ಯಾವ ಗಳಿಗೆಗೆ
ಕವನ
ಯಾವ ಗಳಿಗೆಗೆ ನಾನು ಬಂದೆನೊ
ಯಾವ ಬೆಳಕನು ಕಂಡು ನಿಂದೆನೊ
ಯಾವ ಸುಖವನು ಉಂಡು ಬೆಳೆದೆನೊ
ಯಾವ ನೆಲದಲಿ ಹೇಗೆ ಇರುವೆನೊ
ಯಾರ ಸ್ನೇಹವ ಮಾಡಿ ನಲಿದೆನೊ
ಯಾರ ಬಂಧಕೆ ಸೋತು ಹೋದೆನೊ
ಯಾರ ಜೀವಕೆ ಕೈಯ ಹಿಡಿದೆನೊ
ಯಾರ ಸಂಗದಿ ಪ್ರೀತಿ ಪಡೆದೆನೊ
ಯಾರು ಯಾರಿಗೊ ಮೋಡಿ ಆದೆನೊ
ಯಾರು ಕಾಣದ ನೆಲಕೆ ಸೋತೆನೊ
ಯಾರು ಕೇಳದ ಪದಕೆ ಕುಣಿದೆನೊ
ಯಾರು ಬಾರದ ಸವಿಗೆ ಕಾದೆನೊ
***
ಗಝಲ್
ಪ್ರೀತಿಯ ಪದಗಳೆ *ಹೀಗೆ* ಅರ್ಥವಿಲ್ಲದ್ದು
ಬೆಸುಗೆಯ ಬಂಧವೆ *ಹಾಗೆ* ಅರ್ಥವಿಲ್ಲದ್ದು
ಸಂತುಲಿತ ಜೀವನದ ಪಯಣಕೆ ಕೊನೆಯಿಲ್ಲವೆ
ಗುರಿಯಿರದ ಬದುಕದುವು *ಹೇಗೆ* ಅರ್ಥವಿಲ್ಲದ್ದು
ತೀರ್ಪುಗಳ ನಡುವೆಯೇ ವೈಮನಸು ನುಸುಳುತ್ತಿದೆ
ಕತೆಯಿಲ್ಲದವರ ಸನಿಹವಿದ್ದು *ಹೋಗೆ* ಅರ್ಥವಿಲ್ಲದ್ದು
ಹೊಸರಾಗದೊಳಗಿನ ತಾಳವದು ಹೋಯ್ತಲ್ಲ ಹಳಸಿದರೆ
ನಸುಗೆಂಪಿನ ವ್ಯಾಮೋಹದ ನಡುವೆ *ಬಾಗೆ* ಅರ್ಥವಿಲ್ಲದ್ದು
ಮೌನಕ್ಕೂ ಒಂದೊಂದು ಕಥೆಯಿದೆ ತಿಳಿಯು ಈಶಾ
ಸಪ್ಪೆಯೆನಿಸಿದವರ ಜೊತೆಯಲೆ *ಸಾಗೆ* ಅರ್ಥವಿಲ್ಲದ್ದು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್