ಯುಗಾದಿಯದಿನದ ಪ್ರಾಮುಖ್ಯತೆ ಮತ್ತು ವಿಧಿ ವಿಧಾನಗಳು ..
'ಯುಗಾದಿ ಹೊಸವರ್ಷ' ವನ್ನು ಚಾಂದ್ರಮಾನ ರೀತ್ಯಾ ಆಚರಿಸುವವರು ಚೈತ್ರ ಶುಕ್ಲ ಪ್ರತಿಪತ್ ತಾ. ೨೩-೦೩-೨೦೧೨, ಶುಕ್ರವಾರ, ದಂದು ಆಚರಿಸುತ್ತಾರೆ. 'ಸೌರಮಾನ ರೀತ್ಯ ಯುಗಾದಿ'ಯನ್ನು ಆಚರಿಸುವವರು, ಸೂರ್ಯನು ನಿರಯಣ ಮೇಷರಾಶಿ ಪ್ರವೇಶಿಸುವ ಪುಣ್ಯಕಾಲದ ದಿನ, ಅಂದರೆ, ತಾ. ೧೩-೦೪-೨೦೧೨ ನೇ ಶುಕ್ರವಾರವೂ 'ಯುಗಾದಿ ಹಬ್ಬ'ವನ್ನು ಆಚರಿಸುತ್ತಾರೆ.
ಯುಗಾದಿಯ ದಿನ ಬೆಳಿಗ್ಯೆ ಎದ್ದು, ಅಭ್ಯಂಜನ ಮಾಡಿ ಇಷ್ಟ ದೇವತೆಯ ಪೂಜೆ ಮಾಡುವ ವಿಧಿಗಳ ಜೊತೆಗೆ ಬೇವು-ಬೆಲ್ಲಗಳ ಸೇವನೆ ಇದೆ. ಬೇವಿನ ಹೂವು, ಬೆಲ್ಲ, ರಸಬಾಳೆಹಣ್ಣು ಸೇರಿಸಿ ಮಾಡಿನ ಗಟ್ಟಿ ತೀರ್ಥ. ಇದನ್ನು ಸೇವಿಸುವಾಗ ಕೆಳಗಿನ ಮಂತ್ರವನ್ನು ಉಚ್ಚರಿಸಬೇಕು.
ಶತಾಯುರ್ವಜ್ರದೇಹಾಯ
ಸರ್ವಸಂಪತ್ಕರಾಯಚ
ಸರ್ವಾರಿಷ್ಟವಿನಾಶಾಯ
ನಿಂಬಕಂ ದಳಭಕ್ಷಣಂ
ಅಂದರೆ ನೂರುವರ್ಷಗಳ ಆಯುಷ್ಯ, ಸಧೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ ಬೇವು-ಬೆಲ್ಲ ಸೇವನೆ ಮಾಡುತ್ತೇನೆ, ಎಂದು ಹೇಳಿ ಸೇವಿಸಬೇಕು. ಇದು ವರ್ಷದ ಮುಂದಿನ ಭಾಗದಲ್ಲಿ ಎದುರಿಸಬೇಕಾದ ಕಷ್ಟ ಕಾರ್ಪಣ್ಯಗಳನ್ನೂ ಹಾಗೆಯೇ ದೊರೆಯುವ ಸುಖ, ಆನಂದಗಳ ಸನ್ನಿವೇಶಗಳನ್ನೂ ಸಮಚಿತ್ತದಿಂದ ಆಸ್ವಾದಿಸುವ ಮನೋಭಾವವನ್ನು ಬೆಳೆಸಿಕೊಳ್ಳುವ ಪ್ರಕ್ರಿಯೆಯನ್ನು ನಮ್ಮಲ್ಲಿ ಬೆಳೆಸುವ ಪರಿ, ಇಂದಿನಿಂದ ಆರಂಭ !
'ಪಂಚಾಂಗ ಶ್ರವಣ' ಅತಿ ಪ್ರಮುಖ ವಿಧಿಗಳಲ್ಲೊಂದು. ದೈವಜ್ಞರು ಪಠಣಮಾಡುವ ಪಂಚಾಂಗ ಶ್ರವಣವನ್ನು ಆಲಿಸಬೇಕು. ಇದರ ಬಳಿಕ ಹೊಸಬಟ್ಟೆ ಧರಿಸಿ ಹಿರಿಯರಿಗೆ ನಮಸ್ಕರಿಸಿ, ಹಬ್ಬದ ಸಿಹಿಯನ್ನು ಸವಿಯುವುದು. ಉಟದ ಜೊತೆಯಲ್ಲಿ ಹೊಳಿಗೆ ಈ ದಿನದ ಪ್ರಮುಖ ತಿನಸು. ಹೋಳಿಗೆಗೆ, ತುಪ್ಪ, ಹಾಲು ಸೇರಿಸಿ ಸವಿಯುವ ಪರಿ ಅನನ್ಯ...
ಸಾಯಂಕಾಲ, ಸೂರ್ಯಾಸ್ತವಾದ ಬಳಿಕ ಚಂದ್ರನನ್ನು ನೋಡುವ ಒಂದು ಸಂಪ್ರದಾಯ ನಮ್ಮಲ್ಲಿ ರೂಢಿಯಲ್ಲಿದೆ. ಈ ದಿನದ ಚಂದ್ರ ಅತಿ ಸೂಕ್ಷ್ಮ; ರೇಖೆಯ ರೂಪದಲ್ಲಿದ್ದು ಕಾಣಿಸುವುದು ಕೆಲವುವೇಳೆ ಕಷ್ಟ. ಊರಿನ ಜನ ಈ ದೃಶ್ಯಕ್ಕಾಗಿ ಕಾದಿದ್ದು ಕಂಡನಂತರ ಹಿರಿಯರಿಗೆ ಊರಿನ ಪ್ರಮುಖರಾದ ಗೌಡರು ಶ್ಯಾನುಭೋಗರು ಮತ್ತು ವಯಸ್ಸಿನಲ್ಲಿ ಹಿರಿಯರಿಗೆ 'ಸ್ವಾಮಿ ಕಂಡ; ನೀವು ನೋಡಿದಿರಾ'ಎಂದು ಕೇಳಿ ನಮಸ್ಕರಿಸಿ, ಅವರ ಆಶೀರ್ವಾದ ಪಡೆಯುತ್ತಾರೆ. ಗೆಳೆಯರು, ಒರಿಗೆಯವರು ಒಬ್ಬರನ್ನೊಬ್ಬರು ಅಭಿನಂದಿಸುತ್ತಾರೆ..
ಗಣಪತಿ ಹಬ್ಬದ ದಿನ ರಾತ್ರಿ ಚಂದ್ರ ದರ್ಶನ ವರ್ಜಿತ. ಆ ದಿನ ಚಂದ್ರನನ್ನು ನೋಡಿದ್ದೇ ಆದರೆ, ವೃಥಾ ನಿಂದೆಗೆ ಒಳಗಾಗುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಚಾಂದ್ರಮಾನ ಯುಗಾದಿಯ ದಿನ ಚಂದ್ರ ದರ್ಶನ ನೋಡಿದ್ದೇ ಆದರೆ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಹೀಗೆ ಹಲವು ನಂಬಿಕೆ ಸಂಪ್ರದಾಯ ಮುಂತಾದ ಆಚರಣೆಗಳಿಂದ ಯುಗಾದಿ ಹಬ್ಬ ಕೊನೆಗೊಳ್ಳುತ್ತದೆ. ಒಟ್ಟಿನಲ್ಲಿ ನಮ್ಮ ಎಲ್ಲ ಹಬ್ಬ ಹರಿದಿನಗಳು ಎಲ್ಲ ಜಾತಿ, ಮತ, ಪಂಥಗಳ ಜನರಲ್ಲಿ ಸ್ನೇಹ-ಸೌಹಾರ್ದಗಳನ್ನು ಹೆಚ್ಚಿಸುವುದೇ ಪರಮ ಉದ್ದೇಶ್ಯ..
ಮಹಾರಾಷ್ಟ್ರದಲ್ಲಿ 'ಗುಡಿಪಾಡ್ವ' ಆಚರಿಸಲಾಗುತ್ತದೆ. ಇದು ನಮ್ಮ ಚಾಂದ್ರಮಾನ ಯುಗಾದಿಯ ದಿನವೇ ಬರುತ್ತದೆ. ಇದಕ್ಕೆ ಇಂದ್ರ ಧ್ವಜಾರೋಹಣ' ವೆನ್ನುತ್ತಾರೆ. ಒಂದು ಉದ್ದನೆಯ ಕೋಲಿಗೆ ತುದಿಗೆ ತಾಮ್ರ ಅಥವಾ ಬೆಳ್ಳಿಯ ತಂಬಿಗೆಗೆ ಒಂದು ಖಣ, ಹೂ, ಮಾವಿನ ಹೂವು, ಬೇವಿನ ಹೂವು ಬೇವಿನ ಸೊಪ್ಪು ಹೊದಿಸಿ ಮನೆ ಮುಂಭಾಗದಲ್ಲಿ ಎಲ್ಲರಿಗೂ ಕಾಣಿಸುವಂತೆ (ಸ್ಥಾಪಿಸಿ) ನಿಲ್ಲಿ ಪೂಜಿಸುತ್ತಾರೆ. ಕೆಲವರು ಕೋಲಿನ ತುದಿಗೆ ಬೆಂಡು ಬತ್ತಾಸುಗಳನ್ನು ಕಟ್ಟುತ್ತಾರೆ. ದೇವರಿಗೆ ವಿಶೇಷ ಅಲಂಕಾರ, ಹಾಗೂ ದೀಪೋತ್ಸವ ವಿರುತ್ತದೆ, ದಿನವಿಡೀ ಹರ್ಷೋಲ್ಲಾಸಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಂಭ್ರಮಿಸುತ್ತಾರೆ.
ಯುಗಾದಿ ಪ್ರತಿಪದೆಯಿಂದ ಒಂದು ತಿಂಗಳು ದಿನನಿತ್ಯ ದೇವರ ಪೂಜೆ ಮಾಡುವವರ ಮನೆಗೆ ಮಡಿಯಿಂದ ಒಂದು ಕೊಡಪಾನ ನೀರು ಹಾಗೂ ದೇವರ ನೈವೇದ್ಯಕ್ಕೆಂದು ಸಕ್ಕರೆ ಕೊಟ್ಟುಬರಬೇಕು. ಒಂದು ತಿಂಗಳ ನಂತರ ಆ ಬ್ರಾಹ್ಮಣರನ್ನು ಆಹ್ವಾನಿಸಿ ಊಟಕ್ಕೆ ಹಾಕಬೇಕು. ತಾಮ್ರದಕೊಡ ಮತ್ತು ಬೆಳ್ಳಿ ಬಟ್ಟಲನ್ನು ದಾನಕೊಡಬೇಕು. ಇದಕ್ಕೆ 'ಉದಕ ಕುಂಭದಾನ'ವೆನ್ನುತ್ತಾರೆ. ಹೀಗೆ ಸಂಪ್ರದಾಯಗಳು ಬೇರೆಬೇರೆಯಾದರೂ, ಅದರ ಹಿಂದಿರುವ ಉದ್ದಿಶ್ಯಗಳು ಒಂದೇ. ಎಲ್ಲರೊಂದಿಗೆ ಬೆರೆತು, ಪ್ರೀತಿ ವಿಶ್ವಾಸಗಳಿಂದ ಸಹಬಾಳ್ವೆ ಮಾಡುವುದು.
Comments
ಉ: ಯುಗಾದಿಯದಿನದ ಪ್ರಾಮುಖ್ಯತೆ ಮತ್ತು ವಿಧಿ ವಿಧಾನಗಳು ..
ಉ: ಯುಗಾದಿಯದಿನದ ಪ್ರಾಮುಖ್ಯತೆ ಮತ್ತು ವಿಧಿ ವಿಧಾನಗಳು ..
In reply to ಉ: ಯುಗಾದಿಯದಿನದ ಪ್ರಾಮುಖ್ಯತೆ ಮತ್ತು ವಿಧಿ ವಿಧಾನಗಳು .. by asuhegde
ಉ: ಯುಗಾದಿಯದಿನದ ಪ್ರಾಮುಖ್ಯತೆ ಮತ್ತು ವಿಧಿ ವಿಧಾನಗಳು ..
In reply to ಉ: ಯುಗಾದಿಯದಿನದ ಪ್ರಾಮುಖ್ಯತೆ ಮತ್ತು ವಿಧಿ ವಿಧಾನಗಳು .. by asuhegde
ಉ: ಯುಗಾದಿಯದಿನದ ಪ್ರಾಮುಖ್ಯತೆ ಮತ್ತು ವಿಧಿ ವಿಧಾನಗಳು ..
ಉ: ಯುಗಾದಿಯದಿನದ ಪ್ರಾಮುಖ್ಯತೆ ಮತ್ತು ವಿಧಿ ವಿಧಾನಗಳು ..