ಯುದ್ಧಕಾಲದಲಿ ಹಕ್ಕಿ…
ಯುದ್ಧಕಾಲದಲಿ ಹಕ್ಕಿ
ಪ್ರೇಮ ಬಾಣಬಿಡ ಬಯಸಿದೆ
ಅಸ್ತ್ರಗಳೆದೆಯನೂ ಸೀಳಿ
ಸರ್ವಾಧಿಕಾರಿಗೊಂದು ಮುತ್ತಿಕ್ಕಿ
ಮಾಸಿದ ಅವನ ಕೆನ್ನೆಯ ಗುಳಿಗೊಮ್ಮೆ ಕುಕ್ಕಿ
ಕಚಗುಳಿಯಿಡಲೆತ್ನಿಸಿದೆ!
ಯುದ್ಧಕಾಲದಲಿ ಹಕ್ಕಿ
ಗೂಡ ಕಟ್ಟುತ್ತಿದೆ, ಗಡಿಯಗಲ ಸೇತುವೆಯಾಗಿ
ಅಲ್ಲಲ್ಲಿ ಹಾರಿ, ಒಮ್ಮೊಮ್ಮೆ ಚೀರಿ
ಹಾಡಿ ಹೇಳುತಿದೆ
ರಕ್ತ ಬರಿ ಕಮಟೂ ಎಂದು
ಮುಚ್ಚಿದ ಕಣ್ಗಳಿಗೆ ಬಡಿಬಡಿದು ಹೇಳುತಿದೆ
ರೆಪ್ಪೆಯಗಲಿಸಲೆತ್ನಿಸಿ ಸೋತೇ ಹೋಗುತಿದೆ
ಯುದ್ಧಕಾಲದಲಿ ಹಕ್ಕಿ
ಹಾಡೂ ನಿಲ್ಲಿಸಿದೆ
ಶಬ್ಧವೆಲ್ಲ ಹೊಡಿ, ಬಡಿ, ಕೊಲ್ಲೆಂದು
ಕೇಳಿಸಿಕೊಳ್ಳುವ ಕಿವಿಗ್ಹೆದರಿ
ಮಾರು ದೂರವ್ಹಾರಿ ಕಿವಿ ಮುಚ್ಚಲು ಕೈಗಳೇ ಇರದೆ ಕಣ್ಣೀರಾಗಿದೆ,
ಕೇಳಲಾರದೇ ನೆತ್ತರು ನೆಲಕಪ್ಪಳಿಸುವ ಸದ್ದು!
ಯುದ್ಧ ಕಾಲದಲಿ ಹಕ್ಕಿ
ನೆಲ ಕುಕ್ಕುವುದನೇ ಮರೆತಿದೆ
ನೆತ್ತರಂಟಿದ ಕಾಳುಗಳ ರುಚಿಯೇ ಸೂತಕವೆನಿಸಿ
ಗಡಿಯಾಚೆಯೂ ಈಚೆಯೂ ಕೆಂಪು ಸಮುದ್ರ
ಪುಟ್ಟ ಹಕ್ಕಿ ಪಾರಾಗಿದೆ
ಗಿಡುಗನಿಗೆ ದೊಡ್ಡ ದೇಹ ಸಿಕ್ಕು
ಹಕ್ಕಿ ಮೌನವಾಗಿದೆ
ತನ್ನುಳಿವನ್ನು ಪ್ರಶ್ನಿಸಿ
ಯುದ್ಧ ಕಾಲದಲಿ ಹಕ್ಕಿ
ಮೌನವಾಗಿದೆ
ತನ್ನುಳಿವನ್ನೆ ಪ್ರಶ್ನಿಸಿ
ಸರ್ವಾಧಿಕಾರಿಯ ಗಹಗಹಿಕೆಯೊಂದು
ಆ ಮೌನವನ್ನೂ ಸೀಳಿದೆ
ಅಳಿವು, ಉಳಿವು, ಸೋಲು, ಗೆಲುವುಗಳ ಅರ್ಥವೂ ಅರಿಯದೆ
-ಸೌಮಿನಿ ಗೌರಿ
