ಯುದ್ಧದ ಬಗ್ಗೆ ಪತ್ರಿಕೆಯೊಂದು ನಡೆಸಿದ ಸಂದರ್ಶನದ ಆಯ್ದ ಭಾಗಗಳು..

ಯುದ್ಧದ ಬಗ್ಗೆ ಪತ್ರಿಕೆಯೊಂದು ನಡೆಸಿದ ಸಂದರ್ಶನದ ಆಯ್ದ ಭಾಗಗಳು..

ರಷ್ಯಾ ಮತ್ತು ಉಕ್ರೇನ್ ಯುದ್ಧ ಪ್ರಾರಂಭವಾಗಿ ಫೆಬ್ರವರಿ 24, 2023 ಕ್ಕೆ ಒಂದು ವರ್ಷ ಕಳೆಯುತ್ತದೆ. ಈ ಸಂದರ್ಭದಲ್ಲಿ ಈ ಯುದ್ಧವು ಅವೆರಡು ದೇಶಗಳ ಜನಜೀವನದ ಮೇಲೆ, ಇಡೀ ಪ್ರಪಂಚದ ಜನರ ಮೇಲೆ, ಒಟ್ಟು ಪರಿಸರದ ಮೇಲೆ, ಹೀಗೆ ಏನೇನು ಪರಿಣಾಮಗಳನ್ನು ಬೀರಿರಬಹುದು ಎಂಬುದರ ಬಗ್ಗೆ ಕೆಲವು ಪ್ರಶ್ನೆಗಳಿಗೆ  ಅಭಿಪ್ರಾಯ.

ಪ್ರಶ್ನೆ: 1. ರಷ್ಯಾ ಮತ್ತು ಉಕ್ರೇನ್ ಯುದ್ದವು ಅಲ್ಲಿನ ಸಾಮಾನ್ಯ ಜನಜೀವನದ ಮೇಲೆ ಯಾವ ಪರಿಣಾಮವನ್ನು ಬೀರಿರಬಹುದು ?

ಉತ್ತರ: ಯುದ್ಧದ ಪರಿಣಾಮದ ದೃಷ್ಟಿಯಿಂದ ಸದ್ಯಕ್ಕೆ ರಷ್ಯಾದ ಜನರಿಗಿಂತ ಉಕ್ರೇನ್ ಜನರ ಮೇಲೆ ಸಾಕಷ್ಟು ಗಂಭೀರ ದುಷ್ಪರಿಣಾಮ ಬೀರಿದೆ. ಸಾವು, ನೋವು, ಗಾಯ, ಅಂಗವೈಕಲ್ಯ, ವಲಸೆ ಈಗಾಗಲೇ ಲಕ್ಷಗಳ ಸಂಖ್ಯೆ ಮೀರಿದೆ. ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಊಹಿಸಲು ಮನಸ್ಸು ಒಪ್ಷದಷ್ಟು ಹಾಳಾಗಿರುತ್ತದೆ. ಒಂದು ವರ್ಷದಷ್ಟು ದೀರ್ಘಕಾಲ ಯುದ್ಧ ನಡೆಯುತ್ತಿರುವುದರಿಂದ ಸದಾ ಸಾವಿನ ನೆರಳಿನಲ್ಲಿಯೇ ನರಳುವ ಅಲ್ಲಿನ ಸಾಕಷ್ಟು ಜನರ ಮಾನಸಿಕ ಆರೋಗ್ಯ ಖಿನ್ನತೆಯೆಡೆಗೆ ಸಾಗಿರುವ ಸಾಧ್ಯತೆಯೂ ಇದೆ. ಎಲ್ಲವೂ ಸರಿ ಇದ್ದಾಗಲೇ ಕೊರೋನಾ ನಂತರದ ಬದುಕು ಕಷ್ಟವಾಗಿತ್ತು. ಈಗ ಏನೂ‌ ಸರಿ ಇಲ್ಲದಿರುವಾಗ ಬದುಕು ತುಂಬಾ ತುಂಬಾ ಕಷ್ಟವೆಂಬುದು ವಾಸ್ತವಿಕ ಸತ್ಯ.

ಪ್ರಶ್ನೆ: 2. ವಿಶ್ವಸಂಸ್ಥೆ ಅಥವಾ ಪ್ರಪಂಚದ ಬಲಿಷ್ಠ ರಾಷ್ಟ್ರಗಳು ಮತ್ತು ಶಾಂತಿಪ್ರಿಯ ರಾಷ್ಟ್ರಗಳು ಯಾಕೆ ಈ ವಿನಾಶಕಾರಿ ಯುದ್ಧವನ್ನು ನಿಲ್ಲಿಸಲು  ಗಂಭೀರ ಪ್ರಯತ್ನವನ್ನು ಮಾಡುತ್ತಿಲ್ಲ?

ಉತ್ತರ: ಮನುಷ್ಯ ಆಧುನಿಕವಾದಂತೆಲ್ಲಾ - ಭೌತಿಕ ಸೌಕರ್ಯಗಳು ಹೆಚ್ಚು ಆರಾಮದಾಯಕವಾದಂತೆಲ್ಲಾ - ಪ್ರಕೃತಿಯನ್ನು ನಾಶ ಮಾಡಿ ಅದರ ಮೇಲೆ ನಿಯಂತ್ರಣ ಸಾಧಿಸಿದಂತೆಲ್ಲಾ ಆತನ ಒಳಗಿನ ದುಷ್ಟತನ ಹೆಚ್ಚು ಹೆಚ್ಚು ಅನಾವರಣಗೊಳ್ಳತೊಡಗಿದೆ. ಅದಕ್ಕೆ ಎಲ್ಲಾ ಬಲಿಷ್ಠ ಮತ್ತು ಪ್ರಭಾವಿ ದೇಶಗಳ ನಾಯಕರು ಹೊರತಲ್ಲ. ಇಂದಿನ ಆರ್ಥಿಕ ಕೇಂದ್ರಿತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಕೆಟ್ಟ ರೀತಿಯಲ್ಲಿ ತಮ್ಮ ಹಿತಾಸಕ್ತಿಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಎರಡನೇ ಮಹಾಯುದ್ಧದ ನಂತರ ರಷ್ಯಾ ಮತ್ತು ಅಮೆರಿಕದ ಶೀತಲ ಸಮರ ಮತ್ತು ನಂತರದಲ್ಲಿ ಚೀನಾದ ಪ್ರಾಬಲ್ಯ ಶಸ್ತ್ರಾಸ್ತ್ರಗಳ ಮಾಫಿಯಾ, ವಿಶ್ವಸಂಸ್ಥೆಯ ಮೇಲೆ ನಿಯಂತ್ರಣ ಸಾಧಿಸಲು ಅದನ್ನು ದುರ್ಬಲ ಗೊಳಿಸುವ ಹುನ್ನಾರ ಹೀಗೆ ಅನೇಕ ಪ್ರತ್ಯಕ್ಷ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪರೋಕ್ಷ ತಂತ್ರಗಳು ಯುದ್ದವನ್ನು ನಿಲ್ಲಿಸುವುದಕ್ಕಿಂತ ಅದನ್ನು ದೀರ್ಘಕಾಲ ಎಳೆಯುವ ಕಡೆಗೇ ಹೆಚ್ಚು ಒಲವು ತೋರುವುದರಿಂದ ಯುದ್ಧ ನಿಲ್ಲಿಸಲು ಯಾರೂ ಹೆಚ್ಚು ಪ್ರಯತ್ನ ಮಾಡುವುದಿಲ್ಲ. ಕೆಲವರಿಗೆ ಆಸಕ್ತಿ ಇದ್ದರೂ ಆ ಸಾಮರ್ಥ್ಯ ಉಳಿದಿಲ್ಲ.

ಪ್ರಶ್ನೆ: 3. ಈ ಯುದ್ಧದಿಂದ ಅಥವಾ ಪ್ರಪಂಚದ ಯಾವುದೇ ಯುದ್ಧಗಳಿಂದ ಭೂಮಿಯ ಪರಿಸರದ ಮೇಲೆ ಯಾವ ರೀತಿಯ ಪರಿಣಾಮಗಳಾಗುತ್ತವೆ ? ಹೆಚ್ಚುತ್ತಿರುವ ಭೂತಾಪಮಾನ ಭೂಮಿಯ ಮೇಲಿನ ಜೀವಸಂಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಇಂತಹ ಸಂದರ್ಭದಲ್ಲಿ ಒಂದು ಯುದ್ಧ ನಡೆಯುತ್ತಿರುವುದು ಏನನ್ನು ಹೇಳುತ್ತದೆ ?

ಉತ್ತರ: ಸದ್ಯಕ್ಕೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಪರಿಶೀಲಿಸಿದಾಗ ಇಲ್ಲಿಯವರೆಗೆ ಉಪಯೋಗಿಸಿದ ಶಸ್ತ್ರಾಸ್ತ್ರಗಳ ಪರಿಣಾಮವಾಗಿ ಉಕ್ರೇನ್ ನೆಲದ ಮೇಲ್ಮೈ ಸಾಕಷ್ಟು ಹಾನಿಯಾಗಿರುವುದು ಕಂಡುಬರುತ್ತದೆ. ಇನ್ನೂ ರಸಾಯನಿಕ ಮತ್ತು ಅಣುಬಾಂಬುಗಳಂತಹ ಮಾರಕ ಅಸ್ತ್ರಗಳ ಪ್ರಯೋಗ ಆಗಿಲ್ಲ. ಆದರೆ ಇತ್ತೀಚಿನ ದಿನಗಳ ಬೆಳವಣಿಗೆ ಆ ಸಾಧ್ಯತೆಯನ್ನು ಹೆಚ್ಚಿಸಿದೆ. ರಷ್ಯಾ ಅಮೆರಿಕ ಜೊತೆಗಿನ ಅಣು ಒಪ್ಪಂದವನ್ನು ರದ್ದುಪಡಿಸಿದೆ. ಒಂದು ವೇಳೆ ಯಾವುದೇ ರೀತಿಯ ಹಾನಿಕಾರಕ ಅಸ್ತ್ರಗಳ ಪ್ರಯೋಗ ನಡೆದಿದ್ದೇ ಆದರೆ ಪರಿಸರದ ಮೇಲೆ ಪರಿಣಾಮ ಎಂದು ಹೇಳುವುದಕ್ಕಿಂದ ಒಟ್ಟು ಭೂಮಿಯ ಮೇಲಿನ ಮನುಷ್ಯ ಪ್ರಾಣಿಯ ಅವಸಾನದ ದಿಕ್ಕಿನಲ್ಲಿ ಬಹುದೊಡ್ಡ ಓಟ ಎಂದೇ ಪರಿಗಣಿಸಬೇಕು. ಬಿಡಿ ಬಿಡಿಯಾಗಿ ಗಾಳಿ ನೀರು ಆಹಾರ ಎಂದು ಹೇಳಿದರೆ ಅದು ಅಜ್ಞಾನ ಮತ್ತು ಆತ್ಮವಂಚನೆಯಾಗುತ್ತದೆ. ಕೆಲವೇ ಮೂರ್ಖರ ಹಠ ಮತ್ತು ತಪ್ಪು ತೀರ್ಮಾನದಿಂದ ಭೂಮಿಯ ಅಸ್ತಿತ್ವವೇ ಅಪಾಯಕ್ಕೆ ಸಿಲುಕಲಿದೆ.

ಪ್ರಶ್ನೆ.: 4. ಸಹಜವಾಗಿ ಯುದ್ಧವು ವಿದ್ವಾಂಸಕಾರಿಯಾಗಿರುವುದರಿಂದ ಮನುಷ್ಯ ನಿರ್ಮಿತ ಕಟ್ಟಡಗಳು ಅಣುಸ್ಥಾವರಗಳು ಪೆಟ್ರೋಲಿಯಂ ಸಂಗ್ರಹಗಳು ಮುಂತಾದವುಗಳು ನಾಶವಾಗುವುದರಿಂದ ಮತ್ತು ದೊಡ್ಡ ಪ್ರಮಾಣದ ಜೀವಹಾನಿ ಸಂಭವಿಸಿ ಅನೇಕರು ಅಂಗವಿಕಲರು ಅನಾರೋಗ್ಯ ಪೀಡಿತರು ಆಗುವದರಿಂದ ಮತ್ತು ಯುದ್ಧದ ಖರ್ಚು ವೆಚ್ಚವೇ ತುಂಬಾ ದುಬಾರಿಯಾಗಿರುವುದರಿಂದ ಆ ದೇಶದ ಆರ್ಥಿಕತೆಯ ಮೇಲೆ ಆಗಬಹುದಾದ ನಷ್ಟವೇನು ?

ಉತ್ತರ: ಯುದ್ದದ ವಿಷಯದಲ್ಲಿ ಒಂದು ಮಾತು ನೆನಪಾಗುತ್ತದೆ. ಯುದ್ದದಲ್ಲಿ ಗೆದ್ದವನು ಸೋತ - ಸೋತವನು ಸತ್ತ. ಅಂದರೆ ಯುದ್ದ ಎಂಬುದೇ ವಿನಾಶದ ಹಾದಿ. ಅದರಲ್ಲಿ ಸಾಗಿದಾಗ ನೀವು ಸರ್ವನಾಶ ಅಥವಾ ಆ ದಿಕ್ಕಿನಲ್ಲಿ ಎಷ್ಟು ನಾಶವಾಗಿದೆ ಎಂಬುದಷ್ಟೇ ಚರ್ಚೆಯ ವಿಷಯ. ಯುದ್ಧ ದೀರ್ಘವಾದಷ್ಟು ಆ ದೇಶದ ಸಂಕಷ್ಟಗಳು ಹೆಚ್ಚಾಗುತ್ತಲೇ ಇರುತ್ತದೆ. ಅದು ಮತ್ತೆ ಸರಿದಾರಿಗೆ ಬರಲು ಅಷ್ಟೇ ದೀರ್ಘ ಸಮಯ ಹಿಡಿಯುತ್ತದೆ. ಹಣಕಾಸಿನ ಲಭ್ಯತೆ ಅವಲಂಬಿಸಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸ್ವಲ್ಪಮಟ್ಟಿಗೆ ಸಾಧ್ಯವಾಗಬಹುದು. ಆದರೆ ಪ್ರಾಕೃತಿಕ ಹಾನಿಯನ್ನು ಸರಿಪಡಿಸಲು ಹಲವಾರು ವರ್ಷಗಳು ಬೇಕಾಗಬಹುದು. ಅದೂ ಆ ನಿಟ್ಟಿನಲ್ಲಿ ಪ್ರಯತ್ನಿಸಿದಾಗ ಮಾತ್ರ. ಇಲ್ಲದಿದ್ದರೆ ಶಾಶ್ವತ ಹಾನಿ ನಿಶ್ಚಿತ. ಅದಕ್ಕಾಗಿಯೇ ಯುದ್ಧ ಪ್ರಾರಂಭವಾಗುವ ಮೊದಲೇ ಎಚ್ಚೆತ್ತುಕೊಳ್ಳಬೇಕು.

ಪ್ರಶ್ನೆ: 5. ರಷ್ಯಾ ಮತ್ತು ಉಕ್ರೇನ್ ಮಧ್ಯದ ಯುದ್ಧವನ್ನು ತಕ್ಷಣವೇ ನಿಲ್ಲಿಸಲು ಮತ್ತು ಇದೇ ಪ್ರಪಂಚದ ಕೊನೆಯ  ಯುದ್ಧ ಎಂದಾಗಲು ಏನಾದರು ಮಾಡಲು ಸಾಧ್ಯವಿದೆಯೆ ? ಇದ್ದರೆ ಆ ಸಾಧ್ಯತೆ ಏನು ?

ಉತ್ತರ: ಎರಡು ದೇಶಗಳ ನಡುವಿನ ಯುದ್ಧ ಮತ್ತು ಅದಕ್ಕೆ ವಿಶ್ವದ ಬಹುತೇಕ ದೇಶಗಳ ಪರ ವಿರೋಧ ಇರುವಾಗ ಅದರಲ್ಲಿ ಸಾಮಾನ್ಯ ಜನರ ಪಾತ್ರ ತುಂಬಾ ಕಡಿಮೆ. ಒಂದು ವೇಳೆ ಯುದ್ಧದ ವಿರುದ್ಧ ಆ ದೇಶದ ಒಳಗೆ ಧ್ವನಿ ಎತ್ತಿದರೆ ಅವರನ್ನು ದೇಶ ವಿರೋಧಿ ಎಂದು ಪರಿಗಣಿಸಿ ಶಿಕ್ಷಿಸಲಾಗುತ್ತದೆ.

ಆದರೂ ಸಾಮಾನ್ಯ ಜನ ಯುದ್ದವನ್ನು ಸುಮ್ಮನೆ ನೋಡುತ್ತಾ ಮೈ ಮರೆಯಬಾರದು. ಸಾಮೂಹಿಕ ಹೋರಾಟಗಳ ಮೂಲಕ, ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಯುದ್ಧದ ಭೀಕರ ಪರಿಣಾಮಗಳ ಬಗ್ಗೆ ಗಮನ ಸೆಳೆಯುವ ಪ್ರದರ್ಶನಗಳನ್ನು ಮಾಡಬೇಕು. ಕದನ ವಿರಾಮ ಮತ್ತು ಸಂಧಾನ ನಡೆಸಲು ಒತ್ತಡ ಹೇರಬೇಕು. ಯುದ್ಧ ಪೀಡಿತ ದೇಶಗಳಿಗಿಂತ ತಟಸ್ಥ ದೇಶದ ಜನರು ಈ ಬಗ್ಗೆ ಹೆಚ್ಚು ಕ್ರಿಯಾಶೀಲವಾಗಿ ಪ್ರತಿಕ್ರಿಯಿಸಬೇಕು. ಯುದ್ದೋನ್ಮಾದಿ ನಾಯಕರ ಮೇಲೆ ನಿರಂತರ ಪ್ರತಿಭಟನೆ ಮಾಡಬೇಕು. ಆಗ ಸ್ವಲ್ಪಮಟ್ಟಿಗೆ ಒತ್ತಡ ಹಾಕಬಹುದು.

ದಯವಿಟ್ಟು ಸಹಾಯ ಮಾಡಿ

***

ಈ ನಿಟ್ಟಿನಲ್ಲಿ ಭಾರತದ ಪ್ರಬುದ್ಧ ಮನಸ್ಸುಗಳ ಒಂದು ಮನವಿ ಪತ್ರ ಸಿದ್ದಪಡಿಸಿವೆ. ಆದರೆ ಕೆಳಗೆ ನಮೂದಿಸಿರುವ ವ್ಯಕ್ತಿಗಳ ಇ - ಮೇಲ್ ವಿಳಾಸ ಸಿಗುತ್ತಿಲ್ಲ. ಆದ್ದರಿಂದ ತಿಳಿದವರು ಇವರ ವಿಳಾಸ ನೀಡಿ ಸಹಕರಿಸಿ. ಶೀಘ್ರದಲ್ಲಿಯೇ ವಿಶ್ವದಾದ್ಯಂತ ಸಾಮಾನ್ಯ ಜನರು ಯುದ್ಧ ನಿಲ್ಲಿಸಿ ಸಂಧಾನ ಸಾಧಿಸಲು ಪತ್ರ ಚಳವಳಿಯ ಮೂಲಕ ಒತ್ತಡ ಹೇರೋಣ. ವಿಶ್ವ ಶಾಂತಿಗಾಗಿ - ಭೂಮಿ ಮತ್ತು ಇಲ್ಲಿನ ಜೀವರಾಶಿಗಳ ರಕ್ಷಣೆಗಾಗಿ ಪ್ರಬುದ್ಧ ಮನಸ್ಸುಗಳ ಮನವಿ ಪತ್ರ ಅಭಿಯಾನ...

ಮಹಾ ಪ್ರಧಾನ ಕಾರ್ಯದರ್ಶಿಗಳು, ವಿಶ್ವಸಂಸ್ಥೆ....

ಪೋಪ್ ಫ್ರಾನ್ಸಿಸ್, ವ್ಯಾಟಿಕನ್ ಸಿಟಿ....

ಅಧ್ಯಕ್ಷರು, ರಷ್ಯಾ..

ಅಧ್ಯಕ್ಷರು, ಉಕ್ರೇನ್...

ಅಧ್ಯಕ್ಷರು, ನ್ಯಾಟೋ ಒಕ್ಕೂಟ...

ವಿಶೇಷ ಮನವಿ:

ಅಧ್ಯಕ್ಷರು, ಅಮೆರಿಕ ಸಂಯುಕ್ತ ಸಂಸ್ಥಾನ.....

ಅಧ್ಯಕ್ಷರು, ರಿಪಬ್ಲಿಕ್ ಆಫ್ ಚೀನಾ....

ಪ್ರಧಾನ ಮಂತ್ರಿಗಳು, ಭಾರತ ಗಣರಾಜ್ಯಗಳ ಒಕ್ಕೂಟ.....

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ