ಯುಗಧರ್ಮ

ಯುಗಧರ್ಮ

ಇದಾವ ಕಾಲದಿ ಜನ್ಮತಳೆದುಬಂದ ಧರ್ಮ, ಸಂಕರದ ಬೆಳವಣಿಗೆಯೋ? ಎಲ್ಲರಂತೆ ತಾನೊಲ್ಲದ ಬದುಕು ಸೃಷ್ಠಿಸಿ ಬಿಟ್ಟಿದೆ ಜಗದ ಮಾನವ ಜೀವಜಾಲಕೆ. ಇದಕ್ಕೆ ಅಸ್ಥಿತ್ವ, ರೂಪ ಕೊಟ್ಟವರಾರೋ? ಕಿತ್ತೊಗೆಯಬೇಕೆಂದರೂ ಮನದ ಅಹಂನ ಮೂಲೆಯಲ್ಲಿ ಬೆಳೆಯುತ್ತಲೇ ಇದೆ ಫಿನಿಕ್ಸ್ ನಂತೆ. ಇದಕ್ಯಾವ ಬೆರಗು? ಇದಕ್ಯಾವ ಕೊರಗು? ಅಳೆದಂತೆಲ್ಲ ಮಾನವೀಯತೆಯ ಲೆಕ್ಕಾಚಾರ ತಪ್ಪುತ್ತಿದೆ. ಮಾನವ ಜೀವನ ಒಕ್ಕಲೆದ್ದು ಹೋಗುತ್ತಿದೆ. ಸಂಸ್ಕೃತಿ, ಸಂಸ್ಕಾರಗಳ ಆಳ, ಅರಿವಿನ ಕೊರತೆಯಲ್ಲಿ ಮನಸುಗಳು ಬಿರಿಯುತ್ತಲಿವೆ. “ಆರಂಕುಶವಿಟ್ಟೊಡೆ ............" ಎನ್ನುವ ಪಂಪನ ಪೆಂಪಿನ ಮಾತಿನ ಜಗದಲ್ಲಿ ಅಹಂ ಕೇಕೆ ಹಾಕಿದರೆ ಸ್ವಾಭಿಮಾನ ಕುಹಕವಾಡುತ್ತಿದೆ.
ಇದಾವ ಯುಗಧರ್ಮವೋ ನಾಕಾಣೆ ಜಗದಗಲ, ಮುಗಿಲಗಲದತ್ತತ್ತ ಚಾಚಿನಿಂತು ಸ್ವಕುಲವನ್ನೇ ಅಣಕಿಸಿ, ಕುಹಕವಾಡಿ - ಅಪಮಾನಿಸುವ ಈ ಛಾತಿ ಯಾಕೋ. ಒಮ್ಮೊಮ್ಮೆ ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತೇನೆ. ಜೀವಿಯ ಜಾತವದಾವ ಧರ್ಮ? ಅದರ ಕರ್ಮ ಅದಾವ ಸಂಕರ? ಆದರೂ ಬಹುಮತದ ವಿರೋಧಾಭಾಸದ ಕೂಗಿಗೆ ನನ್ನಲ್ಲಿ ನಾನೇ, ಅಂತರಂಗದಲ್ಲಿ ಕುಗ್ಗುತ್ತೇನೆ. ಧರ್ಮ ಬೇಡ ಕರ್ಮವಿರಲಿ ಅವರವರ ಜೀವನ ರೀತಿ-ನೀತಿಗಳಿಗೆ ಎಂದು ಮನ ಚೀತ್ಕರಿಸಿ ಮಾರ್ದನಿಸಿದರೂ, ವರ್ಣ ಸಂಕರ ಹುಟ್ಟುಹಾಕಿ “ಚಾತುರ್ವರ್ಣಂ ಮಯಾಸೃಷ್ಠಿ .....” ಎಂದು ಹೇಳಲಾಗಲಿ, ಜಗದ ಕರ್ಮವಳಿಯಲು - “ಸಂಭವಾಮಿ ಯುಗೇ ಯುಗೇ" ಎಂದು ಹೇಳಲು ಆ ದೇವಕಿನಂದನನೇ ಅವತರಿಸಿ ಬರಬಲ್ಲನೇ ಎಂದು ಧೇನಿಸಿ ಸುಮ್ಮಗಾಗುತ್ತೇನೆ.
ಭವಬಂಧನದಿ ಮಾನವೀಯ ಮೌಲ್ಯಗಳ ಮರೆತು ಶ್ರೇಷ್ಠ-ಕನಿಷ್ಠತ್ವದ ಬುದ್ಧಿಯನ್ನು ಮನ-ಮನದಿ ಬೆಸೆದು ನೆಮ್ಮದಿಯ ಕಸಿಯುವ ಪರಿ ಏಕೋ ಕೆಲ ಚಿತ್ತ ವಿಕಾರದ ಮನಗಳಿಗೆ. ನನ್ನಲ್ಲಾಗಲಿ, ಅವರಲ್ಲಾಗಲಿ ಒಮ್ಮತದ, ಸ್ಪಷ್ಠ ಆಧಾರ ಸಹಿತ ಉತ್ತರವಿಲ್ಲ. ಇದ್ದರೂ ಅದು ಅಂತಹ ಮನಸುಗಳಿಂದ ಹೀಗೇ ಇರಬೇಕೆಂದು ಹುಟ್ಟಿಕೊಂಡ ಸ್ವ-ಸಂಸ್ಕಾರ ಸ್ವ-ಪ್ರೇಮ ಮನೋಗತ ಬಯಕೆಯಾಗಿ ಜನ್ಮ ತಾಳಿದ್ದಷ್ಠೆ. ಅದೇ (ಅಂತಹ ಮನೋಭಾವನೆ) ಇತಿಹಾಸ ಹುಟ್ಟುಹಾಕಿದ ಪರಿಪಾಠ. ಅಷ್ಟಕ್ಕೂ ಯಾರ್ಯಾರು ಹೇಗಿರಬೇಕೆಂಬ, ಇಂತಹುದೇ ಸರಿಯೆಂಬ, ಇತರರ ಖಾಸಗೀ ಬದುಕಿನಲ್ಲಿ ಸಮ್ಮೋಹಕ ಧರ್ಮ ದಾರಿದ್ರ್ಯಗಳ ಕಸ ಚಲ್ಲುವುದೇಕೆ? ತಾವೂ ಹಾಯಾಗಿರುವ, ಇತರರ ಬದುಕೂ ಹಸನಾಗಿರಲೆಂಬ, ಇನ್ನೊಬ್ಬರ ಸ್ವ ಹಿತಾಸಕ್ತಿ ಸ್ವ-ಮನೋಭಾವ ಹಾಗೂ ಮನೋಧರ್ಮಗಳನ್ನು ಅವರವರ ಪಾಡಿಗೆ ಬಿಟ್ಟುಕೊಟ್ಟರೆ ಇವರಿಗೇನು ನಷ್ಠ?
ಯಾರ ಬದುಕೂ ದಾರಿದ್ರ್ಯವಲ್ಲ. ಅವರವರ ಬದುಕಿನಲ್ಲಿ ದಾರಿದ್ರ್ಯವನ್ನು ತುಂಬುವ ಮೂರನೇ ವ್ಯಕ್ತಿಯಾಗಿ ಮೂಗು ತೂರಿಸುವ ಚಾಳಿ ಬೇಡ. ಇದು ಸರ್ವ ಹಿತ, ಸಾರ್ವಕಾಲಿಕ ಸುಖಪ್ರದವಾದ ಸತ್ಯದ ನಡೆಯೆಂಬುದು ನಂಬಿಕೆ. ಹಾಗಂತ ಯಾರಿಗೂ ತಮ್ಮತನವನ್ಮು ಬಿಡಬೇಕೆನ್ನುವ ದಾರ್ಷ್ಟೀಕತೆ ಎನಗಿಲ್ಲ. ಅವರವರ ಮನೋವಾಂಛೆ, ಅವರ ಹಿತಾಸಕ್ತಿ ಅವರವರಿಗೇ ಇರಲಿ. ಸತ್ಯಾಸತ್ಯತೆಯ ಅನ್ವೇಷಣೆಯಲ್ಲಿ ತೊಡಗಿದ್ದೇವೆನ್ನುವ ಹುಂಬತನದಲ್ಲಿ, ಸಂತ-ಮಹಂತರನ್ನು ನಮ್ಮ ಮಾತಿನ ಸರಕಾಗಿ ತಂದು ಅವರ ಮೌಲ್ಯಗಳನ್ನು ನಾವೇ ಕೆಲವೊಮ್ಮೆ ಪಾಲಿಸದೇ ಇರುವಾಗ ಸಾರ್ವಕಾಲಿಕವಾಗಿ ಎಲ್ಲರ ಮೇಲೂ ಹೇರುವ ಬಲವಂತದ ಮಾಘಸ್ನಾನ ಬೇಡ. ಅದರಿಂದ ಸನಾತನ ಮೌಲ್ಯಗಳಿಗೂ ಕುಂದುಂಟಾದೀತು.
ಮಾನವ ಮಾನವನಾಗೇ ಇದ್ದ ಕಾಲದಲ್ಲಿ ಆಹಾರ, ವಸತಿ, ಜೀವನದ ಭದ್ರತೆಗಾಗಿ ನೆಲೆ ಅರಸಿ ಹೋಗಿ ತನ್ನ ಅಸ್ತಿತ್ವ ಭದ್ರಪಡಿಸಿಕೊಂಡ. ಸಂತೋಷದ ನೆಲೆ ಕಂಡ. ನೆಮ್ಮದಿಯ ಪ್ರಪಂಚ ಅವನ ಸುತ್ತುವರಿಯಿತು ಹಾಸ್ಯ-ಲಾಸ್ಯ, ವಿನೋದಾವಳಿ, ಮನರಂಜನೆಗಾಗಿ ತನಗೆ ತೋಚಿದ ಹಿತ-ಅಹಿತಗಳರಿತು ಬೆರೆವ ಸಡಗರಗಳ ಮೇಳೈಸಿಕೊಂಡ. ಉತ್ತಿ-ಬಿತ್ತಿದ. ಜೀವನದಿ ಮೇಳೈಸುವ ಕಸ ಜಾಣತನದಿ ಕಿತ್ತ. ಅಜ್ಞಾನದ ಯುಗದಲ್ಲಿ ಅಂಧಕಾರದ ಮನೋಕತ್ತಲೆಯ ಅರಿವಿನ ದೀವಿಗೆಯ ಬೆಳಕಿಂದ ಮೆಟ್ಟಿದ. ಗಾಡಾಂಧಕಾರವ ಮೆಟ್ಟಿ ಬದುಕುವ ಕಲೆ ಅರಿತ. ನಾಳೆಗಳ ಭರವಸೆ ನಿನ್ನೆಗಳ ನಂಬಿಕೆಹಳ ಮೇಲೆ ಬದುಕು ಕಟ್ಟಿದ. ಜೀವನದ ಕನಸುಗಳ ಮೂಟೆಯನ್ನು ಭವಿಷ್ಯದ ಬಂಡಿಯ ಮೇಲೆ ಒಟ್ಟಿದ. ನಾಗರೀಕತೆ ಚಿಗುರಿಸಲು ಪ್ರಯತ್ನದ ಬೊಗಸೆ ನೀರ ಸಿಂಚನಗೈಯ್ದ. ಹದವರಿತ ಅಲೋಚನೆಯಿಂದ ಸಮುದಾಯ ಮೇಳೈಸಿ, ಮನಕೊಪ್ಪಿದ ನೇತಾರನ ಹುಟ್ಟುಹಾಕಿದ. ಇಲ್ಲಿಯೇ ಬೆಳೆದದ್ದು ರೀತಿ-ರಿವಾಜುಗಳು. ಸಂಯಮದ ಮಡಿಲಲ್ಲಿ ಓಲೈಕೆಯ ಜಗದ ತೊಟ್ಟಿಲಲ್ಲಿ ಮಮತೆ ಕೈ ನೇವರಿಸಿ ನಾಗರೀಕತೆಗೆ ಪ್ರೀತಿಯ ಜೋಗುಳ ಹಾಡಿ ಬೆಳಸಿದ. ತಾ ಬೆಳೆದ, ಬಲಿತ, ಫಲಿತನಾದ. ಇಲ್ಲಿಯೇ ಅರಿಷಡ್ವರ್ಗಗಳ ಕಸ ಬೆಳೆದದ್ದು. ಕಿತ್ತದ್ದಕ್ಕಿಂತ ಕಸ ಬೆಳೆದದ್ದೇ ಹೆಚ್ಚು. ಇಲ್ಲಯೇ ಹುಟ್ಟಿಕೊಂಡದ್ದು ಕುಡುಗೋಲು, ಕೊಡಲಿ, ಚಾಕು, ಚೂರಿಗಳು. ವಿಪರ್ಯಾಸವೆಂದರೆ ಮಾನವ ಕುಲವನ್ನೇ ಸವರಿಹಾಕಲು ಉದ್ದುದ್ದವಾಗಿ ಬೆಳೆದು ಲಾಂಗುಗಳಾದದ್ದು. ಮಾನವ ಧರ್ಮ ಜಗಧರ್ಮ, ಯುಗಧರ್ಮವಾಗದೇ ತಲೆಗೊಂದು ಧರ್ಮವಾಗಿ ಬೆಳೆಯುತ್ತಿರುವುದು ಶೋಚನೀಯ.
ಧರ್ಮ-ಕರ್ಮಗಳನ್ನು ಬೇರ್ಪಡಿಸಿ ನೋಡ ಹೊರಟ ನಾವೆಷ್ಟು ಮೂರ್ಖರೆನಿಸುತ್ತಿದೆ ನನಗೆ. ಏಕೆಂದರೆ ಜೀವನಕ್ಕಾಗಿ ಕರ್ಮ (ಕೆಲಸ, ಕಾಯಕವೆಂಬುದು ಕೆಲವರ ಅಂಬೋಣ. ಅದಕ್ಕೆ ನನ್ನ ಸಹಮತವೂ ಇದೆ) ಎಸಗುವುದೇ ಮಾನವ ಧರ್ಮ. ‘ಉದ್ಯೋಗಂ ಪುರುಷ ಲಕ್ಷಣಂ' ಎನ್ನುವ ಮಾತೇ ಇದಕ್ಕೆ ಪುಷ್ಠಿ. ಆದರೆ ಅದು ಪುರುಷ ಮಾತ್ರವಲ್ಲ ಮಾನವ ಲಕ್ಷಣ. ಇಲ್ಲಿಯೇ ಹೆಣ್ಣು ಗಂಡೆಂಬ ಜೀವ ಭೇದ ತತ್ವ ಹುಟ್ಟಿದ್ದು. ದಿನದ ಹೆಚ್ಚು ಭಾಗ ಮಹಿಳೆಯೇ ಉದ್ಯೋಗ ನಿರತಳು ಎನ್ನುವುದು ಏಕೆ ಮರೆತು ಹೋಯಿತೋ ನಾ ಕಾಣೆ.
ಲೇಖನ ಯಾಕೋ ದಾರಿ ತಪ್ಪುತ್ತಿದೆ ಎನ್ನಿಸುತ್ತಿರಬೇಕಲ್ಲವೇ? ಹೀಗೆಯೇ ನೋಡಿ. ಮತ- ಧರ್ಮಗಳ ಮೂಲ ಕೆದಕಲು ಹೋದರೆ ಆಳದ ಅನಂತದಲ್ಲಿ ಅಗೋಚರವಾಗಿ ಲೀನವಾಗಿ ಹೋಗಿರುವುದು ಗಮನಕ್ಕೆ ಬರುತ್ತದೆ. ಮೂಲ ಅಸ್ಥಿತ್ವ ಸಿಗುವುದು ಕಷ್ಠವೇ ಬಿಡಿ. ಅದರೂ ಅಹಮಿಕೆಯ ಎತ್ತಿ ಸೊಲ್ಲಿಗೊಂದೊಂದು ಧರ್ಮವೆಂದುಸುರಿ ಕೊಸರುವುದ್ಯಾಕೋ. ಧರ್ಮ , ಕರ್ಮಗಳು ಅಜಾತ.ಅದೇನಿದ್ದರೂ ಮತ್ತೆ ಮತ್ತೆ ನಾವು ‘ ಮಾನವ ಕುಲಂ, ತಾನೊಂದೇ ವಲಂ' ಎನ್ನುವ ಸೂಕ್ತದ ಸುತ್ತಲೂ ಗಿರಿಕಿ ಹೊಡೆಯಬೇಕಷ್ಟೆ.
ಮಾನವ ಬಂಧುಗಳೆ, ನಿತ್ಯದ ನೂರಾರು ಸಂಕಟಗಳ ಬದಿಗೊತ್ತಿ, ‘ ಒಂದೇ ನಾಡು, ಒಂದೇ ಕುಲವು, ಒಂದೇ ದೈವವು ' ಎನ್ನುವ ಕವಿವಾಣಿಗೆ ತಲೆಬಾಗಿ; ವಿಶ್ವಮಾನವ ಸಂದೇಶದ ಕರ್ತೃ, ಕರ್ತಾರನ ದನಿಗೆ ಕಿವಿಗೊಡುವ ಪರಿ ಬೆಳೆಸಿಕೊಳ್ಳಬೇಕಿದೆ. ಹಾಗಂತ ಎಲ್ಲರೂ ಒಪ್ಪಿಕೊಳ್ಳಲೇಬೇಕೆನ್ನುವ ಬಲವಂತ ನನ್ನದಲ್ಲ. ನಿಯಮಗಳ ದಾಸ್ಯಕ್ಕೆ ಸಿಲುಕಿಸುವ ತೆವಲೂ ಎನಗಿಲ್ಲ. ಇದು ನನ್ನ ಮನದಿಂಗಿತ. ಮನದ ಒಳದೋಟಿಯ ತುಡುತ-ಮಿಡಿತ. ಧರ್ಮವೆಂಬುದು ಚಪಲಕ್ಕೆ ತಿನ್ನುವ ಒಗ್ಗರಣೆಯಂತಾಗಬಾರದಲ್ಲವೇ?. ಮುಂದಿನದು ನಿಮ್ಮ ಚಿತ್ತ.

*ವೀರೇಶ.ಅ.ಲಕ್ಷಾಣಿ,ಬೆಟಗೇರಿ,ಕೊಪ್ಪಳ.