ಯಾಕೆ ನಾವಿಷ್ಟು ಕೆಟ್ಟವರು ?

ಯಾಕೆ ನಾವಿಷ್ಟು ಕೆಟ್ಟವರು ?

ಬರಹ

"ಜಾತಸ್ಯ ಮರಣ೦ ಧ್ರುವ೦" ಹೌದು, ಹುಟ್ಟಿದವನಿಗೆ ಸಾವು ಕಟ್ಟಿಟ್ಟ ಬುತ್ತಿ, ಇ೦ದೋ, ನಾಳೆಯೋ, ನಾಡಿದ್ದೋ ಬಲ್ಲವರಿಲ್ಲ. ಆದರೆ ಇರುವ ಮೂರುದಿನಗಳ ಬಾಳುವೆಯಲ್ಲಿ ನಾವು ನಮ್ಮ ಸುತ್ತಲ ಜನರೊ೦ದಿಗೆ, ಹೋಗಲಿ ಬಿಡಿ ನಮ್ಮ ಸ್ವ೦ತ ಸಾ೦ಬ೦ಧಿಕ ವರ್ತುಲದ ಜನರ ಜೊತೆಗೆ ಹೇಗೆ ವರ್ತಿಸುತ್ತೇವೆ, ಜೀವನ ನಶ್ವರ ಎ೦ದು ತಿಳಿದು ಕೂಡ, ಅಹ೦ಕಾರ, ದರ್ಪ ಗಳನ್ನೂ ಯಾಕೆ ಮೆರೆಯುತ್ತೇವೆ ಅನ್ನುವುದು ಗೊತ್ತೇ ಆಗುವುದಿಲ್ಲ. ಭೂಮಿಯ ಮೇಲಿರುವ ಸಕಲ ಜೀವರಾಶಿಗಳಲ್ಲಿ ಬುದ್ಧಿವ೦ತನೆನಿಸಿಕೊ೦ಡ ಮನುಷ್ಯ ಪ್ರಾಣಿಯೇ ಅತ್ಯ೦ತ ಸ್ವಾರ್ಥಿ ಮತ್ತು ಅಪಾಯಕಾರಿ ಎ೦ಬುದರಲ್ಲಿ ಎರಡು ಮಾತಿಲ್ಲ.

ಇತ್ತೀಚಿಗೆ ಒಬ್ಬ ಹಿರಿಯಮಿತ್ರರು ಪಾರ್ಕಿನಲ್ಲಿ ಸಿಕ್ಕರು. ಅವರು ನನಗೆ ಹತ್ತಿರದಿ೦ದ ಪರಿಚಿತರು. ಅವರು ಸರಕಾರೀ ಸೇವೆಯಲ್ಲಿದ್ದರು, ನಿವೃತ್ತರಾಗಿ ಈಗಷ್ಟೇ ಎರಡು ವರುಷ ಸ೦ದಿದೆ. ಹಿ೦ದೆ ಸೇವೆಯಲ್ಲಿದ್ದಾಗ ಅವರು ಆಗಾಗ ಸಿಕ್ಕುತ್ತಿದ್ದರು ಆದರೆ ಬಹಳ ಕಡಿಮೆ ಮಾತನಾಡುತ್ತಿದ್ದರು, ಎಷ್ಟುಬೇಕೋ ಅಷ್ಟೇ, ಆದರೆ ಈಗ ನಿನ್ನೆ ತಾನೇ ಪಾರ್ಕಿನಲ್ಲಿ ಸಿಕ್ಕರಲ್ಲ, ಆಗ ನನ್ನ ಕೈ ಹಿಡಿದು ಅರ್ಧಘ೦ಟೆ ಕೊರೆದರು, ನನಗೋ ಅವರ ಮಾತುಗಳನ್ನು ಕೇಳುತ್ತಾ ನಿಲ್ಲುವ ಅಥವಾ ಕೂರುವ ವ್ಯವಧಾನ ಇರಲಿಲ್ಲ, ನನ್ನವೇ ನೂರೆ೦ಟು ತಲೆಬಿಸಿಗಳಿದ್ದವು, ಆದರೆ ಅವರು ಕೈ ಬಿಡಲೊಲ್ಲರು (ಕೆಲವರಿಗದು ಅಭ್ಯಾಸ, ಕೈ ಹಿಡಿದು ಮಾತು ಶುರು ಮಾಡುತ್ತಾರೆ, ಎಲ್ಲಿ ಕೈ ಬಿಡಿಸಿಕೊ೦ಡು ಓಡಿ ಹೋಗುತ್ತಾನೋ ಎ೦ಬ ಭಯದಲ್ಲಿ ಹಿಡಿದ ಕೈ ಬಿಡುವುದೇ ಇಲ್ಲ). ರಿಸೆಶನ್ ನಿ೦ದ ಹಿಡಿದು ಒಬಾಮಾ ತನಕ, ಚುನಾವಣೆಯಿ೦ದ ಹಿಡಿದು ಸಾಮಾಜಿಕ ಭ್ರಷ್ಟಾಚಾರ, ಬೆಲೆಯೇರಿಕೆ ಹೀಗೆ ಎಲ್ಲದರ ಬಗ್ಗೆ ಮಾತನಾಡಿದರು, ಅದೇ ಚರ್ವಿತ-ಚರ್ವಣ ಮಾತುಗಳು, ಅದರಲ್ಲಿ ಸ್ವಾರಸ್ಯ ಏನು ಇರಲಿಲ್ಲ, ನನಗೆ ತುರ್ತು ಕೆಲಸ ಇದೆ, ಆಮೇಲೆ ಸಿಗೋಣ ಅ೦ದರೂ ಅವರು ಬಿಡುವ೦ತಿಲ್ಲ. ಅದೃಷ್ಟವಶಾತ್ ಜೇಬಿನಲ್ಲಿದ್ದ ನನ್ನ ಮೊಬೈಲ್ ಆಪದ್ಬಾ೦ಧವನ೦ತೆ ರಿ೦ಗಣಿಸಿತು, ಕೂಡಲೇ ಕೊಸರಾಡಿ ಅವರ ಕೈ ಬಿಡಿಸಿಕೊ೦ಡು, ಫೋನ್ ನಲ್ಲಿ ಮಾತನಾಡುವ ನೆಪದಲ್ಲಿ ಅಲ್ಲಿ೦ದ ಕಾಲ್ಕಿತ್ತೆ.

ಆಮೇಲೆ ಮನೆಗೆ ಹೋಗುವ ದಾರಿಯಲ್ಲಿ ಸುಮ್ಮನೆ ಯೋಚನೆ ಮಾಡಿದೆ, ಅಲ್ಲ ಎರಡು ವರ್ಷದ ಹಿ೦ದೆ ಮೌನಮುನಿಯ೦ತಿದ್ದ ಈಯಪ್ಪ ಈಗ್ಯಾಕೆ ಇಷ್ಟು ವಾಚಾಳಿಯಾಗಿದ್ದಾರೆ. ಉತ್ತರ ಅರಿಯುವುದು ಕಷ್ಟವೇನು ಆಗಲಿಲ್ಲ. ಇಷ್ಟೇ. ಸರಕಾರೀ ಸೇವೆಯಲ್ಲಿದ್ದಾಗ ಅವರು ಕೆಲಸದಲ್ಲಿ ವ್ಯಸ್ತರಾಗಿದ್ದರು, ಹೆಚ್ಚು ಮಾತನಾಡಬೇಕೆನಿಸುತ್ತಿರಲಿಲ್ಲ. ಈಗ ರಿಟೈರ್ ಆಗಿದ್ದಾರೆ, ಸಾಮಾನ್ಯವಾಗಿ ಮನೆಯ ಯಜಮಾನ ರಿಟೈರ್ ಆದ ಮೇಲೆ ಅವರ ಮನೆಯಲ್ಲಿ ಪ್ರಾಧಾನ್ಯತೆ ಕಳಕೊ೦ಡು ಬಿಡ್ತಾರೆ, ದುಡಿಯುತ್ತಿದ್ದ ದಿನಗಳಲ್ಲಿ ಅವರ೦ದಿದ್ದೇ ವೇದವಾಕ್ಯ ಆಗಿರುತ್ತೆ, ಆದರೆ ರಿಟೈರ್ ಆದ ಕೊ೦ಚ ದಿನಗಳಲ್ಲಿಯೇ,ಅದೂ ಅವರಿಗೆ ಪೆನ್ಶನ್ ಬರುವುದು ತೀರಾ ಗೌಣ ಎ೦ಬಷ್ಟು ಮೊತ್ತವಾದರೆ ಅವರು ಯಜಮಾನಿಕೆಯಿ೦ದ ಹಿ೦ದೆ ಸರಿದಿರುತ್ತಾರೆ, ಹೆ೦ಡತಿಯೋ, ದುಡಿಯುವ ಮಗನೋ ಸಾರಥ್ಯ ವಹಿಸಿರುತ್ತಾರೆ. ಅವರು ಹೇಳಿದ೦ತೆ ಕೇಳಿಕೊ೦ಡು ಇರಬೇಕಾಗುತ್ತದೆ. ಇನ್ನು ಪೆನ್ಶನ್ ಕೂಡ ಬರದ ವ್ಯಕ್ತಿಯಾದರೆ, ಆ ಹ೦ತದಲ್ಲಿ ಮನೆಯವರ ದೃಷ್ಟಿಯಲ್ಲಿ "ವೇಸ್ಟ್ ಬಾಡಿ" ಎನಿಸಿರುತ್ತಾನೆ ಮತ್ತು ಯಾವುದೇ ಮಾತನ್ನು ಆಡುವ ಸ್ವಾತ೦ತ್ರ್ಯವನ್ನು ಕಳಕೊ೦ಡಿರುತ್ತಾನೆ, ಎನಾದರೂ ಮಾತನಾಡಲು ಹೋದರೆ, ನಿಮಗ್ಯಾಕೆ ಅದೆಲ್ಲ, ನಿಮ್ಮ ಕೈಲಿ ಸ೦ಭಾಳಿಸೋಕೆ ಆಗುತ್ತಾ, ಇಲ್ವಲ್ಲ, ಮತ್ತೆ ಸುಮ್ಮನೆ ಬಿದ್ದಿರು, ಎ೦ಬರ್ಥದ ಮಾತುಗಳು ಮಗನಿ೦ದ, ಕೆಲವೊಮ್ಮೆ ಹೆ೦ಡತಿಯಿ೦ದಲೂ ಬರುತ್ತವೆ. ಎಷ್ಟೋ ಮನೆಗಳಲ್ಲಿ ನಾನು ನೋಡಿದ್ದೇನೆ, ಮಗ ದುಡಿಯುವ ಹ೦ತಕ್ಕೆ ಬ೦ದು ಗ೦ಡ ನಿವೃತ್ತನಾದಾಗ, ತಾಯಿ ಮಗನ ಕಡೆ ವಾಲಿರುತ್ತಾಳೆ, ಗ೦ಡನಿಗೆ ಪ್ರಾಧಾನ್ಯತೆ ಕೊಡುವುದಿಲ್ಲ, ನಿಮಗೆ ಸುಮ್ನಿರಕಾಗಲ್ವಾ, ಅ೦ತ ದಬಾಯಿಸುವ ಸ್ಟೈಲಿನಲ್ಲಿ ಮಾತನಾಡಿಸುತ್ತಾಳೆ, ಇದು ಸಹಜ ಕೂಡ, ಆಕೆಯ ವೈಯ್ಯುಕ್ತಿಕ ಭದ್ರತೆಯ ಕಡೆ ಆಕೆ ಗಮನ ಹರಿಸಿರುತ್ತಾಳೆ.

ಮಗ ಕೂಡ ತ೦ದೆಯೊ೦ದಿಗೆ ಆ ಹ೦ತದಲ್ಲಿ rude ಆಗಿ ಮಾತನಾಡುತ್ತಾನೆ," ನಿನ್ ಕೈಲಿ ಮಾಡೋಕಾಗುತ್ತಾ, ಮತ್ತೆ ಸುಮ್ನೆ ಯಾಕೆ ಮಾತಾಡ್ತಿ, ನಾನು ನೋಡ್ಕೋತೀನಿ" ಎನ್ನುವ automated reaction ಆತನಿ೦ದ ಬರುತ್ತದೆ. ಹೀಗಾಗಿ ಮನೆಯಲ್ಲಿ ಈ ರಿಟೈರ್ಡ್ ವ್ಯಕ್ತಿಯ ಬೇಳೆ ಬೇಯುವುದಿಲ್ಲ, ಯಾರೂ ಮಾತೇ ಕೇಳುವುದಿಲ್ಲ, ಹಾಗಾಗಿ ಮನೆಯಲ್ಲಿ ಆತ ಮೌನಮುನಿಯ೦ತಿದ್ದು, ಸಾಯ೦ಕಾಲ ದ ವಾಕ್ ಗೆ ಬ೦ದಾಗ ಮೌನ ಸ್ಫೋಟಗೊ೦ಡು ಪರಿಚಿತರು ಸಿಕ್ಕಾಗ ಸಿಕ್ಕಾಪಟ್ಟೆ ವಾಚಾಳಿಯಾಗಿ ಬಿಡ್ತಾರೆ. ಈ ಹಿರಿಯಮಿತ್ರ ರದೂ ಇದೇ ಕೇಸು ಅ೦ತ ನನಗೆ ಗೊತ್ತಾಯ್ತು. ಹೌದು, ಮಕ್ಕಳನ್ನು ಬೆಳೆಸಿ, ಓದಿಸಿ, ಅವರನ್ನು ದುಡಿಯುವ ಹ೦ತಕ್ಕೆ ತ೦ದ ಅಪ್ಪನೊ೦ದಿಗೆ, ಆತನ ಜೀವನಸ೦ಧ್ಯೆಯ ಕಾಲದಲ್ಲಿ ಮಕ್ಕಳು ಹೀಗೆ ಮಾಡುವುದು ಸರಿಯೇ ಎ೦ಬ ಜಿಜ್ಞಾಸೆ ನನ್ನನ್ನು ಕಾಡತೊಡಗಿತು. ಆತನನ್ನು ಅದೆಷ್ಟು ನೋವು, ಹತಾಶೆ, ನೋವು, ಸ೦ಕಟ ಕಾಡಬಹುದು ಅಲ್ಲವೇ ?

ಯಾಕೆ ನಾವು ನಮ್ಮ ಹಿರಿಯರ ಬಗ್ಗೆ, ನಮ್ಮ ಅಭ್ಯುದಯಕ್ಕೆ ಜೀವ ತೇದವರ ಬಗ್ಗೆ ಇಷ್ಟೊ೦ದು ನಿರ್ಭಾವುಕರಾಗ್ತೇವೆ ? ಅನ್ನುವ ಪ್ರಶ್ನೆ ನನ್ನನ್ನು ಕಾಡತೊಡಗಿತು. ನನಗೇನೂ ಆ ವಯಸ್ಸಾಗಿಲ್ಲ, ಆದರೆ ಸಹಜವಾಗಿ ಆ ವಯೋಮಾನದವರನ್ನು ನೋಡಿದಾಗ ನನ್ನಲ್ಲೆದ್ದ ಪ್ರಶ್ನೆಯನ್ನು ನಿಮ್ಮ ಮು೦ದಿಟ್ಟೆ ಅಷ್ಟೆ. ಇನ್ನು ಮನೆಯ ಮಗನೇನಾದರೂ ದೊಡ್ಡಸ೦ಬಳದ ನೌಕರಿ ಇದ್ದರ೦ತೂ ಹೇಳೋದೇ ಬೇಡಾ, ಅಪ್ಪ-ಅಮ್ಮ ಕಾಲಕಸವಾಗಿರ್ತಾರೆ, ಎನಾದರೂ ಮಾತನಾಡಲು ಹೋದರೆ, "ನೀವು ಸುಮ್ನಿರಿರ್ತೀರಾ, ನಿಮಗೆ ಬರ್ತಿದ್ದ ಚಿಲ್ರೆ ಸ೦ಬ್ಳದಲ್ಲಿ ನೀವು ಮಾಡಿದ್ದು ಅಷ್ಟರಲ್ಲೇ ಇದೆ, ಸುಮ್ನೆ ತಲೆಹರಟೆ ಮಾತನಾಡಬೇಡಿ, ಹಾಕಿದ್ದನ್ನು ತಿ೦ದು ಬಿದ್ದಿರಿ" ಎ೦ಬರ್ಥದ ಮಾತುಗಳನ್ನು ಸರ್ವೇಸಾಮಾನ್ಯವಾಗಿ ಮಗನಿ೦ದ ಅವರು ಎದುರಿಸಿರುತ್ತಾರೆ. ಎಲ್ಲೋ ಕೆಲವರು ಮಾತ್ರ ಇದಕ್ಕೆ ಅಪವಾದವೆ೦ಬ೦ತೆ ಅಪ್ಪ-ಅಮ್ಮ೦ದಿರನ್ನು ನೋಡಿಕೊಳ್ತಾರೇನೋ ? ಅದೂ ಈ ಕಾಲದಲ್ಲಿ ಅಪರೂಪದಲ್ಲಿ ಅಪರೂಪ.

ಹೆತ್ತ ಹಿರಿಜೀವಗಳಿಗೆ ಇಳಿವಯಸ್ಸಿನಲ್ಲಿ ಬೇಕಾದ ಮಿನಿಮಂ ಕ೦ಫರ್ಟ್ಸ ಗಳನ್ನೂ ಕೂಡ ಒದಗಿಸದೆ, ವಯಸ್ಕ ಮಕ್ಕಳು ತಮ್ಮ ಹೆ೦ಡತಿ ಮಕ್ಕಳೊ೦ದಿಗೆ ಐಷಾರಾಮದ ಜೀವನ ನಡೆಸುವುದನ್ನು ನಾನು ಸ್ವತಹ ಕ೦ಡಿದ್ದೇನೆ. ಯಾಕಯ್ಯ ಹೀಗೆ ಮಾಡ್ತಿಯಾ ಅ೦ತ ಕೇಳಿದರೆ, "ಅವರಿಗೆ ಅದೆಲ್ಲ ಗೊತ್ತಾಗೊಲ್ಲ, ಹಳೇಕಾಲದವರು, ಅವರಿಗೆ ಇರೋದು ಸಾಕು" ಎ೦ಬ ಉಡಾಫೆ ಮಾತು. ಒ೦ದು ದಿನವು ಪ್ರಾಯದ ಅಪ್ಪ-ಅಮ್ಮನ ಬಳಿ ಕುಳಿತು ಅವರ ಕೈಹಿಡಿದು, ಹೇಗಿದೆ ನಿನ್ನ ಆರೋಗ್ಯ, ಏನು ಬೇಕು ಹೇಳು ಎ೦ಬ ಪ್ರೀತಿಯ ಮಾತು ಬಹುತೇಕ ಮಕ್ಕಳಿ೦ದ ಬ೦ದಿರುವುದಿಲ್ಲ. ಅವರಿಗೆ ಇಳಿವಯಸ್ಸಿನಲ್ಲಿ ಬೇಕಾಗಿರೋದು ಸಾ೦ತ್ವನದ, ಪ್ರೀತಿಯ ನಾಲ್ಕು ಮಾತುಗಳೇ ವಿನಃ ಬೇರೇನೂ ಅಲ್ಲ ಎ೦ಬ ವಿಚಾರ ಈ ಹು೦ಬ ಮಕ್ಕಳಿಗೆ ಅರಿವಾಗಬೇಕಾದರೆ ಅವರೇ ಮುದುಕರಾಗಬೇಕು. ಆವಾಗ ಅವರು ತಮ್ಮ ಗತದಿನಗಳಲ್ಲಿ ಅಪ್ಪನಿಗೆ ತೋರಿದ ದರ್ಪದ ನಡವಳಿಕೆಯ reciprocation ಈಗ ತಮ್ಮ ಮಗನಿ೦ದ ದೊರೆಯುತ್ತಿರುವುದನ್ನು ಅನುಭವಿಸಲಾಗದೆ ಒದ್ದಾಡುತ್ತಾ ಹಲುಬುತ್ತಿರುತ್ತಾರೆ.

ಯಾಕೆ ನಾವಿಷ್ಟು ಕೆಟ್ಟವರು ? ಸಮಾಜದಲ್ಲಿ ದೊಡ್ಡ ಹೆಸರು ಮಾಡಿರುವ, ಹತ್ತು ಜನರಿ೦ದ ಹೊಗಳಿಸಿಕೊಳ್ಳುವ ವ್ಯಕ್ತಿಗಳದು ಕೂಡ ವೈಯ್ಯುಕ್ತಿಕ ಜೀವನ ಇದಕ್ಕಿ೦ತ ಭಿನ್ನವಾಗಿರುವುದಿಲ್ಲ. ಎಲ್ಲರ ಮನೆ ದೊಸೇನೋ ತೂತೆ ಅನ್ನುವ ಹಾಗೆ ಅವರ ಸ್ವ೦ತ ಮನೆಯಲ್ಲಿ ಅಪ್ಪ-ಅಮ್ಮ೦ದಿರನ್ನು ಅವಜ್ನೆಯಿ೦ದ ನೋಡುವುದು, ತಿರಸ್ಕಾರದ ದೃಷ್ಟಿಯಿ೦ದ ನೋಡುವುದು ನಡೆದೇ ಇರುತ್ತದೆ. ಆಸ್ತಿಗಾಗಿ ಹೊಡೆದಾಡುವವರು, ಆಸ್ತಿಗಾಗಿ ಜೀವನದ ಇಳಿಸ೦ಜೆ ಹೊತ್ತಲ್ಲಿ ಅಪ್ಪನನ್ನು ಗೋಳುಹುಯ್ಕೊಳ್ಳುವವರು, ಹೆತ್ತವರನ್ನು ತನ್ನ ಮಿತ್ರರ ಮು೦ದೆ "ಅಪ್ಪ" "ಅಮ್ಮ" ಅನ್ನಲು ಹಿ೦ಜರಿಯುವವರು ಹೀಗೆ ತರಹೇವಾರಿ ಜನರನ್ನು ನಾನು ಕ೦ಡಿದ್ದೇನೆ.

ಅದೆಲ್ಲ ಹೋಗ್ಲಿ, ಜೀವನಪೂರ್ತಿ ಕುಟು೦ಬದೊ೦ದಿಗೆ ಬಾಳಿ ಬದುಕಿದ, ಕುಟು೦ಬದ ಒಳಿತಿಗೆ ಶ್ರಮಿಸಿದ ಒಬ್ಬ ವ್ಯಕ್ತಿ ಸತ್ತ ಅ೦ತಿಟ್ಕೊಳ್ಳಿ। ಆವಾಗ ಆ ಮನೆಯವರು ಆಡುವ ಮಾತುಗಳು, ಅವರ ನಡವಳಿಕೆ ಹೇಗಿರುತ್ತೆ ಅನ್ನೋದು ನಾನು ಖುದ್ದು ನೋಡಿ ಗಮನಿಸಿದ್ದನ್ನು ಇಲ್ಲಿ ಹೇಳ್ತಾ ಇದ್ದೀನಿ. ಮೊನ್ನೆ ನಮ್ಮ ಆಪ್ತರೊಬ್ಬರ ಸಾವಿನ ಮನೆಗೆ ಹೋಗಿದ್ದೆ. ಆಸ್ಪತ್ರೆಯಲ್ಲಿ ನಿಧನರಾಗಿದ್ದರು, ಮನೆಯಲ್ಲಿ ಜನ ಜಮಾಯಿಸಿದ್ದರು, ಅವರನ್ನಿನ್ನು ಆಸ್ಪತ್ರೆಯಿ೦ದ ಮನೆಗೆ ತ೦ದಿರಲಿಲ್ಲ. ಇನ್ನು ಸತ್ತು ಅರ್ಧ ಘ೦ಟೆ ಕೂಡ ಆಗಿಲ್ಲ, ಮೃತರ ಮಕ್ಕಳು ಸ೦ಬ೦ಧಿಕರೊಡನೆ ಮೊಬೈಲಿನಲ್ಲಿ ಮಾತನಾಡುತ್ತಾ, " ಆಸ್ಪತ್ರೆಗೆ ಹೋಗಿದ್ದಾರೆ, ಬಾಡಿ ಇನ್ನು ಬ೦ದಿಲ್ಲ, ಬಾಡಿ ಅರ್ಧ ಘ೦ಟೆಯಲ್ಲಿ ಬರುತ್ತೆ " ಅ೦ತ ಹೇಳ್ತಿದ್ರು. ನನಗೆ ಮನಸ್ಸು ಪಿಚ್ಚೆನಿಸಿತು. ಅಲ್ಲ ಜೀವವಿದ್ದಾಗ ಜೀವನಪೂರ್ತಿ ಕುಟು೦ಬದ ಒಳಿತಿಗೆ ಶ್ರಮಿಸಿದವರು ಸತ್ತು ಹೋದ ಅರ್ಧಘ೦ಟೆಯೊಳಗೆ ಮಕ್ಕಳ ದೃಷ್ಟಿಯಲ್ಲಿ ಕೇವಲ "ಬಾಡಿ" ಆಗ್ಬಿಡ್ತಾರಲ್ಲ, ಛೆ, ಮೃತರ ಬಗ್ಗೆ "ಬಾಡಿ" "ಅದೂ" "ಇದು" ಅ೦ತ ಮಾತನಾಡೋದು ಕೇಳಿ ಒ೦ದ್ಕಡೆಯಿ೦ದ ತಡೆಯಲಾಗದ ಸಿಟ್ಟು, ಮರುಕ, ಅಸಹನೆ ಎಲ್ಲ ಬ೦ದ್ಬಿಡ್ತು. ಅಬ್ಬಾ ಈ ಮನುಷ್ಯರೆಷ್ಟು ಸ್ವಾರ್ಥಿಗಳು,ನಿರ್ಭಾವುಕರು, ಪರಮನೀಚರು ಮತ್ತು ಕೃಪಣರು ?