ಯುಗಾದಿ ಸಂಭ್ರಮದಲ್ಲಿ ಕೊರೋನಾ ಎಚ್ಚರಿಕೆ

‘ಪ್ಲವ’ ನಾಮ ಸಂವತ್ಸರವು ಇಂದಿನಿಂದ ಆರಂಭ. ಯುಗಾದಿ ಎನ್ನುವುದು ಈ ಸಂವತ್ಸರದ ಮೊದಲ ಹಬ್ಬ. ಹಬ್ಬವನ್ನಾಚರಿಸಿ, ಲೋಕಕ್ಕೆ ಒಳಿತಾಗಲಿ ಎಂದು ಭಗವಂತನನ್ನು ಪ್ರಾರ್ಥಿಸೋಣ. ನಮ್ಮಲ್ಲಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ರೀತಿಯ ಯುಗಾದಿ ಆಚರಣೆಗಳು ಇವೆ. ಪ್ರತೀ ವರ್ಷ ಈ ಎರಡು ಯುಗಾದಿಗಳ ನಡುವೆ ೧೫-೨೫ ದಿನಗಳ ಅಂತರವಿರುತ್ತಿತ್ತು. ಆದರೆ ಈ ವರ್ಷ ಕೇವಲ ಒಂದು ದಿನದ ಅಂತರದಲ್ಲಿ ಎರಡು ಹಬ್ಬಗಳು ಬಂದಿರುವುದು ವಿಶೇಷ. ಇದಕ್ಕೆ ಭೂಮಿ ಹಾಗೂ ಚಂದ್ರನ ಚಲನೆಗಳೇ ಕಾರಣ ಎನ್ನುತ್ತಾರೆ. ಅದರ್ ಜೊತೆ ಅಧಿಕ ಮಾಸದ ದಿನಗಳು ಬಂದಿವೆ. ಏನೇ ಇರಲಿ ಹಬ್ಬಗಳು ಯಾವತ್ತೂ ಸಂತಸ ತರುತ್ತವೆ. ಈ ವರ್ಷ ಸಂತಸದೊಂದಿಗೆ ಎಚ್ಚರಿಕೆಯನ್ನೂ ತಂದಿದೆ. ಆದರೂ ಸರಳ ಸುಂದರ ಆಚರಣೆ ನಿಮ್ಮ ಮನೆಗಳಲ್ಲಿ ಇರಲಿ. ಹೊಸ ವರ್ಷದ ಸಂಭ್ರಮ ಎಲ್ಲೆಡೆ ಮನೆಮಾಡಲಿ...
ಕಳೆದ ವರ್ಷ ಪ್ರಾರಂಭವಾದ ಕೊನೋನಾ ಮಹಾಮಾರಿ ನಮ್ಮ ಎಲ್ಲಾ ಹಬ್ಬಗಳ ಸಂಭ್ರಮವನ್ನು ನುಚ್ಚುನೂರು ಮಾಡಿ ಬಿಟ್ಟಿತು. ಕಳೆದ ವರ್ಷ ಯುಗಾದಿ ಸಮಯದಲ್ಲಿ ಪ್ರಾರಂಭವಾದ ಈ ಹೆಮ್ಮಾರಿ ನಾಗರ ಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಗೌರಿ ಹಬ್ಬ, ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ ಇವುಗಳಲ್ಲದೇ ರಂಜಾನ್, ತೆನೆ ಹಬ್ಬ, ಬುದ್ಧ ಪೂರ್ಣಿಮೆ, ಕ್ರಿಸ್ ಮಸ್ ಸೇರಿದಂತೆ ಎಲ್ಲಾ ಹಬ್ಬಗಳ ಮೇಲೆ ಕರಾಳ ಛಾಯೆಯನ್ನು ಬೀರಿತ್ತು. ಕಳೆದ ವರ್ಷಾಂತ್ಯಕ್ಕೆ ಈ ಮಹಾಮಾರಿ ಕಮ್ಮಿ ಆದಂತೆ ತೋರಿದರೂ ಈಗ ಮತ್ತೆ ವಕ್ಕರಿಸಿದೆ.
ನಾವು ಮೊದಲಿಗಿಂತಲೂ ಜಾಗೃತರಾಗಬೇಕಾಗಿದೆ. ಹಬ್ಬಗಳನ್ನು ಮನೆಯಲ್ಲೇ ಆಚರಿಸಿಕೊಳ್ಳಬೇಕಾಗಿದೆ. ಬಂಧು ಮಿತ್ರರೊಡಗೂಡಿ ಸಂಭ್ರಮಾಚರಣೆ ಮಾಡುವ ಮನಸ್ಸಿದ್ದರೂ ನಾವು ಅದನ್ನು ತಡೆಯಬೇಕಾಗಿದೆ. ಏಕೆಂದರೆ ಬದುಕು ಮುಖ್ಯ. ಇನ್ನು ಎಲ್ಲಿಯಾದರೂ ಸಂಪೂರ್ಣ ಲಾಕ್ ಡೌನ್ ಆದರೆ ದಿನಾಲೂ ದುಡಿದು ತನ್ನ ಹಾಗೂ ಕುಟುಂಬದ ಹೊಟ್ಟೆ ತುಂಬಿಸುತ್ತಿದ್ದ ವ್ಯಕ್ತಿ ಉಪವಾಸದಿಂದಲೇ ಸಾಯಬೇಕಾಗುವ ಪರಿಸ್ಥಿತಿ ಬರಬಹುದು. ಕೊರೋನಾದಿಂದ ಬದುಕಿ ಹಸಿವಿನಿಂದ ಸತ್ತ ವ್ಯಕ್ತಿ ಎಂಬ ಸುದ್ದಿಯನ್ನು ಕೇಳಬೇಕಾಗಿ ಬರಬಹುದು. ಆರ್ಥಿಕ ಪರಿಸ್ಥಿತಿ ಶೋಚನೀಯವಾದೀತು. ಈ ಕಾರಣದಿಂದಲೇ ನಾವು ಮೊದಲಿಗಿಂತಲೂ ಹೆಚ್ಚು ಎಚ್ಚರ ವಹಿಸಬೇಕಾಗಿದೆ.
ಮಾಸ್ಕ್, ಸಾಮಾಜಿಕ ಅಂತರ ಹಾಗೂ ನೈರ್ಮಲ್ಯತೆಗೆ ಒತ್ತುಕೊಡಿ. ತೀರಾ ಅವಶ್ಯಕವಿರುವ ಸಮಾರಂಭದಲ್ಲಿ ಮಾತ್ರ ಭಾಗವಹಿಸಿ. ಲಾಕ್ ಡೌನ್ ಸಂಕಷ್ಟವನ್ನು ನಾವು ಕಳೆದ ವರ್ಷ ಬಹಳಷ್ಟು ಅನುಭವಿಸಿದ್ದೇವೆ. ಇನ್ನಾದರೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸೋಣ. ಈ ಯುಗಾದಿಯ ಶುಭ ಸಂದರ್ಭದಲ್ಲಿ ಬೇವಿನ ಕಹಿ ಕಮ್ಮಿಯಾಗಿ ಬೆಲ್ಲದ ಸಿಹಿ ಎಲ್ಲೆಡೆ ಪಸರಿಸಲಿ.
ಶತಾಯುರ್ವಜ್ರ ದೇಹಾಯ
ಸರ್ವ ಸಂಪತ್ಕರಾಯ ಚ |
ಸರ್ವಾರಿಷ್ಟ ವಿನಾಶಾಯ
ನಿಂಬಕಂ ದಳ ಭಕ್ಷಣಂ ||
*ಯುಗಾದಿಯ* ದಿನ *ಪಂಚಾಂಗಕ್ಕೆ* ಪೂಜೆ ಮಾಡಿ,
ಮೇಲಿನ ಶ್ಲೋಕ ಹೇಳಿ *ಬೇವು ಬೆಲ್ಲ* ಸವಿಯಬೇಕು.
ಈ ಸಂವತ್ಸರದಲ್ಲಿ ನಿಮಗೆಲ್ಲರಿಗೂ ಬೇವಿಗಿಂತಲೂ, ಸಿಹಿಯ ಬೆಲ್ಲದ ಸವಿ ಫಲಗಳೇ ಲಭಿಸಲಿ.
ಸರ್ವೇವೈ ಸುಖಿನಸ್ಸಂತು
ಸರ್ವೇಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ದುಃಖಭಾಗ್ಭವೇತ್ ||
ಎಲ್ಲರೂ ಸುಖವಾಗಿರಲಿ.
ಎಲ್ಲರೂ ಕಷ್ಟ-ತಾಪತ್ರಯಗಳಿಲ್ಲದೆ ನೆಮ್ಮದಿಯಿಂದ ಇರುವಂತಾಗಲಿ.
ಎಲ್ಲರಿಗೂ ಎಲ್ಲೆಡೆಗಳಿಂದ ಮಂಗಳಕರವಾದ ಒಳಿತೇ ಕಾಣಿಸಲಿ.
ಯಾರೊಬ್ಬರೂ ದುಃಖಭಾಗಿಗಳಾಗದಿರಲಿ.
ಕಾಲೇ ವರ್ಷಂತು ಪರ್ಜನ್ಯಃ
ಪೃಥಿವೀ ಸಸ್ಯ ಶಾಲಿನೀ |
ದೇಶೋsಯಂ ಕ್ಷೋಭ ರಹಿತಃ
ಸಾತ್ವಿಕಾಃ ಸಂತು ನಿರ್ಭಯಾಃ ||
ಎಲ್ಲರಿಗೂ ಮತ್ತೊಮ್ಮೆ
ನೂತನ *ಪ್ಲವ ನಾಮ ಸಂವತ್ಸರದ* ಹಾರ್ದಿಕ ಶುಭಾಶಯಗಳು.
(ಸಂಗ್ರಹ ಮಾಹಿತಿ ಆಧಾರಿತ)
ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು