ಯುದ್ಧ ರುದ್ರ

ಯುದ್ಧ ರುದ್ರ

ಕವನ

ನಾವೇ ಹಾಕಿದ ಬೇಲಿಗಳೊಳಗೆ

ಯುದ್ಧ ಮಾಡದೇ ಗೆಲುವ

ಒಲವಿಲ್ಲ ಎಳ್ಳಷ್ಟೂ ಎಲ್ಲಿಯೂ

ಬಲಾಢ್ಯ ಪ್ರಬಲರೆನುವ ಹಿಗ್ಗಿನಲಿ!

 

ಎಲ್ಲರೂ ದೇವರ ಮಕ್ಕಳು

ಎಲ್ಲವೂ ಪರಮಾತ್ಮನ ಭೂಮಿ

ಅದೇ ಈಗ ರುದ್ರ ಭೂಮಿ!

 

ಗಡಿಗಳು ತುಪಾಕಿಗಳ ನಡುವೆ

ಹಗೆ ಸಾವಿನ ಸರಪಳಿ

ಗುಂಡುಗಳನೇ ಸುಡುಮದ್ದಿನ     

ತೆರದಿ ಸುರಿದು ಹೊಡೆದು

ಸದ್ದಡಗಿಸಿ ಗೆಲುವುದೇ ಸಿದ್ಧಿ!!

 

ಸಹೋದರರ ದೇಹಗಳನು

ರಕ್ತದಲೇ ಅದ್ದಿ

ಗೆದ್ದ ಕುರುಹುಗಳ ಬರೆವರು!

ಮೆರೆಯಬೇಕೆಂಬ ಅತಿರೇಕ!

ಇಲ್ಲಿ ಗೆದ್ದರೆ ಗಡಿಯಾಚೆ ಶೋಕ

ಸೋತರೆ ಮನೆಯಲೇ ದುಃಖ

 

ಸುಖಾ ಸುಮ್ಮನೆ ಮೈಮೇಲೆ

ಎಳೆದುಕೊಂಡ ಸಾವಿನ ರೇಖೆಗಳು..!

 

ಶಾಂತವಾಗದ ದ್ವೇಷದ ಸೋಗಿನಲಿ

ಶಾಂತಿಗಿಲ್ಲಿ ನಿಲ್ಲದ ಗಲ್ಲು!

ಶಾಂತಿಧೂತರ ಕೇರಿಗಳಲ್ಲೂ

ಕಾಲ ಬಂದಾಗ ಸಿಗುವುದು

ಕೊಲುವ ಕೋವಿ ಫಿರಂಗಿಗಳು!

 

ಕುದಿವ ರುಧಿರದ

ರಣಹದ್ದುಗಳ ಕೇಕೆ ಸದ್ದಿನ

ಹಿಂಸೆ ಸುಳಿಗಳ ನಡುವೆ

ಮಖಾಡೆ ಮಲಗಿತು ಮಾನವತೆ!

- ಕಾ.ವೀ.ಕೃಷ್ಣದಾಸ್, (ಯಶುಪ್ರಿಯ ಪಕ್ಷಿಕೆರೆ)

ಚಿತ್ರ್