ಯಾಕೆ ಕಾರಣ ವಿಲ್ಲದೆ ಬೇಜಾರಾಗುತ್ತದಲ್ಲ?

ಯಾಕೆ ಕಾರಣ ವಿಲ್ಲದೆ ಬೇಜಾರಾಗುತ್ತದಲ್ಲ?

ಬರಹ

ಯಾಕೆ ಕಾರಣ ವಿಲ್ಲದೆ ಬೇಜಾರಾಗುತ್ತದಲ್ಲ?
ಇದ್ದಕ್ಕಿದ್ದಂತೆ ಮನಸ್ಸಿಗೆ ನೋವಾಗುತ್ತದಲ್ಲ?
ಈ ಪ್ರಶ್ನೆಯನ್ನು ಗುರುಗಳಿಗೆ ಶಿಷ್ಯನೊಬ್ಬ ಕೇಳಿದ.
ಗುರುಗಳು ಹೇಳಿದರು:
ಯಾವಾಗ ಇತರರಲ್ಲಿ ಹೀಗಾಗಬೇಕು ಅಂತಾ ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತೇವೆಯೋ ಆಗ ಮನಸ್ಸಿಗೆ ಬೇಸರವೂ ಆಗುತ್ತೆ, ನೋವೂ ಆಗುತ್ತೆ. ಆದ್ದರಿಂದ ಬೇರೆಯವರಿಂದ ಹೀಗೇ ಆಗಬೇಕು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳುವುದೇ ನಾವು ಮಾಡುವ ಮೊದಲ ತಪ್ಪು. ಮನೆಯಲ್ಲಿ ಪತಿಯಿಂದ ಪತ್ನಿ, ಮಕ್ಕಳಿಂದ ತಂದೆತಾಯಿ....ಹೀಗೆ ಯಾರಿಂದ ಯಾರೇ ಆಗಲೀ ನಿರೀಕ್ಷೆಯನ್ನು ಇಟ್ಟುಕೊಂಡಾಗ ಹೀಗಾಗುತ್ತೆ. ನಿಮಗೆ ಸರಿ ಅನಿಸಿದ್ದನ್ನು ನಿಮ್ಮ ಮಕ್ಕಳು, ಪತ್ನಿ ಮಾಡಲಿ, ಎಂದು ನೀವು ನಿರೀಕ್ಷಿಸುತ್ತೀರಿ. ಅದು ಅವರ ದೃಷ್ಟಿಯಲ್ಲಿ ಸರಿ ಇರದೆಯೂ ಇರಬಹುದು.ನಿಮ್ಮ ದೃಷ್ಟಿಕೋನದಂತೆ ಇತರರೂ ಇರಬೇಕೆಂಬುದೇ ತಪ್ಪು. ನೀವು ನಿರೀಕ್ಷೆ ಇಟ್ಟುಕೊಂಡಾಗ ಮಾತ್ರ ಅದು ಆಗದಿದ್ದಾಗ ನಿಮ್ಮ ಮನದೊಳಗೆ ಯುದ್ಧ ಶುರುವಾಗುತ್ತದೆ –“ ಅಯ್ಯೋ ನಾನು ಇಷ್ಟು ಒಳ್ಳೆಯ ವಿಚಾರ ಹೇಳಿದಾಗಲೂ ಮನೆಯವರು ಕೇಳಲಿಲ್ಲವಲ್ಲಾ!” ಎಂಬ ನೋವು ನಿಮ್ಮನ್ನು ಕಾಡುತ್ತದೆ. ನಿಮ್ಮಂತೆ ಅವರ ಚಿಂತನೆ ಇಲ್ಲದಿದ್ದಾಗ ಅವರ-ನಿಮ್ಮ ನಡುವೆ ಬಿನ್ನಾಭಿಪ್ರಾಯು ಉಂಟಾಗುತ್ತದೆ.ಅದರ ಪರಿಣಾಮ ಎಷ್ಟು ಘೋರವಾಗಿರುತ್ತದೆ ಎಂದರೆ ನೀವು ಯಾವ ಒಳ್ಳೆಯ ಉದ್ದೇಶದಿಂದ ನಿಮ್ಮ ಪತ್ನಿ/ಪತಿ/ಮಕ್ಕಳಲ್ಲಿ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತೀರೋ ಅದು ಈಡೇರದ ಪರಿಣಾಮವನ್ನು ನೀವು ಸಹಿಸಲು ಅಸಮರ್ಥರಾಗಿರುತ್ತೀರಿ. ನಿಮ್ಮ ಮನಸ್ಸು ವ್ಯಗ್ರವಾಗಿರುತ್ತದೆ. ನೀವು ನೀವಾಗಿರುವುದೇ ಇಲ್ಲ.
ಒಂದು ಚಿಕ್ಕ ಘಟನೆ ಕೇಳಿ. - ಒಬ್ಬ ವ್ಯಕ್ತಿಯು ಮರವೊಂದನ್ನು ತಬ್ಬಿಕೊಂಡು , ಕೂಗಾಡಲು ಶುರು ಮಾಡಿದ ನಂತೆ “ ಯಾರಾದರೂ ಬಂದು ಸಹಾಯ ಮಾಡಿ , ಈ ಮರವು ನನ್ನನ್ನು ಬಿಡುತ್ತಲೇ ಇಲ್ಲಾ!!”
ನಮ್ಮ ಕಥೆಯೂ ಹಾಗೆಯೇ, ನಾವು ಸಂಸಾರವೆಂಬ ಮರವನ್ನು ತಬ್ಬಿಕೊಂಡು ಅದು ನಮ್ಮನ್ನು ಬಿಡುತ್ತಿಲ್ಲವೆಂದರೆ ಆಗುತ್ತದೆಯೇ? ನಾವೇ ಬಿಡಬೇಕು. ಬಿಡುಗಡೆಯತ್ತ ನಾವು ಸಾಗಬೇಕು. ಯಾವುದೇ ವಿಷಯವನ್ನು ಅಂಟಿಸಿಕೊಂಡಿದ್ದಾಗ ನಲಿವಿಗಿಂತ ನೋವೇ ಹೆಚ್ಚು. ಆದರೆ ಅಂಟಿಸಿಕೊಳ್ಳದಿದ್ದರೆ ನೋವೂ ಇಲ್ಲ. ನಲಿವೂ ಇಲ್ಲ. ಈ ಸ್ಥಿತಿಗೆ ನೀವು ಏನು ಬೇಕಾದರೂ ಕರೆಯಿರಿ…..