ಯಾರೂರು ಚಂದ?

ಯಾರೂರು ಚಂದ?

ಬರಹ

ನನ್ನೂರಂತೆ ಹಳ್ಳಿಗಾಡು
ಹಂದಿ ನಾಯಿ ಮರಿಗಳ ಗೂಡು
ಅನಾಗರಿಕ, ಅಸಭ್ಯರ ನೆಲೆವೀಡು
ಡಾಂಬರಿನ ರಸ್ತೆಯಿಲ್ಲದ ಸುಡುಗಾಡು ... ಅಂತೆ

ಗೊಬ್ಬಳಿ ಮುಳ್ಳಿನ ಹಾಸಿಗೆಯ ಹಾದಿ
ಸಿಡುಬಿನ ಕಲೆಯ ಹರಳೆಣ್ಣೆಯ ಮುಖ
ತಾಯ ಭಾಷೆ ಬಿಟ್ಟಿನ್ನಾವದನ್ನೂ ಅರಿಯದ ಜನ
ಮೋಸ ತಟವಟ ವಂಚನೆ ತಿಳಿಯದ ಮನ ... ಅಂತೆ

ಊರಿಗೊಂದೇ ಅಡುಗೆ ಮನೆ, ಉರುವಲೊಲೆ
ಸಹಬಾಳ್ವೆ ಸಮನ್ವಯವೇ ಜೀವನದ ಮಂತ್ರ
ಜಾತಿ ಮತ ಭೇದವನರಿಯದ ಅಣ್ಣ ತಮ್ಮಂದಿರು
ಕೋರ್ಟು ಕಛೇರಿ ಜಗಳ ಕದನವರಿಯದ ನನ್ನವರು
ಮುದ್ದೆ ತಿನುವ ಮುಗ್ಧರು

ನಾಗರಿಕತೆಗೆ ಕನ್ನಡಿ ಇವರೂರು
ಪೌಡರ್ ಸ್ನೋ ಬಣ್ಣ ಹಚ್ಚಿದ ಮುಖದವರು
ಎಲ್ಲೆಲ್ಲೂ ರಾಜ ಬೀದಿ, ಸಿಮೆಂಟಿನ ನೆಲ
ನಾಗರಿಕತೆಯ ಕಲಿಸುವ ಪಾಠಶಾಲೆ ...

ಪರಕೀಯ ಭಾಷೆಯ ನಿರರ್ಗಳ ಭಾಷಿಸಬಲ್ಲವರು
ಕಾಗೆ ಗುಬ್ಬಚ್ಚಿ ಪಶುಗಳ ಕಾಣದವರು
ಚಂದ್ರಮನ ನೆಲೆಯಂತೆ ತಣ್ಣಗಿರುವ ಊರು
ಆಡದೆಲೆ ನೋಡದೆಲೆ ಒಬ್ಬರಿಗೊಬ್ಬರು
ಕತ್ತಿಯ ಮಸೆಯುವರು

ಬೆಡಗು ಬಿನ್ನಾಣ ಅಂದ ಚಂದಗಳ ತವರೂರು
ದೂರಕೆ ಕಾಣುವರು ನುಣ್ಣನೆಯ ಮನದವರು
ಒಬ್ಬರಿಲ್ಲದೇ ಇನ್ನೊಬ್ಬರಿರಲಾಗದ ಪರಾವಲಂಬಿಗಳು
ಅಣ್ಣ ತಮ್ಮ ಅಪ್ಪ ಅಮ್ಮ ಪ್ರತ್ಯೇಕವಿರುವ
ಏಕಾಣು ಜೀವಿಗಳು
ಸಣ್ಣಕ್ಕಿ ಅನ್ನ ತಿನುವ ನಯವಂಚಕರು

ನೀವೇ ಹೇಳಿ ...
ನನ್ನೂರು ಚಂದವೋ ಅವರೂರು ಚಂದವೋ ...