ಯಾವುದು ಸುಂದರ?
ಒಂದು ಕಾಡಿನಲ್ಲಿ ಜಿಂಕೆಯೊಂದು ವಾಸವಾಗಿತ್ತು. ಅದಕ್ಕೆ ವಿಶಾಲವಾದ ಮತ್ತು ಸುಂದರ ವಿನ್ಯಾಸದ ಕೊಂಬುಗಳಿದ್ದವು. ಇತರ ಪ್ರಾಣಿಗಳು ಅದರ ಕೊಂಬನ್ನು ನೋಡಿ ಅಸೂಯೆ ಪಡುತ್ತಿದ್ದವು. ಜತೆಗೆ, ‘ನಿನ್ನ ಕೊಂಬುಗಳು ನಿಜಕ್ಕೂ ಚಂದ' ಎಂದು ಹೊಗಳುತ್ತಿದ್ದವು.
ಎಲ್ಲರೂ ತನ್ನ ಕೊಂಬನ್ನು ಹೊಗಳುವುದನ್ನು ನೋಡಿ ಆ ಜಿಂಕೆಗೆ ಹೆಮ್ಮೆ. ಸುಂದರ ಮತ್ತು ಭವ್ಯವಾದ ಕೊಂಬನ್ನು ಎತ್ತರಕ್ಕೆ ಏರಿಸಿಕೊಂಡು ತಲೆ ಎತ್ತಿ ನಡೆದಾಡುತ್ತಿತ್ತು. ಒಂದು ದಿನ ನರಿಯೊಂದು ಜಿಂಕೆಯನ್ನು ಕಂಡು ವ್ಯಂಗ್ಯದಿಂದ ನಕ್ಕಿತು. ಜಿಂಕೆಗೆ ಅಚ್ಚರಿ. ತನಗೆ ಇಷ್ಟು ದೊಡ್ಡ ಮತ್ತು ಸುಂದರವಾದ ಕೊಂಬು ಇದ್ದರೂ ನರಿ ಏಕೆ ತನ್ನನ್ನು ಅಪಹಾಸ್ಯ ಮಾಡುತ್ತಿದೆ ಎಂಬ ವಿಸ್ಮಯ.
‘ನರಿಯಣ್ಣಾ, ನೀನು ಅಲ್ಲೇ ದೂರದಲ್ಲಿರು. ಆದರೆ ಒಂದು ಪ್ರಶ್ನೆಗೆ ಉತ್ತರ ಹೇಳು. ನನ್ನ ತಲೆಯ ಮೇಲಿರುವ ಅಲಂಕಾರ ರೂಪದ ಕೊಂಬು ಬಹಳ ಭವ್ಯವಾಗಿದೆ. ಆದರೆ, ಅದನ್ನು ಹೊಗಳುವ ಬದಲು ನನ್ನನ್ನು ಕಂಡು ಈಗ ಅಪಹಾಸ್ಯ ಮಾಡಿದ್ದು ಏಕೆ?’ ಎಂದು ಕೇಳಿತು.
‘ಏ ಜಿಂಕೆ, ನಿನ್ನ ಕೊಂಬು ಚೆನ್ನಾಗಿ ಕಾಣುತ್ತಿರುವುದೇನೋ ನಿಜ. ಆದರೆ ನಿನ್ನ ಕಾಲುಗಳನ್ನು ನೋಡು. ಉದ್ದವಾಗಿದೆ. ನೀಳವಾದ ಬಿದಿರಿನ ರೀತಿ ಚಾಚಿಕೊಂಡಿದೆ. ನಿನ್ನ ಕಾಲುಗಳನ್ನು ಕಂಡರೆ ನಿನಗೆ ಅಸಹ್ಯ ಎನಿಸುವುದಿಲ್ಲವೇ?’ ಎಂದು ನರಿ ಹೇಳಿತು. ನರಿಯ ಉದ್ದೇಶವೇ ಜಿಂಕೆಯ ಹೆಮ್ಮೆಯ ಬಲೂನನ್ನು ಚುಚ್ಚಬೇಕು ಮತ್ತು ಜಿಂಕೆಯ ಮನದಲ್ಲಿ ಕೀಳರಿಮೆಯನ್ನು ಮೂಡಿಸಬೇಕು ಎಂದು. ಒಂದು ಜೀವಿಯಲ್ಲಿ ಕೀಳರಿಮೆಯನ್ನು ಒಮ್ಮೆ ಮೂಡಿಸಿಬಿಟ್ಟರೆ, ಆ ಜೀವಿಯು ಮತ್ತೆಂದೂ ಹೆಮ್ಮೆ ಪಡಲಾರದು ಎಂಬ ಕುತಂತ್ರ ನರಿಯದ್ದು.
‘ಓಹ್, ಹೌದೇ, ನಾನಿನ್ನೂ ಗಮನಿಸಿಯೇ ಇಲ್ಲವಲ್ಲ, ನನ್ನ ಕಾಲು ಉದ್ದಕ್ಕಿದೆ. ಆದರೆ ಅದು ಹೇಗೆ ಅಸಹ್ಯ ಎನಿಸುತ್ತದೆ?’ ಎಂದು ಜಿಂಕೆ ಕೇಳಿತು. ಜಿಂಕೆಯ ಮನಸ್ಸಿನಲ್ಲಿ ಸಂಶಯದ ಬೀಜ ಬಿತ್ತನೆಯಾಗಿತ್ತು.
‘ಕಾಡಿನ ಅಂಚಿನಲ್ಲಿರುವ ಕೊಳದ ನೀರಿನಲ್ಲಿ ಹೋಗಿ ನೋಡಿಕೋ, ನಿನ್ನ ಕಾಲುಗಳು ಎಷ್ಟೊಂದು ಅಸಹ್ಯವಾಗಿವೆ ಎಂದು. ಕಡ್ಡಿಗಳ ರೀತಿ ಕಾಣಿಸುತ್ತಿವೆ' ಎಂದು ನರಿ ಮತ್ತೊಮ್ಮೆ ವ್ಯಂಗ್ಯವಾಡಿತು.
ಜಿಂಕೆಯು ಸಪ್ಪೆ ಮೋರೆ ಹಾಕಿಕೊಂಡು, ಕಾಡಿನ ಒಂದು ಭಾಗದಲ್ಲಿರುವ ಕೊಳದ ಬಳಿ ಹೋಗಿ ತನ್ನ ಪ್ರತಿಬಿಂಬವನ್ನು ನೋಡಿಕೊಂಡಿತು. ಹಿಂದೆ ಹಲವು ಬಾರಿ ಅದು ತನ್ನ ಪ್ರತಿಬಿಂಬ ನೋಡಿಕೊಂಡಿದ್ದುಂಟು. ಆದರೆ ಈಗ ಅದರ ಕಾಲುಗಳು ಕುರೂಪವಾಗಿ ಕಾಣಿಸುತ್ತಿದ್ದವು. ! ಉದ್ದನೆಯ, ಬಿದಿರಿನ ರೀತಿ ನೀಡಿಕೊಂಡಿದ್ದ ಕಾಲುಗಳು ತನ್ನ ರೂಪವನ್ನು ಕೆಡಿಸಿವೆ ಎಂದುಕೊಂಡಿತು ಜಿಂಕೆ.
ಮತ್ತೊಮ್ಮೆ ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ನೋಡಿಕೊಂಡಿತು. ತಲೆಯ ಮೇಲೆ ಇರುವ ಕೊಂಬುಗಳು ಸುಂದರ ನಿಜ. ಆದರೆ ಆ ಸೌಂದರ್ಯವನ್ನು ಈ ನೀಳ ಕಾಲುಗಳು ಹಾಳು ಮಾಡಿವೆ ಎಂದು ಅದಕ್ಕೆ ಖಚಿತವಾಯಿತು. ಪೆಚ್ಚುಮೋರೆ ಹಾಕಿಕೊಂಡು, ಕಾಡಿಗೆ ವಾಪಸಾಯಿತು. ಆ ರಾತ್ರಿ ಅದಕ್ಕೆ ಮೊದಲ ಬಾರಿ ನಿದ್ರೆ ಬರಲೇ ಇಲ್ಲ ! ತನ್ನ ಕಾಲುಗಳು ಕುರೂಪವಾಗಿವೆ ಎಂದು ನರಿ ಬಿತ್ತಿದ್ದ ಸಂಶಯದ ಬೀಜವು ಅದರ ಮನದಲ್ಲಿ ಮೊಳಕೆಯೊಡೆದು ಗಿಡವಾಗಿ ಬೆಳೆಯಲು ಆರಂಭವಾಗಿತ್ತು.
ನಂತರ ಹಲವು ದಿನ ಅದು ನೀರಿನಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡಿತು. ಕೊಂಬುಗಳು ಸುಂದರವಾಗಿದ್ದರೂ, ತನ್ನ ನೀಳವಾದ, ಬಿದಿರಿನಂತಿರುವ ಕಾಲುಗಳು ಕುರೂಪ ಎಂದು ಅದರ ಮನದಲ್ಲಿ ಅಚ್ಚೊತ್ತುವಂತಾಯಿತು. ಅದು ಬೇಸರದಿಂದ ಸೊರಗಿತು.
ಒಂದು ದಿನ ಕೊಳದಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡು ಕಾಡಿಗೆ ಹಿಂದಿರುಗುವಾಗ ಹುಲಿಯೊಂದು ಅಟ್ಟಿಸಿಕೊಂಡು ಬಂದಿತು. ಜಿಂಕೆಯು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಅದರ ವಿಶಾಲವಾದ ಕೊಂಬುಗಳು ಪೊದೆಯೊಂದರಲ್ಲಿ ಬಲವಾಗಿ ಸಿಕ್ಕಿಹಾಕಿಕೊಂಡವು.
ಜಿಂಕೆಗೆ ಮುಂದೆ ಓಡಲು ಕಷ್ಟವಾಯಿತು. ತನ್ನ ಹೆಮ್ಮೆ ಎನಿಸಿದ್ದ ಕೊಂಬುಗಳೇ ಅದರ ಪ್ರಾಣಕ್ಕೆ ಕಂಟಕವಾಗಿದ್ದವು. ತನ್ನ ಕಾಲುಗಳನ್ನು ಬಳಸಿ, ಜಾಡಿಸಿ ಒದ್ದು, ಕೊಂಬುಗಳನ್ನು ತಲೆಯಿಂದ ಕೀಳಿಸಿಕೊಂಡು ಹೇಗೋ ಕಷ್ಟದಿಂದ ಪೊದೆಯಿಂದ ತಪ್ಪಿಸಿಕೊಂಡು, ಓಡತೊಡಗಿತು. ಹುಲಿ ಇನ್ನೇನು ಅದನ್ನು ಹಿಡಿಯುವಷ್ಟು ಹತ್ತಿರ ಬಂದಿತ್ತು. ಜಿಂಕೆಯು ತನ್ನ ನೀಳ ಕಾಲುಗಳನ್ನು ಬಲವಾಗಿ ತುಳಿದು, ವೇಗವಾಗಿ ಓಡಿತು. ಹುಲಿಯಿಂದ ತಪ್ಪಿಸಿಕೊಂಡಿತು. ನರಿ ಹೇಳಿದ್ದ ಕುರೂಪಿ ಎನಿಸಿದ್ದ ಕಾಲುಗಳೇ ಜಿಂಕೆಯ ಜೀವ ಉಳಿಸಿದ್ದವು. ಅದಕ್ಕೀಗ ಕಾಲುಗಳ ಕುರಿತು ಇದ್ದ ಕೀಳರಿಮೆ ಮಾಯವಾಯಿತು.
-ಶಶಾಂಕ್ ಮುದೂರಿ
(ವಿಶ್ವವಾಣಿ ಪತ್ರಿಕೆಯಿಂದ ಸಂಗ್ರಹಿತ)
ಚಿತ್ರ ಕೃಪೆ: ಅಂತರ್ಜಾಲ ತಾಣ