ಯಾವುದು ಅತ್ಯಂತ ಶ್ರೇಷ್ಠ?

ಯಾವುದು ಅತ್ಯಂತ ಶ್ರೇಷ್ಠ?

ಕನ್ಫ್ಯೂಷಿಯಸ್ ಚೀನಾ ದೇಶದ ಮಹಾಮೇಧಾವಿ ಚಿಂತಕ, ತತ್ವಶಾಸ್ತ್ರಜ್ಞ, ದಾರ್ಶನಿಕ. ಇಡೀ ಜಗತ್ತಿನಲ್ಲಿ ಪಂಡಿತ-ಪಾಮರರೆಲ್ಲರ ಗೌರವಕ್ಕೆ ಪಾತ್ರನಾಗಿದ್ದ. ಯಾರಿಗಾದರೂ ಪಾರಮಾರ್ಥಿಕ ವಿಚಾರದಲ್ಲಿ ಸಂದೇಹವೇನಾದರೂ ಬಂದಲ್ಲಿ ಎಷ್ಟೇ ದೊಡ್ಡ ವಿದ್ವಾಂಸರಾದರೂ ಕನ್ಫ್ಯೂಷಿಯಸ್ ಬಳಿಗೆ ಬಂದು ಸಂಶಯ ನಿವಾರಣೆ ಮಾಡಿಕೊಳ್ಳುತ್ತಿದ್ದರು. ಹಾಗೇ ತತ್ವಶಾಸ್ತ್ರ ಗೊತ್ತಿಲ್ಲದವರೂ ಆತನ ಬಳಿಗೆ ಬರುತ್ತಿದ್ದರು. ಇಷ್ಟಾದರೂ ಆತ ತನಗೆ ಗೊತ್ತಿರುವುದು ತೀರಾ ಅತ್ಯಲ್ಪ ಎಂದು ವಿನಮ್ರನಾಗಿ ಹೇಳಿ ಸಮಸ್ಯೆಗೆ ಪರಿಹಾರ ಸೂಚಿಸುತ್ತಿದ್ದನು.

ಒಮ್ಮೆ ಒಬ್ಬ ಜಿಜ್ಞಾಸು ಕನ್ಫ್ಯೂಷಿಯಸ್ ಬಳಿಗೆ ಬಂದು ಗೌರವಪೂರ್ವಕವಾಗಿ ವಂದಿಸಿದ. ಅವನನ್ನು ಆದರದಿಂದ ಸ್ವಾಗತಿಸಿ, ಬಂದ ಕಾರಣವನ್ನು ಕೇಳಿದ. 'ಜಗತ್ತಿನಲ್ಲಿ ಅತ್ಯಂತ  ಶ್ರೇಷ್ಠವೂ ಬೆಲೆ ಬಾಳುವಂತದ್ದು (ಮೌಲಿಕವಾದುದು) ಯಾವುದು? ಎಂಬುದು ಜಿಜ್ಞಾಸುವಿನ ಪ್ರಶ್ನೆ.

'ಸಲಹೆ!'- ಅಷ್ಟೇ ಸರಳವಾಗಿ ಒಂದೇ ಪದ ಉಚ್ಚರಿಸಿದ ಕನ್ಫ್ಯೂಷಿಯಸ್ ಆತನ ಮುಖ ನೋಡಿದ.

ಹಾಗಾದರೆ ' ಜಗತ್ತಿನಲ್ಲಿ ಅತ್ಯಂತ ನಿಕೃಷ್ಟವಾದುದೂ, ಮೌಲ್ಯಹೀನವಾದುದೂ ಯಾವುದು?' ಜಿಜ್ಞಾಸು ಮತ್ತೆ ಪ್ರಶ್ನಿಸಿದ.

' ಸಲಹೆ'- ತಟ್ಟನೆ ಬಂತು ಕನ್ಫ್ಯೂಷಿಯಸ್ ನ ಉತ್ತರ. ಬೆಚ್ಚಿ ಬಿದ್ದವನಂತೆ ಜಿಜ್ಞಾಸು ತತ್ವಜ್ಞಾನಿಯ ಮುಖವನ್ನು ಮಿಕಿಮಿಕಿ ನೋಡಿದ. ' ಹೇಗೆ ತಾನೇ ಸಾಧ್ಯ? ಒಂದೇ ಪದ ಅಥವಾ ವಿಚಾರವು ಏಕಕಾಲದಲ್ಲಿ ಅತ್ಯಂತ ಮೌಲಿಕವಾಗಿಯೂ,  ಮೌಲ್ಯಹೀನವಾಗಿಯೂ ಇರುವುದುಂಟೇ? ತತ್ವಚಿಂತನೆ ಮಾಡಿ ಕನ್ಫ್ಯೂಷಿಯಸ್ ನ ತಲೆ ಕೆಟ್ಟಿರಬೇಕು, ಅರಳು-ಮರಳು ಬಂದಿದೆ' ಎಂದು ಮನಸ್ಸಿನಲ್ಲಿ ಜಿಜ್ಞಾಸು ತರ್ಕಿಸುತ್ತಿದ್ದ.

ನಸುನಕ್ಕ ಕನ್ಫ್ಯೂಷಿಯಸ್ ನುಡಿದ. ' ನಿನ್ನ ಮುಖದಲ್ಲಿ ನೀನೇನು ಯೋಚಿಸುತ್ತಿದ್ದೀ ಎಂಬುದನ್ನು ನಾನು  ಓದುತ್ತಿದ್ದೇನೆ, ನನ್ನ ಬಗ್ಗೆ ನಿನ್ನ ಮುಖದಲ್ಲಿ ಉದ್ಭವಿಸಿರುವ ವಿಚಾರಗಳು ಸಹಜವೇ. ನಾನು  ಬುದ್ದಿಹೀನನಾಗಿ ನಿನ್ನೆರಡು ಪ್ರಶ್ನೆಗಳಿಗೂ ಒಂದೇ ಪದದ ಉತ್ತರ ಹೇಳಲಿಲ್ಲ. ನೋಡು, ಯಾರಾದರೂ ನಿನ್ನ ಸಲಹೆಯನ್ನು ಕೇಳಿದಾಗ ಹೇಗೆ ಸರಿ ಎನಿಸಿದ ಮಾತುಗಳಲ್ಲಿ  ಸಲಹೆ ನೀಡುತ್ತೀಯಾ. ಅದು (ಆ ಸಲಹೆ) ಕೇಳಿದವರಿಗೆ ಒಪ್ಪಿತವಾದರೆ ಆಗ 'ಸಲಹೆ' ಅತ್ಯಂತ ಶ್ರೇಷ್ಠವೆನಿಸುತ್ತದೆ. ಅದರ ಅನುಷ್ಠಾನದಿಂದಾಗಿ ಕೇಳಿದವರ ಬಯಕೆ ಈಡೇರಿ ಫಲಪ್ರದವಾದರೆ ನಿನ್ನ ಸಲಹೆ ಅತ್ಯಂತ ಮೌಲಿಕ ಎನಿಸುತ್ತದೆ.

' ಒಂದು ವೇಳೆ ನಿನ್ನ ಸಲಹೆ ಕೇಳಿದವರಿಗೆ ಒಪ್ಪಿತವಾಗದಿದ್ದರೆ ಅದು ನಿಕೃಷ್ಟವಾದುದೆನಿಸಿ ಮೌಲ್ಯಹೀನವಾಗುತ್ತದೆ. ನಿನಗಂತೂ ನಾನೇಕೆ ಇವರಿಗೆ ಸಲಹೆ ಕೊಟ್ಟೆ, ನನ್ನ ಮಾತು ವ್ಯರ್ಥವಾಯಿತು. ಸುಮ್ಮನಿದ್ದರೂ ಆಗುತ್ತಿತ್ತು. ಮಾತೂ ಹೋಯಿತು., ಮರ್ಯಾದೆಯೂ ಇಲ್ಲವಾಯಿತು' ಎಂಬ ನೋವಿನ ಕೀಳರಿಮೆಯ ಭಾವನೆ ಮನಸ್ಸಿನ ತುಂಬಾ ಹರಡಿಕೊಳ್ಳುತ್ತದೆ. ಅಲ್ಲವೇ?

ಇನ್ನೊಂದು ಮುಖ್ಯ ಅಂಶವನ್ನು ಸದಾ ಗಮನದಲ್ಲಿ ಇಟ್ಟುಕೊಳ್ಳಬೇಕು- ಅದೆಂದರೆ 'ಸಲಹೆ' ಕೇಳುವ ವ್ಯಕ್ತಿ ನಿನ್ನನ್ನು ಕೇಳುವ ಮುಂಚೆಯೇ ಆ ವಿಷಯದ ಬಗ್ಗೆ ತೀರ್ಮಾನಿಸಿದ್ದರೆ ಸಲಹೆಯನ್ನು ನೀಡಲೇಬಾರದು. ಹಾಗೆಯೇ ಯಾರಿಗೂ ನಾವಾಗಿಯೇ ಸಲಹೆ ಕೊಡಲು ಮುಂದಾಗಬಾರದು. ಕೇಳಿದರೂ ವಿಷಯದ ಸಮಯ, ಸಂದರ್ಭ, ಸನ್ನಿವೇಶಗಳ ಬಗೆಗೆ ಪರ್ಯಾಲೋಚಿಸುವುದು ಅವಶ್ಯಕ. ನಮ್ಮ ಮಾತಿಗೆ ಬೆಲೆ ಬರಬೇಕೆಂದಾದರೆ ನಮ್ಮ ಆಲೋಚನೆ, ಚಿಂತನೆಗಳೂ ಉನ್ನತ ಮಟ್ಟದ್ದಾಗಿರಬೇಕು. ಆಡಲು  ಬರುತ್ತದೆ ಎಂದು ಏನೆಲ್ಲವನ್ನೂ ಆಡುತ್ತಾ ಹೋಗಬಹುದು. ಆಗ ಮಾತಿನ ಬೆಲೆಯಷ್ಟೇ ಅಲ್ಲ, ನಮ್ಮ  ಬೆಲೆಯೂ ಕಡಿಮೆಯಾಗಿ ಜನರೆದುರು ನಿಕೃಷ್ಟರಾಗುವಂತಹ ಸ್ಥಿತಿಯನ್ನು ನಾವೇ ತಂದುಕೊಳ್ಳುತ್ತೇವೆ.'

ಜಿಜ್ಞಾಸುವಿಗೆ ಈಗ ಬೆರಗು ಪಡುವಂತಹ ಮನಸ್ಥಿತಿ. ಆಹಾ!  ಈ ಮಹಾಮೇಧಾವಿಯಲ್ಲಿ ಅದೆಷ್ಟು ಜ್ಞಾನಸಿರಿ ತುಂಬಿಕೊಂಡಿದೆ. ಒಂದೇ ವಿಷಯವನ್ನು ಎಷ್ಟೊಂದು ಬಗೆಯಲ್ಲಿ ಚಿಂತಿಸುತ್ತಾನೆ. ಅದರಿಂದಲೇ ಈತನ ವಿದ್ವತ್ತು ವಿಶ್ವಪ್ರಸಿದ್ಧಿ ಎಂದು ಗೌರವದಿಂದ ಕನ್ಫ್ಯೂಷಿಯಸ್ ನ ಪಾದಗಳಿಗೆರಗಿ ಬೀಳ್ಕೊಂಡ.

(ಆಧಾರ)