಡನಾಟವೆ ಪೂಜ್ಯ. ಅವನ ಹಿಂದೆ ಸುತ್ತಿ ಅವನನ್ನು ಸಂತೃಪ್ತಿಗೊಳಿಸುವುದೆ ನನ್ನ ಸರ್ವೋತ್ಕೃಷ್ಟ ಮಾತೃಧರ್ಮ. ಅವನು ಕಾಡಿಸಲಿ, ಪೀಡಿಸಲಿ, ಚೇಷ್ಟೆ, ತುಂಟತನ ಮಾಡಲಿ - ನನಗದೆಲ್ಲ ನಗಣ್ಯ. ಅವನು ನನ್ನ ಮಗನೆಂಬುದಷ್ಟೆ ನನಗೆ ಲೆಕ್ಕ. ಒಂದರೆ ಗಳಿಗೆಯೂ ಬಿಟ್ಟಿರಲಾರದ ಆತಂಕ ನನಗೆ. ಅವನೊ...ಆಡಿ, ಕುಣಿದಾಡಿಕೊಂಡಿರುವ ಮಗು - ತನ್ನ ಜತೆಯ ವಯಸಿನ ಮಕ್ಕಳೊಂದಿಗೆ. ಅವರ ಜತೆಗೆ ಆಡಲು ಬಿಡಬೇಕೆಂದರೂ ನನಗೆ ತಡೆದುಕೊಳ್ಳಲಾಗದು. ಅದೆಂತದೊ ಅಸೂಯೆ ಗಾಢವಾಗಿ ಮಡುಗಟ್ಟಿ ಯಾರ ಜತೆಗೂ ಬಿಡದೆ ಸದಾ ತನ್ನೊಂದಿಗೆ ಇಟ್ಟುಕೊಂಡಿರಬೇಕೆಂಬಂತೆ ಪ್ರಲೋಭಿಸುತ್ತಿರುತ್ತದೆ. ಬರಿ ಮಕ್ಕಳೆ ಏನು? ಅವನೊಡನೆ ಆಡುವ, ಒಡನಾಡುವ, ಕೊನೆಗೆ ದೂರು ತರುವ ನೆರೆಹೊರೆಯವರಾಗಲಿ, ಸಲಿಗೆಯಿಂದ ಲಲ್ಲೆಗರೆಯುತ್ತ ಮುದ್ದಾಡುವ ಗೋಪಿಕೆಯರಾಗಲಿ, ಕೊನೆಗೆ ಸದಾಕಾಲ ಅವನೊಡನಿರುವ ಬಲರಾಮನಾಗಲಿ - ಯಾರ ಜತೆಗೆ ಅವನಿದ್ದರು ನನಗೆ ಸಹಿಸಲಾಗದು - ಅಷ್ಟರ ಮಟ್ಟಿಗಿನ ಅಸೂಯೆ ಹುಟ್ಟಿಸುವಷ್ಟು ಪ್ರೀತಿ, ವಾತ್ಸಲ್ಯ ಅವನ ಮೇಲೆ. ಎಲ್ಲಿ ಪ್ರೀತಿ ವಾತ್ಸಲ್ಯ, ಅಧಿಕಾರವಿರುವುದೊ ಅಲ್ಲಿ ಅಸೂಯೆಯೂ ಇರುವುದು ಸಹಜ ತಾನೆ? ಅದಕ್ಕೆ ನಾ ಮಾತ್ರ ಹೇಗೆ ಹೊರತಾಗಲಿ? ಅವನು ನನ್ನ ಮಗನಾಗಿದ್ದು ನನ್ನ ತಪ್ಪಂತೂ ಅಲ್ಲವಲ್ಲ?
ಆದರೂ ಈ ಅಸೂಯೆಯ ಜತೆ ಜೀವಿಸುವುದು ಅದೆಷ್ಟು ಕಷ್ಟ! ಯಾರನೆಂದು ತಡೆಯಲಿ, ಯಾರನೆಂದು ಹಿಡಿಯಲಿ? ಎಲ್ಲರು ಅವನನ್ನು ಬೇಕೆನ್ನುವವರೆ, ಅವನ ಹಿಂದೆ ಸುತ್ತುವವರೆ. ಅವನ ಬಾಲ ಲೀಲೆಗಳ ಕುರಿತು ವಿಸ್ಮಯ ಪಡುವವರೆ. ಅವರೆಲ್ಲ ಹೊಗಳಿದಾಗ, ಅವನ ಪ್ರತಾಪಗಳನ್ನು ಬಣ್ಣಿಸಿದಾಗ ಎದೆಯೊಳಗೆಲ್ಲ ಏನೊ ಪುಳಕವೆದ್ದು ಹಿಗ್ಗಂತೂ ಆಗುತ್ತದೆ. ಆದರದು ಅರೆಗಳಿಗೆ ಮಾತ್ರವಷ್ಟೆ - ಹಿಂದೆಯೆ ಯಾವುದೊ ಭೀತಿಯಾವರಿಸಿ ಕಾಡತೊಡಗುತ್ತದೆ, ಇವರಲ್ಲಾರಾದರೂ ಅವನನ್ನು ನನ್ನಿಂದ ಕಿತ್ತುಕೊಂಡುಬಿಟ್ಟರೆ ಅನಿಸಿ ಭಯವಾಗುತ್ತದೆ. ಅವನನ್ನು ಯಾರಿಗೂ ಸಿಗಬಿಡದೆ ನನ್ನೊಡನೆ ಕಟ್ಟು ಕಟ್ಟಿ ಹಿಡಿದು ಹಾಕಿ, ನನ್ನ ಈ ಮಡಿಲಲ್ಲೆ ಮುದ್ದಾಡುತ್ತ ಕಾಪಿಡಬೇಕೆಂಬ ಅದಮ್ಯ ಮಾತೃ ಪ್ರೇಮ ಉಕ್ಕುಕ್ಕಿ ಬರುತ್ತದೆ. ಹೇಗೆ ಹಿಡಿದಿಡಲಿ ಅವನನ್ನು? ಯಾವ ಪಾಶದಿಂದ ಬಂಧಿಸಿಡಲಿ? ಯಾರಿಗು ಕಾಣದಂತೆಲ್ಲಿ ಬಚ್ಚಿಡಲಿ? ಜಗಕ್ಕೆ ಬೆಳಕಾದವನನ್ನು ಅಂಧಕಾರದಲ್ಲಿ ಮುಚ್ಚಿಡುವ ಬಗೆಯಾದರೂ ಎಂತು? ಅವನಿರುವಿಕೆಯೆ ಅಲ್ಲಿ ಬೆಳಕಾಗಿ ಬಿಡುವುದಲ್ಲ?
ಆದರೂ ಬಿಡಲೊಲ್ಲದು ಈ ತಾಯಿ ಹೃದಯ. ಹೇಗಾದರೂ ಅವನನ್ನು ಹಿಡಿದೆ ತೀರುತ್ತೇನೆ. ಎಲ್ಲಿಯವರೆಗೆ ನನ್ನಿ ಅಸೂಯೆ ಜೀವಂತವಿರುವುದೊ ಅಲ್ಲಿಯವರೆಗೆ ಅವನನ್ನ ನನ್ನ ಅಂಕೆಯಲ್ಲಿಡುವ ಹವಣಿಕೆಯೂ ಜೀವಂತವೆ. ಎಲ್ಲಿಯತನಕ ಈ ಅಸೂಯೆ ಹುಟ್ಟಿಸುವ ದಿಗಿಲು ಒಳಗೆ ಕಾಡುತ್ತಲೆ ಇರುವುದೊ ಅಲ್ಲಿಯವರೆಗೆ ನನ್ನಿ ಪಡಿಪಾಟಲು ನನ್ನಿಂದ ಕಳಚಿಕೊಳ್ಳದು. ಈ ಜಗದ್ದೋದ್ದಾರಕ ಬಾಲಕ ಅದನ್ನರಿಯುವನೊ, ಬಿಡುವನೊ ನಾನು ಲೆಕ್ಕಿಸುವುದಿಲ್ಲ. ನನಗವನು ಮಗ, ನಾನವಳ ಅಮ್ಮ - ಆ ಅಧಿಕಾರದ ವ್ಯಾಪ್ತಿಗೆ ಮೀರಿದ್ದು, ಅಸಾಧುವೆನ್ನಿಸಿದ್ದು ಈ ಜಗತ್ತಿನಲ್ಲಿ ಯಾವುದು ಇಲ್ಲ.
ಅಯ್ಯೊ, ಹಾಳು ಮರೆವೆ! ಹುಟ್ಟಿದ ಹಬ್ಬದ ದಿನ ದೃಷ್ಟಿಬೊಟ್ಟಿಟ್ಟು ಆರತಿ ಎತ್ತುವ ಹೊತ್ತಾದರು, ಈ ಚಿಂತನೆಯಲ್ಲಿ ಮೈ ಮರೆತು ಕೂತುಬಿಟ್ಟೆನಲ್ಲ? ನನ್ನ ಹಾಳು ಮರೆವಿಗಿಷ್ಟು....
ಯಶೋಧೆಯ ಅಸೂಯೆಯ ಜಗ..
__________________________________
ಗೊಲ್ಲನ ಗಲ್ಲ ಯಾರೊ ಗಿಂಡಿದರಲ್ಲ
ತೋಳ ಹಿಡಿದ ಯಶೋಧೆಗೆ ತಳಮಳ
ಹಿಂಡು ಹಿಂಡಾಗಿ ಹಿಂಡಿದರೆ ಕೆನ್ನೆಗೆ
ಸಹಿಸುವುದೆಂತು ಅಮ್ಮನೊಳಗಿನ ಬೇಗೆ ||
ತುಂಬು ಕೆನ್ನೆ ದೊನ್ನೆ ಹೊನ್ನೆಂದು ಆಡುವರ
ಮಾತ ಕೇಳಿ ತಾಯಿ ಹೃದಯ ಹಿಗ್ಗ ಸ್ವರ
ಹಿಗ್ಗಾದರೇನು ಮಗ್ಗ ನೇಯ್ದಂತೆ ಮನಸು
ಎಳೆಳೆ ದಾರ ಸೊರಗೆ ವಸ್ತ್ರವಾಗದೆ ಹೊಲಸು? ||
ಕಟ್ಟಿಡಲೊಲ್ಲಳು ಮಗನ ಮುಟ್ಟದಂತೆ ಯಾರು
ಕಟ್ಟಬಲ್ಲವರಾರು ಜಗವನೆ ಕಟ್ಟಿದಾ ಜಗದ್ಗುರು ?
ಬ್ರಹ್ಮಾಂಡವನೆ ತೋರಿ ಅಣಕಿಸಿಬಿಟ್ಟ ಕುಡಿಯ
ಬಚ್ಚಿಡಲೆಲ್ಲಿ ಯಾರು ಕಾಣದ ನೆಲೆಯೆ ಮಾಯ ||
ಗುಪ್ತಗಾಮಿನಿ ಪ್ರೀತಿ ಹರಿದ ಯಮುನೆ ಸತತ
ಯಾಕೊ ಈರ್ಷೆ ಅಸೂಯೆ ತಡೆಯಲೆಂತುಚಿತ
ವಿಹಿತ ಜಗಬಾಲನ ಲೀಲೆ ಗೋಪಿಯರ ಸಹಿತ
ಗೋಳಾಡಿಸಿ ನಲಿದನವನ ಆನಂದವೆ ಸಂಗೀತ ||
ಮಾತೃಹೃದಯದ ಶಕುನಿ ಬಯಸೆಲ್ಲ ವಾತ್ಸಲ್ಯ
ತಡೆಗಟ್ಟಿದರವನ ಭೂಭಾರವಿಳಿಸುವ ಬಾಹುಳ್ಯ
ಮುಗಿಸಲೆಂತು ಮುಕುಂದ ಬಿಡಲೆಬೇಕು ಬೀದಿಗೆ
ಸಿಕ್ಕಷ್ಟೆ ಭಾಗ್ಯಕೆ ಹರ್ಷಿಸಿ ನಡೆದವಳ ಮುಗುಳ್ನಗೆ ||
------------------------------------------------------------------------------------
ನಾಗೇಶ ಮೈಸೂರು, ಸಿಂಗಪುರ
-------------------------------------------------------------------------------------