ಯುಗದ ಕವಿ-ಜಗದ ಕವಿ-ರಸ ಋಷಿ- ಕುವೆಂಪು
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು//
ಕನ್ನಡಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ//
ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ//
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯಶಿವ//
1904ರ ಡಿಸೆಂಬರ್ 29ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು. ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದರು. ಪ್ರೌಢಶಾಲೆಯಿಂದ ಎಂ.ಎ. ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ 1929ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಸೇವೆ. ಅದೇ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ,ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ,ಉಪಕುಲಪತಿಯಾಗಿ ನಿವೃತ್ತಿಯಾದರು.
ರಾಷ್ಟ್ರಕವಿ ಕುವೆಂಪು: ಮಲೆನಾಡಿನ ಸಾಹಿತ್ಯದಿಗ್ಗಜರ ಕೂಟದ ಅನರ್ಘ್ಯರತ್ನ. ಮಲೆನಾಡಿನ ಕವಿ. ಸಮಕಾಲೀನ ಸೃಜನಶೀಲತೆಯ ಮೇರುಶಿಖರ. ಶ್ರೀಯುತರ ಸಾಹಿತ್ಯದ ವೈವಿದ್ಯಮಜಲುಗಳ ಬಣ್ಣಿಸಲು ಅಸದಳ. ಅವರ ಮಹಾಕಾವ್ಯ, ಕಾದಂಬರಿ, ನಾಟಕ, ಕವಿತೆ ಎಲ್ಲದರಲ್ಲೂ ಮಲೆನಾಡಿನ ಬೆಟ್ಟಗುಡ್ಡಗಳ, ಹಸಿರು ಸಿರಿಯ, ಒಣಗಿದ ತರಗೆಲೆಗಳ ಸದ್ದು, ಹರಿವ ಸಲಿಲದ ಜುಳುಜುಳು ನಿನಾದ, ಖಗಮೃಗಗಳ ಓಡಾಟ, ಹಕ್ಕಿಗಳ ಕಲರವ, ಮಲೆನಾಡಿನ ಹೆಂಗಳೆಯರ ಕಷ್ಟಕಾರ್ಪಣ್ಯ ಈ ಅನುಭವಗಳೇ ತುಂಬಿದೆ ಕಥೆ, ಕಾದಂಬರಿಗಳ ಪಾತ್ರಗಳು ಕಾಡಿನ ಸಂಸ್ಕೃತಿಯ, ಸಂಪ್ರದಾಯ-ಆಚರಣೆಗಳ ಪ್ರತೀಕ. ಕುವೆಂಪು ಅವರಲ್ಲಿ ಅದಮ್ಯವಾದ ನಿಸರ್ಗ ಪ್ರೀತಿ ಮತ್ತು ಜೀವನ ಪ್ರೀತಿಯ ಧ್ವನಿ ಕಾಣಬಹುದು. ಮಲೆನಾಡಿನ ನಿಸರ್ಗದ ಒಡನಾಡಿಯಾಗಿ ಬೆಳೆದು ಬಂದು, ಸಾಮಾಜಿಕ ಕಳಕಳಿ ಹೊಂದಿದವರು, ತಮ್ಮ ರಚನೆಗಳಲ್ಲಿ ಕಾಣಿಸಿದವರು ಸಾಮಾಜಿಕ, ಸಾಂಸ್ಕೃತಿಕ ಜೀವನದ ಮಜಲುಗಳನ್ನು ಚಿತ್ರಿಸಿದವರು.
ಅವರ ಸೃಜನಶೀಲ ಪ್ರತಿಭೆ ಸಾಗರೋತ್ತರ ವ್ಯಾಪಿಸಿ, ಸಾಹಿತ್ಯಲೋಕಕ್ಕೆ ಶ್ರೀಮಂತವೆನಿಸಿದೆ. ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಗೌರವ ಸ್ಥಾನಮಾನವನ್ನು ನೀಡುವಂತೆ ಮಾಡಿದೆ. ಸೂಕ್ಷ್ಮ ವಿಷಯಗಳನ್ನು ಅವಲೋಕಿಸಿ ಕವನ, ಕಥೆ, ಕಾದಂಬರಿಗಳಲ್ಲಿ ಬರೆದ ಶೈಲಿ ಅದ್ಭುತ. ವಾಸ್ತವತೆಯ ಚಿತ್ರಣ,ಆಧ್ಯಾತ್ಮ, ವ್ಯೆಚಾರಿಕತೆಯ ಬೇರುಗಳು ಗಟ್ಟಿಯಾಗಿ ತಳವೂರಿದ್ದನ್ನು ನಾವು ಕಾಣಬಹುದು. ವಿಶ್ವಮಾನವ ಸಂದೇಶದ ಹರಿಕಾರ. ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಮನದಲ್ಲಿ ಅಚ್ಚೊತ್ತಿದ ಸಾಹಿತ್ಯ ರಚನೆಗಳು. ನಾಟಕಗಳು ಬೆರಳ್ಗೆಕೊರಳ್, ಶೂದ್ರತಪಸ್ವಿ, ಬಿರುಗಾಳಿ, ಯಮನ ಸೋಲು, ಜಲಗಾರ ಇತ್ಯಾದಿ. ಶ್ರೀರಾಮಾಯಣ ದರ್ಶನಂ ಮಹಾಕಾವ್ಯ, ಅಗ್ನಿಹಂಸ, ಅನಿಕೇತನ, ಕೊಳಲು, ಪಕ್ಷಿಕಾಶಿ ಇನ್ನೂ ಅನೇಕ ಕೃತಿಗಳನ್ನು ಬರೆದವರು.
ಈ ಮಹಾರಸ ಋಷಿಗೆ ಸಂದ ಗೌರವ ಪ್ರಶಸ್ತಿಗಳು ಅನೇಕಾನೇಕ. ರಾಜ್ಯ ಸರ್ಕಾರದಿಂದ ‘ರಾಷ್ಟ್ರ ಕವಿ’ ಬಿರುದು ಶ್ರೀ ರಾಮಾಯಣದರ್ಶನಂ ಮಹಾಕೃತಿಗೆ ‘ಜ್ಞಾನಪೀಠ ಪ್ರಶಸ್ತಿ’. ಪದ್ಮವಿಭೂಷಣ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪ್ರಥಮ ಪಂಪ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪ್ರಥಮ ಕರ್ನಾಟಕ ರತ್ನ ಪ್ರಶಸ್ತಿ. ಬೇರೆ-ಬೇರೆ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಪಡೆದ ಹೆಮ್ಮೆಯ ಸಾಹಿತಿಗಳಲ್ಲಿ ಓರ್ವರು. ಸತ್ಯಕ್ಕೆ ಎಂದೂ ಹೆದರಬಾರದು, ಸುಳ್ಳಿಗೆ ಆಯುಷ್ಯವಿಲ್ಲ ಎಂದವರು. ಉತ್ತಮವಾದ್ದು ಬೇಕೆಂದರೆ ಶ್ರಮವಹಿಸಿ ದುಡಿಯಿರಿ ಎಂದು ಕರೆಯಿತ್ತರು. ಮತ ಮನುಜ ಮತವಾಗಿ, ವಿಶ್ವಪಥವಾಗಬೇಕು, ವಿಶ್ವ ಮಾನವನಾಗಬೇಕೆಂದು ಕರೆಯಿತ್ತರು. ಎಲ್ಲಾ ಬರಹಗಳೂ ಶ್ರೇಷ್ಠವಾಗಲು ಸಾಧ್ಯವಿಲ್ಲ, ಶ್ರೇಷ್ಠತೆಯನ್ನು ಆರಿಸಿ, ಗುರುತಿಸುವ ಕೆಲಸವಾಗಬೇಕು, ಪ್ರಾಮಾಣಿಕ ನ್ಯಾಯ ಒದಗಿಸಬೇಕು. ಕವಿತೆ ಆತ್ಮದ ಅರಿವಾಗಿರಬೇಕು. ಆತ್ಮ ಹಾನಿ, ಆತ್ಮ ವಂಚನೆ ಮಾಡಬಾರದು. ನಿನಗೇನು ಅನಿಸುತ್ತದೆಯೋ, ನ್ಯಾಯವೋ ಬರಹ ರೂಪಕ್ಕಿಳಿಸು ಎಂದವರು.
ಬರಿಯ ಸಾಧನೆಯಿಂದ ಏನೂ ಸಿಗದು, ಗುರುತಿಸಿ, ಪ್ರೋತ್ಸಾಹಿಸುವ ಮನಸ್ಸಿರಬೇಕು. ಕಿರಿಯರನ್ನು ಮೇಲೆತ್ತಬೇಕು. ನಮ್ಮ ನಾಡು ಕಂಡ ಶ್ರೇಷ್ಠ ಹಿರಿಯ ಸಾಹಿತಿಯ ಹುಟ್ಟಿದ ದಿನಕ್ಕೊಂದು ಅವರ ಕುರಿತಾದ ಸಣ್ಣ ಮಾಹಿತಿಯ ಬಿಂದು. ರಸ ಋಷಿ ಕನ್ನಡ ನಾಡಿನ ಹೆಮ್ಮೆಯ ಸುಪುತ್ರ ಕುವೆಂಪುರವರ ನೆನಹು. ಜೈ ಕನ್ನಡಾಂಬೆ, ಸಿರಿಗನ್ನಡಂ ಗೆಲ್ಗೆ.
-ರತ್ನಾ ಕೆ.ಭಟ್,ತಲಂಜೇರಿ*
(ಆಕರ:ಕವಿವರ್ಯರ ವಿವಿಧ ಪುಸ್ತಕಗಳಿಂದ)
ಚಿತ್ರ ಕೃಪೆ: ಇಂಟರ್ನೆಟ್ ತಾಣ