ಯುದ್ಧದ ಆರಂಭ ಸುಲಭ ; ನಂತರದ ಪರಿಣಾಮಗಳು...?

ಯುದ್ಧದ ಆರಂಭ ಸುಲಭ ; ನಂತರದ ಪರಿಣಾಮಗಳು...?

ಯಾವುದೇ ಯುದ್ಧ, ಜಗಳಗಳನ್ನು ಪ್ರಾರಂಭಿಸುವುದು ಬಹಳ ಸುಲಭ. ನಾವು ನೆರೆಕರೆಯವರ ಜೊತೆ ಮಾಡುವ ಜಗಳ, ಸ್ನೇಹಿತರ ನಡುವೆ ಬೆಳೆದ ವೈಮನಸ್ಸು, ಸಂಬಂಧಿಕರ ನಡುವಿನ ಕಾದಾಟ, ರಾಜ್ಯ -ನೆರೆ ರಾಜ್ಯಗಳ ನಡುವಿನ ವಿವಾದಗಳು, ಕೊನೆಗೆ ದೇಶ-ವಿದೇಶಗಳ ನಡುವಿನ ಹೋರಾಟ. ಯುದ್ಧ-ಕಾಳಗ-ಕಲಹಗಳು ಯಾವುದೇ ಇರಲಿ ಒಂದು ವಿಷಯದಿಂದ ಪ್ರಾರಂಭವಾಗುತ್ತದೆ. ವಿಷಯ ಸಣ್ಣದೇ ಇರಲಿ ಅಥವಾ ದೊಡ್ಡದೇ ಇರಲಿ. ಯಾವುದೇ ವಿವಾದ ಮಾತುಕತೆಯಿಂದ ಬಗೆಹರಿಯಲಾಗದೇ ಹೋದೀತೇ? 

ಈಗಿನ ರಷ್ಯಾ-ಉಕ್ರೇನ್ ಯುದ್ಧವನ್ನೇ ಗಮನಿಸಿ. ನಿಜಕ್ಕೂ ಈ ಎರಡು ದೇಶಗಳು ರಷ್ಯಾ ಸಂಯುಕ್ತ (ಯು ಎಸ್ ಎಸ್ ಆರ್) ವಾಗಿದ್ದಾಗ ಜೊತೆಯಾಗಿಯೇ ಇದ್ದವು. ಇವರ ನಡುವೆ ಇರುವ ತಕರಾರುಗಳನ್ನು ಮಾತುಕತೆಯ ಮೂಲಕ ಬಗೆಯಹರಿಸಬಹುದಿತ್ತೇನೋ? ಆದರೆ ರಷ್ಯಾ ದೊಡ್ಡ ದೇಶ. ಉಕ್ರೇನ್ ನ ಸೈನ್ಯ, ಯುದ್ಧ ಸಾಮಾಗ್ರಿ, ಶಸ್ತ್ರಾಸ್ತ್ರಗಳು ಈ ಎಲ್ಲದರಲ್ಲೂ ರಷ್ಯಾ ಮುಂದಿದೆ. ಎಲ್ಲಕ್ಕಿಂತ ಗಾಬರಿ ಹುಟ್ಟಿಸುವ ವಿಷಯವೆಂದರೆ ರಷ್ಯಾ ಅಣ್ವಸ್ತ್ರ ಹೊಂದಿದ ದೇಶ. ಎರಡನೇ ಮಹಾ ಯುದ್ಧದ ಸಮಯದಲ್ಲಿ ಜಪಾನ್ ದೇಶದ ಮೇಲೆ ನಡೆದ ಅಣ್ವಸ್ತ್ರ ಪ್ರಯೋಗದ ಪರಿಣಾಮಗಳನ್ನು ಆ ದೇಶ ಘಟನೆ ನಡೆದ ಹಲವಾರು ದಶಕಗಳ ನಂತರವೂ ಅನುಭವಿಸುತ್ತಿದೆ. ಆ ದೇಶದವರ ಸಾಮರ್ಥ್ಯದ ಪರಿಣಾಮದಿಂದ ಅವರು ಹಲವಾರು ವಿಷಯಗಳಲ್ಲಿ ತಮ್ಮ ದೇಶವನ್ನು ಪುನರ್ನಿರ್ಮಾಣ ಮಾಡಿಕೊಂಡರು. ಆದರೆ ಅಣು ಬಾಂಬ್ ಮಾಡುತ್ತಿರುವ ವಿಕಿರಣಗಳ ಪರಿಣಾಮವನ್ನು ಆ ದೇಶ ಈಗಲೂ ಅನುಭವಿಸುತ್ತಿದೆ. ಯುದ್ಧದ ದೊಡ್ಡ ಸಮಸ್ಯೆ ಇದೇ.

ಈಗ ನಡೆಯುತ್ತಿರುವ ಯುದ್ಧವಾಗಲೀ, ಹಿಂದೆ ನಡೆದ ಯುದ್ಧಗಳಾಗಲೀ, ಗೆದ್ದವರು ಯಾರೂ ನಂತರದ ದಿನಗಳಲ್ಲಿ ಸುಖದಿಂದ ನಿದ್ರಿಸಿಲ್ಲ. ನಿಜವಾದ ಸಮಸ್ಯೆ ಪ್ರಾರಂಭವಾಗುವುದು ಯುದ್ಧ ಗೆದ್ದ ಬಳಿಕವೇ. ಸೋತವನು ಹೇಗೂ ಸತ್ತು ನಾಶವಾಗಿ ಹೋದ, ಅದರೆ ಗೆದ್ದವನ ಮುಂದಿರುವ ನಿಜವಾದ ಸಮಸ್ಯೆಗಳೇನು? ಅದು ಯುದ್ಧ ಮುಗಿದ ಬಳಿಕವೇ ಗೊತ್ತಾಗುವುದು. ಯಾವಾಗಲೂ ಯುದ್ಧ ನಮ್ಮ ಕೊನೆಯ ದಾಳವಾಗಬೇಕು. ಒಂದು ದೇಶ ಮತ್ತೊಂದು ದೇಶದ ಮೇಲೆ ಆಕ್ರಮಣ ಮಾಡುವಾಗ ನಿಜವಾಗಿ ಬಲಿಯಾಗುವವರು ಸಾಮಾನ್ಯ ನಾಗರಿಕರು. ಸೈನಿಕರಿಗಾದರೆ ಯುದ್ಧ ಮಾಡುವುದು ಅವರ ಕೆಲಸ ಎಂದು ಅಂದುಕೊಳ್ಳಬಹುದು. ಆದರೆ ಸಾಮಾನ್ಯ ನಾಗರಿಕರು? ಯುದ್ಧದ ಪರಿಣಾಮವಾಗಿ ನಾಶವಾದ ಕಟ್ಟಡಗಳು, ವಿಮಾನ ನಿಲ್ದಾಣಗಳು, ಅಣೆಕಟ್ಟು, ಸೇತುವೆ, ರಸ್ತೆಗಳು, ರೈಲು-ಬಸ್ಸು ನಿಲ್ದಾಣಗಳು, ಕೈಗಾರಿಕಾ ವಲಯಗಳು ಇವೆಲ್ಲವನ್ನೂ ಮತ್ತೊಮ್ಮೆ ನಿರ್ಮಾಣ ಮಾಡುವುದು ಎಷ್ಟು ಕಷ್ಟ? ಅದರ ಪುನರ್ ನಿರ್ಮಾಣವಾಗುವ ತನಕ ಕೆಲಸ ಕಳೆದುಕೊಂಡವರ ಗತಿ ಏನು? ಊಟಕ್ಕೆ ಯಾರನ್ನು ಆಶ್ರಯಿಸುವುದು? ಒಂದು ದೇಶವನ್ನು ಯುದ್ಧದ ಮೂಲಕ ಗೆದ್ದ ಬಳಿಕ ಅದನ್ನು ತಮ್ಮ ನಿಯಂತ್ರಣದಲ್ಲಿಡುವುದು ಎಷ್ಟು ಸುಲಭ? ಇದು ಬಹಳ ಕಷ್ಟದ ಕೆಲಸ ಎಂದು ಈಗಾಗಲೇ ಹಲವಾರು ದೇಶಗಳಿಗೆ ಗೊತ್ತಾಗಿದೆ. ದಶಕಗಳ ತನಕ ತಮ್ಮ ಹಿಡಿತದಲ್ಲಿದ್ದ ಅಫ್ಘಾನಿಸ್ತಾನವನ್ನು ಅಮೇರಿಕಾ ಇತೀಚೆಗೆ ತಾಲಿಬಾನ್ ಆಡಳಿತಕ್ಕೆ ಒಪ್ಪಿಸಿ ಮನೆಗೆ ಮರಳಿಲ್ಲವೇ? ಇದೇ ನಿಜವಾದ ಸಮಸ್ಯೆ. ವಶ ಪಡಿಸಿಕೊಂಡ ದೇಶದ ಮೇಲೆ ನಿರಂತರ ಹಿಡಿತ ಸಾಧ್ಯವೇ ಇಲ್ಲ. ಏಕೆಂದರೆ ಅಲ್ಲಿನ ನಾಗರಿಕರು ಯಾವತ್ತೂ ಮತ್ತೊಂದು ದೇಶದ ಆಕ್ರಮಣ ಮತ್ತು ಆಡಳಿತವನ್ನು ಸಹಿಸಿಕೊಳ್ಳುವುದಿಲ್ಲ. ಇದೇ ಕಾರಣದಿಂದ ಹಲವಾರು ಸಮಯ ಒಂದು ದೇಶದ ಹಿಡಿತದಲ್ಲಿ ಮತ್ತೊಂದು ದೇಶವಿದ್ದರೂ ಅದು ಆಕ್ರಮಿತ ದೇಶದ ಆಡಳಿತವನ್ನು ಒಪ್ಪಿಕೊಳ್ಳುವುದೇ ಇಲ್ಲ. 

ನಮ್ಮ ಮಾಜಿ ಪ್ರಧಾನಿ, ಕವಿ ಮನಸ್ಸಿನ ಅಟಲ್ ಬಿಹಾರಿ ವಾಜಪೇಯಿಯವರು ಹೇಳಿದ ಒಂದು ಮಾತು ನನಗೆ ಈ ಸಮಯದಲ್ಲಿ ನೆನಪಿಗೆ ಬರುತ್ತಿದೆ. ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ವೈಮನಸ್ಸನ್ನು ಕಡಿಮೆ ಮಾಡಲು ಹಲವಾರು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದರು. ಇದಕ್ಕೆ ಬಹುತೇಕರ ವಿರೋಧವಿದ್ದರೂ ಅವರು ಹೇಳುತ್ತಿದ್ದ ಮಾತು ಒಂದೇ ‘ನಾವು ನಮ್ಮ ನೆರೆಕರೆಯವರನ್ನು ಬದಲಾಯಿಸಲಾಗದು, ಅವರ ಜೊತೆ ಬದುಕಲು ಕಲಿಯಬೇಕು'. ನೀವೇ ಯೋಚನೆ ಮಾಡಿ, ನಿಮಗೂ ನಿಮ್ಮ ನೆರೆಮನೆಯವನಿಗೂ ಯಾವುದೋ ವಿಚಾರದಲ್ಲಿ ತಕರಾರು ಏಳುತ್ತದೆ. ಪ್ರತೀ ದಿನ ಅವನು ಗಲಾಟೆ ಮಾಡುವುದು, ಅದಕ್ಕೆ ಪ್ರತಿಯಾಗಿ ನೀವು ಗಲಾಟೆ ಮಾಡುವುದು. ನಿಮ್ಮ ಜೊತೆ ನಿಮ್ಮ ಸಹೋದರರು, ಮಕ್ಕಳು, ಹೆಂಡತಿ ಎಲ್ಲರೂ ಈ ಕಲಹದಲ್ಲಿ ಸೇರಿಕೊಳ್ಳುವುದು, ಇಬ್ಬರ ಕಡೆಯಿಂದಲೂ ಆಸ್ತಿ ನಾಶವಾಗುವುದು, ಕಡೆಗೆ ನಿಮ್ಮ ಕಾಳಗವು ಪೋಲೀಸ್ ಸ್ಟೇಷನ್ ಮೆಟ್ಟಲು ಹತ್ತುವಂತೆ ನಿಮ್ಮನ್ನು ಮಾಡುವುದಲ್ಲದೇ ನಿಮ್ಮ ಮಾನಸಿಕ ನೆಮ್ಮದಿಯನ್ನೂ ಕಳೆದುಕೊಳ್ಳುವಂತೆ ಮಾಡುತ್ತದೆ. ನೀವೇ ಯೋಚನೆ ಮಾಡಿ, ನಿಮ್ಮ ಅಥವಾ ಆತನ ಕಿರಿಕಿರಿ ಇಬ್ಬರನ್ನೂ ನೆಮ್ಮದಿಯಲ್ಲಿ ಇಡಲು ಬಿಡುತ್ತದೆಯೇ, ನಿಮ್ಮ ವೈಷಮ್ಯಗಳು ಮುಂದಿನ ಪೀಳಿಗೆಗೂ ಮುಂದುವರೆಯಬಹುದಲ್ವೇ? ನೀವಿರುವುದು ಬಾಡಿಗೆ ಮನೆಯಲ್ಲಾದರೆ ಸರಿ, ಮನೆಯನ್ನಾದರೂ ಬದಲಾಯಿ ಬೇರೆಡೆಗೆ ಹೋಗಬಹುದು. ಆದರೆ ನಿಮ್ಮದು ಸ್ವಂತ ಮನೆಯಾಗಿದ್ದು ನೀವು ಆತನಿಂದ ಮುಕ್ತಿಯನ್ನು ಪಡೆಯ ಬೇಕಾದರೆ ಮನೆಯನ್ನು ಮಾರಿ ಹೋಗುವುದು ನಿಮಗೆ ಕಷ್ಟದ ಕೆಲಸ. ಏಕೆಂದರೆ ನೀವು ಆ ಮನೆಯನ್ನು ಕಟ್ಟಲು ನಿಮ್ಮ ಎಲ್ಲಾ ಸಾಮರ್ಥ್ಯ, ಸಮಯ, ಹಣವನ್ನು ಸುರಿದಿರುತ್ತೀರಿ. ಆ ಕಾರಣದಿಂದ ನಿಮಗೆ ಆ ಮನೆ ಅತ್ಯಂತ ಪ್ರಿಯವಾಗಿದ್ದು, ವರ್ಷಾನುಗಟ್ಟಲೇ ವಾಸವಿದ್ದ ಮನೆಯನ್ನು ಒಮ್ಮೆಲೇ ಬಿಟ್ಟು ಹೋಗಲು ಸಾಧ್ಯವೇ? ಹಾಗೆಯೇ ಎರಡು ದೇಶಗಳ ನಡುವಿನ ಕಾಳಗ. ನಿಮ್ಮ ನೆರೆ ದೇಶದವನು ಪ್ರತೀ ದಿನ ನಿಮ್ಮ ಜೊತೆ ಗಲಾಟೆ ಮಾಡುವವನಾದರೂ ನೀವು ಅವನನ್ನು ಬಿಟ್ಟು ಹೋಗಲಾರಿರಿ. ಭಾರತ-ಪಾಕಿಸ್ತಾನದ ಸಮಸ್ಯೆಯೇ ಇದು. ಭಾರತ ಯಾವತ್ತಿಗೂ ಶಾಂತಿ ಬಯಸುವ ದೇಶ. ಇಲ್ಲದೇ ಹೋಗಿದ್ದಲ್ಲಿ ಇಷ್ಟರಲ್ಲಿ ಪಾಕಿಸ್ತಾನ ಭಾರತದ ವಶದಲ್ಲಿ ಇರುತ್ತಿತ್ತು. ಎರಡು ನೇರ ಯುದ್ಧಗಳಲ್ಲಿ ಹಾಗೂ ಹಲವಾರು ಪರೋಕ್ಷ ಯುದ್ಧಗಳಲ್ಲಿ ಪಾಕಿಸ್ತಾನ ನಮ್ಮಿಂದ ಸೋಲುಂಡಿದೆ. ಆದರೆ ಬುದ್ದಿ ಕಲಿತಿಲ್ಲ. ನಾವು ಯುದ್ಧದಲ್ಲಿ ಗೆದ್ದ ಭಾಗಗಳನ್ನೂ ಅವರಿಗೆ ಸೌಹಾರ್ದತೆಯ ಸಂಕೇತವಾಗಿ ಮರಳಿ ಒಪ್ಪಿಸಿದ್ದೇವೆ. ಏಕೆಂದರೆ ಹಲವಾರು ರಾಜಕೀಯ ಕಾರಣಗಳಿಂದ ನಡೆಯುವ ಈ ಯುದ್ಧಗಳಿಂದ ಸಾಮಾನ್ಯ ನಾಗರಿಕ ತತ್ತರಿಸಿಹೋಗಬಾರದಲ್ವೇ? ಯಾವುದೇ ಸಾಮಾನ್ಯ ನಾಗರಿಕ ಯುದ್ಧವನ್ನು ಬಯಸುವುದಿಲ್ಲ ಅವನಿಗೆ ಪುಟ್ಟದೊಂದು ಕೆಲಸ, ಮೂರು ಹೊತ್ತು ಊಟ, ವಸತಿ ಇದ್ದು ಆತನ ಕುಟುಂಬವನ್ನು ಸಾಕುವ ಸಾಮರ್ಥ್ಯವಿದ್ದರೆ ಆತ ಸುಖಿ. 

ಭಾರತ ಪಾಕ್ ಒಂದು ರೀತಿಯಲ್ಲಿ ಅಣ್ಣ ತಮ್ಮ ದೇಶಗಳು. ಅಣ್ಣನ ಜೊತೆ ತಕರಾರು ಮಾಡಿ ಪಾಲು ಕೇಳಿ ಬೇರೆ ಹೋದ ತಮ್ಮನಂತೆ. ಅದೇ ನಾವು ವೈಷಮ್ಯದಲ್ಲಿ ಇಲ್ಲದೇ ಉತ್ತಮ ನೆರೆಹೊರೆಯಾಗಿರುತ್ತಿದ್ದರೆ, ನಮ್ಮ ದೇಶಗಳ ಸ್ಥಿತಿ ಇನ್ನಷ್ಟು ಉತ್ತಮವಾಗಿರುತ್ತಿರಲಿಲ್ಲವೇ? ಇದರ ಹಿಂದೆ ಹಲವಾರು ರಾಜಕೀಯ ಕಾರಣಗಳಿರಲೂ ಬಹುದು. ನಮ್ಮ ಎರಡು ದೇಶಗಳ ನಡುವೆ ಪರಸ್ಪರ ಸೌಹಾರ್ದಯುತ ಸಂಬಂಧಗಳು ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು. ಯುದ್ಧ ನಡೆಯಬಹುದು ಎಂದು ಯೋಚನೆ ಮಾಡಿ ನಾವು ನಮ್ಮ ರಕ್ಷಣಾ ಬಜೆಟ್ ಗೆ ಸುರಿಯುವ ಕೋಟ್ಯಾಂತರ ರೂಪಾಯಿ ಹಣವನ್ನು ಬೇರೆ ಜನೋಪಯೋಗಿ ಕೆಲಸಗಳಿಗೆ ಬಳಸಬಹುದಿತ್ತು. ಅಲ್ಲವೇ?

ರಷ್ಯಾ-ಉಕ್ರೇನ್ ಕಾಳಗದಿಂದಾಗಿ ನಮ್ಮ ಆರ್ಥಿಕ ವ್ಯವಸ್ಥೆ ಮೇಲೂ ಪರಿಣಾಮ ಬೀರುತ್ತದೆ ಎಂದು ಆರ್ಥಿಕ ವಿಶ್ಲೇಷಕರು ಹೇಳುತ್ತಾರೆ. ಇದೇ ದೊಡ್ಡ ಸಮಸ್ಯೆ. ನಾವಿನ್ನೂ ಆರ್ಥಿಕವಾಗಿ ಸ್ವತಂತ್ರರಾಗಿಲ್ಲ ಎನ್ನುವುದೇ ಬೇಸರದ ಸಂಗತಿ. ನಮಗೆ ಬೇಕಾಗುವ ಬಹುಪಾಲು ಗೋಧಿ, ಬಾರ್ಲಿ, ಎಣ್ಣೆ ಕಾಳುಗಳು ರಷ್ಯಾ-ಉಕ್ರೇನ್ ದೇಶಗಳಿಂದ ಬರುತ್ತಿವೆಯಂತೆ. ನಾವು ಪ್ರತೀ ವರ್ಷವೂ ಕೃಷಿಗಾಗಿ ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತೇವಲ್ಲ? ಅದು ಎಲ್ಲಿಗೆ ಹೋಗುತ್ತದೆ? ನಮ್ಮ ಜನ ಸಂಖ್ಯೆಗೆ ಸಾಕಾಗುತ್ತಿಲ್ಲವೇ? ಗೋಧಿ, ಸೂರ್ಯಕಾಂತಿ ಬೆಳೆಗಳನ್ನು ಬೆಳೆಯಲು ಉತ್ತಮ ವಾತಾವರಣ ನಮ್ಮ ದೇಶದಲ್ಲಿದ್ದರೂ ನಾವು ಯಾಕೆ ಬೇರೆ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಾದರೆ ಸೂಜಿಯಿಂದ ವಿಮಾನದವರೆಗೆ ನಮಗೆ ವಿದೇಶದಿಂದ ಬರಬೇಕಾಗಿತ್ತು. ಆದರೆ ಸ್ವಾತಂತ್ರ್ಯ ಸಿಕ್ಕ ೭೫ ವರ್ಷಗಳ ನಂತರವೂ ನಾವು ಅದೇ ಸ್ಥಿತಿಯಲ್ಲಿದ್ದೇವೆ ಎಂದು ಅನಿಸುತ್ತಿಲ್ಲವೇ? ನಾವು ಚಂದ್ರ ಲೋಕಕ್ಕೆ ಹೋಗಲು, ಯುದ್ಧದಲ್ಲಿ ಬಳಸಲು ರಾಕೆಟ್ ಗಳನ್ನು ಸ್ವದೇಶಿಯಾಗಿ ನಿರ್ಮಿಸುತ್ತೇವೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತ್ತೇವೆ. ಅದರೆ ಇನ್ನೂ ನಾವು ಬೆಳೆಯ ಬಹುದಾದ ಬೆಳೆಗಳನ್ನು ಭಾರತದಲ್ಲಿ ಬೆಳೆಯುತ್ತಿಲ್ಲ. ಅದಕ್ಕಾಗಿ ವಿದೇಶಗಳನ್ನು ನಂಬಿಕೊಂಡಿದ್ದೇವೆ. ಇನ್ನು ಯುದ್ಧ ಪ್ರಾರಂಭವಾಯಿತು ಎಂದು ಕಾಳಸಂತೆ ವ್ಯಾಪಾರಿಗಳು ತಮ್ಮಲ್ಲಿ ಲಭ್ಯ ಇರುವ ದಾಸ್ತಾನನ್ನು ಮರೆಮಾಚಿ ಬೆಲೆಯನ್ನು ತೀವ್ರವಾಗಿ, ದುಪ್ಪಟ್ಟಾಗಿ ಏರಿಸುವುದರಲ್ಲಿ ಸಂಶಯವಿಲ್ಲ. ಈ ಹಿಂದೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಕ್ರಮಣವಾಗಿ ಒಂದು ವಾರ ಕಳೆಯುವ ಮೊದಲೇ ಅಲ್ಲಿಂದ ಆಮದಾಗುತ್ತಿದ್ದ ಖರ್ಜೂರ, ಒಣ ಬಾದಾಮಿ ಇನ್ನಿತರ ಕೆಲವು ವಸ್ತುಗಳ ಬೆಲೆ ದುಬಾರಿಯಾದುದನ್ನು ನಾವು ನೋಡಿಲ್ಲವೇ? ಅಷ್ಟು ಬೇಗ ಬೆಲೆ ಹೇಗೆ ಏರಿತು? ಇದೆಲ್ಲಾ ದಲ್ಲಾಳಿಗಳ ಕುತಂತ್ರವೆಂದು ಯಾರಿಗಾದರೂ ಅರಿವಾಗದೇ?

ಏನೇ ಇರಲಿ, ಯುದ್ಧದ ಕಾರ್ಮೋಡ ಬೇಗನೇ ಮಾತುಕತೆಯ ಮೂಲಕ ಕರಗಲಿ. ರಷ್ಯಾ-ಉಕ್ರೇನ್ ನಡುವೆ ಶಾಂತಿ ಮಾತುಕತೆ ನಡೆದು, ಯುದ್ಧ ನಿಲ್ಲಲಿ. ಯುದ್ಧ ಯಾರಿಗೂ ಒಳ್ಳೆಯದು ಮಾಡುವುದಿಲ್ಲ. ಹಾಳಾದ ಆಸ್ತಿಪಾಸ್ತಿಗಳನ್ನು ಮತ್ತೆ ನಿರ್ಮಾಣ ಮಾಡಬಹುದು, ಆದರೆ ಜೀವಹಾನಿಯನ್ನು ಮತ್ತೆ ಸರಿ ಪಡಿಸಲು ಸಾಧ್ಯವೇ? ಅಪ್ಪ ಅಮ್ಮನಿಲ್ಲದೇ ಅನಾಥವಾದ ಮಗು, ಮಕ್ಕಳನ್ನು ಕಳೆದುಕೊಂಡ ವೃದ್ಧ ತಂದೆ ತಾಯಿ, ಸತ್ತು ಹೋದ ಪ್ರೀತಿ ಪಾತ್ರ ಜಾನುವಾರುಗಳು ಇವೆಲ್ಲಾ ಮತ್ತೆ ಮರಳಿ ಬರುವುದಿಲ್ಲ. ಕಳೆದುಕೊಂಡವರ ನೋವೂ ಶಾಶ್ವತವಾಗಿರುತ್ತದೆ. ಯುದ್ಧ ನಿಲ್ಲಲಿ-ಶಾಂತಿ ನೆಲೆಸಲಿ.      

ಯುದ್ಧದ ಬಳಿಕದ ಸಾಂಕೇತಿಕ ಚಿತ್ರ ಕೃಪೆ: ಅಂತರ್ಜಾಲ ತಾಣ