ಯಾರ ಸರದಿ ಯಾವಾಗೋ ?!

S S L C ವರೆಗೆ ಒಟ್ಟಿಗೆ ಓದಿದ ನಾಲ್ವರು ಸ್ನೇಹಿತರು ಅಂತಿಮ ಪರೀಕ್ಷೆಗಳ ನಂತರ ಹೋಟೆಲ್‌ಗೆ ಹೋಗಿ ಉಪಹಾರ ಸೇವಿಸಲು ನಿರ್ಧರಿಸಿದರು. ಅವರು ತಮ್ಮ ಸೈಕಲ್‌ಗಳಲ್ಲಿ ಹೋಟೆಲ್ ತಲುಪಿದರು. ದಿನೇಶ್, ಸಂತೋಷ್, ಮನೀಷ್, ಪ್ರವೀಣ್ ಚಹಾ ತಿಂಡಿ ತಿಂದು ಮಾತನಾಡತೊಡಗಿದರು. ಐವತ್ತು ವರ್ಷಗಳ ನಂತರ ಇದೇ ದಿನಾಂಕದಂದು, ಏಪ್ರಿಲ್ 04 ರಂದು ಇದೇ ಹೋಟೆಲ್‌ನಲ್ಲಿ ಮತ್ತೆ ಭೇಟಿಯಾಗಲು ನಾಲ್ವರೂ ನಿರ್ಧರಿಸಿದರು. ಅಲ್ಲಿಯವರೆಗೆ ನಾವೆಲ್ಲರೂ ಕಷ್ಟಪಟ್ಟು ದುಡಿದು ಉನ್ನತ ಸ್ಥಾನ ತಲುಪಬೇಕು ಎಂದು ಸಂಕಲ್ಪ ಮಾಡಿಕೊಂಡರು. ಆ ಗೆಳೆಯರಿಗೆ ಅಲ್ಲಿಯವರೆಗೂ ಟೀ, ತಿಂಡಿ ನೀಡಿದ ಮಾಣಿ (supplier) ರಾಜು ಇದನ್ನೆಲ್ಲಾ ಕೇಳಿಸಿಕೊಂಡು,ಅಣ್ಣಾ ನಾನೂ ಸಹ ಈ ಹೋಟೆಲ್‌ನಲ್ಲಿ ನಿಮ್ಮೆಲ್ಲರಿಗಾಗಿ ಕಾಯುತ್ತೇನೆ ಎಂದನು.
ಮುಂದಿನ ಶಿಕ್ಷಣಕ್ಕಾಗಿ ನಾಲ್ವರೂ ಬೇರೆಯಾದರು. ದಿನಗಳು, ತಿಂಗಳುಗಳು, ವರ್ಷಗಳು ಕಳೆದವು. ಐವತ್ತು ವರ್ಷಗಳಲ್ಲಿ ಆ ನಗರದಲ್ಲಿ ಆಮೂಲಾಗ್ರ ಬದಲಾವಣೆಗಳಾದವು, ನಗರದ ಜನಸಂಖ್ಯೆ ಹೆಚ್ಚಾಗಿದೆ, ರಸ್ತೆಗಳು, ಮೇಲ್ಸೇತುವೆಗಳು, ನಗರದ ಚಿತ್ರಣವನ್ನು ಬದಲಾಯಿಸಿವೆ. ಈಗ ಆ ಹೋಟೆಲ್ ಪಂಚತಾರಾ ಹೋಟೆಲ್ ಆಗಿ ಮಾರ್ಪಟ್ಟಿದೆ, ರಾಜು ಈಗ ಮಾಣಿಯಿಂದ ಆ ಹೋಟೆಲ್‌ಗೆ ಮ್ಯಾನೇಜರ್ ಆಗಿದ್ದಾನೆ. ಐವತ್ತು ವರ್ಷಗಳ ನಂತರ, ನಿಗದಿತ ದಿನಾಂಕವಾದ ಏಪ್ರಿಲ್ 04 ರಂದು ಮಧ್ಯಾಹ್ನ, ಐಷಾರಾಮಿ ಕಾರೊಂದು ಹೋಟೆಲ್‌ನ ಎದುರು ಬಂದು ನಿಂತಿತು..
ದಿನೇಶ ಕಾರಿನಿಂದಿಳಿದು ವರಾಂಡದತ್ತ ನಡೆಯತೊಡಗಿದ, ದಿನೇಶನೀಗ ಆಭರಣ ವ್ಯಾಪಾರಿ, ಮೂರು ಆಭರಣ ಮಳಿಗೆಗಳಿವೆ. ಪ್ರವೀಣ್ ಸರ್ ಒಂದು ತಿಂಗಳ ಹಿಂದೆ ನಿಮಗಾಗಿ ಈ ಟೇಬಲ್ ಅನ್ನು ಬುಕ್ ಮಾಡಿದ್ದಾರೆ ಎಂದು ರಾಜು ಹೇಳುತ್ತಾನೆ. ಒಂದು ಗಂಟೆಯಲ್ಲಿ ಸಂತೋಷ್ ಬಂದನು, ಸಂತೋಷ್ ತನ್ನ ಊರಿನಲ್ಲಿದೊಡ್ಡ ಪ್ರತಿಷ್ಠಿತ ಬಿಲ್ಡರ್ ದಿನೇಶ್ ಮತ್ತು ಸಂತೋಷ್ ಇಬ್ಬರೂ ಮಾತನಾಡುತ್ತಾ ಇತರ ಸ್ನೇಹಿತರಿಗಾಗಿ ಕಾಯುತ್ತಿದ್ದರು, ಮೂರನೇ ಸ್ನೇಹಿತ ಮನೀಶ್ ಅರ್ಧ ಗಂಟೆಯಲ್ಲಿ ಬಂದು ಅವರನ್ನು ಸೇರಿಕೊಂಡನು. ಮನೀಷ್ ದೊಡ್ಡ ಉದ್ಯಮಿಯಾಗಿದ್ದನು .
ಮೂವರು ಗೆಳೆಯರು ಪದೇ ಪದೇ ಬಾಗಿಲ ಕಡೆ ನೋಡುತ್ತಿದ್ದಾರೆ, ಪ್ರವೀಣ್ ಯಾವಾಗ ಬರುತ್ತಾನೆoದು ಕಾತುರದಿಂದ ಕಾಯುತ್ತಿದ್ದಾರೆ. ಐವತ್ತು ವರ್ಷಗಳ ನಂತರ ಮೂವರೂ ಒಬ್ಬರನ್ನೊಬ್ಬರು ಭೇಟಿಯಾಗಿದ್ದುದಕ್ಕೆ ಎಲ್ಲರೂ ಬಹಳ ಸಂತೋಷ ಪಡುತ್ತಿದ್ದಾರೆ ಅವರ ಟೇಬಲ್ ಅವರ ನೆಚ್ಚಿನ ತಿಂಡಿಗಳಿಂದ ತುಂಬಿದೆ. ಮಾಣಿ ರಾಜು ಮ್ಯಾನೇಜರ್ ಆಗಿ ಬಡ್ತಿಯಾಗಿದ್ದನ್ನು ನೋಡಿ ಮೂವರು ಗೆಳೆಯರು ಖುಷಿಪಟ್ಟರು. ಗಂಟೆಗಟ್ಟಲೆ ಅವರ ಮಾತುಕತೆ ನಡೆದರೂ ಪ್ರವೀಣ್ ಬರಲಿಲ್ಲ..!?
ಸಮಯ ಕಳೆಯಿತು. ಮಾಣಿಗೆ ಬಿಲ್ ಕೇಳಿದರು, ಆಗ ಆನ್‌ಲೈನ್‌ನಲ್ಲಿ ಯಾರೋ ಬಿಲ್ ಪಾವತಿಸಿದ್ದಾರೆ ಎಂಬ ಉತ್ತರ ಬಂತು. ಬಿಲ್ ಕೊಟ್ಟವರು ಯಾರು ಎಂದು ತಿಳಿಯದೆ ಈ ಮೂವರು ಗೆಳೆಯರು ಯೋಚಿಸುತ್ತಿದ್ದರು. ಅಷ್ಟರಲ್ಲಿ ಒಬ್ಬ ಯುವಕ ಕಾರಿನಿಂದ ಇಳಿದು ಹೊರಡಲು ತಯಾರಾಗಿದ್ದ ಮೂವರು ಸ್ನೇಹಿತರ ಬಳಿಗೆ ಬಂದನು, ಮೂವರೂ ಆ ವ್ಯಕ್ತಿಯನ್ನು ನೋಡಿದರು. ಆಗ ಆ ಯುವಕ ನಾನು ನಿಮ್ಮ ಗೆಳೆಯ ಪ್ರವೀಣ್ ಅವರ ಮಗ ರವಿ ಎಂದು ಹೇಳಿದನು. ಇಂದಿನ ದಿನ ನೀವೆಲ್ಲರೂ ಇಲ್ಲಿ ಸೇರುವ ಬಗ್ಗೆ ತಂದೆ ಹೇಳಿದ್ದರು, ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ,, ಕಳೆದ ತಿಂಗಳು ನನ್ನ ತಂದೆ ತೀವ್ರ ಅನಾರೋಗ್ಯದಿಂದ ನಿಧನರಾದರು.
ಸಾಯುವ ಮುನ್ನ ನನ್ನ ತಂದೆ ಹೇಳಿದ್ದರು... ಹಲವು ವರ್ಷಗಳ ನಂತರ ಭೇಟಿಯಾಗುವ ನನ್ನ ಗೆಳೆಯರು ನಾನು ಈ ಲೋಕದಲ್ಲಿಲ್ಲ ಎಂದು ತಿಳಿದಾಗ,... ಒಬ್ಬರನ್ನೊಬ್ಬರು ಭೇಟಿ ಮಾಡಿದರೂ ಆ ಕ್ಷಣಗಳನ್ನು ಖುಷಿಯಾಗಿ ಕಳೆಯಲಾರರು, ಅದಕ್ಕಾಗಿಯೇ ಇವತ್ತು ತಡವಾಗಿ ಹೋಟೆಲ್‌ಗೆ ಹೋಗುವಂತೆ ಹೇಳಿದ್ದರು. ಅವನ ಪರವಾಗಿ ನಿಮ್ಮೆಲ್ಲರನ್ನೂ ಅಪ್ಪಿಕೊಳ್ಳುವಂತೆ ಹೇಳಿದ್ದರು ಎಂದು ರವಿ ತನ್ನ ಎರಡೂ ಕೈಗಳನ್ನು ಚಾಚಿ ಬಹಳ ಪ್ರೀತಿಯಿಂದ ಅವರೆಲ್ಲರನ್ನೂ ತಬ್ಬಿಕೊಂಡನು...ಮತ್ತು ಬಾಗಿ ಅವರೆಲ್ಲರ ಪಾದಗಳ ಮುಟ್ಟಿ ನಮಸ್ಕರಿಸಿದನು. ಸುತ್ತಮುತ್ತಲಿನ ಅಲ್ಲಿಯ ಜನರು ಆ ಭಾವುಕ ದೃಶ್ಯವನ್ನು ಕಣ್ತುಂಬಿಕೊಂಡರು ಕುತೂಹಲದಿಂದ ನೋಡುತ್ತಿದ್ದ ಅಲ್ಲಿದ್ದವರು ಈ ತರುಣನನ್ನು ಎಲ್ಲೋ ನೋಡಿದ್ದೇವೆ ಎಂದುಕೊಳ್ಳತೊಡಗಿದರು!
ಆ ಯುವಕ ಮತ್ತೆ ಮುಂದುವರೆದು ಹೇಳತೊಡಗಿದನು, “ನನ್ನ ತಂದೆ ಶಿಕ್ಷಕರಾದರು, ಆದರೆ ಕಲೆಕ್ಟರ್ ಆಗಿ ನನ್ನನ್ನು ಓದಿಸಲು ಶ್ರಮಿಸಿದರು.. ಇಂದು ನಾನು ಈ ನಗರದ ಕಲೆಕ್ಟರ್...!” ರವಿ ಹೇಳುವುದನ್ನು ಕೇಳಿ ಎಲ್ಲರಿಗೂ ಆಶ್ಚರ್ಯವಾಯಿತು. ರವಿಯನ್ನು ಮನಸಾರೆ ಶ್ಲಾಘಿಸಿದ ಮೂವರು ಗೆಳೆಯರು ತಮ್ಮ ಕಣ್ಣಲ್ಲಿ ಬರುತ್ತಿದ್ದ ಕಣ್ಣೀರಿನೊಂದಿಗೆ ಒಳ್ಳೆ ಗೆಳೆಯನನ್ನು ಕಳೆದುಕೊಂಡ ದುಃಖದ ಹೃದಯದಿಂದ ಹಿಂತಿರುಗಿದರು..
ಮಿತ್ರರೇ ನಿಮ್ಮ ಸಣ್ಣಪುಟ್ಟ ego ಗಳನ್ನು ಬದಿಗಿಡಿರಿ,ಬಂಧು ಮಿತ್ರರನ್ನು ನಿಯಮಿತವಾಗಿ ಭೇಟಿಯಾಗುತ್ತಿರಿ, ವರ್ಷಗಟ್ಟಲೆ ಕಾಯಬೇಡಿ, ಯಾರ ಸರದಿ ಯಾವಾಗ ಬರುತ್ತದೆ ಎಂದು ಗೊತ್ತಿಲ್ಲ ನೀವು ಬದುಕಿರುವವರೆಗೂ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷಗಳ ಕ್ಷಣಗಳನ್ನು ಅನುಭವಿಸಿ.
~ಸಂಪಿಗೆ ವಾಸು, ಬಳ್ಳಾರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ