-ಯಾರಿವರು?!

-ಯಾರಿವರು?!

ಕವನ

 

-ಯಾರಿವರು?!
 
ಹೀಗೆಯೆ  ಇವರೆಲ್ಲರು!
ನೀರಿನಂತೆ ಹರಿಯುವರು - ಒಡಲ ಬೇಗೆ ತಣಿಸುವರು 
ಪೈರಿನಂತೆ ಬೆಳೆಯುವರು-ಹೂವಿನಂತೆ ಮೆಲ್ಲನರಳಿ 
ಪರಿಮಳವನು ಕೊಡುವವರು;
ಹೀಗೆಯೇ ಇವರೆಲ್ಲರು!
ಗಾಳಿಯಂತೆ ತೇಲುವರು -ಕಡಲಿನಂತೆ ಮೊರೆಯುವರು 
ರವಿಯ ತೆರದಿ ಬೆಳಗುವರು-ಇರುಳ ತಾರೆಯಂತೆ ಹೊಳೆದು 
ಎದೆಗೆ ಬೆಳಕ ತರುವವರು;
ಹೀಗೆಯೆ  ಇವರೆಲ್ಲರು!
ಹಾಲಿಗೆ ಸಿಹಿ ಬೆರೆಸುವರು - ಜೇನು ತುಪ್ಪ ಉಣಿಸುವರು 
ನಾಳೆಯ ಕದ ತೆರೆವವರು - ಬರುವ ಎಲ್ಲ ನೋವ ಸರಿಸಿ 
ಬಾಳ  ಕಹಿಯ ಮರೆಸುವರು;
ಹೀಗೆಯೇ ಇವರೆಲ್ಲರು!
ಮಗುವಿನಂತೆ ಇರುವವರು - ನಗುವನಷ್ಟೆ ತರಿಸುವರು 
ನೊಂದು ಬೆಂದು ಮಾಗುವರು-ಗಂಧದಂತೆ ತಾವೆ  ತೇಯ್ದು 
ಅಂದವನ್ನು ತೋರುವರು;
ಹೀಗೆಯೆ ಇವರೆಲ್ಲರು!
ಮಾತಾಡುವ ದೇವತೆಗಳು - ನಡೆದಾಡುತ ಕಾಯ್ವರು! 
ಕೋಟಿ ಜನಕೆ ಕೆಲವರು-ಹೇಳಲು ಇನ್ನೇನಿದೆ?!
ಇವರ ಹೆಸರೆ ಗೆಳೆಯರು!
-ಮಾಲು