ಯಾರು ಬಂದರು ಕ್ಷಣದಿ…

ಯಾರು ಬಂದರು ಕ್ಷಣದಿ…

ಕವನ

ಯಾರು ಬಂದರು ಕ್ಷಣದಿ

ಬೇಸರಿಸದಿರುಯೆಂದು

ಯಾರು ಬರದಿರಲು ನೀ

ಕಣ್ಣೀರ ಸುರಿಸದಿರು

 

ಇರುವವರ ಜೊತೆಗಿರುತ

ಚಿಂತನೆಯ ಮಾಡುತಿರು

ಇದ್ದಾಗ ಬೀಗದೆಲೆ

ಬಿದ್ದಾಗ ಓಡದಿರು

 

ಅರಮನೆಯ ಮಹಡಿಯೊಳು

ಕುಳಿತು ಕೇಳಿದೆಯಂದು

ನೀ ಸಮವೆ ನನಗೆನುತ

ಛೇಡಿಸುತಲಂದು

 

ಸ್ವಾರ್ಥವನು ಮರೆಯುತಲೆ

ಪ್ರೀತಿಯನು ಗಳಿಸುತಿರು

ನಿಸ್ವಾರ್ಥ ಸೇವೆಯನು

ಮಾಡುತಲೆ ಬಾಳುತಿರು

 

ಗುಣವಿಹುದು ನಿನ್ನೊಳಗೆ

ಮರೆಯದೆಲೆ ತಾ ಹೊರಗೆ

ಹೊಸತನದ ಹಾದಿಯೊಳು

ನಡೆಯುತಿರು ಸುಖವಾಗೆ

***

ಗಝಲ್

ವಯಸ್ಸು ಮಾಗಿದಂತೆ ಸಾವದು ಕಣ್ಣಿಗೆ ಕಾಣುವುದು

ಕನಸ್ಸು ಕರಗಿದಂತೆ ಸೋಲದು ಕಣ್ಣಿಗೆ ಕಾಣುವುದು

 

ಜಯವದು ಸಿಗದಂತೆ ನೋವುಗಳು ಕಾಡಿವೆ ಏಕೊ

ಕಾಯವು ಬಸವಳಿದಂತೆ ಕೂಳದು ಕಣ್ಣಿಗೆ ಕಾಣುವುದು

 

ಹೃದಯವಿಂದು ಸವಿಯನು ಸರಿಯಾಗಿ ಕೊಡಲೇ ಇಲ್ಲವೆ

ಬದುಕಿಂದು ಕ್ಷೀಣಿಸಿದಂತೆ ಸೇಡದು ಕಣ್ಣಿಗೆ ಕಾಣುವುದು

 

ಬಾರದ ಯೋಚನೆಗೆ ದೇಹವದು ನೋಡು ಮುದುಡಿದೆ  

ಚಿತ್ತಾರವದು ಸರಿದಂತೆ ಸಿಟ್ಟದು ಕಣ್ಣಿಗೆ ಕಾಣುವುದು

 

ಸಾಕೆನುವ ಭಾವನೆಯು ತನುವಿನಲಿ ಮೂಡಿತೇನು ಈಶಾ

ಬಯಕೆಯದು ಕಂತಿದಂತೆ ಗುಟ್ಟದು ಕಣ್ಣಿಗೆ ಕಾಣುವುದು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್