ಯಾಕೋ ಸರಿ ಇಲ್ಲ..

ಯಾಕೋ ಸರಿ ಇಲ್ಲ..

ಬರಹ

ಯಾಕೋ ಏನೋ ಬೆಳಿಗ್ಗೆ ಎದ್ದಾಗಿನಿಂದ ಸರಿ ಇಲ್ಲ ....ಏನೋ ಕಳೆದುಕೊಂಡ ಭಾವ. ರಾತ್ರಿ ಮಲಗೋ ಮುನ್ನವೇ ಈ ಸೂಚನೆ ಇತ್ತಾದರೂ ಕೆಲಸದ ಒತ್ತಡದ ಆಯಾಸ ಎಂಬೋ ಕಾರಣ ಕೊಟ್ಟು ಸುಮ್ಮನಾಗಿದ್ದೆ .... ಹಾಗೇ ಕೆಲಸಕ್ಕೆ ಹೊರಡಲು ಸಿದ್ದನಾದೆ ... ಊಟದ ಡಬ್ಬಿಯ ಬ್ಯಾಗನ್ನು ಕೊಡಲು ಹತ್ತಿರ ಬಂದವಳೇ ಹಾಗೇ ದೂರ ಸರಿದು ಹೋದಳು ... ಅಯ್ಯೋ ! ಇಂತಹ ಗತಿ ಯಾರಿಗೂ ಬರದಿರಲಿ ದೇವಾ .... ಜೇಬಿಗೆ ಕೈ ಹಾಕಿ ಕರವಸ್ತ್ರ ತೆಗೆದುಕೊಂಡು ಕಣ್ಣಾಲಿಗಳಲ್ಲಿ ಮೂಡಿದ್ದ ಕಣ್ಣೀರ ಹನಿಗಳನ್ನು ಒರೆಸಿಕೊಂಡು ಹೊರಟೆ.

ಕುರ್ಚಿಯಲ್ಲಿ ಕುಳಿತ ಮೇಲೆ ಬಿಸಿ ಬಿಸಿ ಕಾಫಿ ಕುಡಿದರೆ ಸರಿ ಹೋಗಬಹುದು ಎನ್ನಿಸಿ ಒಂದು ಲೋಟ ಕಾಫಿ ತುಂಬಿಸಿಕೊಂಡು ಬಂದೆ ... ಒಂಬತ್ತು ಘಂಟೆಗೆ ಮೀಟಿಂಗ್ ಇತ್ತು ... ಎಲ್ಲರೂ ಕುಳಿತ್ತಿದ್ದರು ... ನಾನೂ ಒಳಗೆ ಹೋಗಿ ಸೀಟು ಅಲಂಕರಿಸಿದೆ ... ಆ ಕಡೆ ಈ ಕಡೆ ಇದ್ದ ಮಂದಿ ನನ್ನಿಂದ ತಮ್ಮ ಕುರ್ಚಿಯನ್ನು ದೂರ ಸರಿಸಿದರು ... ಈ ಸಂಕಟ ಹೇಳಿಕೊಳ್ಳೋಣಾ ಅಂದರೆ ಹೆಂಡತಿ ಮನೆಯಲ್ಲಿ ಇದ್ದಾಳೆ ... ನೆನಪಿಗೆ ಬಂತು, ಬೆಳಿಗ್ಗೆ ಅವಳೇ ನನ್ನ ಕಂಡ ಕೂಡಲೆ ದೂರ ಹೋಗಿದ್ದಳಲ್ಲಾ ಅಂತ ....

ಮೀಟಿಂಗ್ ಆದ ಮೇಲೆ ಪರಿಚಿತ ಸಹೋದ್ಯೋಗಿಗಳು ಸುಮ್ಮನೆ ನನ್ನತ್ತ ಸ್ಮೈಲ್ ಮಾಡಿದರೆ ವಿನಹ ಬಾಯಿ ಬಿಟ್ಟು ಮಾತನಾಡಲಿಲ್ಲ... ಯಾವುದೋ ಮುಖ್ಯ ಕಾಗದಗಳಿಗೆ ಸಹಿ ಕೇಳಲು ಬಂದು ನಮ್ಮ ರೀಟು ಅದೇ ಸೆಕ್ರೆಟರಿ ರೀಟ, ಕೂಡ ದೂರದಲ್ಲೇ ನಿಂತಳು ...

ಬಹಳ ಮುಖ್ಯ ಕೆಲಸ ನನಗೆ ವಹಿಸಲು ಬಂದ ನನ್ನ ಮೇಲಧಿಕಾರಿ ನನ್ನ ಕಂಡ ಕೂಡಲೆ ಇರ್ಲಿ ಬಿಡಿ ನಾನು ಸುಂದರಂ ಹತ್ತಿರ ಈ ಕೆಲಸ ಮಾಡಿಸಿಕೊಳ್ಳುತ್ತೇನೆ ಅಂದು ನನ್ನ ಮಾತಿಗೂ ಕಾಯದೆ ಹೊರಟು ಹೋದರು. ಟೈಮ್ ಚೆನ್ನಾಗಿದ್ದಾಗ ಕೆಲಸ ಇನ್ನೊಬರಿಗೆ ವಹಿಸಿದರೆ ಅನ್ನಿಸುತ್ತಿರಲಿಲ್ಲ... ಆದರೆ ಜಗತ್ತಿನಲ್ಲಿ ಎಲ್ಲೆಡೆ ಜನ ಕೆಲಸವಿಲ್ಲದೆ ಒದ್ದಾಡುತ್ತಿರುವಾಗ ನಾನು ಮಾಡಬಹುದಾದ ಕೆಲಸವನ್ನು ಇನ್ನೊಬ್ಬರಿಗೆ ವಹಿಸಿದರೆ ಕಷ್ಟ ಅಲ್ಲವೇ?

ಲಂಚ್ ಟೈಮ್’ನಲ್ಲಿ ನಾಲ್ಕೈದು ಜನ ಒಟ್ಟಾಗಿ ಹರಟೆ ಹೊಡೆದುಕೊಂಡು ಊಟ ಮಾಡುವುದು ರೂಢಿ.... ಪಕ್ಕದ ಸೀಟಿನವನೂ ’ಹೋಗೋಣ್ವಾ’ ಎಂದು ಕೇಳದೆ ಹಾಗೇ ಹೋದಾಗಲೇ ತಿಳಿಯಿತು, ಇವತ್ತು ಯಾರಿಗೂ ನನ್ನಿರುವು ಬೇಕಿರಲಿಲ್ಲ ...

ದಿನವೂ ಸಂಜೆ ಹೊರಡುವ ಸಮಯದಿ ಟಾಟಾ ಹೇಳುವ ರೀಟಾ ಕೂಡ ಸುಮ್ಮನೆ ’ಟೇಕ್ ಕೇರ್’ ಎಂದು ಹೊರಟು ಹೋಗುವುದೇ?

ನೆನ್ನೆಯವರೆಗೆ ಎಲ್ಲರಿಗೂ ಬೇಕಾಗಿದ್ದ ನಾನು, ಇಂದು ಹೀಗೆ ಕೇವಲವಾದೆನೇ ? ಸಕ್ಕರೆ ಇದ್ದ ಕಡೆ ಇರುವೆ ಅಷ್ಟೆ...

ನನ್ನ ಮಾತು, ನನ್ನ ಸನಿಹ ಯಾರಿಗೂ ಬೇಕಿರಲಿಲ್ಲ ...

ಸಿನಿಮಾ ಶೈಲಿಯಲ್ಲಿ ಹೇಳುವಂತೆ ಹೇಳಿಕೊಂಡೆ ’ಪರಮಾತ್ಮಾ, ಈವರೆಗೆ ನಿನ್ನಲ್ಲಿ ನಾನೇನೂ ಬೇಡಲಿಲ್ಲ... ಇಂದು ನಿನ್ನ ಮುಂದೆ ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ .... ನಿನ್ನ ಕೃಪೆಯಿಂದ ಈ ನನ್ನ ನೆಗಡಿ ಬೇಗ ವಾಸಿಯಾಗಲಿ’