ಯಾವುದನ್ನೂ ಪ್ರಶ್ನೆ ಮಾಡಲೇ ಬಾರದು…!
ನೀನು ಹಿಂದು ಹೀಗೆಯೇ ಇರಬೇಕು. ನೀನು ಮುಸ್ಲಿಂ ಹೀಗೆಯೇ ಇರಬೇಕು. ನೀನು ಕ್ರಿಶ್ಚಿಯನ್ ಹೀಗೆಯೇ ಇರಬೇಕು. ನಮ್ಮ ವೇದಗಳು, ಖುರಾನ್, ಬೈಬಲ್ ಹೀಗೆಯೇ ಹೇಳಿದೆ. ಅದಕ್ಕೆ ಅಪಚಾರ ಮಾಡಿದರೆ ನೀನು ಧರ್ಮ ವಿರೋಧಿ. ಎಂತೆಂತ ಮಹಾಮಹಿಮರು ಎಷ್ಟೆಷ್ಟು ಅನುಭವದಲ್ಲಿ ಏನೇನು ಹೇಳಿರುವರೋ ಅದೇ ಸತ್ಯ. ನೀನು ಪ್ರಶ್ನಿಸಲು ಯೋಚಿಸಲು ಏನೂ ಉಳಿದಿಲ್ಲ. ಮೊಹರಮ್ ಹಿಂದಿನ ಕಥೆ ಗೊತ್ತೆ. ಕ್ರಿಸ್ಮಸ್ ಹಿಂದಿನ ಸತ್ಯ ಗೊತ್ತೆ? ಗಣೇಶನ ಸೃಷ್ಟಿಯ ಸಾಂಕೇತಿಕತೆ ಗೊತ್ತೆ?
ನೀನು ಗಂಡು. ನೀನು ಹೆಣ್ಣು. ನೀನು ಮಗ. ನೀನು ಸೊಸೆ. ನೀನು ಅಳಿಯ. ನೀನು ಗುಜರಾತಿ. ನೀನು ತಮಿಳಿಗ. ನೀನು ಆಫ್ರಿಕಾದವ. ನೀನು ದಲಿತ. ನೀನು ಬ್ರಾಹ್ಮಣ, ನೀನು ಜೀಸಸ್ ಗಿಂತ ದೊಡ್ಡವನೇ? ನೀನು ಪೈಗಂಬರ್ ಗಿಂತ ತಿಳಿದವನೇ? ನೀನು ಕೃಷ್ಣನಿಗಿಂತ ಬುದ್ದಿವಂತನೇ? ನಿನ್ನದು ಏನೂ ಇಲ್ಲ. ಎಲ್ಲವೂ ಪೂರ್ವ ನಿರ್ಧಾರಿತ.
ಕುಂಕುಮದ ಮಹತ್ವ ಗೊತ್ತೆ? ಟೋಪಿಯ ಪ್ರಾಮುಖ್ಯತೆ ಗೊತ್ತೆ? ಮೇಣದ ಬತ್ತಿಯ ಪಾವಿತ್ರ್ಯತೆ ಗೊತ್ತೆ? ಗೊತ್ತಿಲ್ಲದಿದ್ದರೆ ತಿಳಿದಿಕೋ. ಓದು ಓದು ಓದು ಗ್ರಂಥಗಳನ್ನು. ಕೇಳು ಕೇಳು ಕೇಳು ಪ್ರವಚನಗಳನ್ನು. ಮಾಡು ಮಾಡು ಮಾಡು ಆಚರಣೆಗಳನ್ನು. ನಿನಗೆ ಮೋಕ್ಷ ಸದ್ಗತಿ ಸ್ವರ್ಗ ಎಲ್ಲವೂ ಸಿಗುತ್ತದೆ. ಇಲ್ಲದಿದ್ದರೆ ನಿನಗೆ ಅತ್ಯಂತ ಕ್ರೂರ ಶಿಕ್ಷೆಯ ನರಕವೇ ಗತಿ. ಇದು ನಿಜವೇ ?
ಹಾಗಾದರೆ ಈಗ ಒಂದು ಜೀವಿಯಾಗಿ ಮೆದುಳಿನ ಸಮೇತ ಹುಟ್ಟಿರುವ ನಾವು ಈ ಜೀವನದಲ್ಲಿ ಕೇವಲ ಹಿಂದಿನ ನಿಯಮಗಳ ಪ್ರಕಾರ ಬದುಕುವುದಷ್ಟೇ ನಮ್ಮ ಕೆಲಸವೇ ? ನಮಗೆ ಸರಿ ಎನ್ನಿಸದ, ನಮಗೆ ಅನಾನುಕೂಲವಾಗುವ, ನಮ್ಮ ಮನಸ್ಸಿಗೆ ಹೊಳೆಯುವ, ವಿಚಾರಗಳನ್ನು ಕಾನೂನಿನ ವ್ಯಾಪ್ತಿ ಮೀರದಂತೆ ಹೇಳಬಾರದೆ ? ಸಮಾಜ ಬೆಳೆದಿದೆ ನಿಜ, ಆಧುನಿಕತೆ ಅಭಿವೃದ್ಧಿಯಾಗಿದೆ ನಿಜ, ಕಾನೂನು ಕಟ್ಟಲೆ ಇದೆ ನಿಜ, ನೈತಿಕತೆಯೂ ಅನುಭವದಿಂದ ಬೆಳೆದು ಬಂದಿದೆ ನಿಜ.
ಇದಕ್ಕೆ ಧಕ್ಕೆಯಾಗದೆ, ನಮ್ಮ ಗ್ರಹಿಕೆಯ ಮುಖಾಂತರ ಇನ್ನೊಂದಿಷ್ಟು ಹೊಸ ವಿಚಾರಗಳನ್ನು ಹಂಚಿಕೊಂಡರೆ ತಪ್ಪೇನು? ಅಲೋಚನಾ ಶಕ್ತಿಯನ್ನು ಇನ್ನೊಬ್ಬರಿಗೆ ಅಡವಿಡಲು ಒತ್ತಾಯಿಸುವುದೇಕೆ ? ಹಾಗೆಂದು ಹಳೆಯದು ಕೆಟ್ಟದ್ದು ಹೊಸದು ಒಳ್ಳೆಯದು ಎಂದಲ್ಲ ಅಥವಾ ಹೊಸದು ಕೆಟ್ಟದ್ದು ಹಳೆಯದು ಒಳ್ಳೆಯದು ಎಂಬುದೂ ಅಲ್ಲ. ಇನ್ನೂ ಇನ್ನೂ ಹೊಸ ಹೊಸ ಆಲೋಚನೆಗಳಿಗೆ ನಮ್ಮನ್ನು ತೆರೆದುಕೊಳ್ಳೋಣ. ತಂತ್ರಜ್ಞಾನ ವಿಷಯದಲ್ಲಿ ಹೊಸ ಆವಿಷ್ಕಾರಗಳನ್ನು ಸ್ವಾಗತಿಸಿ ಬಹುಬೇಗ ಸ್ವೀಕರಿಸುವ ನಾವು, ಮಾನವೀಯ ಮೌಲ್ಯಗಳ,
ವಿಚಾರ ತತ್ವ ಸಿದ್ದಾಂತಗಳ, ಹಳೆಯ ಮರಕ್ಕೇ ಇನ್ನೂ ನೇತಾಡುತ್ತಿರುವುದು ಏಕೆ ? ಇನ್ನೊಬ್ಬ ಆಧುನಿಕ ಕೃಷ್ಣನೋ ಜೀಸಸ್ಸೋ ಪೈಗಂಬರೋ ಸೃಷ್ಟಿಯಾಗಲೇ ಇಲ್ಲ. ನಾಗರಿಕ ಸಮಾಜದ ವೇಗಕ್ಕೆ, ಭಾರತದ ಬುದ್ದ ಮಹಾವೀರ ಶಂಕರ ಬಸವ ವಿವೇಕಾನಂದ. ಗಾಂಧಿ ಅಂಬೇಡ್ಕರ್ ಮುಂತಾದವರುಗಳು ದೇವರುಗಳಾಗಿ, ಮೂರ್ತಿಗಳಾಗಿ, ಸಂಕೇತಗಳಾಗಿ, ಧರ್ಮಗಳಾಗಿ, ಸಂಘಟನೆಗಳಾಗಿ, ಚಳವಳಿಗಳಾಗಿ, ರಾಜಕಾರಣಿಗಳಾಗಿ, ಮತಗಳಾಗಿ, ಕಲಹಗಳಾಗಿ, ಬದುಕಿನ ಸಾಧನವಾಗಿ, ಹೊಟ್ಟೆ ಪಾಡಾಗಿ, ರೂಪಾಂತರ ಹೊಂದಿದ್ದಾರೆ. ಭಾರತದ ಮಟ್ಟಿಗೆ ಈಗ ಹೊಸ ಆವಿಷ್ಕಾರದ ಸಮಯ. ಹೊಸದೆಂದರೆ ಎಲ್ಲವೂ ಹೊಸದಾದ ಪುನರ್ ಸೃಷ್ಟಿಯಲ್ಲ. ಜನರ ಜೀವನಮಟ್ಟ ಸುಧಾರಣೆಯ ಮೂಲ ಆಶಯದೊಂದಿಗೆ.
ಒಂದಷ್ಟು ಸಭ್ಯತೆ,
ಒಂದಷ್ಟು ಪ್ರೀತಿ,
ಒಂದಷ್ಟು ಸ್ನೇಹ,
ಒಂದಷ್ಟು ಕರುಣೆ,
ಒಂದಷ್ಟು ಸಮಾನತೆ,
ಒಂದಷ್ಟು ಮಾನವೀಯತೆ,
ಒಂದಷ್ಟು ನೆಮ್ಮದಿಗಾಗಿ..
ಒಂದು ಅಭಿಪ್ರಾಯಕ್ಕೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದಾಗ ಅದಕ್ಕೆ ಧರ್ಮದ ಸ್ವಯಂ ವಕ್ತಾರರು ಎಷ್ಟು ಕೆಟ್ಟದ್ದಾಗಿ ಪ್ರತಿಕ್ರಿಯಿಸುವರು ಗೊತ್ತೆ? ಇಲ್ಲದ ರಾಮ ಕೃಷ್ಣ ಅಲ್ಲಾ ಅವರಿಗೆ ಸತ್ಯ. ಅವರ ಜೀವಂತ ಜೊತೆಗಾರ ಮಿಥ್ಯ. ರಾಮನಿಗೆ ನೋವಾಗಬಾರದು. ಒಂದು ಗುಂಪಿನ ಅವರ ಗೆಳೆಯನನ್ನು ಬಾಯಿಗೆ ಬಂದಂತೆ ಬಯ್ಯಬಹುದು.
ಇದು ಸರಿಯೇ ? ಹಾಲು ಕುಡಿಯದ ಹಾವಿನ ಹುತ್ತಕ್ಕೆ ಹಾಲು ಸುರಿಯುವರು, ಬಡ ಮಗುವಿನ ಹಸಿವಿಗೆ ನಿರ್ಲಕ್ಷ್ಯ ತೋರುವರು. ಇದನ್ನು ಪ್ರಶ್ನಿಸಬಾರದೆ ಹಣದ ಆಮಿಷ ಒಡ್ಡಿ ಜನರನ್ನು ಮತಾಂತರ ಮಾಡುವರು. ಇದನ್ನು ಕೇಳಬಾರದೆ ? ದೇಶಕ್ಕಿಂತ ಧರ್ಮವೇ ಮುಖ್ಯವೆನ್ನುವರು. ಇದನ್ನು ಖಂಡಿಸಬಾರದೆ ?
ಗೆಳೆಯ/ ಗೆಳತಿಯರೇ, ಇದನ್ನು ಸಹ ಒಪ್ಪುವ ತಿರಸ್ಕರಿಸುವ ನಿರ್ಲಕ್ಷಿಸುವ ಟೀಕಿಸುವ ಸ್ವಾತಂತ್ರ್ಯ ನಿಮಗಿದೆ. ಅದಕ್ಕೆ ಮುನ್ನ ಒಮ್ಮೆ ತಾಳ್ಮೆಯಿಂದ ಯೋಚಿಸಿ ಎಂಬುದಷ್ಟೇ ನನ್ನ ಮನವಿ.
- 378 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿಯೇ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿತು. ಇಂದು 14/11/2021 ಭಾನುವಾರ 379 ನೆಯ ದಿನ ನಮ್ಮ ಕಾಲ್ನಡಿಗೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನಿಂದ ಸುಮಾರು 34 ಕಿಲೋಮೀಟರ್ ದೂರದ ರಾಮನಗರ ಸಿಟಿ ತಲುಪಲಿದೆ. ನಾಳೆ 15/11/2021 ಸೋಮವಾರ 380 ನೆಯ ದಿನ ಚನ್ನಪಟ್ಟಣ ತಾಲ್ಲೂಕು ತಲುಪುವ ಯೋಜನೆ ಇದೆ.
-ವಿವೇಕಾನಂದ. ಹೆಚ್.ಕೆ. ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ