ಯಾವುದರ ಬಗ್ಗೆ ಬರೆಯಲಿ?

ಯಾವುದರ ಬಗ್ಗೆ ಬರೆಯಲಿ?

ಪ್ರತಿ ವರುಷ ನವಂಬರ್ ತಿಂಗಳು ಕನ್ನಡಿಗರಿಗೆ ಕನ್ನಡ ಹಬ್ಬ. ಕನ್ನಡದಲ್ಲಿ ಏನಾದರೂ ಬರೆಯುವುದು ಕೂಡ ಕನ್ನಡ ಹಬ್ಬದ ಸಂಭ್ರಮಾಚರಣೆ, ಅಲ್ಲವೇ?

"ಲೇಖನ ಬರೆಯಿರಿ” ಎಂದಾಗ “ಯಾವುದರ ಬಗ್ಗೆ ಬರೆಯಲಿ?” ಎಂಬುದು ಹಲವರು ಕೇಳುವ ಪ್ರಶ್ನೆ. ಒಮ್ಮೆ ಸುತ್ತಮುತ್ತ ಕಣ್ಣು ಹಾಯಿಸಿದರೆ ಸಾಕು; ಲೇಖನಕ್ಕೆ ಹೂರಣ ಆಗಬಹುದಾದ ನೂರಾರು ವಿಷಯಗಳು ನಿಮಗೇ ಕಾಣಿಸುತ್ತವೆ.

ಲೇಖನಕ್ಕಾಗಿ ವಿಷಯ ಗುರುತಿಸುವ ಮೊದಲ ಹೆಜ್ಜೆ ಅವಲೋಕನ. ಅಂದರೆ ಗಮನವಿಟ್ಟು ನೋಡುವುದು. ಉದಾಹರಣೆಗೆ ಬಸ್ಸಿನಲ್ಲಿ, ರೈಲಿನಲ್ಲಿ ಅಥವಾ ವಿಮಾನದಲ್ಲಿ ಪ್ರಯಾಣಿಸುವಾಗ ಹಲವರು ನಿದ್ದೆ ಮಾಡುತ್ತಾರೆ. ಅದರ ಬದಲಾಗಿ, ನಮ್ಮ ಸುತ್ತಲು ಏನಾಗುತ್ತಿದೆ ಎಂದು ಗಮನಿಸಿದರೆ ಹಲವು ಸಂಗತಿಗಳು ತೆರೆದುಕೊಳ್ಳುತ್ತವೆ. ಹೀಗೆ ಗಮನಿಸಿದ್ದರಿಂದ ಬಸ್ ಪ್ರಯಾಣದಲ್ಲಿ ಕಣ್ಣಾರೆ ಕಂಡ ಸಂಗತಿಗಳ ಬಗ್ಗೆಯೇ ಮೂರು ಲೇಖನಗಳನ್ನು ಬರೆಯಲು ನನಗೆ ಸಾಧ್ಯವಾಯಿತು. (ಸದ್ಯದಲ್ಲೇ “ಬಸ್ ಪ್ರಯಾಣ ಪ್ರಸಂಗ” ಎಂಬ ಲೇಖನವನ್ನು “ಸಂಪದ"ದಲ್ಲಿ ಪ್ರಕಟಿಸಲಿದ್ದೇನೆ. ನೀವು ಓದಬಹುದು.)

ಮನೆಯ ಸುತ್ತಮುತ್ತ ೨೨ ಸುಳಿವು
ಪರಿಸರದ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುವ ಹೆಸರುವಾಸಿ ಲೇಖಕ ಶಿವಾನಂದ ಕಳವೆ ಆಗಾಗ್ಗೆ ಹೇಳುವ ಮಾತು: "ನನ್ನ ಹಳ್ಳಿ ಮನೆಯಿಂದ ಒಂದು ಕಿಲೋಮೀಟರ್ ಸುತ್ತಲಿನ ಸಂಗತಿಗಳನ್ನು ಗಮನಿಸಿ ನಾನು ಬರೆದ ಲೇಖನಗಳು ಇಪ್ಪತ್ತೆರಡು.” ಅವರೊಮ್ಮೆ ಕಬ್ಬಿನ ಗದ್ದೆಯ ಪಕ್ಕದಲ್ಲಿ ನಡೆದು ಹೋಗುತ್ತಿದ್ದಾಗ, ಗದ್ದೆಯ ಅಂಚಿನ ಕಬ್ಬಿನ ಸಸಿಗಳಿಗೆ ಕಬ್ಬಿನೆಲೆಗಳನ್ನೇ ಸುತ್ತಿ ಕೆಸರು ಮೆತ್ತಿದ್ದನ್ನು ಕಂಡರು. ಇದ್ಯಾಕೆ ಎಂದು ಜೊತೆಗಿದ್ದ ರೈತರನ್ನು ಕೇಳಿದಾಗ ಅವರ ಉತ್ತರ, “ಕಬ್ಬಿಗೆ ನರಿ ಬಾಯಿ ಹಾಕದಂತೆ ತಡೆಯಲಿಕ್ಕಾಗಿ.” ಅಂದರೆ, ಗದ್ದೆಯಂಚಿನ ಕಬ್ಬಿಗೆ ಬಾಯಿ ಹಾಕುವ ನರಿಗಳು ಬಾಯಿ ಕೆಸರುಕೆಸರಾದರೆ ಮತ್ತೆ ಅತ್ತ ಸುಳಿಯುವುದಿಲ್ಲ. ಬದುಕಿನ ಭರಾಟೆಯಲ್ಲಿ ಹಲವರು ಗಮನಿಸದಿರುವ ನೆಲಮೂಲ ವಿಚಾರಗಳ ಬಗ್ಗೆ ಅವರು “ಅಡಿಕೆ ಪತ್ರಿಕೆ”ಯಲ್ಲಿ (ಪುತ್ತೂರಿನಿಂದ ಪ್ರಕಟವಾಗುವ ಕೃಷಿಕರೇ ರೂಪಿಸುವ ಕೃಷಿಕಪರ ಮಾಧ್ಯಮ - ಮೂವತ್ತಮೂರು ವರುಷಗಳಿಂದ ಪ್ರಕಟವಾಗುತ್ತಿರುವ ಮಾಸಪತ್ರಿಕೆ) ಎರಡು ವರುಷ “ಮುಡೆ ಬಳ್ಳಿ" ಎಂಬ ಅಂಕಣ ಬರೆದರು. ಕಣ್ಣುಬಿಟ್ಟು ನೋಡಲು ಕಲಿತರೆ, ವಿಷಯಗಳಿಗೆ ಕೊರತೆಯಿಲ್ಲ ಎಂಬುದಕ್ಕೆ ಅದ್ಭುತ ಉದಾಹರಣೆ ಪೂರ್ಣಚಂದ್ರ ತೇಜಸ್ವಿಯವರ “ಪರಿಸರದ ಕತೆಗಳು.”

ನಿರಂತರ ದಾಖಲಾತಿ - ಬರವಣಿಗೆಗೆ ಕೈಗೋಲು
ಕಣ್ಣು ಬಿಟ್ಟು ನೋಡುತ್ತ ದಾಖಲಿಸುವ ಕೆಲಸಕ್ಕೆ ಕೈಹಾಕಿದರೆ ಲೇಖನಗಳನ್ನು ಮಾತ್ರವಲ್ಲ, ಪುಸ್ತಕಗಳನ್ನೇ ಬರೆಯಬಹುದು.
ನಾನು ಇಸವಿ ೨೦೦೦ದಿಂದ ೨೦೦೭ರ ವರೆಗೆ ಚಿಕ್ಕಮಗಳೂರಿನಲ್ಲಿದ್ದೆ. ಅಲ್ಲಿ ಅವಕಾಶವಾದಾಗೆಲ್ಲ ಸುತ್ತಲಿನ ಹಳ್ಳಿಗಳಿಗೆ, ತೋಟಗಳಿಗೆ ಹೋಗುತ್ತಿದ್ದೆ. ಹಳ್ಳಿಗರೊಂದಿಗೆ ಮಾತಾಡುತ್ತಾ, ತೋಟ ನೋಡುತ್ತಾ ವಿಷಯ ಕಲೆ ಹಾಕುತ್ತಿದ್ದೆ. ಅದರ ಫಲವಾಗಿ ಮೂಡಿ ಬಂದ ಪುಸ್ತಕವೇ "ಹಸುರು ಹೆಜ್ಜೆ.”

ಶಿವಾನಂದ ಕಳವೆ ಅವರಂತೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕಾಡುಮೇಡು, ಊರುಕೇರಿ ಸುತ್ತುವವರು. ಕ್ರಿ.ಶ. ೧೮೦೧ರಲ್ಲಿ ಡಾ. ಫ್ರಾನ್ಸಿಸ್ ಬುಕಾನನ್ ಎಂಬ ಬ್ರಿಟಿಷ್ ಅಧಿಕಾರಿ ಉತ್ತರಕನ್ನಡದ ಪಶ್ಚಿಮಘಟ್ಟದ ದುರ್ಗಮ ಕಾಡುಗಳಲ್ಲಿ ೧೭ ತಿಂಗಳು ಸಾಗುತ್ತ ಕೊನೆಗೆ ಶಿವಮೊಗ್ಗ ತಲಪಿದ್ದ; ಈ ಅಪೂರ್ವ ಅಧ್ಯಯನದಲ್ಲಿ ಕಂಡದ್ದನ್ನೆಲ್ಲ ದಾಖಲಿಸಿದ್ದ. ಕ್ರಿ.ಶ. ೨೦೦೧ರಲ್ಲಿ (ಸರಿಯಾಗಿ ೨೦೦ ವರುಷಗಳ ನಂತರ) ಆತ ಭೇಟಿಯಿತ್ತ ಹಳ್ಳಿಗಳಿಗೆ ಆಯಾ ದಿನವೇ ಮರುಭೇಟಿಯಿತ್ತು, ಆತ ಸಾಗಿದ ಹಾದಿಯಲ್ಲೇ ಮರುಪಯಣ ನಡೆಸಿ, ಉತ್ತರಕನ್ನಡದ ಇನ್ನೂರು ವರುಷಗಳ ಜನಜೀವನದ ಸ್ಥಿತ್ಯಂತರಗಳ ದಾಖಲಾತಿಯ ವಿಶೇಷ ಕಾರ್ಯ ಮಾಡಿದರು ಶಿವಾನಂದ ಕಳವೆ. ಆ ದಾಖಲಾತಿಯೇ ಅವರ “ಕಾಡುನೆಲದ ಕಾಲಮಾನ” ಇತ್ಯಾದಿ ಹಲವು ಪುಸ್ತಕಗಳಿಗೆ ಸಮೃದ್ಧ ಹೂರಣ ಒದಗಿಸಿತು. ಅವರು ಬರೆದ ‘ಮೊನೋಕಲ್ಚರ್ ಮಹಾಯಾನ”, “ಅರಣ್ಯಜ್ನಾನದ ಹತ್ಯಾಕಾಂಡ”, "ಹಸುರು ಪುಸ್ತಕದ ಹಳೆಯ ಪುಟಗಳು”, “ದಾಟ್ ಸಾಲು", “ಕಾನ್ ಚಿಟ್ಟೆ”, “ಕಾನ್ ಬಾಗಿಲು", "ಕ್ಷಾಮ ಡಂಗುರ”, "ಕಾಲುದಾರಿಯ ದಾಖಲೆ” ಇಂತಹ ಪುಸ್ತಕಗಳಿಗೆ ಅವರ ದಾಖಲಾತಿಯೇ ಬೆನ್ನೆಲುಬು.
ಕೃಷಿವೀಕ್ಷಣೆಗಾಗಿ ಮೂರು ವರುಷಗಳಲ್ಲಿ ಪ್ರತಿ ವರುಷ ೨೦,೦೦೦ - ೨೨,೦೦೦ ಕಿಮೀ ಕರ್ನಾಟಕ ಸುತ್ತಿದ ಶಿವಾನಂದ ಕಳವೆ  ಆಗ ಮಾಡಿದ ದಾಖಲಾತಿ ಅಗಾಧ. ಅದರ ಆಧಾರದಿಂದಲೇ, "ಮಣ್ಣಿನ ಓದು” (ಕರ್ನಾಟಕ ಕೃಷಿಪ್ರವಾಸ ಕಥನ ೧), “ಒಂದು ತುತ್ತಿನ ಕತೆ" (ಕ.ಕೃ.ಪ್ರ. ಕಥನ ೨) ಮತ್ತು "ಕಾಡು ತೋಟ" (ಕ.ಕೃ.ಪ್ರ. ಕಥನ ೩) ಎಂಬ ಮೂರು ಪುಸ್ತಕಗಳನ್ನು ಬರೆದಿದ್ದಾರೆ (ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ).

ಮೈಸೂರಿನಲ್ಲಿ ಅಧ್ಯಾಪಕರಾಗಿದ್ದ ಅನಂತರಾಮ ಎಂಬವರು, ಎರಡು ವರುಷಗಳ ಅವಧಿ ಪ್ರತೀ ವಾರಾಂತ್ಯದಲ್ಲಿ ದಕ್ಷಿಣಕನ್ನಡಕ್ಕೆ ಬರುತ್ತಿದ್ದರು. ಇಲ್ಲಿನ ವಿವಿಧ ಸ್ಥಳಗಳ ಸಾಂಸ್ಕೃತಿಕ ಆಚರಣೆಗಳನ್ನು ದಾಖಲಿಸಿದರು; ಆ ಬಗ್ಗೆ ಅವರು ಬರೆದ ಬೃಹತ್ ಪುಸ್ತಕ “ದಕ್ಷಿಣದ ಸಿರಿನಾಡು" ದಾಖಲಾತಿಯ ಶ್ರೇಷ್ಠ ನಿದರ್ಶನ.

ದಾಖಲಿಸುವ ಗೀಳು ಹತ್ತಿದರೆ ಸುಲಭದಲ್ಲಿ ಅದನ್ನು ಬಿಡಲಾಗದು. ಎಳೆಮಗುವನ್ನು ತೊಟ್ಟಿಲಿಗೆ ಹಾಕುವುದರಿಂದ ತೊಡಗಿ ಶವಸಂಸ್ಕಾರದ ವರೆಗೆ ಅದೆಷ್ಟು ಆಚರಣೆಗಳು! ಮಗು ಹುಟ್ಟಿದಾಗ, ಹೆಣ್ಣು ಮೈನರೆತಾಗ, ಗರ್ಭಿಣಿಯಾದಾಗ - ಹೀಗೆ ಸಾಲುಸಾಲು ಸಂಪ್ರದಾಯಗಳು. ಮೂಗು, ಕಿವಿ ಚುಚ್ಚುವುದು, ಮುಂಜಿ, ಮದುವೆ, ಸೀಮಂತ ಇವೆಲ್ಲದರ ಕಟ್ಟುಕಟ್ಟಲೆಗಳು. ಹಬ್ಬಗಳು, ಸಂತೆಗಳು, ಜಾತ್ರೆಗಳು, ಕೋಲಗಳು - ಬರೆದು ಮುಗಿಯದಷ್ಟು ವಿಷಯಗಳು.

ಬರಹಕ್ಕೆ ಅಧ್ಯಯನ ಅಗತ್ಯ
ಲೇಖನಕ್ಕೆ ವಿಷಯ ಗುರುತಿಸಲಿಕ್ಕಾಗಿ ಎರಡನೆಯ ಹೆಜ್ಜೆ ಅಧ್ಯಯನ. ನಿಮ್ಮ ಆಸಕ್ತಿಯ ಐದಾರು ಸ್ಥೂಲ ವಿಷಯಗಳನ್ನು ಆಯ್ಕೆ ಮಾಡಿ: ಉದಾಹರಣೆಗೆ, ಮನೆಮದ್ದು, ಪಾರಂಪರಿಕ ಮದ್ದು, ನದಿಗಳು, ಜಲಪಾತಗಳು, ಬುಡಕಟ್ಟುಗಳು, ಹಬ್ಬಗಳು, ಕೀಟಗಳು, ಕರ್ನಾಟಕ ಸಂಗೀತ, ವಚನಗಳು, ದಾಸರ ಪದಗಳು. ಆ ವಿಷಯಗಳ ಬಗ್ಗೆ ಲೇಖನಗಳು, ಪುಸ್ತಕಗಳು, ಸೀಡೀಗಳು, ಇಂಟರ್-ನೆಟ್ ಬರಹಗಳನ್ನು ಸಂಗ್ರಹಿಸಿ ಓದುತ್ತಿದ್ದರೆ, ಐದು ವರುಷಗಳಲ್ಲಿ ನೀವು ಪರಿಣತರಾಗಲು ಸಾಧ್ಯ.

೧೯೮೦ರಲ್ಲಿ “ಪ್ರಜೆಗಳ ಹಕ್ಕು-ಹೊಣೆಗಾರಿಕೆ"ಯನ್ನು ನನ್ನ ಒಂದು ಆಸಕ್ತಿಯ ವಿಷಯವನ್ನಾಗಿ ಆಯ್ಕೆ ಮಾಡಿ, ಅದರ ಬಗ್ಗೆ ಅಧ್ಯಯನ ಶುರು. ಅದರ ಫಲವೇ, “ಉದಯವಾಣಿ" ಪತ್ರಿಕೆಯಲ್ಲಿ “ಬಳಕೆದಾರರ ಸಮಸ್ಯೆ - ಸಮಾಧಾನ” ಎಂಬ ನನ್ನ ಅಂಕಣ ಹಾಗೂ “ಜನಜಾಗೃತಿಯ ಸಾಧನ: ಮಾಹಿತಿ ಮಂಥನ” ಮತ್ತು “ಬಳಕೆದಾರರ ಸಂಗಾತಿ” ಎಂಬ ೨ ಪುಸ್ತಕಗಳ ಪ್ರಕಟಣೆ. ಜೊತೆಗೆ, "ಉತ್ತಮ ಆಳ್ವಿಕೆ” (ಕನ್ನಡ) ಮತ್ತು “ಗುಡ್ ಗವರ್ನ್-ನೆನ್ಸ್” (ಇಂಗ್ಲಿಷ್ - ೪೫೦ ಪುಟಗಳು) ಎಂಬೆರಡು ಪ್ರೇರಕರ ಕೈಪಿಡಿಗಳ ಪ್ರಕಟಣೆ. ಕೃಷಿರಂಗ ಮತ್ತು ಗ್ರಾಮೀಣ ಬದುಕಿನ ಬಗ್ಗೆ ನನ್ನ ಆಸಕ್ತಿ, ಅಧ್ಯಯನ, ಅನುಭವಗಳಿಂದಾಗಿ “ಉದಯವಾಣಿ" ಬೆಂಗಳೂರಿನ "ಐಸಿರಿ" ಪುರವಣಿಯಲ್ಲಿ ೧೭ ವರುಷ “ಬಹುಧಾನ್ಯ" ಅಂಕಣ ಬರೆದೆ. ಹಾಗೆಯೇ, “ಮನಸ್ಸಿನ ಮ್ಯಾಜಿಕ್” ಬಗ್ಗೆ ೨೦ ವರುಷಗಳ ನನ್ನ ಅಧ್ಯಯನದಿಂದಾಗಿ ಮೂಡಿ ಬಂತು ಅದೇ ಹೆಸರಿನ ಪುಸ್ತಕ. ಗಣಿತದ ಕುರಿತು ನನ್ನ ಅಭಿರುಚಿ, ಅಧ್ಯಯನಗಳ ಫಲ "ಮೋಜಿನ ಗಣಿತ” ಮತ್ತು “ಮನರಂಜನೆಗಾಗಿ ಬೀಜಗಣಿತ” ಎಂಬ ಎರಡು ಪುಸ್ತಕಗಳು.

ಲೇಖನಗಳ ಜೀವಾಳ ಒಳನೋಟಗಳು
ಅವಲೋಕನ ಮತ್ತು ಅಧ್ಯಯನಗಳಿಂದಾಗಿ ನಿಮಗೆ ಅನೇಕ ಒಳನೋಟಗಳು ದಕ್ಕುತ್ತವೆ. ಎರಡು ಉದಾಹರಣೆಗಳು:
೧)ಗೋವಾಕ್ಕೆ ಬರುವ ವಿದೇಶೀ ಪ್ರಾವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಗೋವಾದ ಪ್ರವಾಸೋದ್ಯಮದ ಆದಾಯ ಹೆಚ್ಚುತ್ತಿದೆ ಎನ್ನುವುದು ಸರಿಯೇ? ಆ ವಿದೇಶೀ ಪ್ರವಾಸಿಗರಿಗೆ ಈಜುಗೊಳಗಳು ಬೇಕು. ಅವರು ಉಳಿಯುವ ಹೋಟೆಲುಗಳ ಈಜುಗೊಳಗಳಿಗೆ ನೂರಾರು ಟ್ಯಾಂಕರುಗಳಲ್ಲಿ ನೀರು ತಂದು ತುಂಬುತ್ತಾರೆ. ಇದರಿಂದಾಗಿ ಅಲ್ಲಿ ಕುಡಿಯುವ ನೀರಿನ ಕೊರತೆ ಆಗಿದೆ. ಆ ಹೋಟೆಲುಗಳಿಂದ ಹೊರಬರುವ ಮನುಷ್ಯರ ಹೊಲಸು ಅಲ್ಲಿನ ಕ್ವಾರಿಗಳಲ್ಲಿ ತುಂಬಿಕೊಳ್ಳುತ್ತಿದೆ. ಮಳೆಗಾಲದಲ್ಲಿ ಆ ಕ್ವಾರಿಗಳಲ್ಲಿ ತುಂಬಿದ ನೀರು ತೊರೆಗಳಿಗೆ ಹರಿದು, ಅವು ಕಲುಷಿತವಾಗುತ್ತಿವೆ.
೨)ಪಶ್ಚಿಮಘಟ್ಟದಲ್ಲಿ ದಟ್ಟ ಕಾಡು. ಕಾಡಿನಲ್ಲಿ ಸಾವಿರಾರು ಜಾತಿಯ ಗಿಡಮರಬಳ್ಳಿಹುಲ್ಲು. ಅವೆಲ್ಲವೂ ಇಲ್ಲಿಯ ಮಣ್ಣಿನಲ್ಲಿ, ಹವೆಯಲ್ಲಿ ಹುಲುಸಾಗಿ ಶತಮಾನಗಳಿಂದ ಬೆಳೆಯುತ್ತಿವೆ. ಆದರೆ, ಕರ್ನಾಟಕದ ಅರಣ್ಯ ಇಲಾಖೆ ತನ್ನದೇ ಲೆಕ್ಕಾಚಾರ ಮಾಡಿತು. ಆಸ್ಟ್ರೇಲಿಯಾದಿಂದ ಮೊದಲು ನೀಲಗಿರಿ, ಅನಂತರ ಅಕೇಸಿಯಾ, ಮ್ಯಾಂಜಿಯಂ ಗಿಡಗಳನ್ನು ತಂದು ನೆಡುತೋಪು ಬೆಳೆಸಿತು. ಕೊನೆಗೆ ಏನಾಯಿತು? ಈ ತೋಪುಗಳಲ್ಲಿ ಹಕ್ಕಿಗಳಿಗೆ, ಕೋತಿಗಳಿಗೆ ಹಣ್ಣು ಸಿಕ್ಕುವುದಿಲ್ಲ. ಅಲ್ಲಿನ ಮಣ್ಣಿನಲ್ಲಿ ಎರೆಹುಳಗಳೂ ಇಲ್ಲ. ಇದು “ಪಶ್ಚಿಮಘಟ್ಟಗಳಿಗೆ ಆಸ್ಟ್ರೇಲಿಯನ್ ಅಂಗಿ” ತೊಡಿಸಿದ್ದರ ಪರಿಣಾಮ.
ಇಂತಹ ಒಳನೋಟಗಳಿದ್ದರೆ ಮಾತ್ರ ನಿಮ್ಮ ಲೇಖನಗಳ ಮೌಲ್ಯ ಹೆಚ್ಚುತ್ತದೆ, ಅಲ್ಲವೇ?