ಯುಗಾದಿಯ ಸಂಭ್ರಮ ಎಲ್ಲೆಡೆ ಹರಡಲಿ

ಯುಗಾದಿಯ ಸಂಭ್ರಮ ಎಲ್ಲೆಡೆ ಹರಡಲಿ

*ಯುಗ ಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ*

ಯುಗಾದಿ ಅಥವಾ ಉಗಾದಿ ಎನ್ನುವುದು ಚೈತ್ರ ಮಾಸದ ಪ್ರಾರಂಭದ ದಿನ. ಯುಗಾದಿ ಎಂದರೆ ಹೊಸಯುಗದ ಆರಂಭ ಎಂದರ್ಥ. ಚೈತ್ರ ಮಾಸದ, ಶುಕ್ಲಪಕ್ಷದ ಪಾಡ್ಯದಂದು ಯುಗಾದಿಯ ಆರಂಭ. ಯುಗಾದಿ ಹಿಂದೂ ಜನಾಂಗದವರ ಪವಿತ್ರ ಹಬ್ಬ. ಅವರಿಗೆ ಹೊಸವರುಷದ ಆರಂಭ ಅಂದಿನಿಂದ. *ಯುಗ ಎಂದರೆ ಸೃಷ್ಟಿಯ ಕಾಲಮಾನ, ಆದಿ ಎಂದರೆ ಆರಂಭ*.

ಪುರಾಣದ ಕಥೆಯತ್ತ ನಾವು ನೋಡುವುದಾದರೆ 'ಬ್ರಹ್ಮ ದೇವನು ಸೃಷ್ಟಿಯನ್ನು ಆರಂಭಿಸಿ, ಕಾಲಗಣನೆಮಾಡಿ, ದಿನ, ನಕ್ಷತ್ರ, ಗ್ರಹ, ಮಾಸ, ಋತು, ವರ್ಷ, ಇವುಗಳನ್ನು ನೀಡಿದನೆಂದು ಪ್ರತೀತಿ. ಈ ಬ್ರಹ್ಮಾಂಡದ ಸೃಷ್ಟಿಯ ದಿನವನ್ನೇ ಯುಗಾದಿ ಎಂದು ಕರೆಯುತ್ತೇವೆ ಎಂದಾಯಿತಂತೆ.

ಶ್ರೀ ರಾಮಚಂದ್ರ ರಾವಣನನ್ನು ಸಂಹರಿಸಿ ಮರಳಿ ಅಯೋಧ್ಯೆಗೆ ಬಂದು, ಪಟ್ಟಾಭಿಷೇಕವಾದ ದಿನ, ಪವಿತ್ರವಾದ ದಿನವೆಂದೂ ಉಲ್ಲೇಖವಿದೆ. ಹಾಗೆಯೇ ಪುಣ್ಯಕಾವ್ಯವಾದ ಮಹಾಭಾರತದಲ್ಲಿ ಚೇದಿಯ ಅರಸ ವಸು ಎಂಬುವನ ಉಗ್ರ ತಪಸ್ಸಿಗೆ ಮೆಚ್ಚಿ ಇಂದ್ರನು ವೈಜಯಂತಿ ಎಂಬ ವಿಶೇಷ ಮಾಲೆಯನ್ನು ನೀಡಿ, ಬಂಗಾರದ ಕಲಶದ ಧ್ವಜವನ್ನು, ಅರಸನ ತಲೆಯ ಮೇಲೆ ಇಟ್ಟ ದಿನ ಎಂಬುದಾಗಿಯೂ ಇದೆ.

ವರ್ತಮಾನ ಕ್ಕೆ ಬಂದರೆಸೂರ್ಯನು ಮೇಷರಾಶಿಗೆ ಪ್ರವೇಶ ಆದೊಡನೆ ಸೌರಮಾನ ಯುಗಾದಿ. ಚಾಂದ್ರಮಾನ ಯುಗಾದಿ ಸಂವತ್ಸರದ ಆರಂಭ. ಇಂದಿನಿಂದ ಶಾಲಿವಾಹನ ಶಕೆಯ ಆರಂಭ. ಎಲ್ಲೆಲ್ಲೂ ಗಿಡಮರಬಳ್ಳಿಗಳು ಚಿಗುರಿ ನಳನಳಿಸುತ್ತವೆ. ವನದೇವತೆ ಹಸಿರು ಚಿಗುರಿನ ಆಭರಣವ ತೊಟ್ಟು ಕಂಗೊಳಿಸುವಳು.

ಕಹಿಬೇವು ಮತ್ತು ಬೆಲ್ಲಕ್ಕೆ ವಿಶೇಷ ಪ್ರಾಶಸ್ತ್ಯ. ಕಹಿಬೇವಿನ ಎಲೆಯನ್ನು ಹಾಕಿದ ನೀರಿನಲ್ಲಿ ಸ್ನಾನ ಮಾಡುವುದೂ ಒಂದು ವಿಶೇಷ. ದೇಹದಲ್ಲಿರುವ ಕೆಟ್ಟ ಕೊಳೆಗಳೆಲ್ಲ ಹೋಗಿ ನಿರ್ಮಲವಾಗಲಿ, ಚರ್ಮ ಶುದ್ಧವಾಗಲಿ ಎಂಬ ಹಾಗೆ. ಇಲ್ಲಿ ಬಡವ ಬಲ್ಲಿದ ಎಂಬ ತಾರತಮ್ಯಗಳಿಲ್ಲ. ಎಲ್ಲರೂ ಒಂದಾಗಿ ಆಚರಿಸುವರು. ಎಲ್ಲೆಡೆ ಸಂತಸದ ವಾತಾವರಣ. ರೈತಾಪಿ ಜನರು ಎತ್ತುಗಳನ್ನು ಸಿಂಗರಿಸಿ ಸಂಭ್ರಮಿಸುವರು. ಭೂಮಿತಾಯಿಯನ್ನು ಉಳುಮೆ ಮಾಡಿ ಹದಗೊಳಿಸುವರು.

ಮಾವಿನ ಎಲೆಯ ತೋರಣ ಮನೆ ಮುಂದೆ, ದೇವಾಲಯಗಳಲ್ಲಿ ಈ ದಿನ ಕಾಣಬಹುದು. ಬೇವಿನ  ಎಲೆಯ ಎಳೆ ಚಿಗುರು, ಹೂವನ್ನು, ಬೆಲ್ಲ, ಏಲಕ್ಕಿ, ಎಳ್ಳು ಹಾಕಿ ಮಿಶ್ರ ಮಾಡಿ, ನೈವೇದ್ಯ ಮಾಡುವರು. ಬೇವು ಎನ್ನುವುದು ದುಃಖ, ನೋವು, ಹತಾಶೆ, ಕಷ್ಟ, ಇರುಳು, ಅಶಾಂತಿಯ ಹಾಗೆ. ಬೆಲ್ಲ ಸುಖ, ಸಂತೋಷ, ಆನಂದ, ಹರ್ಷ, ಹಗಲು, ಸ್ನೇಹ, ಮಧುರತೆ, ಆತ್ಮೀಯತೆ ಇದ್ದಂತೆ. ಇವೆರಡರ ಸಂಗಮವೇ ನಮ್ಮ ಜೀವನದಲ್ಲಿ ಇರುವುದು. ಯಾವುದು ಬಂದರೂ ಸಮಚಿತ್ತದಿಂದ ಅನುಭವಿಸು, ಎದುರಿಸು ಎಂಬ ಸಂದೇಶಕ್ಕೆ *ಈ ಬೇವು ಬೆಲ್ಲ ತಿಂದು ,ಒಳ್ಳೆಯ ಮಾತನಾಡಿ* ಎನ್ನುವರು. ಸುಖ ದುಃಖ, ಹಗಲು ಇರುಳು ನಮ್ಮ ಜೀವನದ ಅವಿಭಾಜ್ಯ ಅಂಗಗಳು. ಎಲ್ಲವನ್ನೂ ಸಮದೃಷ್ಟಿಯಿಂದ ನೋಡೋಣ. ಬೇವು ಆರೋಗ್ಯಕ್ಕೂ ಒಳ್ಳೆಯದು.

*ಶತಾಯುರ್ವಜ್ರ ದೇಹಾಯ ಸರ್ವಸಂಪತ್ಕರಾಯಚ/ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಂ//*ಇದು ಆಯುರ್ವೇದ ವು ಕಹಿಬೇವಿನ ಬಗ್ಗೆ ಹೇಳಿದ ಮಹಿಮೆ ಅಥವಾ ಸಾರ.

ಇಷ್ಟ ದೇವತೆ ಅಥವಾ ದೇವರಪೂಜೆ ಮಾಡುವರು,ಪಂಚಾಂಗ ಶ್ರವಣ ಮಾಡಿಸಿ,ಈ ಸಂವತ್ಸರದ ಕಷ್ಟ-ನಷ್ಟ- ಸುಖ, ಮಳೆ-ಬೆಳೆ ಬಗ್ಗೆ ಕೇಳುವರು. ನವಗ್ರಹ ಪೂಜೆ ವಿಶೇಷ. ದಾನಧರ್ಮಾದಿಗಳನ್ನು ಮಾಡಿದರೆ ಒಳ್ಳೆಯದು. ಕಲಿಯುಗದ ಅಂಧಕಾರ ತೊಲಗಿ ಸುಜ್ಞಾನ ಎಲ್ಲೆಲ್ಲೂ ಮೂಡಲಿ, ಬೆಳಗಲಿ ಎಂಬ ಸದಾಶಯದ ಉದಯವೇ ಯುಗಾದಿ. ತಮೋ ಪ್ರಧಾನ ಹೋಗಿ ಉಜ್ವಲ ದೀಪದ ಬೆಳಕಿನಂತೆ ವಜ್ರದ ಕಠೋರತೆ ಬರಲಿ. ಈ ಪ್ಲವ ಸಂವತ್ಸರದಲ್ಲಿ ಲೋಕಕ್ಕೆ ಮಂಗಳ, ಶುಭವಾಗಲಿ ಎಂಬ ಹಾರೈಕೆ ಎಲ್ಲರದ್ದೂ.

ಬ್ರಹ್ಮಾಂಡಕ್ಕೆ ಬಂದ ಮಹಾಮಾರಿ ತೊಲಗಿ ಲೋಕ ಕ್ಷೇಮವನ್ನು ಒದಗಿಸಲಿ ಎಂಬ ಪ್ರಾರ್ಥನೆ ನಮ್ಮೆಲ್ಲರದು. ಯುಗಾದಿಯ ಈ ನವಪರ್ವದ ದಿನ ಬೇವು ಬೆಲ್ಲ ಮೆದ್ದು ಒಳ್ಳೆಯವರಾಗೋಣ, ನಿನ್ನೆಯವರೆಗಿನ ಎಲ್ಲಾ ಗತಿಸಿದ ಅನುಭವಗಳ ಮರೆತು, ಇಂದಿನಿಂದ ಹೊಸತನ್ನು ಆಶಿಸೋಣ. ಎಲ್ಲರಿಗೂ ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು

-ರತ್ನಾ ಕೆ.ಭಟ್, ತಲಂಜೇರಿ

(ಆಧಾರ)

ಚಿತ್ರ ಕೃಪೆ: ಇಂಟರ್ನೆಟ್ ತಾಣ