ಯಾರಿಗೂ ಅರ್ಥವಾಗದ ಬಾಪೂ ...

ಯಾರಿಗೂ ಅರ್ಥವಾಗದ ಬಾಪೂ ...

ಬರಹ

ಇದನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಸ್ವತಃ ನನಗೆ ಹೇಳಿದ್ದು. ಈ ಘಟನೆ ನಡೆಯುವಾಗ ಶಾಸ್ತ್ರಿಗಳು ಖುದ್ದು ಎದುರಿಗೇ ಇದ್ದರಂತೆ.
ಸ್ವಾತಂತ್ರ್ಯದ ಸಮಯ. ಭಾರತದ ಪ್ರಧಾನಿ ಯಾರಾಗಬೇಕೆಂದು ನಿರ್ಧರಿಸಲು ನಡೆದ ಶಾಸನ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ನೆಹರೂ ಸರ್ದಾರ್ ಪಟೇಲರ ಎದುರಿಗೆ ೧೧-೧ ಮತಗಳ ಅಂತರದಿಂದ ಸೋತಿದ್ದರು. ಸ್ವಯಂ ನೆಹರೂ ಬಿಟ್ಟು ಬೇರೆ ಯಾರೂ ನೆಹರೂರವರಿಗೆ ಮತ ಹಾಕಿರಲಿಲ್ಲ!
ಇದಾದ ಮರುದಿನ ನೆಹರೂ ಗಾಂಧೀಜಿಯ ಬಳಿ ಬಂದು ನಿಮ್ಮ ಪ್ರಭಾವ ಬಳಸಿ ತಮ್ಮನ್ನು ಪ್ರಧಾನಿಯನ್ನಾಗಿ ಮಾಡಬೇಕೆಂದು ಕೇಳಿಕೊಂಡರು. ಅದಕ್ಕೆ ಗಾಂಧೀಜಿ "you are independent now. think independently. take independent decisions. why do you need my help?" ಎಂದರು. ನೆಹರೂಗೆ ನಿರಾಶೆಯಾಯಿತು. ವಾಪಸು ಹೊರಡಲು ಅನುವಾದರು. ಎರಡು ಹೆಜ್ಜೆ ಬಾಗಿಲ ದಿಕ್ಕಿನಲ್ಲಿ ನಡೆದು ಗಾಂಧೀಜಿಯ ತಿರುಗಿ "If I don't become prime minister I will burn this country"ಎಂದರು.

ಗಾಂಧೀಜಿ ಉತ್ತರಿಸದೆ ತಮ್ಮ ಕೆಲಸದಲ್ಲಿ ಮಗ್ನರಾದರು. ಮರುದಿನ ಸರ್ದಾರ್ ಪಟೇಲರು ಗಾಂಧೀಜಿಯವರ ಬಳಿ ಬಂದರು. ಸ್ವಲ್ಪ ಮಾತಾದ ಮೇಲೆ "ನೆಹರೂ ಇಲ್ಲಿಗೆ ಬಂದಿದ್ದರೆ?" ಎಂದು ಕೇಳಿದರು.
ಬಾಪೂ "ಹೌದು" ಎಂದರು.
"ಏನು ಹೇಳಿದರು ನೆಹರೂ?"
ಗಾಂಧೀಜಿ ಎಂದೂ ಸುಳ್ಳು ಹೇಳುವವರಲ್ಲ. ತಮ್ಮಿಬ್ಬರ ನಡುವೆ ನಡೆದ ಸಂಭಾಷಣೆಯನ್ನು ತಿಳಿಸಿ ಕೊನೆಗೆ ಹೋಗುವಾಗ " I will burn this country"ಎಂದು ಹೇಳಿದರು ಎಂಬ ವರದಿ ಒಪ್ಪಿಸಿದರು.
ಪಟೇಲರ ಮುಖ ಗಂಭೀರವಾಯಿತು. ಅವರು ಗಾಂಧೀಜಿಯವರನ್ನು "ಇದಕ್ಕೆ ನೀವು ನನಗೆ ಎನು ಹೇಳುತ್ತೀರಿ ?" ಎಂದು ಕೇಳಿದರು.
ಗಾಂಧೀಜಿಯದ್ದು ಅದೇ ಉತ್ತರ "ಅವರಿಗೆ ಎನು ಹೇಳಿದೆನೋ ನಿಮಗೂ ಅದೇ ಅನ್ವಯಿಸುತ್ತದೆ you are independent now. think independently. take independent decisions" ಎಂದು ತಮ್ಮ ಚರಕದಲ್ಲಿ ಮಗ್ನರಾದರು ಬಾಪೂ.
ಸಲ್ಪ ಹೊತ್ತು ಯೋಚಿಸಿದ ಪಟೇಲರು. "I will not allow this country to burn" ಎಂದು ಹೇಳಿ ಎದ್ದು ಹೋದರು.
ಗಾಂಧೀಜಿಯೇ ನೆಹರೂರನ್ನು ಅಧಿಕಾರ ಪ್ರಯೋಗಿಸಿ ಪ್ರಧಾನಿಯನ್ನಾಗಿ ಮಾಡಿದ್ದು. ದೇಶ ವಿಭಜನೆಗೆ ಕಾರಣವಾಗಿದ್ದು ಎಂದು ಆರೋಪಿಸುವವರಿಗೆ ಮೇಲಿನ ಘಟನೆ ಉತ್ತರವೀಯಬಹುದು.
" ನೆಹರೂ ಪಾಶ್ಚಾತ್ಯ ನಾಗರೀಕತೆಯ ಆರಾಧಕರಾಗಿದ್ದರು. ಇದು ಗೊತ್ತಿದ್ದೂ ಗಾಂಧೀಜಿ ಯಾಕೆ ಅವರನ್ನು ಹತ್ತಿರ ಬಿಟ್ಟುಕೊಂಡರು?" ಎಂದು ನಾನು ಶಾಸ್ತ್ರಿಗಳನ್ನು ಕೇಳಿದೆ.
" ಗಾಂಧೀಜಿ ಯಾರನ್ನೂ ಹತ್ತಿರ ಬಾ ಎಂದು ಕರೆಯಲೂ ಇಲ್ಲ. ದೂರ ಹೋಗು ಎಂದು ನೂಕಲೂ ಇಲ್ಲ. ಅವರು ಎಲ್ಲರಿಗೂ ಮುಕ್ತವಾಗಿದ್ದರು. ನೆಹರೂ ಮಾಡಿದ ತಪ್ಪುಗಳಿಗೆ ಗಾಂಧೀಜಿಯವರನ್ನು ಹೊಣೆ ಮಾಡುವುದು ಸರಿಯಲ್ಲ" ಎಂದು ಉತ್ತರ ಬಂತು ಶಾಸ್ತ್ರಿಗಳಿಂದ.
ಸ್ವತಂತ್ರ್ಯಾನಂತರ ಗಾಂಧೀಜಿ ಆಶ್ರಮಕ್ಕೆ ಬ್ರಿಟಿಷ್ ಪತ್ರಕರ್ತರೊಬ್ಬರು ಭೇಟಿ ನೀಡಿದ್ದರು. ಆಗ ತಾನೆ ಉಪವಾಸದಿಂದ ಚೇತರಿಸಿಕೊಂಡು ಮಂಚದ ಮೇಲೆ ಮಲಗಿದ್ದ ಗಾಂಧೀಜಿಯವರನ್ನು "ಹೇಗಿದ್ದೀರಿ?" ಎಂದು ಕೇಳಿದರು. ಅದಕ್ಕೆ ಗಾಂಧೀಜಿ "ಹೇಗಿದ್ದೀರಿ ಎಂದು ಕೇಳುತ್ತಿದ್ದಿರಲ್ಲಾ? ನನ್ನ ದೇಹವನ್ನು ನೋಡಿ. ಹಿಂದುಸ್ತಾನ ಪಾಕಿಸ್ತಾನ ಎಂದು ಎರಡು ಭಾಗವಾಗಿದೆ. ದೇಹದ ಒಂದು ಭಾಗವನ್ನು ಕಳೆದುಕೊಂಡು ನಾನು ನರಳುತ್ತಿರುವುದು ನಿಮಗೆ ಕಾಣದೇ ? " ಎಂದು ನೋವಿನಿಂದ ಉತ್ತರಿಸಿದರು.
ಇನ್ನೊಂದು ಘಟನೆ. ಇದು ಬ್ರಿಟಿಷ್ ಗೆಜೆಟಿಯರ್ ೧೯೩೧ ರಲ್ಲೂ ಪ್ರಕಟವಾಗಿದೆ. ದುಂಡು ಮೇಜಿನ ಪರಿಷತ್ತಿನಲ್ಲಿ ಪಾಲ್ಗೊಳ್ಳಲು ಗಾಂಧೀಜಿ ಬ್ರಿಟನ್ ಗೆ ಹೋದರು. ಈ ಭೇಟಿಯ ಸಮಯದಲ್ಲಿ ಅನೇಕ ಘಟನೆಗಳು ನಡೆದಿವೆಯಾದರೂ ಮುಖ್ಯವಾಗಿ ಇದನ್ನು ಉಲ್ಲೇಖಿಸುತ್ತಿದ್ದೇನೆ. ಬ್ರಿಟನ್ ನ ರಾಜನ ಆಹ್ವಾನದ ಮೇರೆಗೆ ಅರಮನೆಗೆ ಹೋದರು ಗಾಂಧೀಜಿ. ಆದರದಿಂದ ಸ್ವಾಗತಿಸಿದ ಬ್ರಿಟಿಷ್ ರಾಜ ಮಾತುಕತೆಯ ಸಮಯದಲ್ಲಿ ಗಾಂಧೀಜಿಯನ್ನು ಕೇಳಿದರು "ನಾವು ನಿಮ್ಮ ದೇಶವನ್ನು ಎಷ್ಟು ಅಭಿವೃದ್ಧಿ ಪಡಿಸಿದ್ದೇವೆ. ರಸ್ತೆಗಳು, ರೈಲುಗಳು, ಅಂಚೆ, ವಿದ್ಯುತ್, ಮೋಟಾರು ಬಂಡಿಗಳು ಶಿಕ್ಷಣ ಏನೆಲ್ಲಾ ವ್ಯವಸ್ಥೆ ಸುಖಗಳನ್ನು ನಿಮ್ಮ ಜನರಿಗಾಗಿ ನೀಡಿದ್ದೇವೆ. ಆದರೂ ನಮ್ಮನ್ನು ಹೊರದಬ್ಬಲು ನೀವು ಹೋರಾಡುತ್ತಿರುವುದೇಕೆ?".
ಗಾಂಧೀಜಿ ನಿರ್ಲಿಪ್ತವಾಗಿ ಹೇಳಿದರು " ಈ ಪ್ರಕೃತಿಯಲ್ಲಿ ಎಲ್ಲಾದರೂ ಯಾವುದಾದರೂ ಪ್ರಾಣಿ ಅಥವಾ ಪಕ್ಷಿ ಇನ್ನೊಂದು ಜೀವಿಯ ಮೇಲೆ ದಬ್ಬಾಳಿಕೆ ನಡೆಸಿ ಅದನ್ನು ಬಂಧನದಲ್ಲಿಟ್ಟು ಬದುಕುವುದನ್ನು ನೋಡಿದ್ದೀರಾ ? ಇಲ್ಲ ತಾನೆ? ಸ್ವತಂತ್ರವಾಗಿ ಬದುಕುವುದು ಪ್ರಕೃತಿಯಲ್ಲಿನ ಪ್ರತಿ ಜೀವಿಯ ಹಕ್ಕು. ಹಾಗೆಯೇ ನಾವೂ ಸಹ ಪ್ರಾಕೃತಿಕವಾಗಿ ನಮಗೆ ದೊರಯಬೇಕಾಗಿದ್ದ ಹಕ್ಕನ್ನು ಕೇಳುತ್ತಿದ್ದೇವೆ ಅಷ್ಟೆ! ನಿಮ್ಮ ಲಂಡನ್‍ನ್ನು ಯಾವುದೋ ದೇಶದ ಜನ ಬಂದು ಹಿಡಿದಿಟ್ಟುಕೊಂಡರೆ ನೀವೇನು ಮಾಡುತ್ತೀರಿ? ಸುಮ್ಮನೆ ಸಹಿಸುತ್ತೀರಾ?"
"ಅದನ್ನು ಹೇಗೆ ಸಹಿಸಲಾಗುತ್ತದೆ? ಅವರನ್ನು ಒದ್ದು ಓಡಿಸುತ್ತೇವೆ" ಎಂದು ರಾಜರು.
"ನಿಮಗೆ ಬರಿ ಗುಲಾಮರಾಗುವ ಕಲ್ಪನೆಯೇ ಕೋಪ ತಂದಿತು. ನಾವು ಎಷ್ಟೊಂದು ವರ್ಷಗಳಿಂದ ಗುಲಾಮರಾಗಿದ್ದೇವೆ. ನಾವು ಯಾಕೆ ಸಹಿಸಿಕೊಳ್ಳಬೇಕು?" ಥಟ್ಟನೆ ಉತ್ತರ ಬಂತು ಗಾಂಧೀಜಿಯಿಂದ.
ಗಾಂಧೀಜಿಯವರನ್ನು ಅರ್ಥ ಮಾಡಿಕೊಂಡವರು ಯಾರೂ ಇಲ್ಲ. ಸ್ವತಃ ಅವರ ಅನುಯಾಯಿಗಳೆನಿಸಿಕೊಂಡವರೇ ತಪ್ಪು ದಾರಿ ಹಿಡಿದರು. ಗಾಂಧೀಜಿಯವರನ್ನು ಅವರನ್ನು ದೇಶದ್ರೋಹಿ ಎಂದು ಚಿತ್ರಿಸುವುದನ್ನು ನೋಡಿ ನೋವಾಗುತ್ತದೆ ಎಂದು ನಿಟ್ಟುಸಿರಾದರು ಶಾಸ್ತ್ರಿಗಳು.