ಯಾರ ಬೆನ್ನಿಗೆ ಚೂರಿ…?!

ಯಾರ ಬೆನ್ನಿಗೆ ಚೂರಿ…?!

ಮತದಾರನ ಬೆನ್ನಿಗೆ - ಪ್ರಜಾಪ್ರಭುತ್ವದ ಹೃದಯಕ್ಕೆ - ಮನುಷ್ಯತ್ವದ ನಂಬಿಕೆಗೆ - ಸಮಾಜದ ಋಣಕ್ಕೆ -  ಸ್ವಾತಂತ್ರ್ಯದ ತ್ಯಾಗಕ್ಕೆ.. ಆಪರೇಷನ್ ಹಸ್ತ - ಆಪರೇಷನ್ ಕಮಲ - ಆಪರೇಷನ್ ಸಕ್ಸಸ್ - ಪೇಷಂಟ್ ಡೆಡ್. ಅಧಿಕಾರದ ದಾಹಕ್ಕಾಗಿ - ಮೋಹಕ್ಕಾಗಿ - ಸ್ವಾರ್ಥಕ್ಕಾಗಿ ಕುದುರೆ ವ್ಯಾಪಾರ ಯಾರೇ ಮಾಡಲಿ ನಮ್ಮ ವಿರೋಧದ ಧ್ವನಿ ಸದಾ ಇರುತ್ತದೆ ಪಕ್ಷಾತೀತವಾಗಿ. ಸಮರ್ಥನೆಯ ಪ್ರಶ್ನೇಯೇ ಇಲ್ಲ. ಅವರಿಗೆ ಅಧಿಕಾರದ ಮೌಲ್ಯ ಮುಖ್ಯ. ನಮಗೆ ಪ್ರಾಕೃತಿಕ ಮೌಲ್ಯ, ಮಾನವೀಯ ಮೌಲ್ಯ, ಪ್ರಜಾಪ್ರಭುತ್ವದ ಮೌಲ್ಯ, ಭಾರತೀಯ ನೈತಿಕ ಮೌಲ್ಯಗಳು ಮುಖ್ಯ..

ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸಿ ಭ್ರಷ್ಟಾಚಾರದ ಬಗ್ಗೆ ಭಾಷಣ ಮಾಡುವ ನರೇಂದ್ರ ಮೋದಿಯವರೇ ಆಗಿರಲಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಮಾಡಿ ಮೌಲ್ಯಗಳ ಬಗ್ಗೆ ಮಾತನಾಡುವ ರಾಹುಲ್ ಗಾಂಧಿಯವರೇ ಇರಲಿ ನಮ್ಮ ನಿಲುವು ಮಾತ್ರ ಸತ್ಯದ‌ ಪರ. ಶಾಸಕರೆಂಬ ವ್ಯಾಪಾರದ ಕುದುರೆಗಳನ್ನು ( ಖರೀದಿಯಾಗುವವರಿಗೆ ಮಾತ್ರ ಅನ್ವಯ ) ಮಾರುಕಟ್ಟೆಯಲ್ಲಿ ಖರೀದಿಸಿ ಸರ್ಕಾರ ಮಾಡುವ ಯಾವುದೇ ಪಕ್ಷದ ನಾಯಕರು ತ್ರಿವರ್ಣ ಧ್ವಜವನ್ನು ಹಾರಿಸುವ ಅಥವಾ ದೇಶದ ಜನರಿಗೆ ಮೌಲ್ಯಗಳ ಬಗ್ಗೆ ಮಾತನಾಡುವ ನೈತಿಕತೆಯನ್ನೇ ಕಳೆದುಕೊಳ್ಳುತ್ತಾರೆ.

ಸದ್ಯದ ರಾಜಕೀಯದ ಬಹುತೇಕ ನಾಯಕರು ಮುಖವಾಡದ ಮರೆಯಲ್ಲಿ ಅವಿತಿರುವ ನರಿಗಳು ಅಥವಾ ಊಸರವಳ್ಳಿಗಳು. ನಾವು ಯೋಚಿಸಿ ಮತ ಹಾಕುವುದು ಯಾವ ಪಕ್ಷದ ಅಭ್ಯರ್ಥಿಗೋ, ಅವರು ಗೆದ್ದ ನಂತರ ಸೇರುವುದು ಮತ್ಯಾವ ಪಕ್ಷವೋ, ಮತ್ತೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಇನ್ಯಾವೋ ಪಕ್ಷವೋ ಇಂತಹ ಸಾಮಾನ್ಯ ಪರಿಸ್ಥಿತಿಯಲ್ಲಿ ನಾವು ಮತದಾನ ಪವಿತ್ರ ದಾನ ಎಂದು ಪ್ರಚಾರ ಮಾಡುವುದು ಯಾವ ಸಾಧನೆಗಾಗಿ...

ಭಾರತದ ಚುನಾವಣಾ ಆಯೋಗ ಸಚಿನ್ ತೆಂಡೂಲ್ಕರ್ ಅವರನ್ನು ಇಡೀ ದೇಶದ ಚುನಾವಣಾ ರಾಯಭಾರಿಯಾಗಿ ಆಯ್ಕೆ ಮಾಡಿದೆ ಮತದಾರರನ್ನು ಜಾಗೃತ ಮಾಡಲು.‌ ಪಾಪ ಅವರು ಒಬ್ಬ ಬಲಿಪಶುವಿನ ರೀತಿ ಕಾಣುತ್ತಿದ್ದಾರೆ. ಅತ್ಯಂತ ಸಣ್ಣ ವಯಸ್ಸಿನಿಂದಲೇ ಕ್ರಿಕೆಟ್ ಆಟ ಪ್ರಾರಂಭಿಸಿ ಕ್ರಿಕೆಟ್ ದೇವರು ಎಂದು ‌ಕ್ರಿಕೆಟ್ ಅಭಿಮಾನಿಗಳಿಂದ ಕರೆಸಿಕೊಳ್ಳುವ ಜಗತ್ತಿನ ವಿಖ್ಯಾತ ಕ್ರಿಕೆಟರ್ ಭಾರತ ರತ್ನ ತೆಂಡೂಲ್ಕರ್ ಇಲ್ಲಿಯವರೆಗೆ ಕ್ರಿಕೆಟ್ ಹೊರತುಪಡಿಸಿದ ವಿಷಯಗಳಲ್ಲಿ ಎಷ್ಟು ಓದಿದ್ದಾರೆ‌. ಯಾವ ಅಧ್ಯಯನ ಮಾಡಿದ್ದಾರೆ. ಭಾರತದ ಮಣ್ಣಿನ ಗುಣ, ಭಾರತೀಯರ ಮನಸ್ಥಿತಿ, ಚುನಾವಣಾ ಶೈಲಿಯ ಬಗ್ಗೆ ಅವರಿಗೆ ಎಷ್ಟು ಮಾಹಿತಿ ಇದೆ ಎಂಬುದು ಚರ್ಚಿಸಬೇಕಾದ ವಿಷಯ. ಆದರೆ ಅವರಿಗೆ ಈ ಮೂಲಕ ಒಂದು ಮನವಿ...

ಮಾನ್ಯ ತೆಂಡೂಲ್ಕರ್, ಅವರೇ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಮತ್ತು ಒಂದು ರೀತಿಯ ವೈವಿಧ್ಯಮಯ ಮಿನಿ ವಿಶ್ವ ಈ ಭಾರತ. ಇಲ್ಲಿ ಸರಿ ಸುಮಾರು ಹತ್ತಿರ ಹತ್ತಿರ 100 ಕೋಟಿ (ಸದ್ಯ 90 ಕೋಟಿ ಇರಬಹುದು) ಮತದಾರರು ಇದ್ದಾರೆ. ಅವರನ್ನೆಲ್ಲಾ ಹೇಗೆ ಜಾಗೃತ ಗೊಳಿಸುವಿರಿ. ಯಾವ ಯಾವ ಅಂಶಗಳನ್ನು ಅವರಿಗೆ ಮನವರಿಕೆ ಮಾಡಿಕೊಡುವಿರಿ. ವಿಭಿನ್ನ ಭಾಷೆಯ, ವಿಭಿನ್ನ ಧರ್ಮದ, ವಿಭಿನ್ನ ಜಾತಿಯ, ವಿಭಿನ್ನ ಪ್ರದೇಶದ, ವಿಭಿನ್ನ ಸಂಸ್ಕೃತಿಯ, ವಿಭಿನ್ನ ಆರ್ಥಿಕ ಶೈಕ್ಷಣಿಕ ವರ್ಗದ ಜನರನ್ನು ಮನವೊಲಿಸುವ ಮಾನದಂಡಗಳೇನು?

" ಮತದಾನ ಒಂದು ಪವಿತ್ರ ಕರ್ತವ್ಯ. ಮತ ಹಾಕಿ ಪ್ರಜಾಪ್ರಭುತ್ವ ಉಳಿಸಿ " ಎನ್ನಬಹುದು ಅಥವಾ " ನಮ್ಮ ಮತ ಮಾರಾಟಕ್ಕಿಲ್ಲ. ಒಳ್ಳೆಯವರಿಗೆ ಮತ ಹಾಕೋಣ " ಎನ್ನಬಹುದು.  " ಮತ ನಮ್ಮ ಹಕ್ಕು ಅದನ್ನು ಚಲಾವಣೆ ಮಾಡೋಣ " ಎನ್ನಬಹುದು, ಹೀಗೆ ನಾನಾ ರೀತಿಯ ಘೋಷವಾಕ್ಯ ಉಚ್ಚರಿಸಬಹುದು. ಆದರೆ ನಿಜವಾಗಿಯೂ ವಾಸ್ತವದಲ್ಲಿ ಜಾಗೃತರಾಗಬೇಕಿರುವುದು ಮತದಾರರು ಮಾತ್ರವಲ್ಲ ಚುನಾವಣೆಯಲ್ಲಿ ಆಯ್ಕೆಯಾದ ಜನ ಪ್ರತಿನಿಧಿಗಳು.

" ಪ್ರಜಾಪ್ರಭುತ್ವ ಉಳಿಯುವುದು ಮತದಾರನ ಮತದಾನದಿಂದ ಅಲ್ಲ, ಅವರಿಂದ ಆಯ್ಕೆಯಾದ  ಪ್ರತಿನಿಧಿಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ದಕ್ಷತೆ ಹಾಗು ಪ್ರಾಮಾಣಿಕತೆಯಿಂದ ನಿರ್ವಹಿಸಿದಾಗ " ಹೌದು ಮತದಾನ ಚುನಾವಣಾ ಪ್ರಕ್ರಿಯೆಯ ಒಂದು ಮುಖ್ಯ ಭಾಗ ಎಂಬುದು ನಿಜ.  ಮತದಾರರು ತಮ್ಮ ಪ್ರತಿನಿಧಿಯನ್ನು ತಮ್ಮ ಮತದ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾರೇ ಆಯ್ಕೆಯಾದರು ಅವರು ಅವರ ಇಷ್ಟದಂತೆ ಅಧಿಕಾರ ನಡೆಸಲು ಸಾಧ್ಯವಿಲ್ಲ ಮತ್ತು ಆಯ್ಕೆಯಾದ ವ್ಯಕ್ತಿಗೆ ಆ ಕ್ಷೇತ್ರವನ್ನು ಗುತ್ತಿಗೆ ನೀಡಿದಂತೆ ಆಗುವುದಿಲ್ಲ. ಆತನು ಸಹ ಸಂವಿಧಾನಾತ್ಮಕ ನಿಯಮಾವಳಿಗಳ ಪ್ರಕಾರವೇ ಆಡಳಿತ ನಡೆಸಬೇಕು.

ಭಾರತದಲ್ಲಿ ಇರುವುದು ಬಹುಪಕ್ಷೀಯ ಸಂಸದೀಯ ಪ್ರಜಾಪ್ರಭುತ್ವ. ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು. ಒಂದು ವೇಳೆ ಚುನಾವಣೆಯಲ್ಲಿ A or B or C or D....... ಯಾರೇ ಆಯ್ಕೆಯಾಗಲಿ ನೀತಿ ನಿಯಮಗಳಿಗೆ ಹೊರತಾಗಿ ಅಂತಹ ದೊಡ್ಡ ವ್ಯತ್ಯಾಸ ಆಗಬಾರದು. ಕಾನೂನಿನ ಅಡಿಯಲ್ಲಿಯೇ ಎಲ್ಲರೂ ಕಾರ್ಯನಿರ್ವಹಿಸಬೇಕು. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಗೆದ್ದ ಅಭ್ಯರ್ಥಿಯ ಅಭಿಮಾನಿಗಳು ಅಥವಾ ಆಯಾ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ‌ ಸಂಭ್ರಮಿಸುವುದನ್ನು ನೋಡಿದಾಗ ಭ್ರಷ್ಟಾಚಾರದ ಮೂಲ ಬೇರುಗಳನ್ನು ಗುರುತಿಸಬಹುದು. ಗೆದ್ದ ವ್ಯಕ್ತಿ ನಮ್ಮ ಸ್ನೇಹಿತರೋ ಪರಿಚಿತರೋ ಆಗಿದ್ದರೆ ಆತ ನಮಗೆ ಲಾಭ ಮಾಡಿ ಕೊಡುತ್ತಾನೆ ಮತ್ತು ಆತನೂ ಲಾಭ ಮಾಡಿಕೊಳ್ಳುತ್ತಾನೆ ಎಂಬುದು ಬಹಿರಂಗ ಸತ್ಯವಾಗಿರುವಾಗ ಪ್ರಜಾಪ್ರಭುತ್ವ ಮತ್ತು ಕಾನೂನು ಒಂದು ರೀತಿಯ ಅಣಕು ವ್ಯವಸ್ಥೆ ಎಂದೆನಿಸುತ್ತದೆ.

ಕಳ್ಳನೊಬ್ಬ ದರೋಡೆ ಮಾಡಲು ಸನ್ಯಾಸಿಯ ವೇಷ ಧರಿಸುವುದು, ಅದು ತಿಳಿದಿದ್ದರು ಮನೆಯ ಒಡೆಯ ಅವನಿಗೆ ಮಂಗಳಾರತಿ ಮಾಡಿ ಮನೆಗೆ ಸ್ವಾಗತಿಸುವುದು, ಕಳ್ಳ ಕಳ್ಳತನದ ಹಣವನ್ನು ನಮಗೆ ನೀಡಿತ್ತಾನೆ ಎಂದು ಮನೆ ಒಡೆಯ ನಿರೀಕ್ಷಿಸುವುದು,  ನಂತರ ಕಳ್ಳ ಸ್ವಲ್ಪ ಹಣ ಕೊಟ್ಟಂತೆ ಮಾಡಿ ಕೊನೆಗೆ ಇಡೀ ಮನೆಯನ್ನು ದೋಚಿಕೊಂಡು ಹೋಗುವುದು, ಇದು ಅರ್ಥವಾದ ಮೇಲೆ ಮನೆಯ ಒಡೆಯ ಬಾಯಿ ಬಾಯಿ ಬಡಿದುಕೊಂಡು ರೋಧಿಸುವುದು ಎಲ್ಲವೂ ಒಂದು ನಾಟಕದಂತೆ ಕಾಣುತ್ತಿದೆ. ನಾವು ನೀವು ಈ ನಾಟಕದ ಪ್ರೇಕ್ಷಕರು.

ಆದ್ದರಿಂದ ತೆಂಡೂಲ್ಕರ್ ಅವರು ನಿಜವಾಗಿಯೂ ಬದಲಾವಣೆ ಬಯಸುವ ಮನಸ್ಥಿತಿಯವರಾದರೆ ಜನ ಪ್ರತಿನಿಧಿಗಳ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿ. ಅವರಿಗೆ ಪ್ರಾಮಾಣಿಕತೆಯ ಜಾಗೃತಿ ಮೂಡಿಸಲಿ. ಪಕ್ಷಾಂತರಿಗಳ ಮುಖವಾಡ ಕಳಚಲಿ. ಈ ನೆಲದ ಋಣ ತೀರಿಸಲಿ. ಹಾಗೆಯೇ ಪಕ್ಷ ಮತ್ತು ಅಭ್ಯರ್ಥಿಗಳು ಯಾರೇ ಆಗಿರಲಿ ಮಾರಾಟವಾಗುವ ಜನ ಪ್ರತಿನಿಧಿಗಳನ್ನು ತಿರಸ್ಕರಿಸುವ ಮನೋಭಾವ ಮತ್ತು ಜಾಗೃತ ಪ್ರಜ್ಞೆ ಮತದಾರರಲ್ಲಿ ಮೂಡಲಿ. ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಬೆನ್ನಿಗೆ ಚೂರಿ ಹಾಕುವ ರಾಜಕಾರಣಿಗಳಲ್ಲ ಅವರನ್ನು ಸೋಲಿಸುವ ಮತದಾರರಾಗಲಿ ಎಂದು  ಆಶಿಸುತ್ತಾ...

-ವಿವೇಕಾನಂದ ಎಚ್ ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ