ಯಾವುದು ಮಹತ್ವ?

ಯಾವುದು ಮಹತ್ವ?

ಇಂದು ಬದುಕಿನಲ್ಲಿ ಯಾವುದು ಮಹತ್ವ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಎಲ್ಲರೂ ಮಾಡುವುದು ಯಾವುದಕ್ಕಾಗಿ..? ಒಂದು ಸುಂದರ ಜೀವನ ಕಟ್ಟಿಕೊಳ್ಳಬೇಕು ಅಂತ ಅಲ್ಲವೇ. ಹಬ್ಬ ಹರಿದಿನ ಮಾಡುತ್ತೇವೆ. ಹೊಸ ಬಟ್ಟೆ ಬರೆ ಧರಿಸುತ್ತೇವೆ. ವಿಶೇಷ ತಿನಿಸು ಮಾಡುತ್ತೇವೆ, ಸಂಗ್ರಹ ಮಾಡುತ್ತೇವೆ. ಮನೆ ಕಟ್ಟುತ್ತೇವೆ ಇವೆಲ್ಲ ಮಾಡುವುದು ಯಾವುದಕ್ಕೆ..? ಬದುಕುವುದಕ್ಕಾಗಿ. ಇಂತಹ ಬದುಕು ಎಲ್ಲರಿಗೂ ದೊರೆತಿದೆ. ಇಂತಹ ಬದುಕನ್ನು ಸುಮ್ಮನೆ ಬದುಕುವುದಕ್ಕಿಂತ ಶ್ರೀಮಂತ ಗೊಳಿಸಬೇಕು. ಚೆನ್ನಾಗಿ ಬದುಕಬೇಕು. ಮಧುರವಾಗಿ ಬಾಳಬೇಕು. 

ಈಗ ನಾವು ಮನೆ ಕಟ್ಟುತ್ತೇವೆ. ಸುಮ್ಮನೆ ಮನೆ ಕಟ್ಟುವುದಲ್ಲ. ಮನೆ ಎಷ್ಟೇ ಚೆನ್ನಾಗಿ ಕಟ್ಟಿದರೂ ಮನೆಯೊಳಗೆ ಸ್ವಚ್ಛತೆ ಇರಬೇಕು. ಸುತ್ತಮುತ್ತ ಹೂ ಗಿಡಗಳನ್ನು ಹಾಕಬೇಕು. ಒಂದಷ್ಟು ಸುವಾಸನೆ ಮನೆ ಒಳಗೆ ಬರಬೇಕಲ್ಲ. ಒಳಗಿರುವ ಜನ ನಗುನಗುತ್ತಾ ಇರಬೇಕು. ಆವಾಗ ಮನೆ ಎನಿಸಿಕೊಳ್ಳುತ್ತದೆ. ದೊಡ್ಡ ಮನೆ ಇದೆ, ಹೊಲಸಾಗಿದೆ, ಮನೆಯಲ್ಲಿ ಬೆಳಕಿಲ್ಲ, ಮನೆಯಲ್ಲಿ ಇರುವವರಿಗೆ ಸಮಾಧಾನ ಇಲ್ಲ. ಏನು ಮಾಡುವುದು..? ಎಲ್ಲಾ ಮಾಡುವುದು ಏತಕ್ಕೆ ? ಎಷ್ಟೋ ಸಲ ಬದುಕನ್ನು ಮರೆತು, ಎಲ್ಲವನ್ನು ಮಾಡುತ್ತೇವೆ. ಬದುಕು ಹಾಳಾಗುತ್ತದೆ, ವಸ್ತು ಇಲ್ಲೇ ಉಳಿಯುತ್ತದೆ. ಸಂತರು, ಶರಣರು, ಜ್ಞಾನಿಗಳು, ಬಲ್ಲವರು ಮಾಡಿದ್ದೇನು..? ಬದುಕಿಗೆ ಬಹಳ ಮಹತ್ವ ಕೊಟ್ಟರು. ಬದುಕಿಗಾಗಿ ಸಂಪತ್ತು, ಸಂಪತ್ತಿಗಾಗಿ ಬದುಕಲ್ಲ. ನಮಗಾಗಿ ಸಂಪತ್ತು, ಸಂಪತ್ತಿಗಾಗಿ ನಾವಲ್ಲ. ಏಕೆಂದರೆ ಬದುಕೆ ಸಂಪತ್ತು ಅಂತ ತಿಳಿದವರು ಬದುಕಿದರು. ನಮ್ಮ ಪೋಷಣೆ ಮಾಡುವುದು ಸಂಪತ್ತು. ನಾವು ಪೋಷಿಸುವ ವಸ್ತು ಸಂಪತ್ತಲ್ಲ, ಹಾಗೆ ಬದುಕಿದರು. 

ಈ ದೇಹ ಹೇಗೆ ಬಳಸಬೇಕೆಂದರೆ.. ದೇವನನ್ನು ಅನುಭವಿಸಬೇಕು. ಆದ್ದರಿಂದ ನಮ್ಮ ಜೀವನವನ್ನು ಸಮೃದ್ಧಗೊಳಿಸಬೇಕು. ಶ್ರೀಮಂತ ಗೊಳಿಸಬೇಕು. ಹಾಗೆ ಸಂತರು ಶರಣರು ಎಲ್ಲಾ ಮಾಡಿದ್ದು. ಅವರು ಮನೆ ಕಟ್ಟಿದರು, ಆದರೆ ಮನೆಗಿಂತ ಹೆಚ್ಚು ಮಹತ್ವ ಬದುಕಿಗೆ ನೀಡಿದರು. ನಾವು ಮನೆ ಕಟ್ಟಿದ್ದೇವೆ, ಬದುಕಿಗಿಂತ ಮನೆಗೆ ಹೆಚ್ಚು ಮಹತ್ವ ನೀಡಿದ್ದೇವೆ. ಇಷ್ಟೇ ವ್ಯತ್ಯಾಸ.. ಅವರು ಹಣಗಳಿಸಿದರು, ನಾವು ಹಣ ಗಳಿಸುತ್ತೇವೆ. ನಮಗೆ ಹಣ ಮಹತ್ವದ್ದು, ಬದುಕು ಕಡಿಮೆ. ಅವರಿಗೆ ಬದುಕು ಮಹತ್ವದ್ದು, ಹಣ ಕಡಿಮೆ. ವ್ಯತ್ಯಾಸ ನೋಡಿ. ಅವರ ಬದುಕಿನಾಗ ಸುಗಂಧ. ನಮ್ಮ ಬದುಕಿನಲ್ಲಿ ಆಸೆ. ಇಷ್ಟೇ ವ್ಯತ್ಯಾಸ.ಎಂತಹ ಅದ್ಭುತ ಬದುಕು!. ಇದನ್ನು ನಾವು ಕಟ್ಟಿಕೊಳ್ಳಬೇಕು. ಯಾರಾದರೇನು?. ಯಾವ ಜಾತಿಯೇನು?. ಯಾವ ಧರ್ಮ ಏನು?. ಯಾವ ಪಂತ ಏನು ? ಯಾವ ದೇಶ ಏನು ? ಬದುಕು ಅಲ್ಲವೇನು. ಅಮೆರಿಕಾದವರು ಬೇರೆ ಬದುಕುತ್ತಾರೆ ಏನು?. ನಾವು ಹಳ್ಳಿಯವರು ನಮ್ಮದು ಬೇರೆ ಜೀವನ ಇರುತ್ತದೆ ಏನು?. ನಮಗೆ ಹೇಗೆ ಬದುಕೋ, ಅವರಿಗೂ ಹಾಗೆ ಬದುಕು. ಬದುಕು ಅನ್ನುವುದು ಎಲ್ಲರಿಗೂ ಸಮಾನ.

ಅಮೆರಿಕನ್ನರ ಬದುಕು ಅದ್ಭುತ ಅಂತಲ್ಲ. ಭಾರತೀಯ ಹಳ್ಳಿಗಳ ಬದುಕು ಕಡಿಮೆ ಇದೆ ಅಂತಲ್ಲ. ಅವರು ನೋಡಿಕೊಳ್ಳುತ್ತಾ, ಬದುಕುತ್ತಾರೆ. ಊಟ ಮಾಡಿ ಮಲಗುತ್ತಾರೆ. ನಾವು ನೋಡಿಕೊಳ್ಳುತ್ತಾ, ಬದುಕಬೇಕು. ಊಟ ಮಾಡಿ ಮಲುಗಬೇಕು. ಎಲ್ಲಿದೆ ವ್ಯತ್ಯಾಸ?. ಅವರು ಮಂಚದ ಮೇಲೆ ಮಲಗುತ್ತಾರೆ. ನಾವು ಚಾಪೆ ಮೇಲೆ ಮಲಗುತ್ತೇವೆ. ನಿದ್ರೆ ಚಾಪೆದು ಅಲ್ಲ, ನಿದ್ರೆ ಮಂಚದ್ದು ಅಲ್ಲ. ಎರಡು ಮರೆತಾಗ ನಿದ್ರೆ. ನಿದ್ರೆಗಾಗಿ ಹಾಸಿಗೆ. ಹಾಸಿಗೆಗಾಗಿ ನಿದ್ರೆಯಲ್ಲ. ನಿಸರ್ಗ ನಮಗೆಷ್ಟು ಬದುಕಲು ಅವಕಾಶ ನೀಡಿದೆ ಹೇಳಿ?. ನೂರು ವರ್ಷ ಆಯಸ್ಸು ಕೊಟ್ಟಿದೆಯಲ್ಲ, ಇನ್ನೇನು ಕೊಡಬೇಕು ?.ನಾವು ಜೀವನ ಕೆಡಿಸಿಕೊಳ್ಳುತ್ತೇವೆ, ಇಲ್ಲ ಕಟ್ಟಿಕೊಳ್ಳುತ್ತೇವೆ. ಇದು ನಮಗೆ ಬಿಟ್ಟಿದ್ದು. ಆದರೆ ಜೀವನ ನೀಡಿದ್ದು ನಿಸರ್ಗ. 

ಬರೀ ಬದುಕಲ್ಲ, ಬದುಕನ್ನು ಕಟ್ಟಿಕೊಳ್ಳಲು ಏನೇನು ಬೇಕು?. ಅದೆಲ್ಲ ನಿಸರ್ಗ ನೀಡಿದೆ. ಬದುಕು ಕಟ್ಟಿಕೊಳ್ಳಲು ಏನು ಬೇಕು?. ಮಣ್ಣು ಬೇಕು, ನೀರು ಬೇಕು, ಗಾಳಿ ಬೇಕು, ಬೆಳಕು ಬೇಕು, ಬೆಳಕಿದೆ. ಜನ ಬೇಕು, ಜನ ಇದ್ದಾರೆ. ಸಸ್ಯ ಬೇಕು ,ಸಸ್ಯಗಳು ಇವೆ. ಮತ್ತೇನು ಬೇಕು?. ನೀವು ವಿಚಾರ ಮಾಡಿ. ಇದಕ್ಕಿಂತ ಇನ್ನೇನು ಬೇಕು?. ಇಷ್ಟೆಲ್ಲಾ ನಂದನವನ್ನಾಗಿ ರೂಪಿಸಿದ ನಿಸರ್ಗ ದೇವತೆ, ನಮಗೆ ಬದುಕಲು ಅವಕಾಶ ಕೊಟ್ಟಿದ್ದು. ಬದುಕು ಅಂದರೆ ಒಂದು ಅವಕಾಶ. ಏತಕ್ಕೆ?. ಜಗತ್ತನ್ನು ಅನುಭವಿಸುವುದಕ್ಕಾಗಿ, ಆನಂದ ಪಡುವುದಕ್ಕಾಗಿ, ಬಡಿದಾಡಲು ಅಲ್ಲ. ನಾವು ಈ ಜಗಕ್ಕೆ ಬಂದಿದ್ದು ಜಗಳ ಮಾಡೋದಿಕ್ಕೆ ಅಲ್ಲ. ಏಕೆ ಜಗಳ ಮಾಡ್ತೀವಿ?. ಎರಡು ವಸ್ತುಗಳಿಗೆ, ಒಂದು ಅಡಿ ಜಾಗಕ್ಕೆ ಅಲ್ಲವೇ. ಕುರ್ಚಿಗಾಗಿ, ಭೂಮಿಗಾಗಿ, ಅಧಿಕಾರಕ್ಕಾಗಿ, ಹಣಕ್ಕಾಗಿ, ಹೆಸರಿಗಾಗಿ, ಅಷ್ಟೇ. ಬಡಿದಾಡುವುದು ಜೀವನ ಅಲ್ಲ. ನಿಸರ್ಗ ನಮಗೆ ಕಣ್ಣು, ಕಿವಿ, ಕೈ, ಕಾಲು ಕೊಟ್ಟಿದೆ. ಏಕೆಂದರೆ ನಡೆಯುವುದಕ್ಕೆ, ಮಾಡುವುದಕ್ಕೆ, ನೋಡುವುದಕ್ಕೆ, ಮತ್ತು ಕೇಳುವುದಕ್ಕೆ. ಬಡಿದಾಡುವುದೇ ಮುಖ್ಯವಾಗಿದ್ದರೆ ಮಚ್ಚು , ಕೊಡಲಿ, ಬಂದೂಕನ್ನು ನಿಸರ್ಗ ನೀಡುತ್ತಿತ್ತು. ನಾವು ನಗುನಗುತ್ತಾ ಬರಿ ಕೈಯಲ್ಲಿ ಬಂದಿದ್ದೇವೆ. ಮುಖದಲ್ಲಿ ಜೀವನೋತ್ಸವ, ಕಣ್ಣಿನಲ್ಲಿ ಕಳೆ, ಮೈಯಲ್ಲಿ ಚೇತನ, ಇವುಗಳನ್ನು ಪಡೆದು ಬಂದವರು. ನಾವು ನಿಸರ್ಗ ಏನು ಕೊಟ್ಟಿದಿಯೋ.. ಅದನ್ನು ಬಳಸಬೇಕು. ಯಾವುದಕ್ಕೆ ಕೊಟ್ಟಿದ್ಯೋ... ಅದಕ್ಕೆ ಬಳಸಬೇಕು. ಅದನ್ನು ಬಿಟ್ಟು ಬೇರೆಯದಕ್ಕೆ ಬಳಸಿದರೆ ನಿಸರ್ಗ ಹೇಳುತ್ತದೆ ಜೀವನ ವ್ಯರ್ಥ ಅಂತ. ಜೀವನ ಹಾಳು ಮಾಡಿದಂತೆ. ಕೆಲವರು ಈ ಜೀವನವನ್ನು ಕುಡಿಯುವುದಕ್ಕೆ, ಸೇದುವುದಕ್ಕೆ ಮುಡುಪಾಗಿ ಇಟ್ಟಿದ್ದಾರೆ. ಅವರಿಗೆ ಜೀವನದ ಎಚ್ಚರವಿಲ್ಲ. ಬದುಕನ್ನು ಮರೆತಿದ್ದೇವೆ.

ಬದುಕುವುದನ್ನು ಕಲಿಸಿದವರೇ ಜ್ಞಾನಿಗಳು, ಗುರುಗಳು. ಗುರು ಅಂದರೆ ಕಲಿಸುವವನು, ಮಾರ್ಗ ತೋರಿಸುವವನು. ನಮ್ಮ ಜೀವನ ಹಸನ ಮಾಡುವವರು ಅಂತಹವರು ಮಹಾತ್ಮರು. ಆದ್ದರಿಂದ ನಾವು ಅವರಿಂದ ವಿದ್ಯೆ, ಬೆಳಕು ನಿರೀಕ್ಷಿಸಬೇಕು. ಬದುಕಿನ ರೀತಿ ಅದಕ್ಕಾಗಿ ಮಾರ್ಗ ನಿರೀಕ್ಷಿಸಬೇಕು. ಇಷ್ಟು ವರ್ಷ ಏನೇನೋ ತಪ್ಪು ಮಾಡಿದ್ದೇವೆ, ಮರೆತು ಬಿಡಬೇಕು. ಹಿಂದೆ ಏನಾಯ್ತು ಮಹತ್ವದಲ್ಲ. ಇನ್ನು ಮೇಲೆ ಬದುಕುವುದು ಮಹತ್ವ. ಹೊಸ ಬದುಕನ್ನು ಆರಂಭಿಸುವುದು. ಹಿಂದೆ ಏನೇನೋ ಆಯಿತು, ಆಗಿ ಹೋಗಿದೆ. ಅದನ್ನೆಲ್ಲ ಬಿಡುವುದು. ಇನ್ನು ಮೇಲೆ ಕೈ ಸ್ವಚ್ಛ, ಮನಸ್ಸು ಸ್ವಚ್ಚ, ದೇಹ ಸ್ವಚ್ಛ. ಇಂತಹ ಬದುಕು ಕಟ್ಟಿಕೊಳ್ಳುವುದು.ಎಷ್ಟು ವರ್ಷ ಬದುಕು ಕೆಟ್ಟಿತು ಮಹತ್ವದಲ್ಲ. ಈ ಕ್ಷಣ ಬದುಕು ಸುಧಾರಿಸಿಕೊಳ್ಳಬೇಕು, ನಗುನಗುತ ಇದ್ದರೆ ಎಲ್ಲಾ ಸರಿ ಹೋಗುತ್ತದೆ. ಆರೋಗ್ಯ ಸರಿ ಹೋಗುತ್ತದೆ. ಸಂತೋಷ ಶುರುವಾಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಎಲ್ಲಾ ಸಂತೋಷದ ಮೇಲೆ ಅವಲಂಬಿಸಿದೆ. ಬದುಕುವುದಕ್ಕೆ ಬರದಿದ್ರೆ ಮನಸ್ಸು ತಾಪ ಕೊಡುತ್ತದೆ. ಯಾವ ಮಂತ್ರ, ದೇವರು ಕಾಟ ಕೊಡುವುದಿಲ್ಲ. ಉಂಡು ತಿಂದು ಸಂತೋಷವಾಗಿರುವುದೇ ಜೀವನ. ಬದುಕು ಎಂದರೆ ನಗು ನಗುತ ಬಾಳುವುದು ಅಲ್ಲವೇ...?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ