ಯುಗಪುರುಷ ಮತ್ತು ಕಥಾಬಿಂದು ಪ್ರಕಾಶನ ಆಶ್ರಯದಲ್ಲಿ ಕನ್ನಡ ಸಾಹಿತ್ಯೋತ್ಸವ

ಯುಗಪುರುಷ ಮತ್ತು ಕಥಾಬಿಂದು ಪ್ರಕಾಶನ ಆಶ್ರಯದಲ್ಲಿ ಕನ್ನಡ ಸಾಹಿತ್ಯೋತ್ಸವ

ಯಾವುದೇ ಲೇಖಕನಿಗೆ ತನ್ನ ಪುಸ್ತಕವೊಂದು ಮುದ್ರಿತವಾಗಿ ಹೊರಬರುವುದೆಂದರೆ ಒಂಥರಾ ಚೊಚ್ಚಲ ಹೆರಿಗೆಯ ಸಂಭ್ರಮ. ಅದರಲ್ಲೂ ಲೇಖಕರೊಬ್ಬರ ಪುಸ್ತಕವೊಂದು ಸೊಗಸಾದ ಸಮಾರಂಭದಲ್ಲಿ ಗಣ್ಯ ಅತಿಥಿಗಳ ಹಸ್ತದಿಂದ ಹಾಗೂ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಯಾಗುತ್ತಿದೆ ಎಂದರೆ ಅವರ ಸಂತೋಷಕ್ಕೆ ಮಿತಿ ಇರದು. ಅಂತಹುದೇ ಸಂತೋಷವನ್ನು ಅನುಭವಿಸಲು ಸಿದ್ಧರಾಗುತ್ತಿದ್ದಾರೆ ಬೆಂಗಳೂರಿನ ಕವಿ, ಲೇಖಕ ಶ್ರೀ ಹಾ .ಮ ಸತೀಶ ಮತ್ತು ಅವರ ಅಕ್ಕ, ನಿವೃತ್ತ ಮುಖ್ಯೋಪಾದ್ಯಾಯಿನಿ, ಲೇಖಕಿ ಶ್ರೀಮತಿ ರತ್ನಾ ಕೆ. ಭಟ್, ತಲಂಜೇರಿ ಇವರು. 

ಇದು ಹಾ ಮ ಸತೀಶರ ಹತ್ತನೆಯ ಕೃತಿ ‘ಕೊನೆಯ ನಿಲ್ದಾಣ’ ಎಂಬ ಕವನ ಸಂಕಲನ ಮತ್ತು ಹನ್ನೊಂದನೆಯ ಕೃತಿ ‘ಪ್ರಕೃತಿ ಪ್ರೀತಿ ಬದುಕು’ ಎಂಬ ಗಝಲ್ ಸಂಕಲನಗಳ ಲೋಕಾರ್ಪಣೆಗೊಳ್ಳುತ್ತಿರುವ ಶುಭ ಕಾರ್ಯಕ್ರಮ. ಇದೇ ವೇದಿಕೆಯಲ್ಲಿ ಶ್ರೀಮತಿ ರತ್ನಾ ಕೆ ಭಟ್ ತಲಂಜೇರಿ ಪುತ್ತೂರು ಇವರ ‘ಹೊನ್ನ ರಶ್ಮಿ’ ಎಂಬ ಕವನ ಸಂಕಲನ, ‘ಹನಿ ಹನಿಗಳ ನಡುವೆ’ ಎಂಬ ಹನಿಗವನ ಸಂಕಲನ, ‘ವಚನ ಬಿಂದು’ ಆಧುನಿಕ ವಚನಗಳು, ‘ಮುಂಜಾವಿನ ಧ್ವನಿ’ ಗಝಲ್ ಸಂಕಲನಗಳ ಲೋಕಾರ್ಪಣೆ. ಓರ್ವ ಲೇಖಕರಿಗೆ ತಮ್ಮ ಕೃತಿಗಳು ಸಮಾರಂಭವೊಂದರಲ್ಲಿ ಹೊರಬರುತ್ತಿರುವುದು ಎಷ್ಟು ಸಂತೋಷದ ವಿಷಯವೋ ಅವರ ಆತ್ಮೀಯರಿಗೆ, ಅಭಿಮಾನಿಗಳಿಗೆ, ಕುಟುಂಬ ಬಾಂಧವರಿಗೆ ಅಷ್ಟೇ ಆನಂದದ ಸಂಗತಿ. ಈ ಪುಸ್ತಕಗಳನ್ನು ಹೊರ ತರುತ್ತಿರುವವರು ಸಂಘಟಕರು ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನದ ಶ್ರೀ ಪಿ. ವಿ ಪ್ರದೀಪ್ ಕುಮಾರ್ ಇವರು. 

ಶ್ರೀ ಹಾ ಮ ಸತೀಶ ಮತ್ತು ಶ್ರೀಮತಿ ರತ್ನಾ ಕೆ ಭಟ್ ಇವರು ಇಬ್ಬರೂ ‘ಸಂಪದ' ಜಾಲತಾಣದ ಓದುಗರಿಗೆ ಈಗಾಗಲೇ ಚಿರಪರಿಚಿತರು. ಹಾ ಮ ಸತೀಶರ ನೂರಕ್ಕೂ ಅಧಿಕ ಕವನ, ಗಝಲ್, ಹನಿಗವನ, ಮುಕ್ತಕ, ಖವ್ವಾಲಿ ಮೊದಲಾದ ಪ್ರಕಾರಗಳನ್ನು ಸಂಪದ ಓದುಗರು ಈಗಾಗಲೇ ಓದಿ ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಶ್ರೀಮತಿ ರತ್ನಾ ಭಟ್ ಅವರೂ ತಮ್ಮ ಕವನಗಳು, ಪ್ರೇರಣಾತ್ಮಕ ಬರಹಗಳು, ದಿನ ವಿಶೇಷದ ಬರಹಗಳಿಗೆ ಪ್ರಸಿದ್ಧರು. ಇವರಿಬ್ಬರೂ ‘ಸಂಪದ'ದಲ್ಲಿ ಈಗಾಗಲೇ ಹಂಚಿಕೊಂಡಿರುವ ಬರಹಗಳೂ ಅವರ ಕೃತಿಯಲ್ಲಿ ಅಡಕವಾಗಿರಲಿವೆ. ಈ ಆರೂ ಕೃತಿಗಳು ಸಂಗ್ರಹ ಯೋಗ್ಯ ಪುಸ್ತಕಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.

ಪುಸ್ತಕ ಬಿಡುಗಡೆ ಕಾರ್ಯಕ್ರಮವು ಇದೇ ಬರುವ ಫೆಬ್ರವರಿ ೨೫, ೨೦೨೪ರಂದು ಭಾನುವಾರ ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಸರಿಯಾಗಿ ಪ್ರಾರಂಭವಾಗಲಿದೆ. ಆ ದಿನ ಕಾರ್ಯಕ್ರಮದ ಅಧ್ಯಕ್ಷರಾಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಉದ್ಘಾಟಕರಾಗಿ ಯುಗಪುರುಷ ಪತ್ರಿಕೆಯ ಶ್ರೀ ಭುವನಾಭಿರಾಮ ಉಡುಪ ಇವರು ಉಪಸ್ಥಿತರಿರುವರು.

ಕೃತಿಗಳನ್ನು ಅನಾವರಣಗೊಳಿಸಲಿದ್ದಾರೆ ಶ್ರೀ ಶ್ರೀಪತಿ ಭಟ್ ಇವರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಕೊಳ್ಚಪ್ಪೆ ಗೋವಿಂದ ಭಟ್, ಶ್ರೀ ಮೋಹನ್ ದಾಸ್ ಸುರತ್ಕಲ್, ಡಾ. ಸುರೇಶ ನೆಗಳಗುಳಿ, ಶ್ರೀಮತಿ ಪದ್ಮಶ್ರೀ ಆಗಮಿಸಲಿದ್ದಾರೆ. ಈ ಸಮಾರಂಭದಂದು ಸಾಹಿತಿ ಶ್ರೀ ಹಾ ಮ ಸತೀಶ ಇವರನ್ನು ಗೌರವಿಸಿ ಸನ್ಮಾನಿಸಲಾಗುವುದು. ಕಾರ್ಯಕ್ರಮದ ಬಳಿಕ ಸುಮಾರು ಹದಿನೈದು ಉದಯೋನ್ಮುಖ ಕವಿಗಳಿಂದ ‘ಕವಿಗೋಷ್ಟಿ ಕಾರ್ಯಕ್ರಮ' ಜರುಗಲಿದೆ. ನಂತರ ಆರಾಧನ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ. ದಿನವಿಡೀ ನಡೆಯುವ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರೆಲ್ಲಾ ಬಂದು ಭಾಗವಹಿಸಿ, ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕಾಗಿ ಸಂಘಟಕರ ಜೊತೆಗೂಡಿ ಪುಸ್ತಕದ ಕೃತಿಕಾರರು ವಿನಂತಿ ಮಾಡಿಕೊಂಡಿರುವರು.