ಯಾತ್ರೆ

ಯಾತ್ರೆ

ಬರಹ

ಅಂದು ಭಾನುವಾರ. ಬೆಳಗ್ಗೆ 11 ಗಂಟೆಗೆ ಬರಬೇಕಾದ ಬಸ್ಸು 11.15 ಆದರೂ ಬರಲೇ ಇಲ್ಲ. ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಬಸ್ ಸ್ಟಾಪಿಗೆ ಬರಬೇಕಾದರೆ ಸುಮತಿಗೆ ಸಾಕು ಸಾಕಾಗಿತ್ತು. ಈ ದರಿದ್ರ ಬಸ್ ಬೇಕಾದಾಗ ಬರುವುದೇ ಇಲ್ಲ. ಬಂದರೆ ಇವು ಒಂದರ ಹಿಂದೆ ಒಂದರಂತೆ ಬರುತ್ತಾ ಇರುತ್ತವೆ ಎಂದು ಆಗಾಗ ತನ್ನ ವಾಚ್ ನೋಡಿಕೊಳ್ಳುತ್ತ ಬಸ್ ಬರುವ ದಾರಿಯನ್ನೇ ನೋಡುತ್ತಾ ತನ್ನ ಮಗಳಲ್ಲಿ ಹೇಳುತ್ತಾ ಇದ್ದಳು ಅವಳು. ಅಬ್ಬಾ ಅಂತೂ ಇಂತು 11.30ಕ್ಕೆ ಬಸ್ ಬಂತು. ನೋಡಿದರೆ ಬಸ್್ನಲ್ಲಿ ಜನ ಅಷ್ಟೇನು ಇರಲಿಲ್ಲ. ಬೇಗನೆ ಬಸ್ ಹತ್ತಿದಾಗ ಒಂದು ಸೀಟು ಖಾಲಿ ಇದ್ದುದರಿಂದ ವಿಂಡೋ ಬಳಿ ಮಗಳನ್ನು ಕುಳ್ಳಿರಿಸಿ ತಾನೂ ಕುಳಿತುಕೊಂಡಳು. 11.30ಕ್ಕೆ ನಾನಲ್ಲಿ ತಲುಪಬೇಕಿತ್ತು ಆದ್ರೆ ಅಷ್ಟು ಗಂಟೆಗೆ ನಾನು ಮನೆಯಿಂದ ಹೊರಟಿದ್ದೇನೆ. ಛೇ..ಹೀಗೂ ಒಂದು ಕಷ್ಟಕಾಲ.. ಈ ಬಸ್ ಯಾಕೆ ಹೀಗೆ ನಿಧಾನ ಹೋಗ್ತಾ ಇದೆ?. ಹೇಗೋ ಲೇಟ್ ಆಗಿದೆ ಸ್ಪಲ್ಪ ಫಾಸ್ಟ್ ಹೋಗಬಾರದೇನೋ? ಎಂದು ಅವಳು ಮನಸ್ಸಲ್ಲೇ ಅಂದುಕೊಳ್ಳುತ್ತಿದ್ದಳು. ಅವಸರದಿಂದ ಮನೆಯಿಂದ ಹೊರಟ ಕಾರಣ ಕೈ ಉಗುರಿಗೆ ಹಚ್ಚಿದ ನೈಲ್ ಪಾಲಿಶ್ ಉಗುರಿನ ಹೊರಗೆಯೂ ಅಂಟಿಕೊಂಡಿತ್ತು. ಬೆವರಿದ ಕಾರಣ ಹಚ್ಚಿದ್ದ ಫೇರ್ ಆ್ಯಂಡ್ ಲವ್ಲಿ ಬೆವರಿನ ಸಾಲಿನೊಂದಿಗೆ ಕೆನ್ನೆಯಲ್ಲಿ ಇಳಿಯುತ್ತಿತ್ತು.

ಬಸ್್ನಲ್ಲಿ ಕುಳಿತಿದ್ದರೂ ಸುಮತಿಯ ಮನಸ್ಸು ಬೇರೆಲ್ಲೋ ವಿಹರಿಸುತ್ತಿತ್ತು. ಆದರೆ ಅವಳ ಮಗಳು ವಿದ್ಯಾ ತನ್ನ ಎದುರು ಸೀಟಿನಲ್ಲಿ ಕುಳಿತಿರುವ ಯುವಕನನ್ನು ನೋಡಿ ಒಂದೇ ಸಮನೆ ಮುಗುಳ್ನಗುತ್ತಿದ್ದಳು. ಅವನೂ ಅಷ್ಟೇ..ಆಗಾಗ ಅವಳನ್ನು ನೋಡುತ್ತಿದ್ದ. ಕೆಲವೊಮ್ಮೆ ಕಣ್ಣು ಚಿಮ್ಮಿಸುವ ಮೂಲಕ ಏನೋನೋ ಸನ್ನೆ ಮಾಡ್ತಾ ಇದ್ದ. ಹತ್ತಿರ ಬಾ... ಎಂದು ಕೈಯಲ್ಲೇ ಸನ್ನೆ ಮಾಡಿ ಕರೆದ. ಅವಳು ನಾಚಿದಳು.

ಇಲ್ಲ ಬರಲ್ಲಾ...ಎಂದು ತಲೆಯಾಡಿಸಿ ಸನ್ನೆ ಮಾಡಿದಳು.

ಅವ ಮತ್ತೂ ಮತ್ತೂ ಕರೆಯುತ್ತಲೇ ಇದ್ದ. ಒಮ್ಮೆ ಅಮ್ಮನತ್ತ ನೋಡಿದಳು. ಬೆಳಗ್ಗೆ ಅವಸರವಸರವಾಗಿ ಬಂದ ಕಾರಣವೇನೋ ವಿದ್ಯಾಳ ಅಮ್ಮನಿಗೆ ನಿದ್ದೆ ಬಂದಿತ್ತು. ಅಮ್ಮ ನಿದ್ದೆ ಮಾಡುತ್ತಾ ಇದ್ದಾರೆ ತಾನು ಏನು ಮಾಡಿದರೂ ತಿಳಿಯಲ್ಲ ಎಂಬ ಭಾವನೆ ಅವಳಲ್ಲಿ ಗಟ್ಟಿಯಾಗಿತ್ತು. ಅಂದ ಹಾಗೆ ಅವಳ ವಯಸ್ಸು ಅದಾಗಿತ್ತು. ಒಮ್ಮೆ ಮೆಲ್ಲನೆ ಅಮ್ಮನತ್ತ ನೋಡಿದಳು. ಆದ್ರೂ ಇನ್ನೇನೋ ಅಮ್ಮ ನಿದ್ದೆಯಿಂದ ಎಚ್ಚರವಾದರೆ ನನ್ನನ್ನು ಬೈತಾರೆ ಎಂಬ ಹೆದರಿಕೆಯೂ ಅವಳಲ್ಲಿತ್ತು.

ಬಸ್ ದೂರ ಸಾಗುತ್ತಿದ್ದಂತೆ ವಿದ್ಯಾ ಕಿಟಿಕಿಯ ಹೊರಗೆ ಇಣುಕಿ ಪ್ರಕೃತಿಯ ಆಸ್ವಾದನೆ ಮಾಡುತ್ತಿದ್ದಳು. ಅದು ಸಾಕೆನಿಸಿದಾಗ ಮುಂದೆ ನೋಡಿದರೆ ಅದೇ ಯುವಕ ಮತ್ತೂ ಮತ್ತೂ ನಗಿಸುತ್ತಿದ್ದಾನೆ. ಕೆಲವೊಮ್ಮೆ ಬೆರಳಲ್ಲಿ ಏನೋ ಸನ್ನೆ ತೋರಿಸಿದರೆ ಮತ್ತೊಮ್ಮೆ ಕಥಕ್ಕಳಿಯ ಭಾವದಂತೆ ಹುಬ್ಬುಗಳನ್ನು ಮೇಲಕ್ಕೇರಿಸಿ ಸನ್ನೆ ಮಾಡುತ್ತಿದ್ದ.

ವಿದ್ಯಾನೂ ಅಷ್ಟೇ..ಕೆಲವೇ ನಿಮಿಷದಲ್ಲಿ ಆತ ಪರಿಚಿತನಾದರೂ ಅವನನ್ನು ಬಹಳವಾಗಿ ಮೆಚ್ಚಿಕೊಂಡಳು. ಅಮ್ಮ ಹತ್ತಿರದಲ್ಲಿ ಇಲ್ಲದಿರುತ್ತಿದ್ದರೆ...ಎಂಬ ಭಾವನೆ ಅವಳದ್ದಾಗಿತ್ತೋ ಎನೋ...

ಅಂತೂ ಆ ಯುವಕ ಇಳಿಯಬೇಕಾದ ಸ್ಟಾಪ್ ಹತ್ತಿರ ಬಂತೋ ಏನೋ ಅವ ಎದ್ದು ನಿಂತು ಕೊಂಡ. ವಿದ್ಯಾ ಗಾಬರಿಯಿಂದ ಆತನತ್ತ ನೋಡುತ್ತಿದ್ದಳು.

ಅರೇ... ಅವ ಅವಳು ಕುಳಿತು ಕೊಂಡಿರುವ ಸೀಟಿನ ಬಳಿ ಬರುತ್ತಿದ್ದಾನೆ. ಬಂದವನೇ ಅವಳ ಗಲ್ಲ ಮುಟ್ಟಿದ. ಅವಳು ನಾಚಿ ನಕ್ಕಳು. ಮತ್ತೆ ಅವಳ ಕೆನ್ನೆಯನ್ನು ಸವರಿದ...ಅವಳು ನಗುತ್ತಾ ಇದ್ದಳು..ಅವನೂ...

ತಾನು ಇಳಿಯುತ್ತಿದ್ದೇನೆ...ಬರಲಾ ಎಂದು ಅವಳ ಕೆನ್ನೆಯನ್ನೊಮ್ಮೆ ಸವರಿ ಕೈಗೆ ಮುತ್ತಿಕ್ಕುವಷ್ಟರಲ್ಲಿ ಸುಮತಿ ಎಚ್ಚರವಾದಳು.

ವಿದ್ಯಾ ಭಯದಿಂದ ಪಿಳಿ ಪಿಳಿ ನೋಡುತ್ತಿದ್ದಳು. ಸುಮತಿ ಕುಳಿತಿರುವ ಸೀಟಿನ ಮುಂದೆ ಯುವಕನೊಬ್ಬ ನಿಂತಿದ್ದಾನೆ. ಏನು ವಿಚಾರ? ಎಂಬಂತೆ ಅವನ ಮುಖವನ್ನೊಮ್ಮೆ , ಮತ್ತೆ ಪಕ್ಕದಲ್ಲಿರುವ ಮಗಳು ವಿದ್ಯಾಳ ಮುಖವನ್ನೊಮ್ಮೆ ನೋಡಿದಳು.

ಸುಮತಿಯತ್ತ ನೋಡಿದ ಯುವಕ "ತುಂಬಾ ಮುದ್ದಾದ ಮಗು. ತುಂಬಾ ಚೂಟಿ.. ಇವಳ ಹೆಸರೇನಮ್ಮಾ.." ಎಂದು ಕೇಳಿದ

ಮಗಳ ಮುಖ ನೋಡಿ ನಕ್ಕ ಸುಮತಿ 'ವಿದ್ಯಾ' ಎಂದಳು.

ವಿದ್ಯಾ ಅವನನ್ನೇ ನೋಡುತ್ತಾ ಇದ್ದಳು.

"ಬರಲಾ ಪುಟ್ಟೀ..."ಎಂದು ಟಾಟಾ ಮಾಡುತ್ತಾ ಆ ಯುವಕ ಬಸ್ಸಿನಿಂದ ಇಳಿದು ಹೋದ.