ಯಾರವಳು

ಯಾರವಳು

ಯಾರವಳು
ನಗುತ್ತ ಮತ್ತೆ ಮುಖ ನೋಡಿದಳು ಆ ಹುಡುಗಿ. ಮಧುರ ದ್ವನಿ. ಇನ್ನೂ ಚಿಕ್ಕ ಪ್ರಾಯ. ಸ್ವಲ್ಪ ಕೋಲು ಮುಖ, ಮುಖಕ್ಕೆ ಒಪ್ಪುತ್ತದೆ ಅನ್ನುವ ದುಂಡು ಗಾಜಿನ ಕನ್ನಡಕ. ಹಣೆಯಲ್ಲಿನ ಉದ್ದ ಬೊಟ್ಟು, ಮುಖದ ತುಂಬಾ ಹರಡಿದ ಆತ್ಮೀಯ ನಗು. ಗಂಭೀರ ಎನ್ನುವ ಮಾತುಗಾರಿಕೆ. ಅವಳ ಜೊತೆ ಕುಳಿತು ಮಾತನಾಡುತ್ತಿರುವಂತೆ ಎಚ್ಚರವಾಯಿತು ರಾಯರಿಗೆ. 
ಹಾಸಿಗೆ ಮೇಲೆ ಎದ್ದು ಕುಳಿತರು. ಯಾರಿವಳು, ತುಂಬಾ ಹಿಂದೆ ಮಾತನಾಡಿರುವ ನೆನಪಿದೆ ಅವಳ ಹೆಸರು ನೆನಪಿಗೆ ಬರುತ್ತಿಲ್ಲವೆ. ಅಮ್ಮ ಇದ್ದಾಗ ಒಂದು ಸಾರಿ ಯಾರದೋ ಜೊತೆ ಮನೆಗೆ ಬಂದು ಹೋಗಿದ್ದಳು ಅನ್ನಿಸುತ್ತೆ, ಒಂದು ಅಥವ ಎರಡು ದಿನ ನಮ್ಮ ಮನೆಯಲ್ಲಿದ್ದಳೇನೊ. ಇಂದು ಇದ್ದಕ್ಕಿದಂತೆ ಬೆಳಗ್ಗೆ ಬೆಳಗ್ಗೆ ಕನಸಿನಲ್ಲೇಕೆ ಬಂದಳು. ಅಷ್ಟಕ್ಕೂ ಯಾರಿವಳು, ಅವಳನ್ನು ಬೇಟಿ ಮಾಡಿ ಐವತ್ತು ವರುಷಗಳೆ ಕಳೆದಿರಬೇಕೊನೊ ಅನ್ನಿಸಿತು, ನೆನಪು ಅತ್ಯಂತ ಅಸ್ವಷ್ಟ.
ರಾಯರಿಗೆ ಈಗ ಎಪ್ಪತೈದರ ವಯಸ್ಸು. ಪತ್ನಿ ತೀರಿ ಹೋಗಿ ಸುಮಾರು ಹತ್ತು ವರ್ಷಗಳೆ ಕಳೆದವೇನೊ. ಮಗ ಸೊಸೆಯ ಜೊತೆಗೆ ಇದ್ದಾರೆ. ಸೊಸೆಯೂ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದಾಳೆ. ಆದರೂ ಕೆಲವೊಮ್ಮೆ ಅವರನ್ನು ಒಂಟಿತನ ಅತಿಯಾಗಿ ಕಾಡುತ್ತದೆ. ಪತ್ನಿಯ ಜೊತೆ ಮಾತನಾಡುತ್ತಿದ್ದ ಸಲುಗೆ , ಆತ್ಮೀಯತೆ ಈಗ ಸೊಸೆಯ ಜೊತೆ ಸಾದ್ಯವಿಲ್ಲ. ಮಗನೂ ಒಳ್ಳೆಯವನೇ ಆದರೆ ಯಾವಾಗಲು ನನ್ನ ಜೊತೆಗೆ ಇರು ಎಂದು ಹೇಳಲು ಸಾದ್ಯವಿಲ್ಲ. ಹೊರಗೆ ಕೆಲವು ಗೆಳೆಯರು ಇರುವರಾದರು, ತೀರ ಮನಸ್ಸು ಬಿಚ್ಚಿ ಹರಟುವಂತಹ ಆತ್ಮೀಯರಿಲ್ಲ. ಅವರನ್ನು ಬಹಳ ಕಾಲದಿಂದಲೂ ಒಂದು ರೀತಿ ಒಂಟಿತನ ಕಾಡುತ್ತಿದೆ ಅವರನ್ನು.
ಅವರು ಎಚ್ಚರವಾಗಿ ಮುಖ ತೊಳೆದುಬಂದದ್ದು ಕಂಡ ಸೊಸೆ ಕಾಫಿ ತಂದುಕೊಟ್ಟಳು. ವರಾಂಡದಲ್ಲಿದ್ದ ಖುರ್ಚಿಯಲ್ಲಿ ಕುಳಿತು, ಕಾಫಿ ಕುಡಿಯುತ್ತ, ಚಿಂತಿಸುತ್ತಿದ್ದರು. ಬೆಳಗಿನ ಕನಸಿನಲ್ಲಿ ಕಂಡ ಆ ಹುಡುಗಿನ ನೆನಪೆ ಬರುತ್ತಿಲ್ಲವಲ್ಲ, ಬಹಳ ಹಿಂದೆ ಅವಳನ್ನು ಕಂಡ ನೆನೆಪಿದೆ. ಆಗ ಅಮ್ಮನ್ನು ಇದ್ದಳು ಅನ್ನಿಸುತ್ತಿದೆ. ಈಗ ಅವಳು ಯಾರು ಎಂದು ಕೇಳಲು ಯಾರು ಇಲ್ಲ. ಅಮ್ಮನನ್ನು ಕೇಳೋಣ ಎಂದರೆ ಅಮ್ಮ ಸತ್ತು ಬಹಳ ಕಾಲವಾಗಿದೆ, ಪತ್ನಿಯೂ ಇಲ್ಲ. ಇನ್ನೂ ಯಾರನ್ನು ಕೇಳಿ ಲಾಭವಿಲ್ಲ. ಇವರ್ಯಾರು ಆ ಹುಡುಗಿಯನ್ನು ನೋಡಿರಲು ಸಾದ್ಯವಿಲ್ಲ. ಈಗ ಎಲ್ಲಿಯಾದರು ಇದ್ದರೆ ಆ ಹುಡುಗಿಗು ಎಪ್ಪತ್ತು ವರ್ಷಗಳಾಗಿರುತ್ತೇನೊ. 
ರಾಯರ ನೆನಪಿನ ಶಕ್ತಿ ತಿಂಗಳಿಂದ ತುಂಬಾನೆ ಕಡಿಮೆಯಾಗಿದೆ. ಹಳೆಯ ಯಾವುದೋ ನೆನಪು ಹತ್ತಿ , ಅದನ್ನು ಕೆದಕಲು , ನೆನಪಿಸಿಕೊಳಲು ಹೊರಟರೆ, ಮನಸಿಗೆ ತುಂಬಾ ಒತ್ತಡ ಉಂಟಾಗುತ್ತದೆ. ಕಷ್ಟ ಅನ್ನಿಸುತ್ತದೆ , ಹಾಗಂತ ಅದನ್ನು ನಡುವಿನಲ್ಲಿ ಬಿಡುವುದು ತುಂಬಾ ಕಷ್ಟ. ಹಾಗಾಗಿ ಕೆಲವೊಮ್ಮೆ ಎರಡು ಮೂರು ದಿನಗಳಾದರು ಕೆಲವು ಯೋಚನೆಗಳನ್ನು ಅವರನ್ನು ಕಾಡಿಸುತ್ತೆ. ಈಗ ಈ ಹುಡುಗಿಯು ಅಷ್ಟೆ, ಬೆಳಗಿನ ಕನಸಿನಲ್ಲಿ ಕಾಣಿಸಿದಳು, ತುಂಬಾ ಹಿಂದೆ ನೋಡಿದವಳು. ಏಕೊ ಅವಳ ಹೆಸರಾಗಲಿ ವಿವರವಾಗಲಿ ನೆನಪಿಗೆ ಬರುತ್ತಿಲ್ಲವಲ್ಲ . 
ಏನಾದರು ಮಾಡಿ ಆ ಯೋಚನೆ ಮರೆಯಬೇಕೆಂದು ಪ್ರಯತ್ನಿಸಿದರು. ಮೊದಲು ಸ್ನಾನ ಮಾಡಿಬಿಡೋಣ ಆಮೇಲೆ ಪೇಪರ್ ಓದೋಣ ಎಂದು ನಿರ್ಧರಿಸಿ, ಹೊರಟರು. ವರಾಂಡ ದಾಟಿ ಒಳಬರುವಾಗಲೆ ಎದುರಿಗೆ ಗೋಡೆಯ ಮೇಲೆ ಪತ್ನಿಯ ಪೋಟೋ ಕಾಣಿಸಿತು. ಕೆಲವೊಮ್ಮೆ ಅವರ ಜೊತೆ ಇವರ ಮೌನ ಸಂಭಾಷಣೆ,
' ನೋಡು ಕುಮುದ, ಅದೇನೊ ಬೆಳಗಿನ ಕನಸಿನಲ್ಲಿ ಒಂದು ಹುಡುಗಿ ಬಂದಿತ್ತು, ತುಂಬಾ ಹಿಂದೆ ನೋಡಿದ್ದೆ, ಆದರೆ ಅವಳು ಯಾರು ಎಂದು ನೆನಪಿಗೆ ಬರುತ್ತಿಲ್ಲ, ನೀನಿದ್ದರೆ ಚೆನ್ನಾಗಿತ್ತು, ಹೇಗೊ ನೆನಪಿಸುತ್ತಿದೆ 'ಎಂದು ವರದಿ ಒಪ್ಪಿಸಿ ಸ್ನಾನಕ್ಕೆ ಹೊರಟರು. ಸೊಸೆಯು ಅವರನ್ನು ಗಮನಿಸಿದಳು, ಅವರ ತಲೆಗೆ ಎಂತದೋ ಯೋಚನೆ ಹತ್ತಿದೆ ಎಂದು ಗೊತ್ತು, ಕೇಳಿದರೆ ಅವರು ಹೇಳುವದಿಲ್ಲ ಎಂದು ಗೊತ್ತು. ಹಾಗಾಗಿ ಸುಮ್ಮನಾದಳು.
ರಾಯರು ಸ್ನಾನಕ್ಕೆ ಹೋದಂತೆ, ರಾಯರ ಪತ್ನಿಯ ಪೋಟೊ ನಗುತ್ತಿತ್ತು, ರಾಯರ ಮರೆವಿಗೆ ಮರುಕ ಪಡುವಂತೆ, ರಾಯರು ಮರೆತ್ತಿದ್ದರು, ಆ ಹುಡುಗಿ ಅವರ ಪತ್ನಿ ಕುಮುದಳೆ. ಅವರಿದ್ದ ಊರಿನಲ್ಲಿ ಪರೀಕ್ಷೆ ಸೆಂಟರ್ ಇರಲಿಲ್ಲ. ಆಗ ದೂರದ ಸಂಬಂಧಿಯಾದ ರಾಯರ ಮನೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಬಂದು ಅವರ ಮನೆಯಲ್ಲಿ ಹತ್ತು ದಿನವಿದ್ದಳು . ರಾಯರು ಆಗ ಡಿಗ್ರಿ ಓದುತ್ತಿದ್ದವರು, ಈಕೆಗೆ ಪರೀಕ್ಷೆ ಬರೆಯಲು ಸಾಕಷ್ಟು ಸಹಾಯ ಮಾಡಿದ್ದರು, ಆದರೆ ಅದೆಲ್ಲ ಈಗ ಅವರಿಗೆ ಮರೆತು ಬೆಳಗಿನ ಕನಸಿನಲ್ಲಿ ಅವಳ ಮುಖ ಮಾತ್ರ ಬಂದು ಅವರ ಹಳೆಯ ನೆನಪನ್ನು ಕೆದಕಿತ್ತು. 
- ಶುಭಂ