ಯಶೋ ತೋಷ

ಯಶೋ ತೋಷ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಎಚ್.ಬಿ.ಚಂದ್ರಶೇಖರ್
ಪ್ರಕಾಶಕರು
ಸಾಹಿತ್ಯಲೋಕ ಪಬ್ಲಿಕೇಷನ್ಸ್, ರಾಜಾಜಿ ನಗರ, ಬೆಂಗಳೂರು-೫೬೦೦೧೦, ಮೊ: ೯೯೪೫೯೩೯೪೩೬
ಪುಸ್ತಕದ ಬೆಲೆ
ರೂ.೧೨೦.೦೦ ಮುದ್ರಣ: ೨೦೨೧

ಡಾ.ಎಚ್.ಬಿ.ಚಂದ್ರಶೇಖರ್ ಬರೆದ ‘ಯಶೋ ತೋಷ' ಸಾಧಕರಿಗೊಂದು ಕೈಪಿಡಿ ಎಂಬ ಪುಸ್ತಕಕ್ಕೆ ಡಾ.ಚಂದ್ರಶೇಖರ್ ದಾಮ್ಲೆ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ “ಮಾನವ ಜನ್ಮ ದೊಡ್ದದು ಎಂಬುವುದು ದಾಸವಾಣಿ. ಅಂದರೆ ಬದುಕನ್ನು ಅರ್ಥಪೂರ್ಣಗೊಳಿಸಲು ಮಾನವರಿಗೆ ದೊಡ್ದ ಅವಕಾಶಗಳಿವೆ. ಅವನ್ನು ನಾವೇ ಉಪಯೋಗಿಸಬೇಕು. ಹಾಗಾಗಿ ದಾಸರು ಹೇಳುತ್ತಾರೆ ‘ಜೀವನವನ್ನು ವ್ಯರ್ಥಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ’ ಎಂದು. ನಮ್ಮನ್ನು ಯಶಸ್ಸಿನ ದಾರಿಯಲ್ಲಿ ಸಾಗುವಂತೆ ಪ್ರೇರೇಪಿಸುವ ಸಂದೇಶ ಈ ದಾಸವಾಣಿಯಲ್ಲಿದೆ.

ಯಶಸ್ಸೆಂಬುದು ಬದುಕಿನ ಒಂದು ಹಂತದ ಸಾಧನೆಯಲ್ಲ. ಬದುಕಿನುದ್ದಕ್ಕೂ ಯಶಸ್ಸನ್ನು ಸಾಧಿಸುವ ಸವಾಲು ಇದ್ದೇ ಇದೆ. ಬಾಲ್ಯ ಕಾಲದಿಂದ ವೃದ್ಧಾಪ್ಯದವರೆಗೂ ಯಶಸ್ಸಿನ ಹೊಸ ಗುರಿಗಳು ಗೋಚರಿಸುತ್ತಲೇ ಇರುತ್ತವೆ. ಯಾರು ಅವನ್ನು ಕಾಣಲು ಬಯಸುವುದಿಲ್ಲವೋ ಅವರ ಬದುಕು ಸ್ಥಗಿತಗೊಳ್ಳುತ್ತದೆ. ಸಂತೋಷ ಅವರ ಪಾಲಿಗೆ ಮರೀಚಿಕೆಯಾಗುತ್ತದೆ. ಅಂದರೆ ಯಶಸ್ಸಿಗೂ ಸಂತೋಷಕ್ಕೂ ಸಂಬಂಧವಿದೆ. ಬದುಕಿನುದ್ದಕ್ಕೂ ನಾವು ಸಂತೋಷ ಪಡುತ್ತಿರಲು ಯಶಸ್ಸನ್ನು ಗಳಿಸುತ್ತಿರಬೇಕು. ಅದರ ಮಾರ್ಗೋಪಾಯಗಳಿಗೆ ದಿಕ್ಸೂಚಿಯಂತೆ ಈ ‘ಯಶೋ ತೋಷ' ಎಂಬ ಕೃತಿಯು ನಮ್ಮ ಕೈಯಲ್ಲಿದೆ. 

ಪ್ರತಿಯೊಬ್ಬರೂ ತಿಳಿದಿರಬೇಕಾದ ಸಂಗತಿಯೆಂದರೆ ಅವಿರತ ಪರಿಶ್ರಮವಿಲ್ಲದೆ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ. ಯಶಸ್ಸಿಗೆ ಪ್ರಸಿದ್ಧಿ ಮಾಪಕವಲ್ಲ. ಯಶಸ್ಸಿಗೆ ಮಿತಿಗಳೂ ಇಲ್ಲ. ಅಂತಿಮ ಗುರಿಗಳೂ ಇಲ್ಲ. ತಾನು ಆಯ್ದುಕೊಂಡ ಕ್ಷೇತ್ರದಲ್ಲಿ ಹೊಸ ಚಿಂತನೆಯಿಂದ ಸೃಜನಶೀಲವಾಗಿ ದುಡಿಯುತ್ತ ಸೋಲುಗಳನ್ನೇ ಸವಾಲುಗಳನ್ನಾಗಿ ಎದುರಿಸುತ್ತ ತನ್ನ ಸಫಲತೆಗಳಿಗೆ ತಾನೆ ನಿರ್ಣಾಯಕನಾಗಿ ಮುಂದುವರಿಯುವಾತನಿಗೆ ಯಶಸ್ಸು ಒಂದು ಥ್ರಿಲ್ ಆಗುವುದಿಲ್ಲ. ಬದಲಿಗೆ ಸಂತೋಷದ ಮೆಟ್ಟಲಾಗುತ್ತದೆ. ಅಲ್ಲಿಂದ ಸಾಧನೆಯ ಮುಂದಿನ ಪಯಣ ಆರಂಭವಾಗುತ್ತದೆ. ಮತ್ತೊಮ್ಮೆ ಸೋಲನ್ನು ಎದುರಿಸಬೇಕಾಗಿಬರಬಹುದು. ನಿರಾಶೆ ಆವರಿಸಲೂ ಬಹುದು. ಸಾಧನೆಯ ಮಾರ್ಗವನ್ನು ಬದಲಿಸುವ ಪ್ರೇರಣೆ ಉಂಟಾಗಬಹುದು. ಇಷ್ಟಾದರೂ ಛಲ ಬಿಡದೆ ಮುಂದುವರಿಯುವವರಿಗೆ ಸಿಕ್ಕುವ ಯಶಸ್ಸು ಬಹು ದೊಡ್ಡ ಥ್ರಿಲ್ ಎನಿಸುತ್ತದೆ. ಅವರದ್ದು ಇತರರಿಗೆ ಮಾದರಿ ಎನ್ನಿಸುವ ಕಥೆಯಾಗಿ ಸಿಗುತ್ತದೆ. ಅಂತಹ ವ್ಯಕ್ತಿ ಚಿತ್ರಗಳನ್ನು ಉದಾಹರಣೆಗಳನ್ನಾಗಿ ನೀಡಿ ಶ್ರೀಯುತ ಎಚ್.ಬಿ.ಚಂದ್ರಶೇಖರ್ ರವರು ಈ ಕೃತಿಯಲ್ಲಿ ಯಶಸ್ಸಿನ ಸ್ಪಷ್ಟ ವ್ಯಾಖ್ಯಾನವನ್ನು ನೀಡುತ್ತಾರೆ. ಅವರ ಪ್ರಕಾರ ನಂಬರ್ ವನ್ ಸ್ಥಾನದಲ್ಲಿರುವುದನ್ನು ಮಾತ್ರ ಯಶಸ್ಸು ಎಂದು ಹೇಳಲಾಗದು. ಅಂತಹ ಮಹಾನ್ ಸಾಧಕರು ಏರಿದ ಎತ್ತರಕ್ಕೆ ಹೋಲಿಸಿ ನಮ್ಮ ಗುರಿಯನ್ನು ನಿರ್ಧರಿಸಬಾರದು. ವಾಸ್ತವದಲ್ಲಿ ಅಂತಹ ಸಾಧಕರೂ ಕೂಡಾ ಸಣ್ಣ ಗುರಿಯನ್ನು ತಲುಪಿ ಹಂತ ಹಂತವಾಗಿ ಮೇಲಕ್ಕೇರುತ್ತಾರೆ. ಅವರು ಯಾವುದೇ ಸಾಧನೆಯ ಸಫಲತೆಯ ಬಳಿಕ ವಿಶ್ರಾಂತಿ ಪಡೆಯಲಿಲ್ಲ. ಹಾಗಾಗಿ ತಾಳ್ಮೆ ಮತ್ತು ಉತ್ಸಾಹಗಳನ್ನು ನಿರಂತರವಾಗಿ ಜಾರಿಯಲ್ಲಿಟ್ಟುಕೊಂಡು ಗೆಲುವಿನ ಹಾದಿಯಲ್ಲಿ ಮುಂದುವರಿದ ಅವರ ಮಾದರಿ ನಮಗೆ ಅನುಕರಣೀಯವಾಗುತ್ತದೆ.

ಯಶಸ್ಸು ಪಡೆದವರ ಚರಿತ್ರೆಗಳು ಕೆಲವೊಮ್ಮೆ ಅವರ ಅದೃಷ್ಟ ಚೆನ್ನಾಗಿತ್ತೆಂಬ ಚಿಂತನೆಯನ್ನೂ ಕೇಳಬಹುದು. ಆದರೆ ಅದೃಷ್ಟ ಚೆನ್ನಾಗಿಲ್ಲದಿದ್ದರೂ ಮಹತ್ ಸಾಧನೆ ಮಾಡಿದ ಅನೇಕ ಸಾಧಕರ ಗಾಥೆಗಳನ್ನು ಉಲ್ಲೇಖಿಸುವ ಲೇಖಕರು ಯಶಸ್ಸನ್ನು ಸಾಪೇಕ್ಷವಾದುದು ಎಂದು ಹೇಳುತ್ತಾರೆ. ಅದು ವೈಯಕ್ತಿಕವಾದುದರಿಂದ ಯಶಸ್ಸಿಗೆ ಬಳಸು ಮಾರ್ಗಗಳಿಲ್ಲ. ಸಮಾಜಕ್ಕೆ ಉಪಯುಕ್ತ ವ್ಯಕ್ತಿಯೇ ಯಶಸ್ವೀ ವ್ಯಕ್ತಿ. ಸಾಮಾಜಿಕ ಕಳಕಳಿಯೊಂದಿಗೆ ಆರೋಗ್ಯಕರ ಹವ್ಯಾಸಗಳು ಇದ್ದವರಷ್ಟೇ ನಿರ್ದಿಷ್ಟ ಗುರಿಗಳ ದಾರಿಯಲ್ಲಿ ಸಾಗಿ ಯಶಸ್ಸನ್ನು ಸಾಧಿಸಬಹುದು" ಎಂದು ಬರೆದಿದ್ದಾರೆ.