ಯುಗಾದಿಯ ಅರಿವು

ಯುಗಾದಿಯ ಅರಿವು

ಕವನ

 

 
 
  ಯುಗಾದಿಯ ಅರಿವು
----------------------------
ನವಯುಗದ ನವದಿನದ ಮುಂಜಾನೆಯ ಮುಗಿಲಲ್ಲಿ
ಶೈಶವೋದಯರವಿ ಕೆನ್ನೆದೆಯ ಕೆಂಗಿರಣಗಳು,
ಅನಂತ ಪರಿಭ್ರಮಣ ಧ್ಯಾನ ತನ್ಮಯೆ, ಭೂತೇಜಸ್ವಿನಿಯ
ಮೊಗವನು ಬೆಳಗಿದೆ. ಕ್ಷಣ ಕ್ಷಣವೂ ವಸುಂಧರೆಯನು 
ತುಸುತುಸುವೆ ಪ್ರಕಾಶಿಸುತ, ಕುಕ್ಕರಳ್ಳಿ ಕೆರೆಯ 
ದಿಗಂತದಲ್ಲೂ ದಿನಪ ಆರೋಹಿತನಾಗಿರುವನು.
 
ನವ ಸಂವತ್ಸರದ ಶೋಭೆಯನ್ನು ಮುಗಿಲಿಗೆ ರವಿ ಬಳಿದು 
ನವಯುಗದ ಸಂಜ್ಞೆಯನ್ನೆಸಗುವಂತಿರಲು ಹೃದಯಕೆ,
ಅದರ ಸುಳುಹು ದಿನೇಶನ ಅರಿವಿಗಿಲ್ಲ.
 
ಹಸಿರೆಲೆಗಳು ನವರಾಗರಷ್ಮಿಗಳ ಕುಣಿಸಿ, ಬೀಸುಗಾಳಿಯೊಡನೆ 
ಶುಭಸಂವಾದ ನಡೆಸಿ, ನವಸಂಭ್ರಮವುಣ್ಮಿಸುವಂತಿರಲು ಹೃದಯಕೆ,
ಮರಗಿಡಗಳೆದೆಗೆ ಯುಗಾದಿಯ ಅರಿವಿಲ್ಲ.
 
ಇಂಚರಗಾನದೊಳಿಂದು ಹೊಸ ರಾಗವು ಮೂಡಿ ತೇಲಿ
ಬಂದು, ನವೋಲ್ಲಾಸ ಬಾಣಗಳಂತೆ ನಾಟುತಿರಲು ಹೃದಯಕೆ,
ಗಾಯಕ ಪಕ್ಷಿಗಳಲಿ ನವಭಾವ ಚಿಹ್ನೆಯಿಲ್ಲ.
 
ಹಂಸಜೋಡಿಯೊಂದು ಶೃಂಗಾರಲೀಲೋನ್ಮತ್ತೆಯಿಂದ ನೀರ್ನೆಲದಿ
ರಂಗೋಲಿಯನಚ್ಚಿ, ನವಯುಗವ ಸ್ವಾಗತಿಸಿರುವಂತೆ ತೋರಲೆದೆಗೆ,
ಹಂಸಪ್ರೇಮಿಗಳಲಿ ನವಸಂಭ್ರಮದ ಕುರುಹಿಲ್ಲ.
 
ಸೌಂದರ್ಯವದು ಚಿರಸ್ಥಾಯಿ ವಿಶ್ವ ಹೃದಯ ದೇಗುಲದಿ
ಅದನಾಸ್ವಾದಿಸುವ ಜಾಣ್ಮೆ ಆಕಸ್ಮಿಕ ಮನುಕುಲಕೆ.
ಮುಚ್ಚದಿರೆ ತೆರೆ ಮಾನವ ಹೃದಯ ಬಾಗಿಲನು ವಿಶ್ವಕೆ,
ಮಿತಿಯಿಲ್ಲದಾನಂದದೊನಲರಿವುದು ಸಹೃದಯಕೆ.
 
- ಚಂದ್ರಹಾಸ ( ೨ - ಏಪ್ರಿಲ್ - ೨೦೧೨)