ಯಾರು ಹಿತವರು ನಿಮಗೆ ಈ ಮೂವರೊಳಗೆ...............?

ಯಾರು ಹಿತವರು ನಿಮಗೆ ಈ ಮೂವರೊಳಗೆ...............?

ಬರಹ
ಯಾರು ಹಿತವರು ನಿಮಗೆ ಈ ಮೂವರೊಳಗೆ..............?  
    
       ನಾನು ಒಂದು ಕಂಪನಿಯ ಆಫೀಸಿನ ಕೆಲಸಗಾರರ ಬಗ್ಗೆ ಒಂದಿಷ್ಟು ಹೇಳುತ್ತೇನೆ...., ಕೇಳ್ತೀರಾ.........?  ಈ ಕಂಪನಿಯು ನನಗೆ ಗೊತ್ತಿರೋ ಹಾಗೆ ಇಪ್ಪತ್ತೈದು ಶಾಖೆಗಳನ್ನು ಹೊಂದಿದೆ,  ನಮ್ಮ ಊರಿನಲ್ಲೂ ಈ ಕಂಪನಿಯ ಒಂದು ಶಾಖೆ ಇದೆ.  ಹಲವಾರು ಜನ ಈ ಕಂಪನಿಯ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರೂ.......,  ಕೇವಲ ಮೂರು ನಾಲ್ಕು ಜನರ ಬಗ್ಗೆ ಮಾತ್ರವೇ ನಾನು ಕೇಳಿದ ವಿಷವು ತುಂಬಾ ಕುತೂಹಲಕಾರಿಯಾಗಿತ್ತು.  ಈ ಕಂಪನಿಯ ಯಜಮಾನರು ಹೊರದೇಶದಲ್ಲಿ ಇದ್ದಾರೆ.  ಕಂಪನಿಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಒಬ್ಬ ನಿರ್ದೇಶಕನಿಗೆ(ಡೈರೆಕ್ಟರ್) ಒಪ್ಪಿಸಿದ್ದಾರೆ.  ಯಜಮಾನರಿಗೆ ನಿರ್ದೇಶಕನ ಮೇಲಿನ ನಂಬಿಕೆಯೇ ಇದಕ್ಕೆ ಕಾರಣವಿರಬಹುದು.  ನಿರ್ದೇಶಕನು ಎಲ್ಲಾ ಶಾಖೆಗಳನ್ನೂ ನೋಡಿಕೊಳ್ಳಬೇಕಾಗಿರುವುದರಿಂದ, ಪ್ರತಿಯೊಂದು ಶಾಖೆಯಲ್ಲೂ ಒಬ್ಬೊಬ್ಬ ಮ್ಯಾನೇಜರ್ರನ್ನು ನೇಮಕ ಮಾಡಿದ್ದಾನೆ.  ನಾನು ಹೇಳುತ್ತಿರುವ ಆಫೀಸಿನಲ್ಲಿರುವ ಮ್ಯಾನೇಜರ್ ಜಾಸ್ತಿ ಓದಿಲ್ಲವಾದರೂ ತುಂಬಾ ಬುದ್ಧಿವಂತ ಹಾಗೂ ಮಾತುಗಾರ.  ತನ್ನ ಮಾತಿನ ಮೋಡಿಯಿಂದ ಯಾರನ್ನು ಬೇಕಾದರೂ ಸೋಲಿಸಿಬಿಡುತ್ತಾನೆ......!  "ತಾನು ನಿಸ್ವಾರ್ಥಿಯಾಗಿ, ಸಮಯಕ್ಕನುಗುಣವಾಗಿ ಕಂಪನಿಯ ಕೆಲಸ ಮಾಡುತ್ತೇನೋ ಇಲ್ಲವೋ ಎನ್ನುವುದಕ್ಕಿಂತ, ತನ್ನ ಕೈ ಕಳಗಿನ ಕೆಲಸಗಾರರು ಮಾಡಬೇಕೆಂಬುದು" ಇವನ ನಿಯಮ.  ಮ್ಯಾನೇಜರ್ ಸ್ವಲ್ಪ ಸ್ವಾರ್ಥಿಯೂ, ಆಸೆಬುರುಕನೂ ಹೌದು, ತನಗೆ ಏನಾದರೂ ಸಿಕ್ಕುವುದಾದರೆ ಮೂರನ್ನೂ ಬಿಟ್ಟು ಮುಂದೆ ಮುಂದೆ ಹೋಗುತ್ತಾನೆ.  ಆಫೀಸು ಅಂದಮೇಲೆ ಕಾನೂನು, ಕಡ್ಡಾಯ ಇತ್ಯಾದಿಗಳೆಲ್ಲಾ ಮಾಮೂಲಿ.......!  ಅದೇ ರೀತಿ ಈ ಆಫೀಸಿನಲ್ಲೂ ಇದೆ.  ಕೆಲಸದ ವೇಳೆ ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 5 ಗಂಟೆ ವರೆಗೆ. ಇದು ಕಡ್ಡಾಯದ ಸಮಯ, ಬೆಳಿಗ್ಗೆ 8 ಗಂಟೆ ಅಂದ್ರೆ ಸರಿಯಾಗಿ 8 ಕ್ಕೇ ಹಾಜರಿರಬೇಕು, ಸಂಜೆ 5 ಗಂಟೆ ಅಂದ್ರೆ 5 ಗಂಟೆವರಿಗೂ ಕಡ್ಡಾಯವಾಗಿ ಇರಬೇಕು.  ಸಮಯ ಹೆಚ್ಚು ಕಮ್ಮಿ ಆಗಬಾರದು.   ಬೆಳಿಗ್ಗೆ 10 ಗಂಟೆ ಹೊತ್ತಿಗೆ ಒಂದು ಕಾಫಿ ಬ್ರೇಕ್ ಇರುತ್ತೆ.   ಈ ಆಫೀಸಿನಲ್ಲಿ, ಸಮಯಕ್ಕೆ ಎಲ್ಲೂ ಇಲ್ಲದ ಬೆಲೆ  ಕೊಡುವುದು ಆಫೀಸಿನ ಮ್ಯಾನೇಜರ್ ನಿಯಮ.  ಹಾಗಂತ ಮ್ಯಾನೇಜರ್ ಒಂದು ದಿನವೂ ಅವರ ಸಮಯಕ್ಕೆ ಸರಿಯಾಗಿ ಬರುವುದಿಲ್ಲ.......!.  ಇವನು ನಿರ್ದೇಶಕರನ್ನು ಚೆನ್ನಾಗಿಟ್ಟುಕೊಂಡಿರುವುದರಿಂದ ಈ ಆಫೀಸು ಇವನು ಬಯಸಿದಂತೆ ನಡೆಯುತ್ತದೆ.   ಈ ಆಫೀಸಿನೊಳಗೆ ಮೂರು ಜನ ದೊಡ್ಡಹುದ್ದೆಯಲ್ಲಿ, ಹಾಗೂ ಚಿಕ್ಕ ಪುಟ್ಟ ಹುದ್ದೆಯಲ್ಲಿ ಇನ್ನಿತರರು ಇದ್ದಾರೆ.  "ಈ ದೊಡ್ಡ ಹುದ್ದೆಯಲ್ಲಿರುವ ಮೂರೂ ಜನರದ್ದೂ ಒಂದೇ ಕೆಲಸ, ಒಂದೇ ಗ್ರೇಡು, ಒಂದೇ ಸಂಬಳ".  ಈ ದೊಡ್ಡ ಹುದ್ದೆಯಲ್ಲಿರುವ ಮೂರು ಜನರು ಮೂರು ತರಹ ಇದ್ದಾರೆ.......!   ಅವರುಗಳ ಬಗ್ಗೆ ಹೇಳ್ತೀನಿ ಕೇಳಿ..............!
 

ಮೊದಲೆನೆಯವನು :-  ಇವನಿಗೆ ಸಮಯ ಪ್ರಜ್ಞೆ ಜಾಸ್ತಿ.   ಬೆಳಗ್ಗೆ 8 ಗಂಟೆ ಎಂದರೆ  ಹತ್ತು ನಿಮಿಷಗಳು ಮುಂಚಿತವಾಗಿಯೇ ಬರುವ ರೂಢಿಯುಳ್ಳವನು.  ಬಂದ ಮೇಲೆ ಯಾರೊಂದಿಗೂ ಹೆಚ್ಚಾಗಿ ಮಾತನಾಡುವುದಿಲ್ಲ.  ಬಂದವನೇ ತನ್ನ ಕುರ್ಚಿಯಲ್ಲಿ ಕೂರುತ್ತಾನೆ.  ಇವನು ಏನು ಕೆಲಸ ಮಾಡುತ್ತಾನೋ ದೇವರೇ ಬಲ್ಲ.........!  ಕೆಲಸ ಮಾಡುವವನಂತೆ ನಟಿಸುತ್ತಾನೆ, ಆ ಪುಣ್ಯಾತ್ಮನಿಗೆ ಏನೂ ಕೆಲಸ ಬರೋಲ್ವೋ ......., ಅಥವಾ ಬಂದ್ರೂ ಮಾಡಲ್ವೋ....... ಗೊತ್ತಿಲ್ಲ.  ಆಫೀಸಿನ ಸಮಯಕ್ಕೆ ಸರಿಯಾಗಿ ಬರಬೇಕೆಂಬುದೇ..... ಇವನ ಕೆಲಸ ಎಂದು ತಿಳಿದುಕೊಂಡಿರುವಾತ.  ಆದರೂ......... ಒಳ್ಳೇ ಕೆಲಸಗಾರನೆಂದು ಮ್ಯಾನೇಜರ್ ಹತ್ತಿರ ಹೆಸರು  ಬೇರೇ ತೆಗೆದುಕೊಂಡಿದ್ದಾನೆ (ಮೊದಲೇ ಹೇಳಿದ್ದೆ ಮ್ಯಾನೇಜರ್ ಸಮಯಕ್ಕೆ ಹೆಚ್ಚು ಬೆಲೆ ಕೊಡುತ್ತಾನೆ ಅಂತ....... ಅದಕ್ಕೇ..... ಇರಬಹುದು........!  ಅಥವಾ ....ಮ್ಯಾನೇಜರ್ ಗೆ, ಹೋಗುತ್ತಾ.... ಬರುತ್ತಾ..... ನಮಸ್ಕಾರ ಹಾಕುತ್ತಾ...., ಅವರಿವರ ಬಗ್ಗೆ ಹೇಳುತ್ತಿರುತ್ತಾನೆ ಅದಕ್ಕಿದ್ದರೂ..... ಇರಬಹುದು......!).  ಮೊದಲನೆಯವನು ಹೀಗಾದರೆ ಎರಡನೆಯವನು .............?

ಎರಡನೆಯವನು :-  ಇವನು ಸ್ವಲ್ಪ ಸಾಧು ಸ್ವಭಾವದವನು.  ಈ ಆಫೀಸಿನಲ್ಲಿ ಎಲ್ಲರಿಗಿಂತ ಇವನದೇ ಅತಿ ಹೆಚ್ಚು ಸರ್ವೀಸು.  ಇದುವರಿಗೂ ಯಾರನ್ನೂ ಎದುರು ಹಾಕಿಕೊಂಡಿಲ್ಲ........!  ಆಫೀಸಿನಲ್ಲಿ ಎಲ್ಲರಿಗೂ ಇವನನ್ನು ಕಂಡರೆ ಆದೀತು.   ಇನ್ನು ಸಮಯದ ಬಗ್ಗೆ ಹೇಳಬೇಕೆಂದರೆ ಮೊದಲನೆಯವನಷ್ಟು ಇಲ್ಲದಿದ್ದರೂ ಒಂದು ಒಂದರ್ಧ ಗಂಟೆ ತಡವಾಗಿ ಬರುತ್ತಾನೆ.  ಬಂದಮೇಲೆ ..........?  ಆಫೀಸಿನ ಕೆಲಸ ಸ್ವಲ್ಪ ಮಾಡಿ, ಜೊತೆಗೆ ತನ್ನ ಸ್ವಂತ ಕೆಲಸಗಳನ್ನು ಮಾಡಿಕೊಳ್ಳಲಾರಂಭಿಸುತ್ತಾನೆ.   ನೋಡಿದರೆ ಆಫೀಸಿನ ಕೆಲಸ ಮಾಡುವಂತೆ ಕಾಣುತ್ತಿರುತ್ತದೆ....,  ಆದರೆ ಸ್ವಂತ ಕೆಲಸಗಳನ್ನೇ ಮಾಡುವುದು ಹೆಚ್ಚು.   ಮ್ಯಾನೇಜರ್ ಗೆ ಇವನ ಮೇಲೆ ಸ್ವಲ್ಪ ಸಿಟ್ಟು,  ಸ್ವಲ್ಪ ಅಸಹನೆಗಳಿವೆ. ಮ್ಯಾನೇಜರ್ ಇವನಿಗೆ ಆಗಾಗ ಬಯ್ಯುತ್ತಿರುತ್ತಾನೆ (ಸಮಯವನ್ನು ಅನುಸರಿಸುವುದಿಲ್ಲವೆಂದು).  ಅಷ್ಟಾದರೂ ಒಂದೇ ತರಹ........, ಇವನಲ್ಲಿ ಬದಲಾವಣೆಯೇ ಇಲ್ಲ.........!  ಇನ್ನು ಮೂರನೆಯವನ ಕಥೆ.................... :-)  .....?

ಮೂರನೆಯವನು :-  ಇವನ ಬಗ್ಗೆ ಏನು ಹೇಳಲಿ......?   ಸರ್ವೀಸ್ ನಲ್ಲಿ ಮೊದಲನೆಯವನಿಗಿಂತ ಹೆಚ್ಚು, ಎರಡನೆಯವನಿಗಿಂತ ಕಡಿಮೆ.   ಸ್ವಭಾವದಲ್ಲಿ ಮೊದಲನೆಯವನಿಗಿಂತ ಮಾತು ಜಾಸ್ತಿ, ಎರಡನೆಯವನಿಗಿಂತ ಸಿಟ್ಟು ಜಾಸ್ತಿ :) .   ಇವನಿಗೆ ಸ್ವಲ್ಪವೂ ಸಮಯ ಪ್ರಜ್ಞೆಯೇ ಇಲ್ಲ.......!  ಇವನು ಬರುವ ಮತ್ತು ಹೋಗುವ ಸಮಯವೇ ಆಫೀಸಿನ ಸಮಯ.  ಮ್ಯಾನೇಜರ್ ಗಂತೂ ಇವನನ್ನು ಕಂಡರೇ ..... ಆಗೋಲ್ಲ.   ಆದರೆ ಇವನನ್ನು ಕಂಡರೆ ಮ್ಯಾನೇಜರ್ ತುಂಬಾ ಹೆದರುತ್ತಾನೆ.  ಏಕೆಂದರೆ ಆಫೀಸಿನ ವಿಷಯಗಳನ್ನು ಇದ್ದಕ್ಕಿದ್ದಂತೆ ಹೇಳುವುದು ಇವನ ಸ್ವಭಾವ.  ಯಾರಿಗೂ ಹೆದರುವುದಿಲ್ಲ...........!  ಯಾಕೆಂದು ಕೇಳಿದರೆ "ತಪ್ಪುಮಾಡಿದವನು ಹೆದರಬೇಕು" ಅನ್ನುತ್ತಾನೆ.  ಇವನಿಗೆ ಸಮಯ ನಿರ್ಬಂಧ ಮಾಡಲು ಹೋದರೆ ತನಗೂ ಸಮಯ ನಿರ್ಬಂಧ ಮಾಡುತ್ತಾನೆಂಬ ಹೆದರಿಕೆ ಮ್ಯಾನೇಜರ್ ಗೆ.........!  ಇನ್ನು ಕೆಲಸದ ಬಗ್ಗೆ ಹೇಳಬೇಕೆಂದರೆ "ಆಫೀಸಿನಲ್ಲಿ ಇರುವಷ್ಟು ಹೊತ್ತು ನಿಯತ್ತಿನಿಂದ ಆಫೀಸಿನ ಕೆಲಸ ಮಾಡುತ್ತಾನೆ".
 
     10 ಗಂಟೆ ಕಾಫಿ ಬ್ರೇಕ್ ನಲ್ಲಿ ಮೊದಲನೆಯವನು ಹೋಗಿ ಒಂದರ್ಧ ಮುಖ್ಖಾಲು ಗಂಟೆ ಬಿಟ್ಟು ಬರುತ್ತಾನೆ.  ಎರಡನೆಯವನು ಹೋದ್ರೆ ಬಾರ ಬಿಟ್ರೆ ಸಿಕ್ಕ, ಒಂದೊಂದು ದಿನ ಕಾಫಿ ಬ್ರೇಕ್ ನಲ್ಲೇ ಡ್ಯೂಟಿ ಮುಗಿಸಿಬಿಡುತ್ತಾನೆ, ತಿರುಗೆ ಆಫೀಸ್ ಗೆ ಬರುವುದೇ ಇಲ್ಲ.  ಮೂರನೆಯವನು ಆಫೀಸಿಗೆ ಬಂದ ಮೇಲೆ ಎಲ್ಲೂ ಹೋಗೋಲ್ಲ, ಮನೆಗೆ ಹೋಗುವತನಕ ಆಫೀಸಿನ ಕೆಲಸ ಮಾಡಿ ಹೋಗುತ್ತಾನೆ.  ಇದು ನಾನು ನೋಡಿದ ಆಫೀಸಿನ ವ್ಯವಸ್ಥೆ.

ಈಗ ಹೇಳಿ "ಯಾರು ಹಿತವರು ನಿಮಗೆ ಈ ಮೂವರೊಳಗೆ............."?



ನಿಮ್ಮ, ಗುರುಪ್ರಸಾದ್,
ಶೃಂಗೇರಿ.,