ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು

ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು

ಬರಹ

ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು

ಪ್ರಜಾವಾಣಿ ( ೨೦೦೫ರ ದೀಪಾವಳಿ ವಿಶೇಷಾಂಕದಲ್ಲಿ ) ಕವಿತಾ ಸ್ಪರ್ಧೆಯ ತೀರ್ಪುಗಾರರು ಹೀಗೆ ಬರೆಯುತ್ತಾರೆ -

ಒಂದು ಓದಿಗೆ ತನ್ನನ್ನು ಬಿಟ್ಟುಕೊಟ್ಟು ಬಹುಬೇಗ ಖಾಲಿಯಾಗುವ ಕವಿತೆ ಅಲ್ಪಾಯುವಾದುದು. ಕವಿತೆಯ ಸಮ್ಮೋಹವಿರುವದೇ ಅದರ ನಿಗೂಢತೆಯಲ್ಲಿ . ಓದುವವರ ಮನಸ್ಸಿನಲ್ಲಿ ಬೇರುಗಳನ್ನು ಬಿಟ್ಟು ಅಲ್ಲಿನ ನೀರುಂಡು ಅಲ್ಲಿಯೇ ಹೂಬಿಡುವ ಕವಿತೆ ಚಿರಂಜೀವಿ. ಅಂಥ ಕವಿತೆಯು ಒಂದು ಕೈಮರವಷ್ಟೇ . ನಮ್ಮ ಸುಕೃತದಿಂದ ಅಂಥ ಕವಿತೆಗಳು ನಮಗೆ ಸಿಕ್ಕಾವು. '

ಎಂದು ಹೇಳುತ್ತಾರೆ.

ಈಗ ಈ ಕವಿತೆಯನ್ನು ನೋಡೋಣ ( www.udbhava.com ನಲ್ಲಿ 'ello hutti' ಎಂದು ಹುಡುಕಿ ಕೇಳಬಹುದು. ಶ್ರೀಯುತ ಸಿ. ಅಶ್ವತ್ಥ್ ಅವರು ಭಾವಪೂರ್ಣವಾಗಿ ಹಾಡಿದ್ದಾರೆ )

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೆ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೆ ಕೊರೆಯುವವಳು
ಸದಾ ಗುಪ್ತಗಾಮಿನಿ
ನನ್ನ ಶಾಲ್ಮಲಾ
ಸದಾ ಗುಪ್ತಗಾಮಿನಿ
ನನ್ನ ಶಾಲ್ಮಲಾ

ಹಸಿರು ಉರಿವ ಎಲೆಗಳಲ್ಲಿ ಬಸಿರ ಬಯಕೆ ಒಸರುವವಳು
ತುಟಿ ಬಿರಿವ ಹೂಗಳಲ್ಲಿ ಬೆಂಕಿ ಹಾಡು ಉಸುರುವವಳು
ಸದಾ ತಪ್ತ ಕಾಮಿನಿ
ನನ್ನ ಶಾಲ್ಮಲಾ
ಸದಾ ತಪ್ತ ಕಾಮಿನಿ
ನನ್ನ ಶಾಲ್ಮಲಾ

ಭೂಗರ್ಭದ ಮೌನದಲ್ಲಿ ಜುಮ್ಮೆನುತ ಬಳುಕುವವಳು
ಅರಿವಿಲ್ಲದೆ ಮೈಯ ತುಂಬಿ ಕನಸಿನಲ್ಲಿ ತುಳುಕುವವಳು
ಸದಾ ಸುಪ್ತಮೋಹಿನಿ
ನನ್ನ ಶಾಲ್ಮಲಾ
ಸದಾ ಸುಪ್ತಮೋಹಿನಿ
ನನ್ನ ಶಾಲ್ಮಲಾ

ನನ್ನ ಬದುಕ ಭುವನೇಶ್ವರಿ ನನ್ನ ಶಾಲ್ಮಲಾ
ನನ್ನ ಹೃದಯ ರಾಜೇಶ್ವರಿ ನನ್ನ ಶಾಲ್ಮಲಾ
ಸದಾ ಗುಪ್ತಗಾಮಿನಿ ನನ್ನ ಶಾಲ್ಮಲಾ
ಸದಾ ಗುಪ್ತಗಾಮಿನಿ ನನ್ನ ಶಾಲ್ಮಲಾ

---

ಈ ಕವನ ಒಂದು ಸಲಕ್ಕೆ ಅರ್ಥವಾಗುವದಿಲ್ಲ ; ಆದರೆ ಏನೋ ಆಕರ್ಷಣೆಯಂತೂ ಇದೆ.
ಯಾವುದರ ಬಗ್ಗೆ ? ಅಥವಾ ಯಾರ ಬಗ್ಗೆ ಇದೆ? .

ಮೊದಲು ಇದನ್ನು ಬರೆದ ಕವಿಯ ಕುರಿತು ನೋಡೋಣ . ಇವರು ಶ್ರೀ ಚಂದ್ರಶೇಖರ ಪಾಟೀಲರು. ಹಿಂದೆ ಬಂಡಾಯ ಸಾಹಿತ್ಯ ಚಳುವಳಿಯ ಮುಂಚೂಣಿಯಲ್ಲಿದ್ದರು. ಸದ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. ಇವರು ಧಾರವಾಡದವರು . ಅಲ್ಲಿ ಶಾಲ್ಮಲಾ ನದಿ ಉಗಮವಾಗಿ ಸರಸ್ವತಿ ನದಿಯ ಹಾಗೆ ಗುಪ್ತಗಾಮಿನಿಯಾಗಿ ನೆಲದಡಿಯೇ ಹರಿಯುತ್ತದೆ ಎಂದು ಹೇಳುತ್ತಾರೆ ಎಂಬುವದನ್ನು ಇಲ್ಲಿ ಗಮನಿಸಬೇಕು.

ಮೊದಲು ನದಿಯ ಬಗ್ಗೆ ಹೇಳುತ್ತಿದ್ದಾರೆ ಅನಿಸುತ್ತದೆ , ನಂತರ ಇಲ್ಲ ಪ್ರಿಯತಮೆಯ ('ನನ್ನ ' ಶಾಲ್ಮಲಾ ) ಬಗ್ಗೆ ಅನಿಸುತ್ತದೆ ನಂತರ ಧಾರವಾಡದ ಹಸಿರು , ಕೆಂಪು ಬಣ್ಣದ ಗುಲ್ಮೊಹರ್ ಹೂಗಳನ್ನು ನೆನಪಿಸುವ ಸಾಲಿವೆ. 'ಅರಿವಿಲ್ಲದೆ ಮೈಯ ತುಂಬಿ ಕನಸಿನಲ್ಲಿ ತುಳುಕುವವಳು' ಮತ್ತೆ ನಲ್ಲೆಯ ಬಗ್ಗೆ ಎನಿಸುತ್ತದೆ. ಮತ್ತೆ ಭುವನೇಶ್ವರಿ , ರಾಜೇಶ್ವರಿ , ಗುಪ್ತಗಾಮಿನಿ ಶಬ್ದಗಳು ದಾರಿ ತಪ್ಪಿಸುತ್ತವೆ. ಬಹುಶ: ಮೈತುಂಬಿದ ಕನ್ನಡಾಭಿಮಾನದ ಕುರಿತೇನೋ ಅನಿಸುತ್ತದೆ. ಅಥವಾ ಕಾವ್ಯ/ಸಾಹಿತ್ಯಸರಸ್ವತಿಯ ಕುರಿತೂ ಇರಬಹುದು.

ಬಂಡಾಯ ನವ್ಯಕವಿಗಳಿಂದ ರೋಮ್ಯಾಂಟಿಕ್ ಕವನವನ್ನು ಬರೆಸಿರುವದು ಧಾರವಾಡದ ಅಂತರ್ಗತ ಶಕ್ತಿಯೇನೋ ?