ಯಾವಜ್ಜೀವೋ ನಿವಸತಿ ದೇಹೆ . . . . . .

ಯಾವಜ್ಜೀವೋ ನಿವಸತಿ ದೇಹೆ . . . . . .

ಬರಹ

ಯಾವಜ್ಜೀವೋ ನಿವಸತಿ ದೇಹೆ . . . . . .
ಶಂಕರಾಚಾರ್ಯ ವಿರಚಿತ ಚರ್ಪಟ ಮಂಜರಿಯ ಸಾಲು ಎಷ್ಟು ಅರ್ಥಗರ್ಭಿತವಾಗಿದೆ ಅಲ್ಲವೇ. ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲಾ ಒಂದು ವಸ್ತು, ವ್ಯಕ್ತಿ, ಸ್ಥಳ, ವಿಷಯಗಳಮೇಲೆ, ಪ್ರೀತಿ, ಆಸೆ, ಆಸಕ್ತಿಗಳು ಇರುವುದು ಸಹಜ. ಹಾಗೆ ಇರುವುದನ್ನು ಪಡೆಯಲು, ನೋಡಲು ಆಸಕ್ತಿಯೂ ಸಹಜವೇ. ಪಕ್ಷಿಗಳನ್ನು ನೋಡುವ ಆಸಕ್ತಿ ಇದ್ದಲ್ಲಿ ಪಕ್ಷಿಧಾಮಗಳಿಗೆ ಪಕ್ಷಿಗಳು ಸೇರುವ ಕಾಲವನ್ನೇ ಆಯ್ದು ಹೋಗುತ್ತೇವೆ. ನಂತರದ ದಿನಗಳಲ್ಲಿ ಅತ್ತ ಸುಳಿಯಲೂ ಬಯಸುವುದಿಲ್ಲ. ಅಂದರೆ ಪಕ್ಷಿಧಾಮ ಜೀವಂತವಾಗಿದ್ದಾಗ ನೋಡಲು ಬಯಸುತ್ತೇವೆ. ಹಾಗೇ ಉದ್ಯಾನ, ಜಲಪಾತಗಳು, ಅಷ್ಟೇಏಕೆ ಪ್ರೀತಿಯ ಹುಡುಗಿಯಾದರೂ ಸರಿ ಅವುಗಳು ಜೀವದಿಂದಿದ್ದಾಗ ಅವುಗಳ ಸೌಂದರ್ಯ ಸವಿಯಲು ಬಯಸುವುದು ಸಹಜ. ಅವು ಜೀವ ರಹಿತವಾದಾಗ ತಾತ್ಸಾರ ಮಾಡುತ್ತೇವೆ, ದುಃಖಿಸುತ್ತೇವೆ, ಮರುಗುತ್ತೇವೆ. ಹೆದರುತ್ತೇವೆ ಇತ್ಯಾದಿ. ಆದುದರಿಂದ ಸಜೀವಿಗಳಿಗೆ ಮಾತ್ರಾ ಬೆಲೆ.
ಇದಕ್ಕೆ ವ್ಯತಿರಿಕ್ತವಾಗಿ ವರ್ತಿಸುವುದೂ ಸಹ ಇದೆ. ಇದನ್ನು ನಾವು ಅನೇಕ ಬಾರಿ ಕಂಡರೂ ಗಮನಿಸುವುದಿಲ್ಲ. ಏಕಿರಬಹುದು? ತಂದೆ, ತಾಯಿ, ಅಕ್ಕ ತಂಗಿ, ಅಣ್ಣ ತಮ್ಮ, ಅಜ್ಜ, ಅಜ್ಜಿ, ಮಾವ, ಅತ್ತೆ ಇವರೆಲ್ಲರೂ ನಮ್ಮ ಆಪ್ತರ ಸಾಲಿನವರು, ರಕ್ತ ಸಂಬಂಧಿಗಳು, ನಮ್ಮ ಹಿತೈಷಿಗಳು, ಬೇಕಾದರವು ಆಗಿರುತ್ತಾರೆ. ದಿನಬೆಳಗಾದರೆ ನೋಡಲೇ ಬೇಕೆಂದೆನಿಸುವ ವರಾಗಿರುತ್ತಾರೆ. ಕಾರಣಾಂತರದಿಂದ ಸಾಧ್ಯವಾಗದು. ಅದನ್ನು ಸಹಿಸಿಕೊಂಡಿರುತ್ತೇವೆ. ಆರ್ಜಿಸಿಕೊಂಡಿರುತ್ತೇವೆ.
ಎಷ್ಟೋಬಾರಿ ಅವರಿಗೆ ಆರೋಗ್ಯ ತುಂಬಾ ಹದಗೆಟ್ಟಾಗಲೂ ನಮಗೆ ಬಂದು ನೋಡಲು ಸಾಧ್ಯವಾಗುವುದಿಲ್ಲ. ಅಷ್ಟೇ ಏಕೆ ಮರಣ ಶಯ್ಯೆಯಲ್ಲಿದ್ದಾರೆ ಎಂದು ತಿಳಿದಿದ್ದರೂ ಸಾಧ್ಯವಾಗುವುದಿಲ್ಲ. ಇದಕ್ಕೆ ನಮ್ಮಲ್ಲಿ ಅನೇಕ ಸಬೂಬುಗಳು ಇರುತ್ತವೆ. ಈ ಬಗ್ಗೆ ಕಾರ್ಯ ಬಾಹುಳ್ಯ ಇತ್ಯಾದಿ ನಮ್ಮಲ್ಲಿ ಸಾಕಷ್ಟು ಜಸ್ಟಿಫಿಕೇಷನ್‌ಗಳೂ ಇರುತ್ತವೆ. ಒಮ್ಮೆ ಆ ವ್ಯಕ್ತಿ ಸತ್ತೇ ಹೋದ ಎಂದರೆ ನಾವು ಎಷ್ಟೇ ದೂರದಲ್ಲಿರಲಿ, ಯಂತಹ ಕೆಲಸಗಳಿರಲಿ ಬದಿಗಿಡುತ್ತೇವೆ. ತಕ್ಷಣ ನಮ್ಮೆಲ್ಲಾ ಕಾರ್ಯ ಬಾಹುಳ್ಯಗಳೂ ನೀಗಿ, ರಜೆಯೂ ಸಿಕ್ಕುತ್ತದೆ. ಎಲ್ಲಿಲ್ಲದ ಪ್ರೀತಿಯೂ ಹುಟ್ಟುತ್ತದೆ. ಅಂತಿಮ ದರ್ಶನ ಬಯಸಿ ತಕ್ಷಣ ಹೊರಟು ಬರುವ ಪ್ರಯತ್ನ ಮಾಡುತ್ತೇವೆ.
ಇದು ಮುಂದಿನ ಕಾರ್ಯಕ್ರಮದಲ್ಲಿ ಅನಿವಾರ್ಯವಾದವರಿಗಾದರೆ, (ಕತೃಗಳಿಗಾದರೆ, ಅಂದರೆ ಮಕ್ಕಳು) ಅಂತ್ಯ ವಿಧಿಗಾಗಿ ಎದುರು ನೋಡುತ್ತಿರುತ್ತಾರೆ ಸರಿ. ಮುಂದಿನ ಕಾರ್ಯಗಳಲ್ಲಿ ಭಾಗವಹಿಸುವುದು ಅನಿವಾರ್ಯ. ಇದಕ್ಕೆ ಹೊರತಾದವರೂ ಅಂತಿಮ ದರ್ಶನ ಬಯಸಿ ಬರುವುದು ರೂಢಿ. ಜೊತೆಗೆ ತಾವು ಬರುತ್ತಿದ್ದೇವೆ ಇಲ್ಲಿದ್ದೇವೆ. ಅಲ್ಲಿದ್ದೇವೆ ಎಂಬಿತ್ಯಾದಿ ನಮಗಾಗಿ ಸ್ವಲ್ಪ ಹೊತ್ತು ಕಾಯಿರಿ ಇತ್ಯಾದಿಯಾಗಿ ಮೊಬೈಲ್‌ ಮೆಸೇಜ್‌ ರವಾನಿಸುತ್ತಾ ಬಸ್‌ಗಳನ್ನು ಹತ್ತಿ ಇಳಿಯುತ್ತಾ ಬರುವವರನ್ನೂ ನೋಡಿದ್ದೇವೆ. ವ್ಯಕ್ತಿ ಸತ್ತು ಅನೇಕ ಗಂಟೆಗಳೇ ಕಳೆದಿರುತ್ತವೆ. ಸಮೀಪವರ್ತಿಗಳಿಗೆ ಶವ ಸಂಸ್ಕಾರವಾಗದೇ ಊಟೋಪಚಾರಗಳಿಲ್ಲ. ಆರೋಗ್ಯ ಹದಗೆಟ್ಟಂದಿನಿಂದ ನಿದ್ದೆ ಬುದ್ದಿಗಳಿರುವುದಿಲ್ಲ, ಸಮೀಪದ ಬಂಧು ಬಾಂಧವರು ಸತ್ತ ಸಮಯದಿಂದಲೂ ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಹೆಣದ ಬಳಿ ಕುಳಿತು ಕಾಯುತ್ತಿರುತ್ತಾರೆ. ಇವರೆಲ್ಲರ ಪರಿಸ್ಥಿತಿ ಶೋಚನೀಯ. ಇಷ್ಟಾಗಿಯೂ ಇವರ ಕಾಯಬೇಕೆಂಬ ಧಾವಂತ. ಕಾಯದೇ ಇದ್ದರೆ ಬಂದವರೇ ರೋಧಿಸುವುದರೊಂದಿಗೆ ಮನೆಯನ್ನೇ ರಣ ರಂಗ ಮಾಡುವುದನ್ನೂ ನೋಡುತ್ತೇವೆ. ಇಂಥವರಿಗೆ ಇವೆಲ್ಲವುಗಳ ಸಾಮಾನ್ಯ ಪರಿಜ್ಞಾನವೂ ಬೇಡವೆ? ಜೀವಂತ ಇರುವಾಗಿ ಇಲ್ಲದ ಹಪ ಹಪಿ ಈಗೇಕೆ. ಇವರಿಗೆ ಸತ್ತ ವ್ಯಕ್ತಿಯಮೇಲಿನ ಪ್ರೀತಿಯೇ ಅಥವಾ ಹೆಣದ ಮೇಲಿನ ಪ್ರೀತಿಯೇ ಎಂಬುದೇ ಅರ್ಥವಾಗದ ಸಮಸ್ಯೆ.
ಈ ಬಗ್ಗೆ ಇನ್ನೊಂದು ಮಾತನ್ನು ಹೇಳುವುದು ಹೆಚ್ಚು ಪ್ರಸ್ತುತ ಎನ್ನುತ್ತದೆ. ಒಮ್ಮೆ ಜೂನ್‌ ಜುಲೈ ತಿಂಗಳ ಅಬ್ಬರದ ಮಳೆಗಾಲ, ಮಳೆ ಒಂದೇ ಸಮನೆ ಸುರಿಯುತ್ತಿತ್ತು. ಒಬ್ಬ ಗಣ್ಯರೆನಿಸಿಕೊಂಡಿದ್ದ ವ್ಯಕ್ತಿ ಮೃತರಾಗಿದ್ದರು. ಅವರ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಬೇಕಾಗಿತ್ತು ಹೋಗಿದ್ದೆವು. ಈ ವ್ಯಕ್ತಿಯ ಸಾವಿನ ಬಗ್ಗೆ ಮಹಾ ದಾನಿಗಳು, ಸಹಕಾರಿಗಳು ಇತ್ಯಾದಿ ವಿಶೇಷಣಗಳೊಂದಿಗೆ ಅಂದಿನ ದಿನಪತ್ರಿಕೆಯೊಂದರಲ್ಲಿ ಸಂತಾಪ ಸೂಚನೆಯೂ ಮುದ್ರಿತವಾಗಿತ್ತು. ಸರಿ ನಾವೆಲ್ಲರೂ ಹೋಗಿ ಸಮೀಪದ ಕಾಡಿನಲ್ಲಿ ಕಾಷ್ಟ ಸಂಗ್ರಹಮಾಡಿ, ಮಳೆ ಆದಿಕವಾದುದರಿಂದಾಗಿ ರಕ್ಷಣೆಗಾಗಿ ದಹನ ಸ್ಥಳದಲ್ಲಿ ಚಪ್ಪರ ಇತ್ಯಾದಿಗಳನ್ನು ಮಾಡಿಯಾಗಿತ್ತು. ಗಂಡು ಮಕ್ಕಳೆಲ್ಲರೂ ಬಂದಿದ್ದರು ವಿಧಿ ವಿಧಾನಗಳು ಪ್ರಾರಂಭಗೊಂಡಿದ್ದವು. ಅಷ್ಟರಲ್ಲಿ ಇದೇ ಮೇಲಿನಂತೆ ಮೊಬೈಲ್‌ ಸಂದೇಶ ಬಂತು ಯಾರಿಂದ? ಸ್ವತಃ ಮನೆಯ ಸೊಸೆಯಿಂದ. ಇದೇ ನೋಡಿ ನಮ್ಮಲ್ಲಿಯ ದುರಂತ. ಪತ್ರಿಕೆಗೆ ಸುದ್ದಿ ಮುಟ್ಟಿಸುವಲ್ಲಿ ತೋರಿದ ಮುತ್ಸದ್ದಿತನ ಸೊಸೆಯ ಹಾಜರಾತಿಬಗ್ಗೆಯಾಗಲಿ. ಸ್ಥಳಿಯರ ಪರಿಸ್ಥಿಯ ಬಗ್ಗೆಯಾಗಲೀ ಇಲ್ಲದ್ದು ಮುಂಚಿನ ದಿನ ಸಂಜೆ ೬ಗಂಟೆಗೆ ಸತ್ತವರ ಅಂತ್ಯ ವಿಧಿ ಮರುದಿನ ಮಧ್ಯಾಹ್ನದ ೨ಗಂಟೆಗೂ ಸಾಧ್ಯವಾಗದ್ದು, ಮುಂಚೆ ಇಲ್ಲದ ಆಕಾಂಕ್ಷೆ ಕೊನೆಯಲ್ಲಿ ಹುಟ್ಟುವುದರ ಪರಿಣಾಮ.
ಇದನ್ನೆಲ್ಲಾ ನೋಡಿದಾಗ ಇತ್ತೀಚಿನ ದಿನಗಳಲ್ಲಿ ಜನರಿಗೆ ಜೀವದಿಂದಿರುವ ವ್ಯಕ್ತಿ ಗಿಂತಲೂ ಸತ್ತಹೆಣದ ಮೇಲಿನ ಪ್ರೀತಿಯೇ ಹೆಚ್ಚೇನೋ ಎನ್ನಿಸತೊಡಗಿದೆ. ಶಂಕರಾಚಾರ್ಯರ ಅನುಭವ ಸಾರದ ಬಗ್ಗೆ ಏನಂತೀರಿ?