ಯಾವುದು ಬದುಕು ?
ಬದುಕು ಅಂದ್ರೆ ಯಾವುದು...? ಇದರ ಬಗ್ಗೆ ನೋಡೋಣ. ಗೋಪಾಲ ಎಂಬ ಯುವಕನಿದ್ದನು. ಈತನ ತಂದೆಗೆ ಎರಡು ಜನ ಪತ್ನಿಯರು. ಈತ ಮೊದಲ ಹೆಂಡತಿಯ ಮಗ. ಈತನ ಜೊತೆಗೆ ಇಬ್ಬರು ತಮ್ಮಂದಿರು ಮತ್ತು ಒಬ್ಬಳು ತಂಗಿ ಇದ್ದಳು. ಮಲತಾಯಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಇತ್ತು. ಈತ ಎಸ್ ಎಸ್ ಎಲ್ ಸಿ ಅನುತ್ತೀರ್ಣನಾಗಿದ್ದನು. ನಂತರ ಪಾಸ್ ಆಗಿ ಐಟಿಐ ಸೇರಿ ಕೆ ಎಸ್ ಆರ್ ಟಿ ಸಿ ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸಕ್ಕೆ ಸೇರಿದನು. ನಂತರ ತನ್ನ ತಂಗಿಯನ್ನು ದೊಡ್ಡ ವ್ಯವಸಾಯಗಾರನಿಗೆ ಕೊಟ್ಟು ಮದುವೆ ಮಾಡಿದನು. ತನ್ನ ತಮ್ಮಂದಿರು ಇಬ್ಬರಿಗೂ ಮಲತಾಯಿ ಮಗನಿಗೂ ಕೆ ಎಸ್ ಆರ್ ಟಿ ಸಿ ಡ್ರೈವರ್ ಕೆಲಸ ದೊರಕುವಲ್ಲಿ ಪ್ರಯತ್ನಿಸಿ ಅವರೆಲ್ಲರೂ ಡ್ರೈವರ್ ಆದರು.
ಈತ ಮತ್ತು ಈತನ ತಮ್ಮಂದಿರಿಗೆ ಶ್ರೀಮಂತರಾಗಿ ಬದುಕಬೇಕೆಂಬ ಆಸೆ. ರಜಾ ಅವಧಿಯಲ್ಲಿ ಜಮೀನಿನಲ್ಲಿ ದುಡಿಯುವುದು, ಕೆಲಸದ ಸಮಯಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಈ ಮೂವರು ಬ್ಯಾಂಕಿನಲ್ಲಿ ಸಾಲ ಮಾಡಿ, ಬೇರೆ ಬೇರೆ, ಒಂದೇ ರೀತಿ ಅಕ್ಕಪಕ್ಕದಲ್ಲಿ ಮನೆ ನಿರ್ಮಿಸಿದರು. ಮನೆಗೆ ಇನ್ಸೂರೆನ್ಸ್ ಕೂಡ ಮಾಡಿಸಿದರು. ಬದುಕಿಗೆ ಕೊರತೆ ಏನೂ ಇರಲಿಲ್ಲ. ಮಧ್ಯದವನಿಗೆ ಒಂದು ಹೆಣ್ಣು ಮಗುವಿತ್ತು. ಆತ ತಾನು ಸತ್ತರೆ ಮನೆ ಸಾಲ ಕಟ್ಟುವಂತಿಲ್ಲ. ಪತ್ನಿಗೆ ಅನುಕಂಪದ ಹುದ್ದೆ ದೊರಕುತ್ತದೆ ಎಂದು ಆತ್ಮಹತ್ಯೆ ಮಾಡಿಕೊಂಡನು. ಹಾಗೆ ಪತ್ನಿ ಮತ್ತು ಮಗಳು ಕೆಲಸದ ಮೇಲೆ ಬೇರೆ ಕಡೆ ವಾಸವಾದರು. ಗೋಪಾಲನಿಗೆ ಒಬ್ಬ ಮಗನಿದ್ದನು. ಆತ ಸರಿಯಾಗಿ ವಿದ್ಯಾಭ್ಯಾಸ ಮಾಡಲಿಲ್ಲ. ಗೋಪಾಲ ಒಂದು ರೂಪಾಯಿ ಅನಾವಶ್ಯಕವಾಗಿ ಖರ್ಚು ಮಾಡುತ್ತಿರಲಿಲ್ಲ. ಮನೆಯಿಂದಲೇ ಊಟ ತೆಗೆದುಕೊಂಡು ಹೋಗುತ್ತಿದ್ದನು. ಒಂದು ನಿಮಿಷ ಮನೆಯಲ್ಲಿ ಕೂರುತ್ತಿರಲಿಲ್ಲ. ತನ್ನ ಕೆಲಸ ಮುಗಿಸಿ ಬಂದ ತಕ್ಷಣ ಜಮೀನಿನಲ್ಲಿ ದುಡಿಯುತ್ತಿದ್ದನು. ಮಗನಿಗೆ ಏನು ಹೇಳಿದರೂ ಕೇಳುತ್ತಿರಲಿಲ್ಲ. ಆಗ ಆತನು ನಿರ್ಧಾರ ಮಾಡಿದ. ತಾನು ಸತ್ತರೆ ತನ್ನ ಮಗನಿಗೆ ಕೆಲಸ ಸಿಗುತ್ತದೆ. ಆಗ ಆತನ ಜೀವನ ಸರಿಯಾಗುತ್ತದೆ ಎಂದು ನಿರ್ಧರಿಸಿ ಆತನು ಆತ್ಮಹತ್ಯೆ ಮಾಡಿಕೊಂಡು. ಇನ್ನು ಕೊನೆಯ ತಮ್ಮನಿಗೆ ಒಂದು ಗಂಡು ಒಂದು ಹೆಣ್ಣು ಇತ್ತು. ಹೆಣ್ಣು ಮಗಳು ಇಂಜಿನಿಯರ್ ಮಾಡಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಮಗ ಸರಿಯಾಗಿ ಓದಲಿಲ್ಲ. ಆತನಿಗಾಗಿ ಅಣ್ಣಂದಿರ ದಾರಿಯನ್ನೇ ಆತನೂ ಹಿಡಿದನು. ಆತನ ತಾಯಿಗೆ ಮೂರು ಜನ ಸೊಸೆಯಂದಿರು ಇದ್ದರೂ ಅವರಾರೂ ಸರಿಯಾಗಿ ಗಮನಿಸಲಿಲ್ಲ. ಆಕೆ ತನ್ನ ಮಗಳ ಮನೆಯಲ್ಲಿ ಇದ್ದು ಅಲ್ಲೇ ತೀರಿಕೊಂಡಳು.
ಈ ಘಟನೆ ಓದಿದಾಗ ಮೂಡುವ ಪ್ರಶ್ನೆ ಬದುಕು ಎಂದರೇನು...? ಶ್ರೀಮಂತಿಕೆಯೇ ಬದುಕೆ...? ಗಳಿಕೆಯೆ ಬದುಕೆ....? ಅಧಿಕಾರವೇ ಬದುಕೆ...? ಆಸ್ತಿ ಸಂಪಾದನೆಯ ಬದುಕೆ...? ಈ ರೀತಿ ಬದುಕಿಗೆ ಸುಂದರ ಬದುಕು ಎನ್ನುವರೇ...? ಇಲ್ಲ. ಇದು ಬದುಕಲ್ಲ. ಹಾಗಾದರೆ ಹಣ, ಆಸ್ತಿ, ಅಧಿಕಾರ ಗಳಿಸಬಾರದೇ...? ಗಳಿಸಬಾರದೆಂದಲ್ಲ. ಸಿಕ್ಕರೆ ಸರಿ, ಸಿಗದಿದ್ದರೆ ಅದೇ ಜೀವನವಲ್ಲ. ಗಳಿಕೆ ಬದುಕಿಗಾಗಿ ಇರಬೇಕೆ ವಿನಹ, ಬದುಕು ಗಳಿಕೆಗಾಗಿ ಅಲ್ಲ. ಬಲ್ಲವರು ಬಹಳ ಚೆನ್ನಾಗಿ ಹೇಳಿದ್ದಾರೆ. ಬದುಕು ಎಂದರೆ, ನೋಡುವುದೇ ಬದುಕು. ಕೇಳುವುದೇ ಬದುಕು. ರುಚಿ ಅನುಭವಿಸುವುದೇ ಬದುಕು, ಗಂಧ ಆಘ್ರಾಣಿಸುವುದೇ ಬದುಕು. ಸ್ಪರ್ಶ ಮಾಡುವುದೇ ಬದುಕು. ಮಾತನಾಡುವುದೇ ಬದುಕು. ಕೆಲಸ ಮಾಡುವುದೇ ಬದುಕು, ಆಲೋಚಿಸುವುದೇ ಬದುಕು. ವಿಚಾರ ಮಾಡುವುದೇ ಬದುಕು. ಕಲ್ಪನೆ ಮಾಡುವುದೇ ಬದುಕು. ಭಾವಿಸುವುದೇ ಬದುಕು. ಇವೆಲ್ಲದರ ಒಟ್ಟು ಸಂಗ್ರಹವೇ ಬದುಕು. ನಾವು ಹೇಗೆ ಕೆಲಸ ಮಾಡುತ್ತೇವೆ, ಏನನ್ನು ಆಲೋಚಿಸುತ್ತೇವೆ. ಹೇಗೆ ವಿಚಾರ ಮಾಡುತ್ತೇವೆ, ಎನ್ನುವುದನ್ನು ಅವಲಂಬಿಸಿದೆ. ಒಳ್ಳೆಯದನ್ನು ನೋಡಿ, ಕೇಳಿ, ರುಚಿಸಿ, ಮಾತನಾಡಿ, ಕೆಲಸ ಮಾಡಿ, ವಿಚಾರ ಮಾಡಿ, ಕಲ್ಪನೆ ಮಾಡಿ, ಭಾವಿಸಿದರೆ, ಬದುಕು ಸುಂದರ ಮತ್ತು ಒಳ್ಳೆಯದಾಗುತ್ತದೆ. ಕೆಟ್ಟದ್ದನ್ನು ನೋಡಿ, ಕೆಲಸ ಮಾಡಿ, ಕೇಳಿ, ವಿಚಾರ ಮಾಡಿ, ಭಾವಿಸಿ, ಕಲ್ಪಿಸಿ, ಬದುಕಿದರೆ ಬದುಕು ಕೆಟ್ಟ ಮತ್ತು ಕುರೂಪವಾಗುತ್ತದೆ. ಆಯ್ಕೆ ನಮ್ಮದೇ... ನಿಸರ್ಗದಲ್ಲಿ, ಈ ಜಗತ್ತಿನಲ್ಲಿ ಎಲ್ಲವೂ ಇದೆ, ಒಳ್ಳೆಯದು ಇದೆ, ಕೆಟ್ಟದು ಇದೆ, ಆಯ್ಕೆ ನಮ್ಮದು, ಬದುಕು ಹೇಗಿರಬೇಕು ನಾವೇ ಆಲೋಚಿಸಿ ತೀರ್ಮಾನಿಸ ಬೇಕಾಗುತ್ತದೆ ಅಲ್ಲವೇ?
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ