ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?
ಸಕಾರಾತ್ಮಕ - ಪಾಸಿಟಿವ್ ವಿಷಯಗಳ ಬಗ್ಗೆಯೇ ಹೆಚ್ಚು ಮಾತನಾಡಬೇಕು, ಓದಬೇಕು, ಬರೆಯಬೇಕು, ತಿಳಿಯಬೇಕು, ತಿಳಿಸಬೇಕು ಎಂಬುದು ಒಂದು ಸಾಮಾನ್ಯ ಸಾರ್ವಜನಿಕ ಅಭಿಪ್ರಾಯ. ಹಾಗಾದರೆ ರಾಜಕೀಯ ಸಾಮಾಜಿಕ ವಿಷಯಗಳಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ಎಂಬುದು ಒಂದು ಪ್ರಶ್ನೆಯಾಗಿ ಕಾಡುತ್ತದೆ.
ಹಿಂದು ಮುಸ್ಲಿಂ ಕ್ರಿಶ್ಚಿಯನ್ ಧರ್ಮಗಳ ಲೋಪ ದೋಷಗಳ ಬಗ್ಗೆ ಮಾತನಾಡುವುದು ಅಥವಾ ಅವುಗಳಲ್ಲಿರುವ ಒಳ್ಳೆಯ ಗುಣಗಳ ಬಗ್ಗೆ ಮಾತನಾಡುವುದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ? ಕೇವಲ ಒಳ್ಳೆಯ ವಿಷಯ ಮಾತ್ರ ಪ್ರಸ್ತಾಪಿಸಿದರೆ ನಮ್ಮ ಚಿಂತನೆಯಲ್ಲಿ ಮೂಡುವ ಲೋಪಗಳನ್ನು ಸರಿಪಡಿಸುವುದು ಹೇಗೆ ? ಕಾಲಕ್ಕೆ ತಕ್ಕಂತೆ ಲೋಪ ಸರಿಪಡಿಸದೆ ಪರಿಪೂರ್ಣ ಧರ್ಮ ಎಂದು ಕರೆಯುವುದು ಮತ್ತು ಅನುಸರಿಸುವುದು ಹೇಗೆ ?
ರಾಮ ಮಂದಿರ, ಬಾಬರಿ ಮಸೀದಿ, ಮತಾಂತರ, ಹಿಜಾಬ್, ಟಿಪ್ಪು ಸುಲ್ತಾನ್, ಶಿವಾಜಿ, ಗಾಂಧಿ, ಸಾರ್ವಕರ್ ಬಗ್ಗೆ ಪರ ಅಥವಾ ವಿರೋಧ ಮಾತನಾಡುವುದು ಅಥವಾ ಊಟ ಬಟ್ಟೆ ವಸತಿ ಶಿಕ್ಷಣ ಆರೋಗ್ಯ ಉದ್ಯೋಗ ಇವುಗಳ ಬಗ್ಗೆ ಮಾತನಾಡುವುದು, ಇದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?
ಇತಿಹಾಸ ತಿರುಚಲಾಗಿದೆ ಈಗ ಅದನ್ನು ಮತ್ತೆ ಸರಿಪಡಿಸಬೇಕು ಎಂಬುದು ಅಥವಾ ಇತಿಹಾಸ ಸರಿಯಾಗಿದೆ ಈಗ ಅದನ್ನು ತಿರುಚಲಾಗುತ್ತಿದೆ ಎಂಬುದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್. ಅಂಬಾನಿ ಅದಾನಿಗಳು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅತ್ಯುತ್ತಮ ಸ್ಥಾನ ಪಡೆದಿದ್ದಾರೆ, ಕೆಜಿಎಫ್ ಆರ್ ಆರ್ ಆರ್ ಸಿನಿಮಾ 1000 ಕೋಟಿಗೂ ಹೆಚ್ಚು ಲಾಭಗಳಿಸಿದ ಸಾಧನೆ ಬಗ್ಗೆ ಮಾತನಾಡುವುದು ಅಥವಾ ಈಗಲೂ ಲಕ್ಷಾಂತರ ಭಿಕ್ಷುಕರು ಅಪೌಷ್ಟಿಕತೆಯ ಮಕ್ಕಳು ಅತ್ಯಾಚಾರ ಕೊಲೆಗಳು ಭ್ರಷ್ಟಾಚಾರ ಜಾತೀಯತೆ ಸಮಸ್ಯೆಗಳ ಬಗ್ಗೆ ಮಾತನಾಡುವುದು ಇದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?
ಬೆಂಗಳೂರನಲ್ಲಿ ಎರಡು ದಿನ ಮೋದಿ ಹವಾ ಎಂದು ಸುದ್ದಿ ನಿರೂಪಣೆ ಮಾಡುವುದು ಅಥವಾ ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನದ ಬೆಂಗಳೂರು ಭೇಟಿ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎಂಬ ಸುದ್ದಿ ನಿರೂಪಣೆ. ಇದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ? ಕುಸಿಯುತ್ತಿರುವ ರೂಪಾಯಿ ಬೆಲೆ, ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಅಥವಾ ಆರ್ಥಿಕ ಗಾತ್ರದಲ್ಲಿ ಮತ್ತು ಜಿಡಿಪಿ ಬೆಳವಣಿಗೆಯಲ್ಲಿ ಏರುತ್ತಿರುವ ಅಂಕಿಅಂಶಗಳ ಬಗ್ಗೆ ಮಾತನಾಡುವುದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?
ಮುಸ್ಲಿಮರದು ಅತಿಯಾಯಿತು ಅವರಿಗೆ ಸರಿಯಾಗಿ ಪಾಠ ಕಲಿಸಬೇಕು - ಹಿಂದೂಗಳ ದಬ್ಬಾಳಿಕೆ ಜಾಸ್ತಿಯಾಯಿತು ಅವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂಬುದು ಅಥವಾ ಘರ್ಷಣೆ ಬೇಡ ಆಗಿದ್ದು ಆಗಿ ಹೋಯಿತು. ಈಗ ಎಲ್ಲರೂ ಒಟ್ಟಾಗಿ ಒಬ್ಬರನ್ನೊಬ್ಬರು ಗೌರವಿಸಿತ್ತಾ ಇರೋಣ ಎಂಬುದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?
ಹಿಂದೂ ಧರ್ಮ ತುಂಬಾ ಒಳ್ಳೆಯದು, ಇಸ್ಲಾಂ ಧರ್ಮ ತುಂಬಾ ಶಾಂತಿ ಪ್ರಿಯ ಧರ್ಮ, ಕ್ರಿಶ್ಚಿಯನ್ ಧರ್ಮ ತುಂಬಾ ಸಮಾನತೆಯ ಪ್ರೀತಿಯ ಧರ್ಮ ಎಂಬುದು ಅಥವಾ ಹಿಂದೂ ಧರ್ಮದಲ್ಲಿ ಅಮಾನವೀಯ ಜಾತಿ ಪದ್ದತಿ ಇದೆ, ಇಸ್ಲಾಂ ಧರ್ಮದಲ್ಲಿ ಪ್ರಶ್ನೆ ಮಾಡಲಾಗದ ಮತಾಂಧತೆ ಇದೆ, ಕ್ರಿಶ್ಚಿಯನ್ ಧರ್ಮದಲ್ಲಿ ಮತಾಂತರ ಇದೆ ಎಂದು ಚರ್ಚೆ ಮಾಡುವಾಗ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?
ಸಮಸ್ಯೆಗಳ ಬಗ್ಗೆ ಮಾತನಾಡುವುದು, ಸಮಸ್ಯೆ ಇದ್ದರೂ ಅದನ್ನು ಮರೆಮಾಚಿ ಕೇವಲ ಅನುಕೂಲಗಳನ್ನು ಮಾತ್ರ ಮಾತನಾಡುವುದು, ಸಮಸ್ಯೆ ಮತ್ತು ಪರಿಹಾರ ಎರಡನ್ನೂ ಮಾತನಾಡುವುದು ಇದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ? ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಪರಿಹಾರ ಸಾಧ್ಯ. ಪಾಸಿಟಿವ್ ಮತ್ತು ನೆಗೆಟಿವ್ ಎಂದು ನಮಗೆ ಅನುಕೂಲ ವಿಷಯಗಳನ್ನು ಮಾತ್ರ ಮಾತನಾಡುವುದಲ್ಲ. ಸಮಯಕ್ಕೆ ತಕ್ಕಂತೆ ಲಾಭ ಪಡೆಯುವುದು ಅಥವಾ ವಾದ ಮಂಡಿಸುವುದಲ್ಲ. ಹೃದಯಾಂತರಾಳದಿಂದ ಸಮಸ್ಯೆಗಳಿಗೆ ನಿಜವಾದ ಸ್ಪಂದನೆ ಇರಬೇಕು. ಆಗ ಸಮಾಜ ಶಾಂತಿಯ ಕಡೆಗೆ ಸಾಗುತ್ತದೆ.
ಮುಖವಾಡಗಳ ಮರೆಯಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ತಮ್ಮ ಸ್ವ ಹಿತಾಸಕ್ತಿಯ ಹೊರತು, ಬಡತನ ನೆಗೆಟಿವ್ ಶ್ರೀಮಂತಿಕೆ ಪಾಸಿಟಿವ್, ಬಡವರು ಪಾಸಿಟಿವ್ ಶ್ರೀಮಂತರು ನೆಗೆಟಿವ್ ಹೀಗೂ ಚರ್ಚೆ ಮಾಡಬಹುದು. ಆದರೆ ವಾಸ್ತವ ಬೇರೆ. ಅದು ವಿಶಾಲ ಶುದ್ಧ ಮನಸ್ಸುಗಳ ಗ್ರಹಿಕೆಗೆ ಮಾತ್ರ ನಿಲುಕುತ್ತದೆ. ಮುಖವಾಡ ಧರಿಸಿದವರಿಗಲ್ಲ...
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ