ಯುದ್ದವೆಂದರೇನೆಂದು ಇವರನ್ನು ಕೇಳು...

ಯುದ್ದವೆಂದರೇನೆಂದು ಇವರನ್ನು ಕೇಳು...

ಕವನ

ಇತಿಹಾಸ ಮತ್ತೊಮ್ಮೆ 

ಸುತ್ತುಹೊಡೆಯುತ್ತಿರುವ

ಈ ಹೊತ್ತಿನಲ್ಲಿ..

ಯುದ್ದವೆಂದರೇನೆಂದು.. 

 

ಬೆರೆತುಬಾಳಲು ಅಡ್ಡಿಯಾಗಿದ್ದ 

ಗೋಡೆಗಳನ್ನು ಕೆಡವಿದ  

ಜರ್ಮನ್ನರನ್ನು ಕೇಳು..

ಕೆಂಪುಚೌಕವನ್ನು ತಲುಪಿದರೂ 

ಕೊರೆವ ಚಳಿಯಲ್ಲಿ ಕೊರಡಾಗಿ  

ಅಸುನೀಗಿದವರ

ಮಕ್ಕಳನ್ನು ಕೇಳು  

ಯುದ್ಧವೆಂದರೆ ಏನೆಂದು .. 

 

ಇಟಲಿಯನ್ನು ಕೇಳು , 

ಪೋಲೆಂಡನ್ನು ಕೇಳು  

ಕೊನೆಗೊಮ್ಮೆ  ಯುದ್ಧದಲ್ಲಿ ಗೆದ್ದ 

ಬ್ರಿಟನ್ನನ್ನೇ  ಕೇಳಿಬಿಡು  

ಯುದ್ಧವೆಂದರೆ ಏನೆಂದು !

 

ಸೂರ್ಯ  ಉದಯಯಿಸುವ ನಾಡಾದರೂ 

ಬೆಳಗಾಗುವುದರೊಳಗೆ 

ಬೂದಿಯಾದ ನೆಲವನ್ನು ಕೇಳು.. 

ಸುತ್ತುವರೆದ ಬೆಂಕಿಯ ಮಧ್ಯೆ 

ಬುದ್ಧನನ್ನು ಅಪ್ಪಿಹಿಡಿದವರನ್ನು ಕೇಳು... 

ಯುದ್ದವೆಂದರೇನೆಂದು.. 

 

ಬಂಜರಾಗಿರುವ ಹಿರೋಷಿಮಾವನ್ನು ಕೇಳು 

ಬಂಜೆಯಾಗಿರುವ  ನಾಗಾಸಾಕಿಯನ್ನು  ಕೇಳು 

ಭರ್ತಿ ಎಂಟು ವರ್ಷ ರಕ್ತಕಾರುತ್ತಿದ್ದ 

ಇರಾನನ್ನು ಕೇಳು 

ಇರಾಕನ್ನು ಕೇಳು 

ಅಫ್ಘಾನಿಸ್ತಾನವನ್ನು ಕೇಳು 

ವಿಯೆಟ್ನಾಮನ್ನು ಕೇಳು 

ಜಾಣಕುರುಡು ತೋರಿದರೂ  

ಕಾಶ್ಮೀರದ ಬಗ್ಗೆ ..  

ಕನಿಷ್ಠ 

ಕಾರ್ಗಿಲ್ಲನ್ನಾದರೂ  ಕೇಳು 

ಲಢಾಖನ್ನು ಕೇಳು .. 

ಯುದ್ದವೆಂದರೇನೆಂದು 

 

ಕುರುಕ್ಷೇತ್ರ ಮುಗಿದ ಮೇಲೆ 

ಹೆಣಗಳ ನಡುವೆ ಹುಚ್ಚನಂತೆ 

ಅಲೆದ  ಅಶ್ವತ್ತಾಮನನ್ನು ಕೇಳು 

ನೂರು ಹೆಣಗಳ  ತಬ್ಬಿಕೊಂಡು 

ಭೂಮಿ ಬಿರಿಯುವಂತೆ ರೋಧಿಸಿದ 

ಗಾಂಧಾರಿಯನ್ನು ಕೇಳು 

ಹಾಗೆಯೇ 

ಗೆದ್ದ ಪಾಂಡವರ ಮಡದಿ 

ಪಾಂಚಾಲಿಯನ್ನೂ ಮರೆಯದೆ  ಕೇಳು ... 

ಯುದ್ದವೆಂದರೇನೆಂದು 

 

ಪುರೂರವನನ್ನು ಕೇಳು 

ನೆಪೋಲಿಯನ್ನನ್ನು ಕೇಳು 

ಇಡೀ  ಜಗತ್ತನ್ನೇ ಗೆಲ್ಲಬಯಸಿದ 

ಅಲೆಕ್ಸಾಂಡರನ್ನು ಕೇಳು.. 

ಕಳಿಂಗದ ಕಠಿಣ ಕಾಳಗದಲ್ಲಿ 

ವಿಜಯಿಯಾದ ಅಶೋಕನನ್ನು ಕೇಳು ... 

ಯುದ್ದವೆಂದರೇನೆಂದು.. 

 

ಹೋಗಲಿ...

ಯುದ್ಧ ಮಾಡಲು ಒಲ್ಲೆಯೆಂದ 

ಸಿದ್ಧಾರ್ಥ ಗೌತಮನನ್ನಾದರೂ  ಕೇಳು... 

ಯುದ್ದವೆಂದರೇನೆಂದು... 

 

ಕಣ್ಣಿಗೆ ಎಣ್ಣೆಬಿಟ್ಟುಕೊಂಡು 

ಮಕ್ಕಳ ಬರುವನ್ನು ಎದುರುನೋಡುವ 

ಹೆತ್ತ ಕರುಳನ್ನು ಕೇಳು 

ಫೋನಿನ ಗಂಟೆ 

ಬಾರಿಸಿದಾಗಲೆಲ್ಲಾ 

ಹೆದರಿ ನಡುಗುವ 

ಹೆಂಡತಿ-ಮಕ್ಕಳನ್ನು ಕೇಳು

ಯುದ್ದವೆಂದರೇನೆಂದು...  

 

ಗಡಿವಲಯದ  

ಗ್ರಾಮಗಳನ್ನು ಕೇಳು 

ಶೆಲ್ ದಾಳಿಯಲ್ಲಿ 

ಪುಡಿಯಾದ ಗೋಡೆಗಳನ್ನು ಕೇಳು 

ಭೀತಿಯಿಂದ ನಡುಗುವ ಮನೆಗಳನ್ನು ಕೇಳು... 

ಯುದ್ದವೆಂದರೇನೆಂದು.. 

ಅಥವಾ.... 

ಈ ರಾತ್ರಿ  

ಭೂರಿಭೋಜನ ಮುಗಿಸಿ     

ಒಂದೆರೆಡು ಪೆಗ್ಗು ಏರಿಸಿ 

ಬಂಗಲೆಯೊಳಗಿನ ಸುಂದರ ಉದ್ಯಾನದೊಳಗೆ 

ತಿಂದದ್ದು ಅರಗಲೆಂದು 

ಒಂದೆರೆಡು ಸುತ್ತು ಹಾಕಿದ  ನಂತರ 

ಅಥವಾ  

ಮೊಬೈಲಿನ ಮೂಲಕವೇ 

ನಿನ್ನ ಘನ ಅಭಿಪ್ರಾಯಗಳನ್ನೆಲ್ಲಾ 

ಲೋಕಕ್ಕೆ  ಕಕ್ಕಿ  

ಟಿವಿ ಯಲ್ಲಿನ ತಲೆಬುಡವಿಲ್ಲದ 

ಘನಘೋರ ಅರಚಾಟಗಳೆಲ್ಲಾ  ಮುಗಿದು 

ನಾಳಿನ ನಿನ್ನ ಕೆಲಸಗಳೆಲ್ಲಾ 

ನಿಗದಿಯಾದ ನಂತರವಾದರೂ .. 

ನಿನ್ನನ್ನೇ 

ನೀನೊಮ್ಮೆ ಕೇಳಿಕೊ .. 

ಯುದ್ದವೆಂದರೇನೆಂದು ..  

 

ಸಾಧ್ಯವಾದರೆ

ನಿನ್ನ ಅಂತಸ್ಸಾಕ್ಷಿಯನ್ನು ಕೇಳಿಕೊ .. 

ಮರಾಠಿ ಮೂಲ-  (ಗೊತ್ತಾಗಿಲ್ಲ )

ಇಂಗ್ಲಿಷಿಗೆ - ದರ್ಶನ ಮೊಂಡ್ ಕರ್ 

ಕನ್ನಡಕ್ಕೆ- ಶಿವಸುಂದರ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್