ಯುಗಾದಿ ಎಂಬ ಸಂಸ್ಕೃತಿ

ಯುಗಾದಿ ಎಂಬ ಸಂಸ್ಕೃತಿ

ಬರಹ

  ಸಂಸ್ಕೃತಿಯೆಂಬುದು ಮನಸ್ಸಿನ ಸಂಸ್ಕಾರಕ್ಕೆ ಸಂಬಂಧಪಟ್ಟದ್ದು. ಸನಾತನ ಕಾಲದಿಂದ ನಡೆದುಬಂದಿರುವ ನಮ್ಮ ಸಂಸ್ಕಾರಸಂಬಂಧಿ ಆಚರಣೆಗಳೇನಿವೆ, ಅವನ್ನು ನಾವು ಬಿಡತಕ್ಕದ್ದಲ್ಲ. ನಂನಮ್ಮ ಪಂಚಾಂಗದನುಸಾರವೇ ಹೊಸ ವರ್ಷದ ಆಚರಣೆ ಮಾಡುವುದೂ ಅಂಥವುಗಳಲ್ಲೊಂದು.
  ವ್ಯವಹಾರದ ಅನುಕೂಲಕ್ಕಾಗಿ ಭಾರತವೂ ಸೇರಿದಂತೆ ವಿಶ್ವದ ಬಹುಪಾಲು ದೇಶಗಳು ಗ್ರೆಗೊರಿಯನ್ ಕ್ಯಾಲೆಂಡರನ್ನು ಅನುಸರಿಸುತ್ತಿವೆ ಹೌದು. ವ್ಯಾವಹಾರಿಕ ಬಳಕೆ ಬೇರೆ, ಸಂಸ್ಕೃತಿ-ಸಂಪ್ರದಾಯ-ಧರ್ಮಾಚರಣೆ ಬೇರೆ. ನಂನಮ್ಮ ಹೊಸ ವರ್ಷದ ಮೊದಲ ದಿನವನ್ನು ನಂನಮ್ಮ ಪಂಚಾಂಗಗಳ ಅನುಸಾರ ಆಚರಿಸುವುದು ಅರ್ಥಪೂರ್ಣ.
  ವ್ಯಾವಹಾರಿಕ ಮತ್ತು ದಿನಚರಿ ಸಂಬಂಧಿ ವಿಷಯಗಳಲ್ಲಿ ನಮ್ಮ ಅನುಕೂಲಕ್ಕಾಗಿ ಅನಿವಾರ್ಯವಾಗಿ ನಾವು ಬ್ರಿಟಿಷರು ಅಭ್ಯಾಸಮಾಡಿಸಿಹೋದ ಗ್ರೆಗೊರಿಯನ್ ಪದ್ಧತಿಯ ದಿನಗಣನೆಯನ್ನು ಅವಲಂಬಿಸಿದ್ದರೂ, ಶಾಸ್ತ್ರ, ಸಂಪ್ರದಾಯ, ಹಬ್ಬ-ಹರಿದಿನಗಳ ಆಚರಣೆ, ಮದುವೆ-ಮುಂಜಿಗಳ ನಿಷ್ಕರ್ಷೆ, ಮುಹೂರ್ತಗಳ ನಿರ್ಧಾರ ಮುಂತಾಗಿ ನಮ್ಮ ಧರ್ಮ-ಸಂಸ್ಕೃತಿಗಳ ಆಚರಣೆ ಸಂದರ್ಭದಲ್ಲಿ ನಂನಮ್ಮ ಪಂಚಾಂಗಗಳನ್ನೇ ಅನುಸರಿಸುತ್ತಿದ್ದೇವಷ್ಟೆ. ಅಂತೆಯೇ, ನಮ್ಮ ಧಾರ್ಮಿಕ-ಸಾಂಸ್ಕೃತಿಕ ಆಚರಣೆಯಾಗಿರುವ ಹೊಸ ವರ್ಷಾರಂಭದ ಉತ್ಸವಾಚರಣೆ ಕೂಡ ನಂನಮ್ಮ ಪಂಚಾಂಗದನುಸಾರ ನಡೆದರೆ ಅದುವೆ ಶೋಭೆ.
  ಹಳ್ಳಿಗಳ ಕಡೆಗೆ ಹೋಗಿ ನೋಡಿ. ಇವತ್ತಿಗೂ ನಮ್ಮ ರೈತಾಪಿ ಜನ ’ಅಮಾವಾಸ್ಯೆ, ಹುಣ್ಣಿಮೆ, ಭರಣಿ, ಕೃತ್ತಿಕೆ, ಚೌತಿ, ಪಂಚಮಿ, ಆಷಾಢಮಾಸ, ಶ್ರಾವಣಮಾಸ’ ಎಂದು ಹಿಂದೂ ಪಂಚಾಂಗದ ಲೆಕ್ಕಾಚಾರವನ್ನೇ ಹೇಳುತ್ತಾರೆ. ನಮ್ಮ ದೇಶದ ಬಹುಪಾಲು ಜನತೆ ಇಂಥ ಗ್ರಾಮೀಣ ಜನತೆ ಎಂಬುದು ನೆನಪಿರಲಿ. ಮುಸ್ಲಿಮರು ತಮ್ಮ ಹಿಜ್ರಿ ಕ್ಯಾಲೆಂಡರ್ ಲೆಕ್ಕ ಹೇಳುತ್ತಾರೆ.
  ಅಷ್ಟೇಕೆ, ವಿದ್ಯಾವಂತರೂ ನಗರವಾಸಿಯೂ ಆಗಿರುವ ನನ್ನ ವಯೋವೃದ್ಧ ತಾಯಿಯವರೇ ದಿನಗಣನೆ ಮಾಡುವಾಗ ಚಾಂದ್ರಮಾನ ಪಂಚಾಂಗ ರೀತ್ಯಾ ಲೆಕ್ಕಹಾಕುತ್ತಾರೆ. ಸಹಸ್ರಾರು ವರ್ಷಗಳಿಂದ ಆಚರಣೆಯಲ್ಲಿದೆ ಹಿಂದೂ ಪಂಚಾಂಗ. ಗ್ರೆಗೊರಿಯನ್ ಕ್ಯಾಲೆಂಡರಿನ ಅನುಸರಣೆ ನಮ್ಮ ದೇಶದಲ್ಲಿ ಈಚೆಗಷ್ಟೇ, ಅಂದರೆ, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಚಾಲ್ತಿಗೆ ಬಂದದ್ದು. ಗ್ರೆಗೊರಿಯನ್ ಕ್ಯಾಲೆಂಡರಿನ ಅನುಸರಣೆಯ ಮೊದಲು ಸಹಸ್ರಾರು ವರ್ಷಗಳ ಕಾಲ ನಾವೇನು ದಿನಗಣನೆಯನ್ನೇ ಅರಿತಿರಲಿಲ್ಲವೆ? ಪ್ರಪಂಚಕ್ಕೇ ಕಲಿಸಿಕೊಡಬಲ್ಲಷ್ಟು ದಿನಮಾನ ಲೆಕ್ಕಾಚಾರ ಪ್ರೌಢಿಮೆ ನಮ್ಮದಾಗಿತ್ತು. ನಮ್ಮ ಪಂಚಾಂಗದ ಆಚರಣೆಯ ಸೊಗಸೇ ನಿಜವಾದ ಸೊಗಸು. ಏಕೆಂದರೆ ಅದು ನಮ್ಮದು.
  ಭಾರತದ ಬಹುಸಂಖ್ಯಾತ ಪ್ರಜೆಗಳಾದ ಹಿಂದುಗಳಾದ ನಾವು ಯುಗಾದಿಯನ್ನು ಆಚರಿಸುವ ರೀತಿ ಬಲು ಸೊಗಸು. ಯುಗಾದಿಯಂದು ನಾವು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಅಭ್ಯಂಜನ ಮಾಡಿ ದೇವರನ್ನು ಪೂಜಿಸುತ್ತೇವೆ. ತಳಿರು ತೋರಣ, ರಂಗವಲ್ಲಿಗಳಿಂದ ಸಿಂಗಾರಗೊಂಡ ಮನೆಗೆ ಮಾವಿನೆಲೆಯಿಂದ ಕಲಶದ ನೀರನ್ನು ಮಂತ್ರೋಚ್ಚಾರದೊಂದಿಗೆ ಪ್ರೋಕ್ಷಿಸುತ್ತೇವೆ. ಹಿರಿಯರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಆಶೀರ್ವಾದ ಪಡೆಯುತ್ತೇವೆ. ದೇವಸ್ಥಾನಕ್ಕೆ ಹೋಗಿಬರುತ್ತೇವೆ. ನಮ್ಮನ್ನು ಮತ್ತೊಂದು ವರ್ಷ ಸಲಹಿದ ದೇವರಿಗೆ ಈ ಆಚರಣೆಗಳ ಮೂಲಕ ನಾವು ಕೃತಜ್ಞತೆ ಅರ್ಪಿಸುತ್ತೇವೆ; ಇದೇ ರೀತಿ ಮುಂದೆಯೂ ಕಾಪಾಡುವಂತೆ ದೇವರ ಮತ್ತು ಹಿರಿಯರ ಆಶೀರ್ವಾದ ಬೇಡುತ್ತೇವೆ.
  ಬೇವು-ಬೆಲ್ಲ ತಿನ್ನುವ ಮೂಲಕ ನಾವು ವರ್ಷವಿಡೀ ದುಃಖ-ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕಲ್ಪ ಮಾಡುತ್ತೇವೆ.
  ’ಯುಗಾದಿಯೆಂದರೆ ನಮ್ಮ ಬಾಳಬುತ್ತಿಯಲ್ಲಿ ಇನ್ನೊಂದು ರೊಟ್ಟಿ ಖಾಲಿಯಾದುದರ ಸಂಕೇತ’ ಎಂಬ ಕಹಿಸತ್ಯವನ್ನು ಮತ್ತು ’ಯುಗಾದಿಯೆಂದರೆ ನಮ್ಮ ಬಾಳಬುತ್ತಿಯಲ್ಲಿ ಇನ್ನೊಂದು ರೊಟ್ಟಿ ನಮ್ಮ ಹೊಟ್ಟೆ ಸೇರಿ ದೇಹಕ್ಕೆ ಕಸುವು ನೀಡಿದುದರ ಅರ್ಥಾತ್ ನಾವು ಇನ್ನೊಂದು ವರ್ಷ ಅನುಭವದಿಂದ ಮಾಗಿದುದರ ಸಂಕೇತ’ ಎಂಬ ಸಿಹಿವಾಸ್ತವವನ್ನು ಎರಡನ್ನೂ ಏಕಕಾಲಕ್ಕೆ ನಾವು ಬೇವು-ಬೆಲ್ಲ ಸೇವನೆಯ ರೂಪದಲ್ಲಿ ಅರಿವಿಗೆ ತಂದುಕೊಳ್ಳುತ್ತೇವೆ.
  ಯುಗಾದಿಯ ದಿನ ಪಂಚಾಂಗಶ್ರವಣ ಮಾಡುತ್ತೇವೆ, ಮನೆಮಂದಿಯೆಲ್ಲ ಒಟ್ಟಾಗಿ ಕುಳಿತು ಹೋಳಿಗೆ ಊಟ ಮಾಡುತ್ತೇವೆ.
  ಹೀಗೆ ಅರ್ಥಪೂರ್ಣ ಆಚರಣೆಯನ್ನು ಹೊಂದಿರುವ ಯುಗಾದಿ ಹಬ್ಬವು ನಮ್ಮ ಸಂಸ್ಕೃತಿಯ ಕುರುಹು ಹಾಗೂ ನಮ್ಮತನದ ಹೆಗ್ಗುರುತು. ಯುಗಾದಿಯ ಆಚರಣೆಯೆಂದರೆ ಅದು ಸ್ವಸಂಸ್ಕೃತಿಯ ಆಚರಣೆ. ಯುಗಾದಿಯ ಈ ಶುಭ ಸಂದರ್ಭದಲ್ಲಿ ಸಂಪದಿಗ ಮಿತ್ರರಿಗೆಲ್ಲ ನನ್ನ ಶುಭಾಶಯ ಇಂತಿದೆ:
  ಪ್ರಕೃತಿ ಹರಸಲಿ ಹೊಸ ವರುಷವನು
  ವಿಕೃತಿ ಹರಿಸಲಿ ಹೊಸ ಹರುಷವನು
  ಆಕೃತಿ ತಾಳಲಿ ಆಕಾಂಕ್ಷೆಗಳು
  ಸ್ವೀಕೃತಿ ಹೊಂದಲಿ ಆ ದೇವನೊಳು