ಯುಗಾದಿ
ಬರಹ
ಮತ್ತೆ ಬಂದಿದೆ ಹೊಸ ಚೈತನ್ಯದ ನವ ಯುಗಾದಿ
ಹೊಸ ಬಯಕೆ ಕನಸುಗಳ ನವಜೀವನದ ಬುನಾದಿ
ಸರ್ವಜಿತು ಬಂದಿಹನು ಹೊಸ ವರುಷದ ನಾಯಕನಾಗಿ
ಹೊಸ ರಾಗ ತಾಳದ ಮಧುರ ಬಾಳಗೀತೆಯ ಗಾಯಕನಾಗಿ
ಭೂರಮೆಯು ಸಿಂಗಾರಗೊಂಡು ಹಸಿರಾಗಿ ನಿಂತಿಹಳು
ಸಕಲ ಪ್ರಾಣಿ,ಪಕ್ಷಿ ಮನುಸಂಕುಲಕೆ ಉಸಿರಾಗಿ ಬಂದಿಹಳು
ಎತ್ತಣದೋ ಮಾಮರಕೆ ಎತ್ತಣದೋ ಕೋಗಿಲೆಗೆ ನಂಟನ್ನು ಬೆಸೆದಿಹಳು
ಕೋಗಿಲೆಯ ಕೂಗಿನಲಿ ನವವಂಸತವನು ಹಾಡಿ ಕರೆದಿಹಳು
ಹೊಸವರುಷದ ಸ್ವಾಗತಕೆ ಮನೆಮನೆಯಲಿ ತಳಿರು ತೋರಣ
ಹೊಸದಿನದಿ ಬಾಯಿ ಸಿಹಿಯಾಗಿಸಲು ಭೂರಿ ಹೋಳಿಗೆಹೂರಣ
ಹೊಸ ದಿನದಲಿ ಕಹಿಯ ಬೇವು ಸಿಹಿಯ ಬೆಲ್ಲಗಳ ಮಿಶ್ರಣ
ಜೀವನದಿ ನೋವುನಲಿವುಗಳ ಸಮನಾಗಿ ಪಡೆಯುವುದದಕೆ ಕಾರಣ
ಎಲ್ಲರ ಬಾಳಲಿ ತರಲಿ ಶಾಂತಿ ನೆಮ್ಮದಿಯು ಈ ಸಂವತ್ಸರ
ಮರಳಿ ಬರಲಿ ಸರ್ವರಲಿ ಭರವಸೆಯ ಶುಭ ಮನ್ವಂತರ
ಆಗಲಿ ಎಲ್ಲರ ಮನದಿ ಸುಜ್ನಾನದ ಉದಯ
ಹೊಸ ವರುಷದ ಪ್ರತಿದಿನವೂ ಸರ್ವರಿಗಾಗಲಿ ಶುಭೋದಯ