ಯಾರು ಋಷಿಗಳು?

ಯಾರು ಋಷಿಗಳು?

‘ಋಷಿ ಮೂಲ ಕೆದಕಬಾರದು’ ಎಂಬುದು ಹಳೆಯ ಗಾದೆ. ಪಾಶ್ಚಾತ್ಯ ಪರಿಭಾಷೆಯ ವೇದ ಪುರಾಣ ನಿರೂಪಣಾ ಭಾಷ್ಯಗಳಲ್ಲಿ ಋಷಿಗಳನ್ನು ಕವಿಗಳೆಂದು, ಲೇಖಕರೆಂದು, ಜೀವನದಲ್ಲಿ ಜಿಗುಪ್ಸೆಗೊಂಡು ಹೊರಟ, ಪರಿಸ್ಥಿತಿಯ ಹೊಡೆತಕ್ಕೆ ಪರಿವರ್ತಿತರಾದ ವಿರಾಗಿಗಳೆಂದು, ತಪಸ್ಸೆಂದರೆ ಮಾನಸಿಕ ಖಿನ್ನತೆಯ ಪರಾಕಾಷ್ಟೆ ಎಂದು, ಇದ್ದಾಗ ಸಾಧಿಸಲಾಗದ್ದನ್ನು ಸತ್ತ ಮೇಲೆ ಬಯಸುವುದನ್ನು ಮೋಕ್ಷವೆಂದು ತಿರುಚಿ, ಜಗತ್ತಿಗೆ ತಪ್ಪು ಸಂದೇಶ ಕೊಟ್ಟು, ಭಾರತೀಯರಿಗೆ ಭಾರತೀಯತೆಯ ಬಗೆಗೆ ಭಾವುಕತೆ ಬರದಂತೆ ಮಾಡಲು ಪ್ರಯತ್ನಿಸಲಾಗಿದೆ.
ಮಹಾಭಾರತದ ಕರ್ತಾರ ‘ವ್ಯಾಸರು’ ಒಬ್ಬ ವ್ಯಕ್ತಿಯಲ್ಲ, ಅದು ಕಾವ್ಯನಾಮ ಎಂತಲೂ, ಮಹಾಭಾರತದಲ್ಲಿಯ 1 ಲಕ್ಷ 60 ಸಾವಿರಕ್ಕೂ ಮಿಕ್ಕು, ಶ್ಲೋಕಗಳಿಲ್ಲ ಎಂತಲೂ, ವಂಶಪಾರಂಪರ್ಯವಾಗಿ ಕಥೆ ಬರೆದು ಬೆಳೆಸಿ ನಿಲ್ಲಿಸಿದ್ದಾರೆ ಎಂದು ಪುಕಾರು ಎಬ್ಬಿಸಿದ್ದಾರೆ. ಅದನ್ನೇ ಓದಿ ತಮಗೆ ಬೇಕಾದ್ದನ್ನು ಮಾತ್ರ ಆರಿಸಿ ವ್ಯಾಖ್ಯಾನಿಸುವ ಬುದ್ಧಿಜೀವಿಗಳು ಪಾಶ್ಚಾತ್ಯರ ಪರಂಪರೆಯನ್ನು ಪ್ರಗತಿಪರತೆಯ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಭಾರತೀಯ ಸಂಸ್ಕೃತಿಯ ಆಗಾಧ ಜ್ಞಾನ ಸಂಪತ್ತಿನ ಪ್ರವರ್ತಕರು ಋಷಿಗಳು. ವೇದದಲ್ಲಿ ಬರುವ ಪ್ರತಿ ಮಂತ್ರಗಳನ್ನು ಉಚ್ಛರಿಸುವಾಗಲೂ ಋಷಿ, ಛಂದಸ್ಸು, ಮಂತ್ರಾಧಿದೇವತೆಯನ್ನು ಸ್ಮರಿಸಿಯೇ ಆಗಬೇಕು ಎಂಬುದು ಪರಂಪರೆ. ಹಾಗಾದರೆ ಋಷಿಗಳೆಂದರೆ ಯಾರು? ಏನು ಋಷಿ ಶಬ್ದದ ಅರ್ಥ? ಋಷಿಯನ್ನು ಶೃತಿ ಸ್ಮೃತಿಗಳು ಹೇಗೆ ವ್ಯಾಖ್ಯಾನಿಸುತ್ತವೆ ಎಂಬುದನ್ನು ನೋಡೋಣ.
‘ಋಕ್ಕು’ಗಳೆಂದರೆ ಕಾವ್ಯಾತ್ಮಕ ಛಂದೋಬಂಧ ವೇದ ಮಂತ್ರಗಳು. ಇಂತಹ ಋಕ್ಕುಗಳ ಗುಚ್ಛವೇ ಋಗ್ವೇದ. ಯಜ್ಞಗಳಲ್ಲಿ ವಾಚಿಸಬೇಕಾದ ಮಂತ್ರಗಳ ಸಂಗ್ರಹ ಯಜುರ್ವೇದ. ಋಗ್ವೇದಲ್ಲಿಯ ಗೇಯತೆಗೆ, ಗಾನಕ್ಕೆ ಅನುಕೂಲವಾಗುವ ಮಂತ್ರಗಳ ಸಂಪುಟ ಸಾಮವೇದ. ಈ ಮೂರೂ ವೇದಗಳು ಪಾರಮಾರ್ಥಿಕತೆಯ ಬಗೆಗೆ ಬೆಳಕು ಚೆಲ್ಲಿದರೆ, ನಾಲ್ಕನೇಯ ವೇದ, ಅಥರ್ವಣ ವೇದ, ನಿತ್ಯ ಜೀವನದ ಲೌಕಿಕತೆಯನ್ನು ತಿಳಿಸಿಕೊಡುತ್ತವೆ. ಆಯುರ್ವೇದ ಮತ್ತಿತರ ವೈಜ್ಞಾನಿಕ ಅನ್ವೇಷಣೆಗಳನ್ನು ಅಥರ್ವಣವೇದ ಸಾದರವಾಗಿ ನಿರೂಪಿಸುತ್ತದೆ. 
ಬೇರೆ ಬೇರೆಡೆಯಾಗಿ ಹರಿದು ಹಂಚಿ ಹೊಗಿದ್ದನ್ನು ಒಂದೆಡೆ ತಂದು ಹೀಗೆ ನಾಲ್ಕು ಭಾಗಗಳಾಗಿ ವಿಭಾಗಿಸಿದವರು ವೇದವ್ಯಾಸರು.
ಋಗ್ವೇದದ ‘ಋಕು’ಕ ಗಳ ಕರ್ತಾರರಾಗಿದ್ದರಿಂದ ‘ಋಷಿ’ ಶಬ್ದ ಬಂದಿರಬಹುದೆಂಬುದು ಹಲವರ ವಾದ. ವಾಮದೇವ ಎಂಬ ಋಷಿ ಋಗ್ವೇದದ ಮಂತ್ರದಲ್ಲಿ ಋಷಿಯನ್ನು(ತನ್ನನ್ನು), ಜಗದ ಪರಿವೆಯೇ ಇಲ್ಲದೇ, ಜಗದೀಶನನ್ನು ಧ್ಯಾನಿಸಿ, ಅಂತಃ ಪ್ರಕಾಶವನ್ನು ಬೆಳಗಿಸಿದವನು, ಸಾಮಾನ್ಯವಾಗಿ ಮನುಷ್ಯನಿಗೆ ನಿಲುಕದ ಅದಮ್ಯವಾದ ದಿವ್ಯಾನುಭೂತಿಯನ್ನು ಸಾಕ್ಷಾತ್ಕರಿಸಿಕೊಂಡವನು, ಜಗತ್ತಿನ ಸತ್ಯ ವಸ್ತುವನ್ನು ತನ್ನ ಸ್ವಂತ ಅರಿವಿಗೆ ತರಿಸಿಕೊಂಡವನು(ಸ್ವತಃ ಪ್ರಮಾಣ), ಅಂತಹ ಸತ್ಯದ ಸಾಕ್ಷಾತ್ಕಾರವನ್ನು ಭಗವಂತನಿಂದ ನೇರವಾಗಿ ಪಡೆದುಕೊಂಡವನು(ನಿಣ್ಯಾ ವಚಾಂಸಿ) ಎಂದು ವಿವರಿಸುತ್ತಾನೆ.
एता विश्वा विदुषे तुभ्यं वेधो नीथान्य अग्ने निण्या वचांसि |
निवचना कवये काव्यान्य अशंसिषम मतिभिर विप्र उक्थैः ||
(ಋ. 4.3.16)
ಇದನ್ನೇ ಯಜುರ್ವೇದದಲ್ಲಿ ಹಿಂದಿನಕಾಲದಲ್ಲಿ ಯಾರು ಗುರುಕುಲದಲ್ಲಿ ಬ್ರಹ್ಮಚರ್ಯ ವೃತವನ್ನು ಪಾಲಿಸಿ, ಸ್ತೋಮದಲ್ಲಿ(ಗುಂಪಿನಲ್ಲಿ ಒಟ್ಟಾಗಿ) ಒಬ್ಬರೊಬ್ಬರು ಕೂಡಿಕೊಂಡು ಧರ್ಮದ ಮರ್ಮವನ್ನರಿಯಲು ಯತ್ನಿಸಿದ್ದರೋ, ಪ್ರಯತ್ನದ ಸಾಫಲ್ಯದಿಂದ ಮಹದಾನಂದ ಪಡೆದಿದ್ದರೋ, ಯಾರು ಅಮಿತವಾದ ಜ್ಞಾನವನ್ನು ಸಂಪಾದಿಸಿದ್ದರೋ, ಯಾರಿಗೆ ಏಳು ತೆರನಾದ ಶಕ್ತಿಗಳು ಒಲಿದಿವೆಯೋ ಅವರೇ ನಿಜವಾದ ಋಷಿಗಳು ಎಂದು ಹೇಳಲಾಗಿದೆ.
ಶುಕ್ಲ. ಯ. 34-49
 
“ಋಷತಿ ಜ್ಞಾನೇನ ಸಂಸಾರ ಪಾರಂ” ಎಂಬುದು ಉಕ್ತಿ. ಜ್ಞಾನದಿಂದ ಸಂಸಾರ ಬಂಧನವನ್ನು ದಾಟಿದವರು ಋಷಿಗಳು ಎಂದರ್ಥ. ಇಲ್ಲಿ ಸಂಸಾರ ಎಂದರೆ ಕೇವಲ ಮನೆ ಮಡದಿ ಮಕ್ಕಳು ಅಷ್ಟೇ ಅಲ್ಲ, ಲಾಲಸೆ, ಆಮಿಷ, ಅಭಿಲಾಷೆ, ಆಕಾಂಕ್ಷೆ ಮತ್ತು ಸಮಸ್ತ ತೃಷೆಗಳು. ಋಷಿ ಶಬ್ದ ‘ದೃಶ್’ ಎಂದರೆ ದೃಷ್ಟಿ, ನೋಡು, ಕಂಡುಕೊಳ್ಳು ಎಂಬರ್ಥದ ಧಾತುವಿನಿಂದ ನಿಷ್ಪನ್ನವಾಗಿರಬಹುದು ಎಂಬುದು ವಿದ್ವಾಂಸರ ಅಭಿಪ್ರಾಯ.
 
ಉಪನಿಷತ್ತುಗಳ ಅಭಿಪ್ರಾಯದಲ್ಲಿ ‘ಋಷಯಃ ಅಂತಃ ಪ್ರಕಾಶಕಾ’ ಅಂದರೆ ಋಷಿಗಳು ಅಂತರಂಗದಲ್ಲಿ ಸತ್ಯದ ಬೆಳಕು ಕಂಡವರು ಎಂದು ವಿಷದಪಡಿಸಲಾಗಿದೆ. 
ಮುಂಡಕ ಉಪನಿಷತ್ತಿನಲ್ಲಿ ಸರ್ವಸಮರ್ಥ ಸರ್ವಂತರ್ಯಾಮಿಯಾದ ಭಗವಂತನ ಇರುವಿಕೆಯನ್ನು ಸಾಕ್ಷಾತ್ಕರಿಸಿಕೊಂಡು, ತುಂಬಿದ ತಲೆಯುಳ್ಳವರಾಗಿ ಅಂದರೆ ಜ್ಞಾನಸಂಪನ್ನರಾಗಿ, ಆನಂದಮಯ, ಶಾಂತಿಪೂರ್ಣ ಸಂತೃಪ್ತ ಜೀವನವನ್ನು ನಡೆಸುವವರು ಋಷಿಗಳು ಎಂದು ಹೇಳಳಾಗಿದೆ.
 
“ಅತೀಂದ್ರಿಯಸ್ಯ ವೇದಸ್ಯ ಪರಮೇಶ್ವರಾನುಗ್ರಹೇಣ ಪ್ರಥಮತೋ ದರ್ಶನಾತ್ ಋಷಿತ್ವಂ”
ಭಗವಂತನ ಅನುಗ್ರಹದಿಂದ, ಅವಿರತ ತಪಸ್ಸಿನಿಂದ ಅತೀಂದ್ರಿಯವಾದ ವೇದಗಳನ್ನು ಮೊದಲು ಕಂಡುಕೊಳ್ಳುವುದು ಋಷಿತನ ಎಂದು ವೇದ ಭಾಷ್ಯಕಾರ ಸಾಯಣರು ಸಾರಿದ್ದಾರೆ. 
 
ಒಟ್ಟಿನಲ್ಲಿ ವೇದಗಳು ಅಪೌರುಷೇಯ. ಅವು ಋಷಿಗಳ ಧ್ಯಾನಸ್ಥ ಸ್ಥಿತಿಯಲ್ಲಿ ಗೋಚರಿಸಿದ ಸತ್ಯಗಳು, ಋಷಿಗಳು ನೇರ ಭಗವಂತನಿಂದ ಸಾಕ್ಷಾತ್ಕರಿಸಿಕೊಂಡ ಮಂತ್ರಗಳು. “ಋಷಯೋ ಮಂತ್ರ ದೃಷ್ಟಾರಃ” ಋಷಿಗಳು ಮಂತ್ರ ಕರ್ತಾರರಲ್ಲ ದೃಷ್ಟಾರರು. ಋಷಿಗಳು ಅವುಗಳನ್ನು ಕಂಡುಕೊಂಡ ಅನ್ವೇಷಕರು ಹೊರತು ಸೃಷ್ಟಿಕರ್ತರಲ್ಲ. ಶ್ರೀಮನ್ಮಧ್ವಾಚಾರ್ಯರು ವೇದ ಭಾಷ್ಯದಲ್ಲಿ 
“ಯಃ ಪಶ್ಯತಿ ಸ್ವಯಂ ವಾಕ್ಯಂ ಸ ಋಷಿಸ್ತಸ್ಯ ಕೀರ್ತಿತಃ”
ಯಾರು ಸ್ವಯಂ ಅನುಭವದಲ್ಲಿ, ಸತ್ಯವನ್ನು ಅರಿತುಕೊಳ್ಳುಕೊಳ್ಳುವರೋ, ಅವರನ್ನು ಋಷಿಗಳೆಂದು ಕರೆಯುತ್ತಾರೆ, ಎಂದು ಹೇಳಿದ್ದಾರೆ. ಟೀಕಾಚಾರ್ಯರು ಈ ವಾಕ್ಯದ ಅರ್ಥವನ್ನು “ಅಧ್ಯಯನ ಮಾಡದೆ, ಯಾರು ಕೇವಲ ನಿರಂತರ ತಪಸ್ಸಿನಿಂದ ನೇರವಾಗಿ ಭಗವಂತನನ್ನು ಒಲಿಸಿಕೊಂಡು ಮಂತ್ರಗಳನ್ನು ಪಡೆದುಕೊಳ್ಳುತಾರೋ ಅವರು ಋಷಿಗಳು” ಎಂದು ಆಚಾರ್ಯರ ವಾಕ್ಯವನ್ನು ಇನ್ನೂ ಸರಳೀಕರಿಸುತ್ತಾರೆ. 
 
ಹರಿವಂಶ ಪುರಾಣದಲ್ಲಿ ‘ಋಷಿ’ ಶಬ್ದವನ್ನು ಮತ್ತೂ ಪರಿಷ್ಕರಿಸಲಾಗಿದೆ. ಮಂತ್ರ ದೃಷ್ಟಾರತ್ವದ ಜೊತೆಗೆ ದೀರ್ಘಾಯುಷ್ಯ,  ದಿವ್ಯದೃಷ್ಟಿ, ತೀಕ್ಷ್ಣ ಬುದ್ಧಿಶಕ್ತಿ, ಧರ್ಮದ ಮರ್ಮವನ್ನರಿತ ನುರಿತ ಸಾಧನೆ, ಗೋತ್ರ ಪ್ರವರ್ತಕತ್ವ ಮುಂತಾದ ಲಕ್ಷಣಗಳನ್ನು ಸೇರಿಸಿದ್ದಾರೆ.
ದೀರ್ಘಾಯುಷೋ ಮಂತ್ರಕೃತಾ ಈಶ್ವರಾ ದೀರ್ಘಚಕ್ಷುಚಃ |
ಬುದ್ಧ್ಯಾ ಪ್ರತ್ಯಕ್ಷಾ ಧರ್ಮಾಣೋ ಗೋತ್ರ ಪ್ರಾವರ್ತಕಃ ತಥಾ||
(ಹರಿವಂಶ ಪುರಾಣ)
 
ಮಂತ್ರವನ್ನು ಕಂಡುಹಿಡಿದವರು ಮಾತ್ರ ಋಷಿಗಳಾಗಿರಬೇಕು ಎಂತೇನು ಇಲ್ಲ, ಅದನ್ನು ಗುರುಗಳಿಂದ ಮೊದಲು ಕೇಳಿಸಿಕೊಂಡವರು, ಅದರಿಂದ ಸಿದ್ಧಿ ಹೊಂದಿದವರು, ಮಂತ್ರದ ಪ್ರಸಿದ್ಧಿಗೆ ಕಾರಣರಾದವರೂ ಋಷಿಗಳೇ. ಉದಾಹರಣೆಗಾಗಿ ಗಾಯಂತ್ರಿ ಮಂತ್ರಕ್ಕೆ ವಿಶ್ವಾಮಿತ್ರನನ್ನು ಋಷಿಯಾಗಿ ಸ್ಮರಿಸುತ್ತೇವೆ, ಆದರೆ ಅದಕ್ಕಿಂತ ಮೊದಲೆಯೂ ಗಾಯಂತ್ರಿ ಮಂತ್ರ ಇತ್ತು, ಅದರ ಜಪದಿಂದ ವಿಶ್ವಾಮಿತ್ರರು ಬ್ರಹ್ಮರ್ಷಿ ಪಟ್ಟಕ್ಕೇರಿದ್ದರಿಂದ, ಗಾಯತ್ರಿ ಮಂತ್ರದಿಂದ ಬರುವ ಬ್ರಹ್ಮಬಲ, ಅದರ ತೇಜೋಬಲ ಕ್ಷಾತ್ರ ಬಲಕ್ಕಿಂತಲೂ ದೊಡ್ಡದು ಎಂದು ಸಾರಿದ್ದರಿಂದ ಅವರನ್ನುಗಾಯತ್ರಿ ಮಂತ್ರಕ್ಕೆ ಋಷಿಯಾಗಿ ಪರಿಗಣಿಸಲಾಗುತ್ತದೆ ಎಂಬುದು ಆಚಾರ್ಯ ಮಧ್ವರ ನಿರ್ಣಯ.
 
ಸಂಸ್ಕೃತ ಶಬ್ದಗಳ ಅರ್ಥ ಸಂಪತ್ತಿನ ಆಗರ ಅಮರಕೋಶದಲ್ಲಿ ಋಷಿ ಶಬ್ದಕ್ಕೆ ‘ಸತ್ಯ ವಚಃ’ ಎಂಬ ಪರ್ಯಾಯಪದವನ್ನು ಸೂಚಿಸಲಾಗಿದೆ, ಸತ್ಯವನ್ನು ಮಾತನಾಡುವವರು ಎಂತಲೂ ಅಥವಾ ಕಂಡುಕೊಂಡ ಸತ್ಯವನ್ನು ಸಾದರ ಪಡಿಸುವವರು ಎಂತಲೂ ಅರ್ಥೈಸಿಕೊಳ್ಳಬಹುದು. “ಕವಯಃ ಸತ್ಯ ಶ್ರುತಃ” ಸತ್ಯವನ್ನು ಕೇಳಿಸಿಕೊಂಡ ಕವಿಗಳು ಎಂಬ ಅಭಿಪ್ರಾಯವೂ ಇದೆ. 
 
ಶ್ರೀ ಅರವಿಂದರು, “ಅಂತರೀಕ್ಷದ ದೈವವಾಣಿಯನ್ನು ಅಂತರಂಗದಲ್ಲಿ ಕೇಳಿಸಿಕೊಂಡವರು ಋಷಿಗಳು” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 
 
“ಕಾಣುವುದು ಮೆದುಳಿಗೆ ಮುಟ್ಟುತ್ತದೆ. ಕೇಳಿಸಿಕೊಳ್ಳುವುದು ಹೃದಯವನ್ನು ತಟ್ಟುತ್ತದೆ” ಆದ್ದರಿಂದ ನವವಿಧ ಭಕ್ತಿಗಳಲ್ಲಿ ಶ್ರವಣವನ್ನು ಮೊದಲು ಸೇರಿಸಿರಬೇಕು ಎಂದೆನಿಸುತ್ತದೆ.
 
ಋಷಿಗಳನ್ನು ಸಾಕ್ಷಾತ್ ಋಷಿ (ಭಗವಂತನಿಂದ ಕೇಳಿಸಿಕೊಂಡ ಋಷಿ) ಮತ್ತು ಶ್ರುತ ಋಷಿ (ಗುರುವಿನಿಂದ ಹೇಳಿಸಿಕೊಂಡ ಋಷಿ) ಎರಡು ವಿಧಗಳಾಗಿ ಪರಿಗಣಿಸಬಹುದು. ಹಾಗೆ ಸನಾತನ ಧರ್ಮ ಗ್ರಂಥಗಳನ್ನು ಶೃತಿ(ಧ್ಯಾನಸ್ಥ ಸ್ಥಿತಿಯಲ್ಲಿ ಕೇಳಿಸಿಕೊಂಡಿದ್ದು) ಮತ್ತು ಸ್ಮೃತಿ( ನೆನಪಿಟ್ಟುಕೊಂಡದ್ದು) ಎಂದು ವಿಭಾಗಿಸಬಹುದಾಗಿದೆ.
 
‘ಸನಾತನ’ ಶಬ್ದದ ಛೇದ
ಸತ್ + ಆತನ = ಸನಾತನ ಸತ್ ಎಂದರೆ ಸತ್ಯವಾದದು, ಒಳ್ಳೆಯದ್ದು, ಆತನ ಎಂದರೆ ಹಬ್ಬಿದ್ದು. ಎಲ್ಲೆಡೆ ಆವರಿಸಿದ ಭಗವಂತನನ್ನು ಒಪ್ಪಿ ಆರಾಧಿಸುವ ಧರ್ಮ ಸನಾತನ ಧರ್ಮ. ಜಗತ್ತಿನ ಎಲ್ಲ ಮೂಲೆಗೆ ಸುವಿಚಾರ, ಸದಾಚರಣೆ, ಸಹಕಾರ, ಸುಜ್ಞಾನ ಹಬ್ಬಿಸಿ ಹರಡಿದ ಧರ್ಮ ಸನಾತನ ಧರ್ಮ.
 
ಋಷಿಗಳು ಪುರುಷರಿರಬಹುದು, ಸ್ತ್ರೀಯರಿರಬಹುದು, ಅವಿವಾಹಿತರಿರಬಹುದು, ಸಂಸಾರಸ್ಥರಿರಬಹುದು. ಮಹಿಳಾ ಋಷಿಗಳಿಗೆ ಋಷಿಕಾ ಎನ್ನಬಹುದು ಎಂದು ನನ್ನ ಅಭಿಪ್ರಾಯ. ಋಷೀಕ ರೆಂದರೆ ಋಷಿಪುತ್ರರು ಎಂಬ ಅಭಿಪ್ರಾಯವೂ ಇದೆ. ವೇದ ಮಂತ್ರಗಳ ಪರಿವಿಡಿಯನ್ನು ‘ಅನುಕ್ರಮಣಿ’ ಅಥವಾ ‘ಅನುಕ್ರಮಣಿಕಾ’ ಎಂದು ಕರೆಯುತ್ತಾರೆ. ಕಾತ್ಯಾಯನನು ಬರೆದ ‘ಸರ್ವಾನುಕ್ರಮಣಿಕಾ’ ನಮಗೆ ಲಭ್ಯವಾಗುವ ಋಗ್ವೇದದ ಪರಿವಿಡಿ. ಅನುಕ್ರಮಣಿಕೆಗಳು ಪ್ರತಿ ಮಂತ್ರದ ಋಷಿಗಳು, ಅದರ ಛಂದಸ್ಸು, ಅಧಿದೇವತೆಗಳ ವಿವರಗಳನ್ನು ಹೊಂದಿರುತ್ತದೆ. 
 
ಅಭಿವಾದನ ಪದ್ಧತಿ
ನಮ್ಮದು ಕೃತಜ್ಞತೆ ಮೆರೆವ ಸಂಸ್ಕೃತಿ. ಗುರು, ಹಿರಿಯರಿಗೆ ವಂದಿಸುವಾಗ, ತಮ್ಮನ್ನು ಇನ್ನೊಬ್ಬರಿಗೆ ಪರಿಚಯ ಮಾಡಿಕೊಳ್ಳುವಾಗ ಗೋತ್ರ-ಪ್ರವರ ಪೂರ್ವಕವಾದ ಅಭಿವಾದನ ಮಂತ್ರ ಹೇಳಬೇಕು ಎಂಬ ಪದ್ಧತಿ ಇದೆ.
1. ವೇದ (ನಮ್ಮ ವೇದ, ದ್ವಿವೇದಿಗಳು, ತ್ರಿವೇದಿಗಳು, ಚತುರ್ವೇದಿಯರು ಇದ್ದಾರೆ)
2. ಸೂತ್ರ (ನಾವು ಪಾಲಿಸುವ ವೇದ ಸೂತ್ರ)
3. ಶಾಖಾ ( ವೇದ ಶಾಖೆ)
4. ಪ್ರವರ (ನಮ್ಮ ಗೋತ್ರ ಪ್ರವರ್ತಕ ಋಷಿಗಳಿಗೆ ಸಂಬಂಧಪಟ್ಟ ಋಷಿ ಸಮೂಹ, ಪ್ರವರ ಋಷಿಗಳು ಏಕಋಷಿ, ತ್ರೈಯಾಋಷಿ, ಪಂಚಋಷಿ, ಸಪ್ತರ್ಷಿ ಗಳ ತನಕ ಇವೆ)
5. ಗೋತ್ರ (ನಮ್ಮ ಗೋತ್ರ)
6. ಹೆಸರು (ನಮ್ಮ ಹೆಸರು)
7. ಅಹಂ ಭೋ ಅಭಿವಾದಯೇತ್ ಅಭಿವಾದಯಾಮಿ( ನಾನು ತಮಗೆ ವಂದಿಸುತ್ತೇನೆ)
ಉದಾಹರಣೆಗೆ
 
ಋಗ್ವೇದಸ್ಯ ಅಶ್ವಲಾಯನ ಸೂತ್ರ ಶಾಕಲ ಶಾಖಾಧ್ಯಾಯೀನಾಂ, ಅಗಸ್ತ್ಯ ದಾರಡ್ಯ ಅಚ್ಯುತ ತೃಯಾಋಷಿ ತ್ರಿ ಪ್ರವರಾನ್ವಿತ ಅಗಸ್ತ್ಯ ಗೋತ್ರೊತ್ಪನ್ನೋಹಂ ಜನಮೇಜಯ ಶರ್ಮಾಣಾಂ ಅಹಂ ಭೋ ಅಭಿವಾದಯೇತ್ ಅಭಿವಾದಯಾಮಿ.
(ಋಗ್ವೇದದ ಅಶ್ವಲಾಯನ ಸೂತ್ರ ಪಾಲಿಸುವ, ಶಾಕಲ ಶಾಖೆಗೆ ಸೇರಿದ ಅಗಸ್ತ್ಯ, ದಾರಡ್ಯ, ಅಚ್ಯುತರೆಂಬ ಮೂರು ಋಷಿಗಳ ಪ್ರವರವುಳ್ಳ, ಅಗಸ್ತ್ಯಗೋತ್ರದಲ್ಲಿ ಉದಿಸಿದ ಜನಮೇಜಯ ಎಂಬ ಹೆಸರಿನವನಾದ ನಾನು ಅಭಿವಂದಿಸುತ್ತೇನೆ.)
 
ಋಷಿ ಮತ್ತು ಮುನಿಗಳಲ್ಲೇನು ವ್ಯತ್ಯಾಸ?
 
ಎಲ್ಲ ಋಷಿಗಳು ಮುನಿಗಳು ಆದರೆ ಎಲ್ಲ ಮುನಿಗಳು ಋಷಿಗಳಲ್ಲ. ಸಾಧನೆಯ ಹಾದಿಯಲ್ಲಿ ಮೊದಲು ಮುನಿತ್ವ ನಂತರದ್ದು ಋಷಿತ್ವ. ಸಾಮಾನ್ಯ ಪರಿಭಾಷೆಯಲಿ, ಸದಾ ಭಗವನ್ನಾಮಸ್ಮರಣೆಯ ವೃತದಲ್ಲಿರುವವರು ಮತ್ತು ಕಡಿಮೆ ಮಾತನಾಡುವವರನ್ನು ಮುನಿಗಳೆನ್ನುತ್ತಾರೆ. ‘ಮೌನಿ’ ಶಬ್ದದಿಂದ ಮುನಿ ಶಬ್ದ ಬಂದಿರಬಹುದೆಂಬುದು ಹಲವರ ಅಭಿಪ್ರಾಯ. ಪುರಾಣಗಳಲ್ಲಿ ಶಾಪಗಳ ಪ್ರಸಂಗ ಹೆಚ್ಚು ಉಲ್ಲೇಖವಾಗಿರುವದರಿಂದ, ಮುನಿಸಿಕೊಳ್ಳುವವರು ಮುನಿಗಳೆಂದು ಹಾಸ್ಯ ಚಟಾಕೆ ಹಾರಿಸುವವರು ಇದ್ದಾರೆ.
 
ಮೌನಿಯಾಗಿ-ಧ್ಯಾನಿಯಾಗುವುದು, ಧ್ಯಾನಿಯಾಗಿ ಅಥವಾ ಅಧ್ಯಯನಿ ಆಗಿ-ಜ್ಞಾನಿಯಾಗುವುದು, ಅಧ್ಯಯನದಿಂದ-ಧ್ಯಾನದಿಂದ ಪಡೆದ ಜ್ಞಾನವನ್ನು ಜನರಿಗೆ ಹಂಚುವವರು ಮುನಿಗಳು. ಮುನಿ ತನ್ನ ವೈಚಾರಿಕತೆಯನ್ನು, ಜಗತ್ತಿನಲ್ಲಿ ಭಾತಿಕವಾಗಿ ಇದ್ದು, ಅನುಭವಿಸಿ, ತಿಳಿದಿದ್ದನ್ನು ತಿಳಿಸಿ ಹೇಳುತ್ತಾನೆ. ಮುನಿ ಭೌತಿಕ ಜಗತ್ತಿನ ಪರಿವೆಯೇ ಇಲ್ಲದೇ ತಪಸ್ಸು ಮಾಡಿ ಸತ್ಯ ಸಾಕ್ಷಾತ್ಕರಿಸಿಕೊಂಡರೆ ಋಷಿಯಾಗುತ್ತಾನೆ. ಋಷಿಗೆ ತಾನು ಮಾಡುವ ಸಾಧನೆ ಮುಖ್ಯ, ಮುನಿಗೆ ಸಾಧಕರನ್ನು ತಯಾರು ಮಾಡುವ ಜವಾಬ್ದಾರಿ.
 
ಉದಾಹರಣೆಗೆ ಋಷಿಗಳೆಂದರೆ ಐನಸ್ಟೀನ್ ಇದ್ದಂತೆ, ಮುನಿಗಳೆಂದರೆ ಮೇಡಂ ಕ್ಯೂರಿ ಇದ್ದಂತೆ. ಐನಸ್ಟೀನ ಕೊಟ್ಟದ್ದು ಪರಮಾಣು ಸಿದ್ಧಾಂತದ ಥಿಯರಿ. ಅದನ್ನು ಪ್ರಾಯೋಗಿಕವಾಗಿ ಸಾಧಿಸಿ ತೋರಿಸಿದ್ದು ಮೇಡಂ ಕ್ಯೂರಿ. ಅವಳು ಸಂಶೋಧಿಸಿದ ರೇಡಿಯಂ, ಪರಮಾಣು ಸಿದ್ಧಾಂತದ ಉಪಯೋಗಿ ಪ್ರಯೋಗಗಳು ಇಂದು ಜನೋಪಕಾರಿ.
 
ಆಧುನಿಕ ಕಾಲದ ಋಷಿಗಳು
 
ತಂಪಿನಂಚಿನ ಹಿಮಾಲಯದ ತಪ್ಪಲಿನಲ್ಲಿ, ತಪೋನಿರತ ಹಲ ಋಷಿಗಳು ಇನ್ನೂ ಇದ್ದಾರೆ ಎಂದು ಸಾಕಷ್ಟು ವರದಿಗಳಿಂದ ವಿದಿತವಾಗಿದೆ. ಋಗ್ವೇದ ಕಾಲಕ್ಕೆ ಮಂತ್ರ ದೃಷ್ಟಾರತ್ವ ಮಿಗಿಲಾದರೆ, ಪುರಾಣಗಳಲ್ಲಿ ದೀರ್ಘಾಯುಷ್ಯ, ದಿವ್ಯಜ್ಞಾನ, ಶಾಪ-ಅನುಗ್ರಹ ಶಕ್ತಿಯನ್ನು ಋಷಿ ಲಕ್ಷಣಕ್ಕೆ ಪರಿಗಣಿಸಲಾಯಿತು. ಆಧುನಿಕ ಕಾಲದಲ್ಲಿ ಸಾತ್ವಿಕತೆ, ಅಪರೋಕ್ಷ ಜ್ಞಾನ, ಧರ್ಮ ತತ್ಪರತೆ, ಸತ್ಯ ನಿಷ್ಟೆ, ನಿರಪೇಕ್ಷತೆ, ಸಾಮಾಜಿಕ ಕಳಕಳಿ ಉಳ್ಳವರನ್ನು ಋಷಿ ಸಾದೃಶರು ಎನ್ನುವ ವಾಡಿಕೆ ರೂಢಿಯಲ್ಲಿದೆ.
 

Comments

Submitted by kavinagaraj Tue, 03/05/2013 - 10:14

ಋಷಿ ಕುರಿತು ವಿಷದವಾಗಿ ತಿಳಿಸಿರುವಿರಿ. ಧನ್ಯವಾದ. ಋಷಿಮೂಲ, ನದಿಮೂಲ ಮತ್ತು ಸ್ತ್ರೀಮೂಲ ಕೆದಕಬಾರದೆಂಬುದು ಗಾದೆಯಾದರೂ, ಅದರ ಮೂಲ ಉದ್ದೇಶ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಸ್ಥಿತಿಯನ್ನು ಮಾತ್ರ ಗಣಿಸಬೇಕೆಂಬುದಾಗಿದೆ. ಒಬ್ಬ ವ್ಯಕ್ತಿ ಹಿಂದೆ ಕೆಟ್ಟವನಾಗಿದ್ದರೂ, ಈಗ ಒಳ್ಳೆಯವನಾಗಿದ್ದರೆ ಅವನನ್ನು ಗೌರವಿಸಬೇಕು, ಹಿಂದಿನದನ್ನು ಎತ್ತಿ ಮುಖಭಂಗಿಸಬಾರದೆಂಬುದು ತಿರುಳು. ಅದನ್ನೇ ತಪ್ಪಾಗಿ ಭಾವಿಸಿ ವಿರುದ್ಧಾರ್ಥದಲ್ಲಿ ಬಳಸುವವರು ಬಹಳ.
Submitted by makara Wed, 03/06/2013 - 09:49

ಋಷಿಗಳ ಬಗ್ಗೆ ಅಧ್ಯಯನ ಕೃಷಿ ಮಾಡಿ ಅವರ ಕುರಿತ ಉತ್ತಮವಾದ ವಿಶ್ಲೇಷಣೆ ಮತ್ತು ವ್ಯಾಖ್ಯಾನದಿಂದ ಕೂಡಿದ ನಿಮ್ಮ ಬರಹಕ್ಕೆ ಅಭಿನಂದನೆಗಳು, ಜನಮೇಜಯ ಅವರೆ.